Saturday, 27th July 2024

ರಾಜಕಾಲುವೆ ತೆರವಿಗೆ ಇನ್ನೆಷ್ಟು ವರ್ಷ ಬೇಕು?

ಬೆಂಗಳೂರಿನಲ್ಲಿ ಕಳೆದ ಮೇ ೬ ರಿಂದ ೧೨ ರ ನಡುವೆ ಸುರಿದ ಭಾರೀ ಮಳೆ ಮತ್ತು ಬಿರುಗಾಳಿಗೆ ೧ ಸಾವಿರಕ್ಕೂ ಹೆಚ್ಚು ಮರಗಳು ನೆಲಕ್ಕುರುಳಿವೆ. ರಸ್ತೆಗ ಳಲ್ಲಿ ನೀರು ತುಂಬಿ ವಾಹನ ಸವಾರರು, ಪಾದಚಾರಿಗಳು ಪರದಾಡುವಂತಾಯಿತು. ಅಲ್ಪಸ್ವಲ್ಪ ಮಳೆಗೇ ರಸ್ತೆಗಳಲ್ಲಿ ನೀರು ನಿಲ್ಲುತ್ತಿರುವುದಕ್ಕೆ ಕಾರಣ ರಾಜಕಾಲುವೆಗಳ ಒತ್ತುವರಿ. ಬೆಂಗಳೂರಿನಲ್ಲಿ ಒತ್ತುವರಿ ಆಗಿರುವ ರಾಜಕಾಲುವೆ ತೆರವುಗೊಳಿಸುವ ಮೂಲಕ ಮಾತ್ರ ನೆರೆ ಭೀತಿಯಿಂದ ಬೆಂಗಳೂರಿನ ಜನರನ್ನು ರಕ್ಷಿಸಲು ಸಾಧ್ಯ.

ಇಲ್ಲವಾದಲ್ಲಿ ಪ್ರತಿ ಮಳೆಗೂ ಜನರು ಆತಂಕದಿಂದ ಬದುಕಬೇಕಾಗುತ್ತದೆ. ಈ ಹಿಂದೆ ಅಧಿಕಾರದಲ್ಲಿದ್ದ ಎಲ್ಲ ಪಕ್ಷಗಳೂ ಅನೇಕ ಬಾರಿ ರಾಜಕಾಲುವೆಗಳ ಒತ್ತುವರಿಗೆ ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ. ಬಡವರು, ಮಧ್ಯಮ ವರ್ಗದವರ ಮನೆಗಳಿದ್ದರೆ ಇಷ್ಟೊತ್ತಿಗಾಗಲೇ ನೆಲಸಮವಾಗುತ್ತಿದ್ದವು. ಆದರೆ ರಾಜಕಾಲುವೆಗಳನ್ನು ಒತ್ತುವರಿ ಮಾಡಿಕೊಂಡ ಬಹುತೇಕರು ರಾಜಕಾರಣಿ ಗಳು, ಸಿನಿಮಾ ನಟರು, ಹಣ ಹೊಂದಿರುವವರು, ದೊಡ್ಡ ದೊಡ್ಡ ಬಿಲ್ಡರ್‌ ಗಳು. ಹೀಗಾಗಿ ಯವುದೇ ಪಕ್ಷ ಅಧಿಕಾರಕ್ಕೆ ಬಂದರೂ ರಾಜಕಾಲುವೆ ತೆರವುಗೊಳಿಸುವಲ್ಲಿ ಯಶಸ್ಸು ಕಾಣುತ್ತಿಲ್ಲ.

ಬಡವರಿಗೊಂದು ನ್ಯಾಯ, ಶ್ರೀಮಂತರಿಗೊಂದು ನ್ಯಾಯ ಎಂಬುದು ಇಲ್ಲಿ ಸ್ಪಷ್ಟವಾಗಿ ಗೋಚರವಾಗುತ್ತಿದೆ. ಆದ್ದರಿಂದ ರಾಜ್ಯ ಕಾಂಗ್ರೆಸ್ ಸರಕಾರವು, ಯಾವ ಪ್ರಭಾವಿ ವ್ಯಕ್ತಿಗಳಿಗೂ ಮಣಿಯದೇ ರಾಜಕಾಲುವೆ ಒತ್ತುವರಿ ತೆರವುಗೊಳಿಸಲು ಸನ್ನದ್ಧವಾಗಬೇಕು. ಆ ಮೂಲಕ ಎಲ್ಲರಿಗೂ ಒಂದೇ ನ್ಯಾಯ ಎಂಬ ಸಂದೇಶವನ್ನು ರವಾನೆ ಮಾಡಬೇಕು. ಅಲ್ಲದೆ, ಮಳೆ ನೀರನ್ನು ಬಳಸಿಕೊಂಡು ಕುಡಿಯುವ ನೀರಿಗೆ ಪರದಾಡುವ ಪರಿಸ್ಥಿತಿಯನ್ನೂ ದೂರ ಮಾಡುವತ್ತ ಚಿಂತನೆ ಮಾಡಬೇಕು. ಬೆಂಗಳೂರಿನಲ್ಲಿರುವ ತಗ್ಗುಪ್ರದೇಶಗಳನ್ನು ಗುರುತಿಸಿ, ಇಂಗುಗುಂಡಿಗಳನ್ನು ನಿರ್ಮಿಸಿ, ಆಯಾ ರಸ್ತೆಯ ನೀರು ಅಲ್ಲ ಭೂಮಿಗೆ ಇಂಗುವಂತೆ ಮಾಡಿದರೆ ಸುತ್ತಮುತ್ತಲಿನ ಬೋರ್‌ವೆಲ್‌ಗಳಲ್ಲಿ ನೀರು ಬರುತ್ತದೆ, ನೀರು ಪೋಲಾಗಿ ತಗ್ಗುಪ್ರದೇಶಗಳಿಗೆ ನುಗ್ಗುವುದು ಕಡಿಮೆ ಆಗುತ್ತದೆ.

ಜೂನ್‌ನಲ್ಲಿ ಮುಂಗಾರು ಆರಂಭವಾಗುವ ಮೊದಲೇ ಸರಕಾರ ಮತ್ತು ಬಿಬಿಎಂಪಿಯು ಈ ಬಗ್ಗೆ ಗಂಭೀರ ಪರಿಹಾರ ಕ್ರಮಗಳನ್ನು ಕಂಡುಕೊಳ್ಳದೆ ನಿರ್ಲಕ್ಷ್ಯ ವಹಿಸಿದರೆ ಅನಾಹುತಗಳು ತಪ್ಪಿದ್ದಲ್ಲ.

Leave a Reply

Your email address will not be published. Required fields are marked *

error: Content is protected !!