Saturday, 7th September 2024

ಗದ್ದಲಕ್ಕೆ ಸೀಮಿತವಾದ ಸದನ ಕಲಾಪ

ವಿಧಾನಸಭೆ ಮುಂಗಾರು ಅಧಿವೇಶನ ಎಂದಿನಂತೆ ಗದ್ದಲದಲ್ಲಿ ಆರಂಭವಾಗಿ ಗದ್ದಲದಲ್ಲಿಯೇ ಕೊನೆಗೊಂಡಿದೆ. ಶುಕ್ರವಾರ ಕೊನೆಗೊಳ್ಳಬೇಕಿದ್ದ ಅಧಿವೇಶನವು ಒಂದು ದಿನ ಮುಂಚಿತವಾಗಿಯೇ ಅಂತ್ಯ ಕಂಡಿದೆ.

ವಿಪರ‍್ಯಾಸವೆಂದರೆ ಇಡೀ ರಾಜ್ಯ ಮಳೆ ಮತ್ತು ಪ್ರವಾಹ ಪರಿಸ್ಥಿತಿಯಲ್ಲಿ ಸಿಲುಕಿ ತತ್ತರಿಸುತ್ತಿದ್ದರೂ ಸದನದಲ್ಲಿ ಈ ಬಗ್ಗೆ ಪೂರ್ಣ ಪ್ರಮಾಣದಲ್ಲಿ ಚರ್ಚೆ ಆಗಲೇ ಇಲ್ಲ.
ಮಳೆ ಅಬ್ಬರ ಈಗಲೂ ಮುಂದುವರಿದಿದೆ. ರಾಜ್ಯದ ಪ್ರಮುಖ ಜಲಾಶಯಗಳಿಂದ ಭಾರೀ ಪ್ರಮಾಣದಲ್ಲಿ ನೀರು ಹೊರ ಬಿಡಲಾಗುತ್ತಿದೆ. ತೀರ ಪ್ರದೇಶದ ಮನೆ ಗಳು ಮುಳುಗಡೆ ಭೀತಿಯಲ್ಲಿವೆ. ಗುಡ್ಡ ಕುಸಿತದಿಂದ ಹೆದ್ದಾರಿಗಳೇ ಮುಚ್ಚಿ ಹೋಗಿರುವ ಕಾರಣ ರಾಜ್ಯದ ಕರಾವಳಿ ಮತ್ತು ಮಲೆನಾಡು ಪ್ರದೇಶಕ್ಕೆ ಸಂಪರ್ಕ ದುಸ್ತರವಾಗಿದೆ. ಜನಸಾಮಾನ್ಯರ ಈ ಬವಣೆಗಳ ಬಗ್ಗೆ ಸದನದಲ್ಲಿ ಒಂದಿಷ್ಟಾದರೂ ಚರ್ಚೆ ಆಗಬೇಕಿತ್ತು.

ಅಂಕೋಲಾ ಹೆದ್ದಾರಿಯಲ್ಲಿ ಭೂಕುಸಿತ ಸಂಭವಿಸಿದ ಸ್ಥಳಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯಮತ್ತು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಭೇಟಿ ನೀಡಿದ ಬಳಿಕವೂ ಕಾಣೆಯಾದವರ ಶವ ಇನ್ನೂ ದೊರೆತಿಲ್ಲ. ಭೂಕುಸಿತದಲ್ಲಿ ಸಮಾಧಿಯಾದ ವ್ಯಕ್ತಿ ಯನ್ನು ಹುಡುಕಿಕೊಡುವಂತೆ ಸಂಬಂಧಿಕರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಪ್ರಶ್ನೋತ್ತರ ಅವಽಯಲ್ಲಿ ಅಲ್ಲೊಬ್ಬ ಇಲ್ಲೊಬ್ಬ ಶಾಸಕರು ಮಳೆ ಅನಾಹುತಗಳ ಬಗ್ಗೆ ಪ್ರಸ್ತಾಪಿಸಿದ್ದನ್ನು ಬಿಟ್ಟರೆ, ಪ್ರತೀವರ್ಷ ಕರಾವಳಿ, ಮಲೆನಾಡಿನಲ್ಲಿ ಮಳೆಗಾಲದಲ್ಲಿ ಎದುರಾಗುವ ಗುಡ್ಡ ಕುಸಿತದ ಸಮಸ್ಯೆಗಳಿಗೆ ಕಾರಣ ಮತ್ತು ಕಾಯಂ ಪರಿಹಾರ ಹುಡುಕುವ ಬಗ್ಗೆ ಚರ್ಚೆ ನಡೆಯಲೇ ಇಲ್ಲ. ಎರಡು ವಾರಗಳ ಕಾಲ ನಡೆದ ಅಧಿವೇಶನ ಮಹರ್ಷಿ ವಾಲ್ಮೀಕಿ ನಿಗಮದ ಹಗರಣ ಮತ್ತು ಮುಡಾ ಹಗರಣಗಳ ನಡುವೆ ಗಿರಕಿ ಹೊಡೆದಿದ್ದು ಬಿಟ್ಟರೆ ಯಾವ
ಚರ್ಚೆಯೂ ತಾತ್ವಿಕ ಅಂತ್ಯ ಕಾಣಲಿಲ್ಲ.

ಅಂತಿಮ ದಿನದಂದು ಚರ್ಚೆ ಇಲ್ಲದೆಯೇ ಆರು ಪ್ರಮುಖ ವಿಧೇಯಕಗಳನ್ನು ಅಂಗೀಕರಿಸಲಾಯಿತು. ಪ್ರಜಾ ಪ್ರಭುತ್ವದ ದೇಗುಲದಲ್ಲಿ ಪ್ರಜೆಗಳ ಆಶೋತ್ತರಗಳಿಗೆ ಅನುಗುಣವಾಗಿ ಅಗತ್ಯ ಕಾನೂನುಗಳನ್ನು ರೂಪಿಸುವುದು ಶಾಸನಸಭೆಯ ಕರ್ತವ್ಯ. ಪ್ರತಿಯೊಂದು ಶಾಸನದ ಒಳಿತು ಕೆಡುಕುಗಳ ಬಗ್ಗೆ ಎಲ್ಲ ಸದಸ್ಯರು ಸೇರಿ ವಿಸ್ತೃತವಾಗಿ ಚರ್ಚೆ ನಡೆಸಿ, ಬಹುಮತದ ಆಧಾರದಲ್ಲಿ ನಿರ್ಧಾರ ತೆಗೆದುಕೊಳ್ಳಬೇಕೆನ್ನುವುದು ಪ್ರಜಾಸತ್ತೆಯ ಆಶಯ. ಆದರೆ ಹೆಚ್ಚಿನ ಸಂದರ್ಭಗಳಲ್ಲಿ ಆಡಳಿತ ಮತ್ತು ವಿಪಕ್ಷಗಳೆರಡೂ ತಮ್ಮ ಪೂರ್ವ ನಿರ್ಧರಿತ ಅಜೆಂಡಾದಂತೆ ಕಾರ‍್ಯ ನಿರ್ವಹಿಸುತ್ತವೆ ಹೊರತು ಜನರ ಒಳಿತು ಕೆಡುಕುಗಳ ಚರ್ಚೆಗೆ ಆದ್ಯತೆ ಸಿಗುವುದು
ಕಡಿಮೆ.

ಲೋಕಸಭೆಗೆ ಆಯ್ಕೆಯಾದ ವಿಪಕ್ಷ ಬಿಜೆಪಿ ಮತ್ತು ಜೆಡಿಎಸ್‌ನ ಒಂದಷ್ಟು ನಾಯಕರ ಅನುಪಸ್ಥಿತಿಯೂ ಈ ಬಾರಿ ಸದನವನ್ನು ಕಾಡಿದೆ.

Leave a Reply

Your email address will not be published. Required fields are marked *

error: Content is protected !!