Thursday, 19th September 2024

ಅನಗತ್ಯ ಗೊಂದಲ

ರಾಜ್ಯದಲ್ಲಿ ಕೋವಿಡ್ -19 ಸೋಂಕು ಹರಡುವಿಕೆಯಿಂದಾಗಿ ಜೀವನ ವಿಧಾನವೇ ಬದಲಾಗಿದೆ. ವ್ಯಾವಹಾರಿಕ ಚಟುವಟಿಕೆಗಳು, ಕೈಗಾರಿಕೆಗಳು, ಚಿತ್ರಮಂದಿರಗಳು ಇದೀಗ ತಾನೆ ಪುನರಾರಂಭಗೊಳ್ಳುತ್ತಿದೆ.

ಇಂಥ ಸಂದರ್ಭದಲ್ಲಿ ಜನತೆಯ ಗಮನ ಕೇಂದ್ರೀಕರಿಸಿರುವುದು ಶಾಲೆಗಳ ಆರಂಭದ ವಿಚಾರದಲ್ಲಿ. ಶಾಲೆಗಳ ಆರಂಭದ ವಿಚಾರದಲ್ಲಿ ಆತುರಕ್ಕಿಂತ ಸುರಕ್ಷತೆ ಮುಖ್ಯ ಎಂಬುದು ವಿದ್ಯಾರ್ಥಿಗಳ ಪೋಷಕರ ಅಭಿಪ್ರಾಯ. ಸಾಮಾಜಿಕ  ಅಂತರದೊಂದಿಗೆ
ಶಾಲೆಗಳನ್ನು ಆರಂಭಿಸುವುದಕ್ಕೂ ವಿರೋಧ ವ್ಯಕ್ತವಾಗುತ್ತಿದೆ. ಇದಕ್ಕೆ ಕಾರಣ ಮಕ್ಕಳ ಆರೋಗ್ಯ ಕಾಳಜಿ. ಶಾಲೆಗಳು 2-3 ತಿಂಗಳ ನಂತರ ಆರಂಭವಾಗುವುದರಿಂದ ನಷ್ಟವೇನಿಲ್ಲ. ಆದರೆ ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಿದರೆ ಹೊಣೆ ಯಾರು ಎಂಬುದು ಪೋಷಕರ ಅಭಿಮತ. ಆದರೆ ಶೈಕ್ಷಣಿಕ ವರ್ಷದ ಪಠ್ಯ ಸರಿದೂಗಿಸಲು ಆನ್‌ಲೈನ್ ತರಗತಿಗಳು ಮುಖ್ಯ ಎಂಬುದು ಮತ್ತೆ ಕೆಲವರ ವಾದ.

ಕೆಲವು ತಿಂಗಳಿನಿಂದ ಶಾಲೆಗಳ ಆರಂಭದ ವಿಚಾರ ಚರ್ಚೆ ನಡೆಯುತ್ತಿದ್ದು, ಪೋಷಕರಲ್ಲಿ ಮಕ್ಕಳ ವಿದ್ಯಾಭ್ಯಾಸ ಬಗ್ಗೆ ಆತಂಕ ಮೂಡಿಸಿದೆ. ರಾಜ್ಯದಲ್ಲಿ ಕರೋನಾ ನಿಯಂತ್ರಣಕ್ಕೆ ಬರುವವರೆಗೆ ಹಾಗೂ ಮಕ್ಕಳ ಆರೋಗ್ಯ ಸುರಕ್ಷತೆ ದೃಷ್ಟಿಯಿಂದ ಶಾಲೆಗಳ ಆರಂಭದ ವಿಚಾರದಲ್ಲಿ ಅವಸರವಿಲ್ಲ ಎಂದು ಶಿಕ್ಷಣ ಸಚಿವರು ಬಹಳಷ್ಟು ಬಾರಿ ಸ್ಪಷ್ಟಪಡಿಸಿದ್ದಾರೆ.

ಶಾಲೆಗಳ ಆರಂಭದ ವಿಚಾರದಲ್ಲಿ ಪೋಷಕರು, ಶಾಲೆಗಳಿಗಿಂತಲೂ ಮುಖ್ಯವಾಗಿ ಸರಕಾರದ ಆದೇಶ ಮುಖ್ಯ. ಆರೋಗ್ಯ ಕಾಳಜಿ ಯಿಂದಾಗಿ ಶಾಲೆಗಳ ಆರಂಭಕ್ಕೆ ಅವಸರವಿಲ್ಲ ಎಂದು ಸರಕಾರ ಸ್ಪಷ್ಟಪಡಿಸುತ್ತಲೇ ಇದೆ. ಆದರೆ ಅನಗತ್ಯ ಗೊಂದಲ ಉಂಟಾಗು ತ್ತಿರುವುದು ಕೆಲವು ಶಾಲೆಗಳು ಹಾಗೂ ಪೋಷಕರಿಂದ ಮಾತ್ರ. ಇನ್ನಾದರೂ ಸರಕಾರ ಸ್ಪಷ್ಟಪಡಿಸುವವರೆಗೆ ಪೋಷಕರು ಅನಗತ್ಯ ಗೊಂದಲಗಳಿಗೆ ಅವಕಾಶ ನೀಡದಿರುವುದು ಮುಖ್ಯ.

Leave a Reply

Your email address will not be published. Required fields are marked *