Friday, 18th October 2024

ಅಭಿವೃದ್ಧಿಗೆ ಬೇಕು ಹೊಸ ವಿಚಾರಗಳ ಮಂತ್ರ

ವಿದೇಶವಾಸಿ

dhyapaa@gmail.com

ನಮ್ಮಲ್ಲಿ ಮಾರ್ಕೆಟಿಂಗ್ ಕೌಶಲದ ಕೊರತೆಯಿದೆ. ನಮ್ಮಲ್ಲಿರುವುದನ್ನು ನಾವು ಹೇಗೆ ಜನರಿಗೆ ತಲುಪಿಸಬಹುದು ಎಂಬ ಮಾಹಿತಿಯ ಕೊರತೆ. ಅದಕ್ಕೆ ತಿಳಿವಳಿಕೆಯ ಕೊರತೆ ಒಂದೆಡೆಯಾದರೆ, ಇನ್ನೊಂದೆಡೆ ಹಣಕಾಸಿನ ಕೊರತೆಯೂ ಇದ್ದೀತು. ಉದ್ಯಮದ ಆರಂಭಕ್ಕೇ ಹೆಣಗಿ ಹೈರಾಣಾದವ ಇನ್ನು ಪ್ರಚಾರಕ್ಕೆ ಎಷ್ಟು ದುಡ್ಡು ಸುರಿದಾನು?

‘ದುಬೈ’ ಎಂದರೆ ಸಾಕು, ಏನೋ ಒಂಥರ ರೋಮಾಂಚನ. ಇತ್ತೀಚಿನ ದಿನಗಳಲ್ಲಂತೂ ಜನರಿಗೆ ‘ಎಲ್ಲಿ ಹೋಗುತ್ತೇವೋ ಬಿಡುತ್ತೇವೋ ಗೊತ್ತಿಲ್ಲ, ಸಾಯುವುದರೊಳಗೆ ಒಮ್ಮೆ ದುಬೈಗೆ ಹೋಗಿಬರಬೇಕು’ ಎನ್ನುವಂತಾಗಿದೆ. ಕೊಲ್ಲಿರಾಷ್ಟ್ರ ಯುಎಇಯ 7 ಸಂಸ್ಥಾನಗಳಲ್ಲಿ ಒಂದಾದ ದುಬೈ ವೈಭವ ವನ್ನು ಕಾಣಬೇಕು, ಕಣ್ಣಿನಲ್ಲಿ ಅದರ ಅಗಾಧತೆ ತುಂಬಿಕೊಳ್ಳಬೇಕು ಎಂಬುದು ಸಾಮಾನ್ಯ ಬಯಕೆಯಾಗಿದೆ.

ಉಳಿದ ಶ್ರೀಮಂತ ದೇಶಗಳಿಗೆ ಪ್ರವಾಸಕ್ಕೆ ತೆರಳುವುದಕ್ಕಿಂತ ಇದು ಸುಲಭ ಮತ್ತು ಉತ್ತಮ ಎನಿಸಲು ಕೆಲವು ಕಾರಣ ಗಳಿವೆ. ಮೊದಲನೆ ಯದಾಗಿ, ದುಬೈ ವೀಸಾ ಪಡೆಯಲು ಅಮೆರಿಕ, ಯುರೋಪ್‌ಗಳ ವೀಸಾದಷ್ಟು ಹೆಣಗಬೇಕಾಗಿಲ್ಲ. ಯಾವುದೇ ದೇಶದ ಯಾವುದೇ ಮೂಲೆ ಯಲ್ಲಿದ್ದರೂ ಆನ್‌ಲೈನ್ ಮುಖಾಂತರ ವೀಸಾ ಪಡೆಯಬಹುದು. ಅಬ್ಬಬ್ಬಾ ಎಂದರೆ ಐದರಿಂದ ಏಳು ದಿನದೊಳಗೆ ಸಿಗುತ್ತದೆ. ಎರಡನೆಯದಾಗಿ, ವಿಮಾನದ ಪ್ರಯಾಣ ದರ ಉಳಿದವುಗಳಿಗೆ ಹೋಲಿಸಿದರೆ ಸೋವಿ.

ಉಳಿಯುವ ಹೊಟೇಲ, ಊಟ-ತಿಂಡಿ ಇತ್ಯಾದಿ ಗಳ ಬೆಲೆಯೂ ಕಮ್ಮಿ. ಇನ್ನು ಮೂರನೆಯದು ಮತ್ತು ಪ್ರಮುಖವಾಗಿ, ಎಲ್ಲ ವರ್ಗದ, ಎಲ್ಲ ಪ್ರಾಂತ್ಯದ ಜನರ ಬಯಕೆಗಳನ್ನೂ ಪೂರೈಸುವಲ್ಲಿ ದುಬೈಗೆ ಸಾಟಿ ಸದ್ಯಕ್ಕಂತೂ ಯಾವ ದೇಶವೂ ಇಲ್ಲ.
ದುಬೈನ ವಿಶೇಷತೆಯೆಂದರೆ, ಅಲ್ಲಿ ಪಿಜ್ಜಾ-ಬರ್ಗರ್ ಮಾರುವ ಎಷ್ಟು ಪಾಶ್ಚಾತ್ಯ ಹೊಟೇಲು ಕಾಣುತ್ತದೆಯೋ, ಅಷ್ಟೇ ಪ್ರಮಾಣದಲ್ಲಿ ಇಡ್ಲಿ-ದೋಸೆ ಮಾರುವ ಉಪಹಾರ ಗೃಹಗಳೂ, ನೂಡಲ-ಪಾನ್‌ಸಿತ್ ಮಾರುವ ಊಟದ ಮನೆಗಳೂ ಸಿಗುತ್ತವೆ.

ದುಬೈ ಕೂಡ ಮುಂಬೈನಂತೆಯೇ ಆಗರ್ಭ ಶ್ರೀಮಂತರಿಂದ ಹಿಡಿದು ತೀರಾ ಸಾಮಾನ್ಯರವರೆಗಿನ ಮಂದಿಗೆ ‘ದುಡಿದು’ ಬದುಕಲು ಅವಕಾಶ ಒದಗಿಸಿಕೊಟ್ಟಿದೆ. ಪೂರ್ವದ ಪಕ್ಕಾ, ಕಟ್ಟಾ ಸಂಸ್ಕೃತಿ, ಸಂಪ್ರದಾಯ ಮತ್ತು ಪಶ್ಚಿಮದ ತಂತ್ರಜ್ಞಾನ, ಆಧುನಿಕತೆಯನ್ನು ದುಬೈ ಒಡಲಲ್ಲಿ ತುಂಬಿಕೊಂಡಿದೆ. ಕ್ರೀಡೆ, ಸಾಹಸ, ಮನರಂಜನೆ, ಪ್ರಾರ್ಥನೆ, ಧಾರ್ಮಿಕ ಆಚರಣೆ
ಎಲ್ಲದಕ್ಕೂ ಇಲ್ಲಿ ಭರಪೂರ ಅವಕಾಶ. ಎಲ್ಲಕ್ಕಿಂತ ಸೋಜಿಗವೆಂದರೆ, ಭೂಮಿಯಲ್ಲಿ ಒಂದೇ ಒಂದು ಗ್ರಾಂ ಚಿನ್ನ ಸಿಗದಿದ್ದರೂ ಚಿನ್ನದ ವ್ಯಾಪಾರಕ್ಕೆ ಹೆಸರಾದ ಪ್ರದೇಶ ದುಬೈ!

ಅಷ್ಟಕ್ಕೂ ದುಬೈ ಮೂಲತಃ ಘೋರ ಮರುಭೂಮಿಯ ಪ್ರದೇಶ ಎನ್ನುವುದನ್ನು ಮರೆಯುವಂತಿಲ್ಲ. ಬಿಸಿಲ ಝಳದ ಮರು ಭೂಮಿಯನ್ನೇ ತನ್ನ ಅನುಕೂಲಕ್ಕೆ ತಕ್ಕಂತೆ ಪಳಗಿಸಿಕೊಂಡು, ‘ಡೆಸರ್ಟ್ ಸಫಾರಿ’ಯಂಥ ಸಾಹಸಕ್ಕೆ, ರೋಚಕತೆಗೆ ಮತ್ತು ಮನರಂಜನೆಗೆ ಬಳಸಿಕೊಂಡು, ಅದನ್ನೂ ಆದಾಯವಾಗಿಸಿಕೊಂಡ ಪ್ರದೇಶ ದುಬೈ. ಮಳೆಯೇ ಇಲ್ಲದ ಪ್ರದೇಶದಲ್ಲಿ ಮಳೆಯಾಗುವಂಥ, ಹಿಮವನ್ನೇ ಕಾಣದ ಭೂಮಿಯಲ್ಲಿ ಹಿಮಪಾತವಾಗುವಂಥ ಕೃತಕ ವಿಧಾನವನ್ನು ದುಬೈ ಅಳವಡಿಸಿ ಕೊಂಡಿದೆ.

ಸ್ಕೀಯಿಂಗ್ ಕ್ರೀಡೆಗೆಂದೇ 6000 ಟನ್ ಹಿಮವನ್ನು ಸೃಷ್ಟಿಸಿದೆ. ದುಬೈ ಇಷ್ಟನ್ನೂ ಮಾಡಲು ಕಾರಣ, ಅಲ್ಲಿಯ ಪ್ರವಾಸೋ ದ್ಯಮ. ಕೊಲ್ಲಿ ರಾಷ್ಟ್ರಗಳಲ್ಲಿ ಸೌದಿ ಅರೇಬಿಯಾ, ಖತಾರ್, ಕುವೈತ್‌ಗೆ ಹೋಲಿಸಿದರೆ ಯುಎಇಯಲ್ಲಿ ತೈಲನಿಕ್ಷೇಪ ಕಮ್ಮಿ ಎನ್ನಬಹುದು. ಅದರಲ್ಲೂ ದುಬೈ ಆಸುಪಾಸು ವಿರಳವೇ. ಈಗ ಇದ್ದದ್ದನ್ನು ನಂಬಿಕೊಂಡು ಅಥವಾ ಮುಂದೆಯೂ ಅದರ ಭರವಸೆಯಲ್ಲೇ ಬದುಕಲು ಸಾಧ್ಯವಿಲ್ಲ ಎಂಬುದನ್ನು ಬಹಳ ಮೊದಲೇ ಕಂಡುಕೊಂಡು, ಪ್ರವಾಸೋದ್ಯಮವನ್ನು ಒಪ್ಪಿ ಕೊಂಡಿತು. ಒಪ್ಪಿಕೊಂಡದ್ದನ್ನು ಅಷ್ಟೇ ಶ್ರದ್ಧೆಯಿಂದ ಮಾಡಿದ್ದರಿಂದ ದುಬೈ ಇಂದು ಮುಗಿಲೆತ್ತರಕ್ಕೆ ಬೆಳೆದಿದೆ.

ಭಾರತದಂತೆ ಯುಎಇ ಬ್ರಿಟಿಷರ ಆಳ್ವಿಕೆಯಲ್ಲಿ ಇರದಿದ್ದರೂ ಅವರ ಹಿಡಿತದಲ್ಲಂತೂ ಇತ್ತು. ಅದನ್ನು ತಪ್ಪಿಸಿ, ಸಂಪೂರ್ಣ ತನ್ನ ಸ್ವಾಧೀನಕ್ಕೆ ತೆಗೆದುಕೊಂಡದ್ದು ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕು 20 ವರ್ಷಗಳ ನಂತರ. ಇದನ್ನು ಏಕೆ ಹೇಳುತ್ತಿದ್ದೇನೆಂದರೆ, ಭಾರತಕ್ಕೆ ಸ್ವಾತಂತ್ರ್ಯ ದೊರೆತು ೭೫ ವರ್ಷಗಳಾದವು. ಒಂದು ಕಾಲದಲ್ಲಿ ಸಂಪದ್ಭರಿತವಾಗಿದ್ದ ದೇಶ ಅನ್ಯರ ದಾಳಿಯ ಸುಳಿಗೆ ಸಿಲುಕಿ ಸಾಕಷ್ಟು ಸುಸ್ತು ಹೊಡೆದಿದೆ ಎನ್ನುವುದನ್ನು ಒಪ್ಪೋಣ. ಅದನ್ನು ಕಳೆದು ಹೊಸದಾಗಿ ಜನಿಸಿದ ಭಾರತಕ್ಕೆ ಈಗ ೭೫ರ ಹರೆಯ. ಒಂದು ದೇಶಕ್ಕೆ 75 ವರ್ಷ ಎಂದರೆ ಹೆಚ್ಚಲ್ಲ ಎಂಬುದನ್ನೂ ಒಪ್ಪೋಣ.

ಆದರೆ ಕಡಿಮೆಯೂ ಅಲ್ಲವಲ್ಲ. 2ನೇ ವಿಶ್ವಯುದ್ಧದ ನಂತರದ ಜಪಾನ್, ಕಳೆದ 2 ದಶಕಗಳಲ್ಲಿ ಅಮೆರಿಕಕ್ಕೆ ಸೆಡ್ಡು ಹೊಡೆಯು ತ್ತಿರುವ ಚೀನಾದ ಉದಾಹರಣೆ ನಮ್ಮ ಕಣ್ಣ ಮುಂದೆಯೇ ಇದೆ. ಕಳೆದ 5 ದಶಕಗಳವರೆಗೂ ಅಸ್ತಿತ್ವವೇ ಇಲ್ಲದ ಕೊಲ್ಲಿ ರಾಷ್ಟ್ರ ಗಳು ಇಂದು ಆರ್ಥಿಕವಾಗಿ ಯಾವ ಸ್ತರವನ್ನು ತಲುಪಿವೆ ಎಂಬ ನಿದರ್ಶನ ನಮ್ಮ ಮುಂದಿದೆ. ‘ಅಯ್ಯೋ ನಾವು ಇಷ್ಟು ಮಾಡಿದ್ದೇ ದೊಡ್ಡದು’ ಎಂದು ಹೇಳುವವರೂ ನಮ್ಮಲ್ಲಿದ್ದಾರೆ. ಒಂದು ವಿಷಯ, ಸಣ್ಣ ಉದ್ದಿಮೆಯೇ ಆಗಲಿ, ದೊಡ್ಡ ದೇಶವೇ ಆಗಲಿ, ಅಭಿವೃದ್ಧಿಯ ವಿಷಯದಲ್ಲಿ ಯಾವತ್ತೂ ಸಮಾಧಾನಪಟ್ಟು ಕುಳಿತುಕೊಳ್ಳುವಂತಿಲ್ಲ.

ಅದರಲ್ಲೂ ದೇಶದ ಅಭಿವೃದ್ಧಿಗಂತೂ ವಿಶ್ರಾಂತಿ, ನಿಲ್ದಾಣ ಬಿಡಿ, ನಿಧಾನಗತಿಯೂ ಒಪ್ಪುವಂಥದ್ದಲ್ಲ. Slow and steady wins the race ಎನ್ನುವ ಮಾತು ಇಲ್ಲಿ ಸಲ್ಲುವುದಿಲ್ಲ. ಆಡಳಿತದ ಗದ್ದುಗೆಯಲ್ಲಿ ಕುಳಿತವರು ನಿತ್ಯವೂ ಹೊಸ ಹುಡುಕಾಟ ದಲ್ಲಿ, ನವೋನ್ವೇಷಣೆಯಲ್ಲಿರಬೇಕು. ಅಭಿವೃದ್ಧಿ ಬಯಸುವವರು ನಿತ್ಯವೂ ಹೊಸ ವಿಚಾರಗಳ ಮಂತ್ರ ಪಠಿಸುತ್ತಲೇ ಇರಬೇಕು. 2019ರ (ಕೊರೋನಾ ಕಾಲವನ್ನೂ ಸೇರಿಸಿ) ಅಂಕಿ-ಅಂಶ ನೋಡಿ. ಆ ವರ್ಷ ಭಾರತಕ್ಕೆ ಭೇಟಿಯಿತ್ತ ವಿದೇಶಿ ಪ್ರವಾಸಿಗರ ಸಂಖ್ಯೆ ಸುಮಾರು ಒಂದೂಮುಕ್ಕಾಲು ಕೋಟಿ. ಅದೇ ವರ್ಷ ಕರ್ನಾಟಕದ ಅರ್ಧದಷ್ಟೂ ಇಲ್ಲದ ದುಬೈಗೆ ಭೇಟಿಯಿತ್ತ ಪ್ರವಾಸಿಗರು ಒಂದೂವರೆ ಕೋಟಿಗಿಂತಲೂ ಹೆಚ್ಚು.

ಒಮ್ಮೆ ಯೋಚಿಸಿ, ದುಬೈ ಯಾವುದನ್ನೆಲ್ಲ ಕೃತಕವಾಗಿ ನಿರ್ಮಿಸಲು ಟ್ರಿಲಿಯನ್ ಗಟ್ಟಲೆ ದುಡ್ಡು ಖರ್ಚು ಮಾಡುತ್ತಿದೆಯೋ,
ಭಾರತದಲ್ಲಿ ಅವೆಲ್ಲ ಪ್ರಕೃತಿದತ್ತವಾಗಿವೆ. ನಮ್ಮಲ್ಲಿ ಏನಿಲ್ಲ ಹೇಳಿ? ನದಿ, ಸಮುದ್ರ, ಮರುಭೂಮಿ, ಪರ್ವತ, ಹಿಮ ಎಲ್ಲವೂ ಇವೆ. ಆದರೂ ವಿಶ್ವದ ಪ್ರಮುಖ ಪರ್ಯಟನ ಸ್ಥಾನಗಳ ಪಟ್ಟಿಯಲ್ಲಿ ಭಾರತದ ಹೆಸರು ಎಷ್ಟೋ ಕೆಳಗಿದೆ. ಕೈಗಾರಿಕೆ,
ವಾಣಿಜ್ಯ, ಬಂಡವಾಳ ಹೂಡಿಕೆಯ ಪರಿಸ್ಥಿತಿಯೂ ಇದಕ್ಕಿಂತ ಭಿನ್ನವಾಗೇನೂ ಇಲ್ಲ.

ಇದಕ್ಕೆ ಕಾರಣ, ನಮ್ಮ ಸತ್ವ ಏನೆಂದು ಕಂಡುಕೊಳ್ಳದಿರುವುದು. ಒಂದೊಮ್ಮೆ ಅದು ತಿಳಿದರೂ, ಅದಕ್ಕೆ ಸರಿಯಾಗಿ ಪ್ರಚಾರ ನೀಡಿ, ಅವಶ್ಯಕತೆ ಇದ್ದವರಿಗೆ ತಲುಪಿಸದೇ ಇರುವುದು. ನಮ್ಮಲ್ಲಿ ಎಷ್ಟು ಸಾಮರ್ಥ್ಯವಿದೆ ಎಂದು ಕಂಡುಕೊಳ್ಳುವುದರ ಜತೆಗೆ ಅದನ್ನು ಜನರಿಗೆ ತಿಳಿಸುವುದೂ ಅಷ್ಟೇ ಮಹತ್ವದ ಸಂಗತಿ. ಇತ್ತೀಚಿನ ದಿನಗಳಲ್ಲಿ ಇದು ಅನಿವಾರ್ಯವೂ ಹೌದು. ಹಾಗಾದರೆ ನಮ್ಮಲ್ಲಿರುವ ತೊಂದರೆಯಾದರೂ ಏನು? ನಾವು ಎಲ್ಲಿ ಎಡವುತ್ತಿದ್ದೇವೆ? ನಮ್ಮ ದೊಡ್ಡ ಕೊರತೆಯೆಂದರೆ, ನಮ್ಮಲ್ಲಿರುವ
ಸಂಪನ್ಮೂಲಗಳಿಗೆ ಸರಿಯಾದ ಗ್ರಾಹಕರನ್ನು ಕಂಡುಕೊಳ್ಳಲು ಸಾಧ್ಯವಾಗದಿರುವುದು.

ನಿಜ, ನಮ್ಮಲ್ಲಿ ಗ್ರಾಹಕರ ಬೇಡಿಕೆಗಳನ್ನು ಪೂರೈಸುವುದಕ್ಕಾಗಿಯೇ ಹೆಚ್ಚಿನ ಪೈಪೋಟಿಯೇ ವಿನಾ, ಹೊಸತೊಂದನ್ನು ಮಾಡಿ ಅಥವಾ ನಮ್ಮಲ್ಲಿದ್ದುದರ ಕಡೆಗೆ ಗ್ರಾಹಕನೇ ಬರುವಂತೆ ಮಾಡುವವರು ತೀರಾ ಕಡಿಮೆ. ಒಂದು ಉದಾಹರಣೆ ಹೇಳುತ್ತೇನೆ, ಭಾರತದಲ್ಲಿ ಹೇರಳವಾಗಿ ಸಿಗುವ ಶಜರ್ ಕಲ್ಲಿನ ಕುರಿತು ಎಷ್ಟು ಜನರಿಗೆ ತಿಳಿದಿದೆ? ಕೊಲ್ಲಿಗೆ ಬರುವ ಮೊದಲು ನಾನಂತೂ ಅದರ ಹೆಸರನ್ನೂ ಕೇಳಿರಲಿಲ್ಲ.

ಅಲಂಕಾರಕ್ಕಾಗಿ ಬಳಸುವ ಆ ಕಲ್ಲಿನ ವಿಶೇಷತೆಯೆಂದರೆ, ಒಂದರಂತೆ ಇನ್ನೊಂದು ಇರುವುದಿಲ್ಲ. ಪ್ರತಿಯೊಂದು ಕಲ್ಲಿನ ವಿನ್ಯಾಸ ಬೇರೆಯೇ. ಕೊಲ್ಲಿ ರಾಷ್ಟ್ರಗಳು, ಇರಾನ್, ಇರಾಕ್ ಸೇರಿದಂತೆ ಬಹುತೇಕ ಎಲ್ಲ ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲೂ ಅದಕ್ಕೆ ಬಹಳ ಮಹತ್ವವಿದೆ. ಅಲ್ಲಿಯ ಜನ ಇಂದಿಗೂ ಅದನ್ನು ವೈಭವ ಮತ್ತು ಅದ್ಭುತದ ಕಲ್ಲು ಎಂದೇ ನಂಬಿದ್ದಾರೆ. ಅದಕ್ಕೇ ಈ ಭಾಗದಲ್ಲಿ ಅದರ ಬೆಲೆಯೂ ಹೆಚ್ಚು. ಆ ಕಲ್ಲು ಹೆಚ್ಚು ಸಿಗುವುದು ಎಲ್ಲಿ ಗೊತ್ತೇ? ಮಧ್ಯಪ್ರದೇಶ ಮತ್ತು ಉತ್ತರಪ್ರದೇಶದಲ್ಲಿ ಹರಿಯುವ ಕೆನ್ ನದಿಯಲ್ಲಿ!

ನಾನು ಇತ್ತೀಚೆಗೆ ಜರ್ಮನಿಗೆ ಹೋದಾಗ ಮೊದಲ ಬಾರಿ ಕಪ್ಪು ಅಕ್ಕಿಯ ಅನ್ನ ತಿಂದಿದ್ದೆ. ಅದನ್ನು ‘ಬ್ಲ್ಯಾಕ್ ರೈಸ್’ ಅಥವಾ ‘ಬುದ್ಧ ರೈಸ್’ ಎಂದೂ ಹೇಳುವುದಿದೆ. ಅದೇನೂ ಬೇಕಂತ ಇಷ್ಟಪಟ್ಟು ತಿಂದದ್ದಲ್ಲ, ಆ ಹೊಟೇಲಿನಲ್ಲಿ ಅದನ್ನು ಬಿಟ್ಟು ಬೇರೆ
ಇರಲಿಲ್ಲವೆಂಬ ಕಾರಣಕ್ಕಾಗಿ. ಅದರ ನಂತರವೇ ನನಗೆ ಕಪ್ಪು ಅಕ್ಕಿಯ ಗುಣಗಳ ಬಗ್ಗೆ ತಿಳಿದದ್ದು. ಅಲ್ಲಿಯವರೆಗೆ ಅದು ಸಕ್ಕರೆ ಕಾಯಿಲೆ, ಅಲ್ಜೈಮರ್, ರಕ್ತದೊತ್ತಡ ಇರುವ ರೋಗಿಗಳಿಗೆ ಒಳ್ಳೆಯದು ಎಂದಾಗಲಿ, ಅದರಲ್ಲಿ ಪ್ರೋಟೀನ್, ವಿಟಮಿನ್,
ಮೆಗ್ನೀಷಿಯಂ, ಕಬ್ಬಿಣ ಮತ್ತು ನಾರಿನ ಅಂಶ ಬಿಳಿ ಅಕ್ಕಿಗಿಂತ ಹೆಚ್ಚು ಎಂಬುದಾಗಲೀ ತಿಳಿದಿರಲಿಲ್ಲ.

ಅಮೆರಿಕ, ಯುರೋಪ್, ಆಸ್ಟ್ರೇಲಿಯಾದಂಥ ದೇಶಗಳಲ್ಲಷ್ಟೇ ಅಲ್ಲದೆ, ಪೂರ್ವ ಏಷ್ಯಾ ದೇಶಗಳಾದ ಚೀನಾ, ಜಪಾನ್, ಮಲೇಷ್ಯಾ, ವಿಯೆಟ್ನಾಂಗಳಲ್ಲೂ ಇತ್ತೀಚೆಗೆ ಕಪ್ಪು ಅಕ್ಕಿಗೆ ಹೆಚ್ಚಿನ ಬೇಡಿಕೆಯಿದೆ. ಭಾರತದಲ್ಲಿ ಅದನ್ನು ಬೆಳೆಯುತ್ತಿದ್ದರಾದರೂ,
ಬೆಳೆಯುವವರ ಸಂಖ್ಯೆ ಕಡಿಮೆಯೇ ಇತ್ತು. ಒಂದು ಅಂಕಿ-ಅಂಶದ ಪ್ರಕಾರ ಭಾರತದಲ್ಲಿ 5 ವರ್ಷದ ಹಿಂದಿನವರೆಗೂ 20-25 ಜನ ರೈತರಷ್ಟೇ ಇದನ್ನು ಬೆಳೆಯುತ್ತಿದ್ದರು. ಅದೂ ಅವರ ಸ್ವಂತಕ್ಕಾಗಿಯೇ ವಿನಾ ಮಾರಾಟಕ್ಕಲ್ಲ. ಇತ್ತೀಚಿನ ಅಂಕಿ-ಅಂಶದ ಪ್ರಕಾರ, ದೇಶದಾದ್ಯಂತ ಸುಮಾರು 1000 ಜನ ಇದನ್ನು ಬೆಳೆಯುತ್ತಿದ್ದಾರೆ.

ಬೆಳೆಯುವ ಭೂಭಾಗ 2 ಸಾವಿರದಿಂದ 10 ಸಾವಿರ ಹೆಕ್ಟೇರಿಗೆ ವಿಸ್ತರಿಸಿದೆ. ಇದರ ಬೆಲೆಯೂ ಕಿಲೋ ಒಂದಕ್ಕೆ 40
ರುಪಾಯಿಯಿಂದ 140 ರುಪಾಯಿಗೆ ಏರಿದ್ದು, ಪಾಶ್ಚಿಮಾತ್ಯ ದೇಶಗಳಿಗೆ ರಫ್ತಾಗುತ್ತಿದೆ. ನಮ್ಮ ಇನ್ನೊಂದು ಕೊರತೆಯೆಂದರೆ
ಮಾರ್ಕೆಟಿಂಗ್. ಆಗಲೇ ಹೇಳಿದಂತೆ, ನಮ್ಮಲ್ಲಿರುವುದನ್ನು ನಾವು ಹೇಗೆ ಜನರಿಗೆ ತಲುಪಿಸಬಹುದು ಎಂಬ ಮಾಹಿತಿಯ ಕೊರತೆ.

ಅದಕ್ಕೆ ತಿಳಿವಳಿಕೆಯ ಕೊರತೆ ಒಂದೆಡೆಯಾದರೆ, ಇನ್ನೊಂದೆಡೆ ಹಣಕಾಸಿನ ಕೊರತೆಯೂ ಇದ್ದೀತು. ಉದ್ಯಮ ಆರಂಭಿಸುವುದಕ್ಕೇ ಹೆಣಗಿ ಹೈರಾಣಾದವ ಇನ್ನು ಪ್ರಚಾರಕ್ಕೆ ಎಷ್ಟು ದುಡ್ಡು ಸುರಿದಾನು? ಅದಕ್ಕೇ ಹೆಚ್ಚಿನವರು ಸರಕಾರದ ಸಹಾಯಧನ ಅಥವಾ ಅನುದಾನದ ಮೊರೆಹೋಗುವುದು. ಇಲ್ಲಿ ಶಜರ್ ಕಲ್ಲು ಮತ್ತು ಕಪ್ಪು ಅಕ್ಕಿಯ ಉದಾಹರಣೆ ನೀಡಲು ಕಾರಣವಿದೆ. ಈ ಎರಡೂ ಹೆಸರು ಇತ್ತೀಚೆಗೆ ಸದ್ದು ಮಾಡುತ್ತಿದ್ದುದಕ್ಕೆ ಕಾರಣ, ಉತ್ತರಪ್ರದೇಶ ಸರಕಾರದ ಒಡಿಒಪಿ (One
District One Product) ಯೋಜನೆ.

ಉತ್ತರಪ್ರದೇಶದ ಸರಕಾರ ಕಳೆದ4-5 ೪-೫ ವರ್ಷಗಳಿಂದ ಆಯಾ ಜಿಲ್ಲೆ ಸಾಮರ್ಥ್ಯ ಅರಿತು, ಅಲ್ಲಿಯ ವಸ್ತುಗಳು, ಉತ್ಪನ್ನಗಳು ಹೆಚ್ಚಾಗಬೇಕು, ಅದು ಹೆಚ್ಚು ಜನರನ್ನು ತಲುಪಬೇಕು ಎಂಬ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. ಅದಕ್ಕೆ ಬೇಕಾದ ಸವಲತ್ತು, ಸಹಾಯಧನವನ್ನೂ ಒದಗಿಸುತ್ತಿದೆ. ಕಪ್ಪು ಅಕ್ಕಿಯ ಉದಾಹರಣೆ ಹೇಳಿದೆನಲ್ಲ, ಅದು ಹೆಚ್ಚು ಜನರನ್ನು ತಲುಪಲು ಕಾರಣ, ಮಾರ್ಕೆಟಿಂಗ್ ತಂತ್ರ. ಕಪ್ಪು ಅಕ್ಕಿಗೆ ‘ಬುದ್ಧ ರೈಸ್’ ಎಂದರೆ ಸಾಕೆ? ಅದನ್ನು ಜನರಿಗೆ ತಲುಪಿಸುವುದು ಹೇಗೆ? ಉತ್ತರಪ್ರದೇಶದ ಸರಕಾರ ರೈತರಿಗೆ ಕಪ್ಪು ಅಕ್ಕಿ ಕೃಷಿಯ ಕುರಿತಂತೆ ಹೆಚ್ಚಿನ ತಿಳಿವಳಿಕೆ ಮತ್ತು ಸಹಾಯ ನೀಡುತ್ತಿದೆ. ಕಪ್ಪು
ಅಕ್ಕಿಯನ್ನು ಭಗವಾನ್ ಬುದ್ಧನ ಚಿತ್ರದೊಂದಿಗೆ ಆತನ ಹಿತವಚನ ಇರುವ ಆಕರ್ಷಕ ಚೀಲದಲ್ಲಿ ತುಂಬಿ, ಬೌದ್ಧ ಧರ್ಮವನ್ನು ಹೆಚ್ಚಾಗಿ ಪಾಲಿಸುವ ಪೂರ್ವ ಏಷ್ಯಾ ದೇಶಗಳಿಗೆ ರಫ್ತು ಮಾಡುತ್ತಿದ್ದಾರೆ.

ಬೇರೆ ಬೇರೆ ದೇಶಗಳಲ್ಲಿರುವ ಭಾರತೀಯ ದೂತಾವಾಸದ ನೆರವಿನಿಂದ ಶಜರ್ ಕಲ್ಲು ಮಾರಾಟ ಮಾಡುವ ಯೋಜನೆ ನಿರೂಪಿಸಿದ್ದಾರೆ. ಇದೇ ರೀತಿಯ ಪ್ರಯೋಗ ಬೆಲ್ಲ, ಡ್ರ್ಯಾಗನ್ ಫ್ರೂಟ್, ಸ್ಟ್ರಾಬೆರಿ ಇತ್ಯಾದಿಗಳಿಗೂ ನಡೆದಿದೆ. ಇಂಥ ಉತ್ಪನ್ನ ಗಳನ್ನು ಜನರಿಗೆ ತಲುಪಿಸಲು ಅಮೆಜಾನ್, ಫ್ಲಿಪ್‌ಕಾರ್ಟ್ ಸಂಸ್ಥೆಗಳನ್ನೂ ಕರೆತಂದಿದ್ದು, ರೈತರಿಗೆ ಇನ್ನೂ ಅನುಕೂಲ ವಾಗಿದೆ.

ಫ್ಲಿಪ್‌ಕಾರ್ಟ್ ಅಂತೂ ಒಂದು ಹೆಜ್ಜೆ ಮುಂದೆ ಹೋಗಿ, ರೈತರಿಗೆ ಮಾರ್ಕೆಟಿಂಗ್ ಮತ್ತು ವೇರ್ ಹೌಸ್ ಸೌಲಭ್ಯವನ್ನೂ ಒದಗಿಸುತ್ತಿದೆ. ಇದರ ಪರಿಣಾಮವಾಗಿ 5 ವರ್ಷದ ಹಿಂದೆ ಸುಮಾರು 80000 ಕೋಟಿ ರುಪಾಯಿಯಷ್ಟಿದ್ದ ಉತ್ತರ
ಪ್ರದೇಶ ಸರಕಾರದ ರ- ಈಗ ಶೇ. 50ರಷ್ಟು ಹೆಚ್ಚಿದೆ. ರಫ್ತಾಗುತ್ತಿರುವ ವಸ್ತುಗಳ ಪೈಕಿ ಶೇ.80ರಷ್ಟು ಒಡಿಒಪಿ ವರ್ಗಕ್ಕೆ ಸೇರಿದ್ದು, ಮುಂದಿನ 5 ವರ್ಷದಲ್ಲಿ ಇದನ್ನು ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ.

ಅದೇನಾದರೂ ಆದರೆ, ಗುಜರಾತ್ ಮಾಡೆಲ್‌ನಂತೆ ‘ಉತ್ತರಪ್ರದೇಶ ಮಾಡೆಲ’ ಎಂದು ಕರೆಯುವ ದಿನವೂ ದೂರವಿಲ್ಲ.
ಈ ತಂತ್ರವನ್ನು ಇತರ ರಾಜ್ಯಗಳೂ ಅಳವಡಿಸಿಕೊಂಡರೆ ಒಳ್ಳೆಯದು. ಅಷ್ಟಕ್ಕೂ ಏನು ಗೊತ್ತೇ? ನಮ್ಮಲ್ಲಿ ತಿನ್ನುವ
ಅಕ್ಕಿಯಾಗಲಿ, ಹಣ್ಣಾಗಲಿ ಅಥವಾ ನಮಗೆ ಕೆಲಸಕ್ಕೆ ಬಾರದ್ದು ಎಂದು ತಿಳಿದ ಕಗಲಿ, ಮರಳಾಗಲಿ, ಅದೇ ನಮ್ಮ ಸಾಮರ್ಥ್ಯ ಎಂದಾದರೆ ಅದನ್ನೇ ಮಾರಬೇಕು. ಜಗತ್ತಿನ ಯಾವ ಮೂಲೆಯದರೂ ಅದನ್ನು ಕೊಂಡುಕೊಳ್ಳುವ ಒಬ್ಬ ಗ್ರಾಹಕ ಇದ್ದೇ
ಇರುತ್ತಾನೆ.