Friday, 18th October 2024

ರಿಷಿ ಸುನಕ್ ನಡೆ ಮಾದರಿ

ನಿರೀಕ್ಷೆಯಂತೆ ಬ್ರಿಟನ್‌ನಲ್ಲಿ ಲೇಬರ್ ಪಕ್ಷ ಅಧಿಕಾರಕ್ಕೆ ಬಂದಿದೆ. ಭಾರತಕ್ಕೆ ಹತ್ತಿರವಾಗಿದ್ದ ಕನ್ಸರ್ವೇಟಿವ್ ಪಕ್ಷದ ಪ್ರಧಾನಿ ಅಭ್ಯರ್ಥಿ ರಿಷಿ ಸುನಕ್ ತಮ್ಮ ಕ್ಷೇತ್ರದಿಂದ ಜಯಗಳಿಸಿದರೂ ತಮ್ಮ ಪಕ್ಷವನ್ನು ಗೆಲುವಿನತ್ತ ಒಯ್ಯಲು ವಿ-ಲರಾಗಿದ್ದಾರೆ. ಚುನಾವಣೆ ಎಂದ ಮೇಲೆ ಸೋಲು ಗೆಲುವು ಸಹಜ. ೧೦ ವರ್ಷಗಳ ಬಳಿಕ ಆಡಳಿತ ವಿರೋಧಿ ಅಲೆಯಲ್ಲಿ ಕನ್ಸರ್ವೇಟಿವ್ ಪಕ್ಷ ಸೋತಿದ್ದರಲ್ಲಿ ವಿಶೇಷವೇನೂ ಇಲ್ಲ.

ಆದರೆ ಸೋತ ಬಳಿಕ ರಿಷಿ ಸುನಕ್ ತಮ್ಮ ಭಾಷಣದ ಮೂಲಕ ಎಲ್ಲರ ಮನಗೆದ್ದಿದ್ದಾರೆ. ಗೆಲುವಿನ ನಂತರ ಭಾಷಣ ಮಾಡುವುದು ಸುಲಭ. ಆದರೆ ಸೋಲನ್ನು ಅರಗಿಸಿಕೊಂಡು ನಗನಗುತ್ತಾ ಮಾತನಾಡುವುದು ಕಷ್ಟದ ಕೆಲಸ. ತಮ್ಮ ಸೋಲು ಖಚಿತ ವಾಗುತ್ತಿದ್ದಂತೆ ಪತ್ನಿ ಅಕ್ಷತಾ ಮೂರ್ತಿ ಅವರ ಜೊತೆ ಪ್ರಧಾನಿ ಕಚೇರಿಯಿಂದ ಹೊರ ಬಂದ ಸುನಕ್, ವಿದಾಯ ಭಾಷಣ ಮಾಡುತ್ತಾ, “ಜನತೆಯು ಅಧಿಕಾರ ಹಸ್ತಾಂತರಕ್ಕೆ ಮನಸ್ಸು ಮಾಡಿದ್ದಾರೆ.

ಸಶಕ್ತವಾದ ಬ್ರಿಟನ್ ದೇಶಕ್ಕಾಗಿ ನಾನು ಜನರ ತೀರ್ಪನ್ನು ಸ್ವಾಗತಿಸುತ್ತೇನೆ. ನಿಮ್ಮ ನಿರೀಕ್ಷೆಯನ್ನು ಮುಟ್ಟಲು ವಿಫಲವಾಗಿದ್ದಕ್ಕೆ ಕ್ಷಮೆಯನ್ನೂ ಕೋರು ತ್ತೇನೆ “ಎಂದು ಹೇಳಿದರು. ಇದೇ ವೇಳೆ ಮುಂದಿನ ಪ್ರಧಾನಿ ಕೀರ್‌ಸ್ಟಾರ್ಮರ್ ಅವರನ್ನು ಅಭಿನಂದಿಸಿ ಯಶಸ್ಸು ಕೋರಿದರು. “ಚುನಾವಣಾ ಅಭಿಯಾನ ದಲ್ಲಿ ನಮ್ಮ ಭಿನ್ನಾಭಿಪ್ರಾಯಗಳು ಏನೇ ಇರಲಿ, ಅವರು ಸಭ್ಯ, ಸಮರ್ಪಣಾ ಮನೋಭಾವದ ವ್ಯಕ್ತಿ, ಅವರನ್ನು ಗೌರವಿಸುತ್ತೇನೆ. ದೇಶದ ಪರಿವರ್ತನೆಗೆ ಅವರು ದೊಡ್ಡ ಮಟ್ಟದ ಕೊಡುಗೆ ನೀಡಲಿ ಎಂದು ಹಾರೈಸಿದರು. ಎರಡು ತಲೆಮಾರುಗಳ ಹಿಂದೆ ಪರದೇಶಿಗನಾಗಿ ಬಂದು ಬ್ರಿಟನಿನ ಪ್ರಧಾನಿಯಾಗಿ ದ್ದಕ್ಕೆ, ಪ್ರಧಾನಿ ನಿವಾಸದಲ್ಲಿ ದೀಪಾವಳಿ ಹಬ್ಬ ಆಚರಿಸಲು ಸಾಧ್ಯವಾಗಿದ್ದಕ್ಕೆ ಸಂತಸ ವ್ಯಕ್ತಪಡಿಸಿದರು.

ಬ್ರಿಟನ್ ಹಿರಿಮೆಯನ್ನು ಕೊಂಡಾಡಿದರು. ತಮ್ಮ ಬೆಂಬಲಕ್ಕೆ ನಿಂತ ಕುಟುಂಬ ವರ್ಗದವರನ್ನು ಸ್ಮರಿಸಿದರು. ಇದನ್ನೇ ಭಾರತದ ಚುನಾವಣೆ ಫಲಿ ತಾಂಶದ ಸಂದರ್ಭಕ್ಕೆ ಹೋಲಿಸಿ ನೋಡಿ. ಗೆದ್ದವರ ಸಂಭ್ರಮದಲ್ಲಿ ಸೋತವರ ಬಗ್ಗೆ ಸಾಂತ್ವನ, ಸಹಾನುಭೂತಿ ಬದಲು ಲೇವಡಿ, ವ್ಯಂಗದ ಮಾತುಗಳೇ ತುಂಬಿರುತ್ತವೆ. ಮುಂದಿನ ಚುನಾವಣೆಯಲ್ಲಿ ಅವರು ರಾಜಕೀಯ ಭೂಪಟದಿಂದಲೇ ನಿರ್ನಾಮವಾಗಲಿದ್ದಾರೆ ಎಂಬ ಅಬ್ಬರದ ಮಾತುಗಳು ಕೇಳಿ ಬರುತ್ತವೆ. ಇನ್ನು ಸೋತವರು, ಪ್ರಾಮಾಣಿಕವಾಗಿ ಸೋಲೊಪ್ಪಿಕೊಂಡ ನಿದರ್ಶನಗಳು ಕಡಿಮೆ.

ಆಡಳಿತ ಪಕ್ಷದ ಹಣ ಬಲದ ಮುಂದೆ ನಾವು ಸೋತಿದ್ದೇವೆ. ಇವಿಎಂನಲ್ಲಿ ನಡೆದ ಮೋಸದಿಂದ ಸೋಲಾಗಿದೆ ಎಂಬ ಸಬೂಬುಗಳೇ ಹೆಚ್ಚಿರುತ್ತವೆ. ಅಂತಿಮವಾಗಿ ಚುನಾವಣೆ ಎಂಬುದು ದೇಶದ ಆಡಳಿತ ವ್ಯವಸ್ಥೆಯ ಭಾಗ. ಇದನ್ನು ಕೌಟುಂಬಿಕ ಮಟ್ಟಕ್ಕೆ ತಂದು ಸೋಲು, ಗೆಲುವನ್ನು ಪ್ರತಿಷ್ಠೆ ಯನ್ನಾಗಿ ಪರಿಗಣಿಸುವ ಭಾರತೀಯ ನಾಯಕರು, ಭಾರತೀಯ ಮೂಲದ ರಿಷಿ ಸುನಕ್ ಅವರಿಂದ ಕಲಿಯಬೇಕಾದುದು ಬಹಳಷ್ಟಿದೆ.