Tuesday, 5th November 2024

Terror Attack: ಜನನಿಬಿಡ ಮಾರುಕಟ್ಟೆಯಲ್ಲಿ ಗ್ರೆನೇಡ್‌ ಸ್ಫೋಟ; 9ಕ್ಕೂ ಅಧಿಕ ಮಂದಿಗೆ ಗಂಭೀರ ಗಾಯ

terror attack

ಶ್ರೀನಗರ: ಜಮ್ಮು ಮತ್ತು ಕಾಶ್ಮೀರ (Jammu and Kashmir)ದಲ್ಲಿ ಉಗ್ರರ ಉಪಟಳ ದಿನೇ ದಿನೆ ಹೆಚ್ಚಾಗುತ್ತಿದ್ದು, ಇಂದು ಜನನಿಬಿಡ ಪ್ರದೇಶದಲ್ಲಿ ಗ್ರೆನೇಡ್‌ ಸ್ಫೋಟ(Grenade Attack)ಗೊಂಡಿದೆ. ಶ್ರೀನಗರದ ಭಾನುವಾರ ಮಾರುಕಟ್ಟೆಯ ಮೇಲೆ ಭಯೋತ್ಪಾದಕರು ಗ್ರೆನೇಡ್ ಎಸೆದ(Terror Attack) ಪರಿಣಾಮ ಕನಿಷ್ಠ ಒಂಬತ್ತಕ್ಕೂ ಅಧಿಕ ನಾಗರಿಕರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ.

ಜಮ್ಮು ಮತ್ತು ಕಾಶ್ಮೀರದ ರಾಜಧಾನಿ ಶ್ರೀನಗರದಲ್ಲಿ ಭಾನುವಾರ ನಡೆದ ಗ್ರೆನೇಡ್ ದಾಳಿಯಲ್ಲಿ ಕನಿಷ್ಠ 9 ನಾಗರಿಕರು ಗಾಯಗೊಂಡಿದ್ದಾರೆ. ಶ್ರೀನಗರದ ಪ್ರವಾಸಿ ಸ್ವಾಗತ ಕೇಂದ್ರದ ಬಳಿಯ ಭಾನುವಾರ ಮಾರುಕಟ್ಟೆಯಲ್ಲಿ ಸ್ಫೋಟ ಸಂಭವಿಸಿದೆ. ಸ್ಫೋಟವು ಈ ಪ್ರದೇಶದಲ್ಲಿ ಭೀತಿಯನ್ನು ಉಂಟುಮಾಡಿತು ಮತ್ತು ಅಂಗಡಿಯವರು ಪ್ರಾಣ ಉಳಿಸಿಕೊಳ್ಳಲು ಓಡಿದ್ದಾರೆ.

ಗಾಯಗೊಂಡವರನ್ನು ಸ್ಥಳಾಂತರಿಸಲು ಮತ್ತು ಭಯೋತ್ಪಾದಕರ ಪತ್ತೆಗಾಗಿ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಲು ಪೊಲೀಸರು ಮತ್ತು ಅರೆಸೇನಾ ಪಡೆಗಳು ಸ್ಥಳಕ್ಕೆ ಧಾವಿಸಿವೆ. ಶ್ರೀನಗರದಲ್ಲಿ ಭದ್ರತಾ ಪಡೆಗಳು ಲಷ್ಕರ್-ಎ-ತೊಯ್ಬಾಗೆ ಸೇರಿದ ಪಾಕಿಸ್ತಾನದ ಉನ್ನತ ಭಯೋತ್ಪಾದಕನನ್ನು ಹೊಡೆದುರುಳಿಸಿದ ಒಂದು ದಿನದ ನಂತರ ಗ್ರೆನೇಡ್ ದಾಳಿ ನಡೆದಿದೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ಶನಿವಾರ (ನ. 2) ಭಾರತೀಯ ಭದ್ರತಾ ಪಡೆ ಭರ್ಜರಿ ಕಾರ್ಯಾಚರಣೆ ನಡೆಸಿದ್ದು, 2 ಪ್ರತ್ಯೇಕ ಎನ್‌ಕೌಂಟರ್‌ಗಳಲ್ಲಿ (Encounters) ಮೂವರು ಭಯೋತ್ಪಾದಕರು ಹತರಾಗಿದ್ದಾರೆ. ಅನಂತ್‌ನಾಗ್‌ನಲ್ಲಿ ಇಬ್ಬರು ಮತ್ತು ಖನ್ಯಾರ್‌ನಲ್ಲಿ ಓರ್ವ ಉಗ್ರ ಬಲಿಯಾಗಿದ್ದಾನೆ. ಸದ್ಯ ಕಾರ್ಯಾಚರಣೆ ಮುಂದುವರಿದಿದೆ.

ಖನ್ಯಾರ್‌ನಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ನಾಲ್ವರು ಪೊಲೀಸರು ಗಾಯಗೊಂಡು, ಓರ್ವ ಉಗ್ರ ಹತನಾಗಿದ್ದಾನೆ. ಮೂಲಗಳ ಪ್ರಕಾರ ಈ ಪ್ರದೇಶದಲ್ಲಿ ಇಬ್ಬರು ಉಗ್ರರು ಅಡಗಿರುವ ಸಾಧ್ಯತೆ ಇದೆ. ಇನ್ನು ಅನಂತ್‌ನಾಗ್‌ನ ಹಲ್ಕಾನ್‌ ಗಲಿ ಪ್ರದೇಶದಲ್ಲಿ ಭದ್ರತಾ ಪಡೆ ನಡೆಸಿದ ಭಯೋತ್ಪಾದಕ ವಿರೋಧಿ ಕಾರ್ಯಾಚರಣೆಯಲ್ಲಿ ಇಬ್ಬರು ಉಗ್ರರು ಬಲಿಯಾಗಿದ್ದಾರೆ. ಇತ್ತ ಜಮ್ಮು ಮತ್ತು ಕಾಶ್ಮೀರದ ಬಂಡಿಪೋರಾ ಪ್ರದೇಶದಲ್ಲಿ ಸೇನೆ ಶೋಧ ಕಾರ್ಯವನ್ನು ಚುರುಕುಗೊಳಿಸಿದೆ.

ಶುಕ್ರವಾರ ಉತ್ತರ ಪ್ರದೇಶ ಮೂಲದ ಇಬ್ಬರು ಕಾರ್ಮಿಕ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ ಹಿನ್ನೆಲೆಯಲ್ಲಿ ಭಯೋತ್ಪಾದಕ ವಿರೋಧಿ ಕಾರ್ಯಾಚರಣೆ ನಡೆಸಲಾಯಿತು. ಮಧ್ಯ ಕಾಶ್ಮೀರದ ಬುದ್ಗಾಮ್‌ ಜಿಲ್ಲೆಯ ಮಗಮ್‌ ಪ್ರದೇಶದಲ್ಲಿ ನಡೆದ ದಾಳಿಯಲ್ಲಿ ಇಬ್ಬರು ಗಾಯಗೊಂಡಿದ್ದರು. ಕಳೆದ 2 ವಾರಗಳ ಅಂತರದಲ್ಲಿ ಕಣಿವೆ ರಾಜ್ಯದಲ್ಲಿ ವಲಸೆ ಕಾರ್ಮಿಕರನ್ನು ಗುರುಯಾಗಿಸಿಕೊಂಡು ನಡೆದ 4ನೇ ದಾಳಿ ಇದಾಗಿದೆ. ಅ. 20ರಂದು ಗಂಡರ್ಬಾಲ್ ಜಿಲ್ಲೆಯ ಗಗಾಂಗೀರ್‌ನಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯಲ್ಲಿ ಓರ್ವ ವೈದ್ಯ ಸೇರಿ 7 ಮಂದಿ ಮೃತಪಟ್ಟಿದ್ದರು. ಇದರಲ್ಲಿ ಸುರಂಗ ಕಾಮಗಾರಿ ನಡೆಸುತ್ತಿದ್ದ ಇಬ್ಬರು ಬಿಹಾರ ಮೂಲದ ಕಾರ್ಮಿಕರೂ ಸೇರಿದ್ದರು.

ಈ ಸುದ್ದಿಯನ್ನೂ ಓದಿ: Terror Attack: ಜಮ್ಮು & ಕಾಶ್ಮೀರದಲ್ಲಿ ಮತ್ತೆ ಉಗ್ರರ ದಾಳಿ; ಇಬ್ಬರು ವಲಸೆ ಕಾರ್ಮಿಕರಿಗೆ ಗಾಯ