Saturday, 23rd November 2024

Sandur By Election: ಬಿಜೆಪಿಯ ಬೆದರಿಕೆ, ಷಡ್ಯಂತ್ರ, ಕುತಂತ್ರಗಳಿಗೆ ಈ ಉಪ ಚುನಾವಣೆಯಲ್ಲಿ ಪಾಠ ಕಲಿಸಿ; ಸಿದ್ದರಾಮಯ್ಯ ಕರೆ

Sandur By Election

ಸಂಡೂರು: ವಿರೋಧ ಪಕ್ಷಗಳ ಜನ ನಾಯಕರನ್ನು ಸಿಬಿಐ, ಇಡಿ, ಐಟಿ ಹೆಸರಲ್ಲಿ ಹೆದರಿಸಿ, ಬೆದರಿಸಿ ಮೋದಿ ದರ್ಬಾರು ನಡೆಸುತ್ತಿದ್ದಾರೆ. ಬಿಜೆಪಿಯ (BJP) ಬೆದರಿಕೆ, ಷಡ್ಯಂತ್ರ, ಕುತಂತ್ರಗಳಿಗೆ ಈ ಉಪ ಚುನಾವಣೆಯಲ್ಲಿ ಪಾಠ ಕಲಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಕರೆ ನೀಡಿದರು. ಸಂಡೂರು ವಿಧಾನಸಭಾ ಕ್ಷೇತ್ರದ (Sandur By Election) ಕುಡುತಿನಿಯಲ್ಲಿ ನಡೆದ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣಮ್ಮ ಅವರ ಪರ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಪ್ರಧಾನಿ ನರೇಂದ್ರ ಮೋದಿಯಾಗಲಿ, ಬಿಜೆಪಿಯವರಾಗಲೀ ಒಂದೇ ಒಂದು ದಿನ ನಮ್ಮ ಜನರ ದಿನನಿತ್ಯದ ಸಮಸ್ಯೆಗಳ ಬಗ್ಗೆ ಮಾತಾಡೋದಿಲ್ಲ. ಬೆಲೆ ಏರಿಕೆ ಬಗ್ಗೆ ಮಾತಾಡಲ್ಲ, ನಿರುದ್ಯೋಗ ಸಮಸ್ಯೆ ಬಗ್ಗೆ ಮಾತಾಡಿಲ್ಲ, ರೂಪಾಯಿ ಮೌಲ್ಯ ಕುಸಿಯುತ್ತಿರುವುದರ ಬಗ್ಗೆ ಮಾತಾಡಲ್ಲ, ರೈತ, ಕಾರ್ಮಿಕರ ಸಮಸ್ಯೆಗಳ ಬಗ್ಗೆ ಮಾತಾಡಿಲ್ಲ. ವಿದೇಶದಿಂದ ಕಪ್ಪು ಹಣ ತರಲಿಲ್ಲ. ನಿಮ್ಮ ಅಕೌಂಟಿಗೆ 15 ಲಕ್ಷ ಹಾಕಲಿಲ್ಲ. ಉದ್ಯೋಗ ಸೃಷ್ಟಿ ಮಾಡುವುದಿರಲಿ, ಇರುವ ಉದ್ಯೋಗಗಳೇ ಬಂದ್ ಆಗುವಂತೆ ಮಾಡಿದರು ಎಂದು ದೂರಿದ ಅವರು, ಕೇವಲ ಕೇಂದ್ರದ ತನಿಖಾ ಸಂಸ್ಥೆಗಳಾದ ಸಿಬಿಐ, ಇಡಿ, ಐಟಿ ಉಪಯೋಗಿಸಿಕೊಂಡು ವಿರೋಧ ಪಕ್ಷದ ನಾಯಕರುಗಳನ್ನು ಹೆದರಿಸಿ, ಬೆದರಿಸಿಕೊಂಡು ತಮ್ಮ ಹುಳುಕುಗಳ ಬಗ್ಗೆ ಯಾರೂ ಮಾತಾಡದಂತೆ ಷಡ್ಯಂತ್ರ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.

ಈ ಸುದ್ದಿಯನ್ನೂ ಓದಿ | Gruhalakshmi Scheme: ‘ಗೃಹಲಕ್ಷ್ಮೀ’ ಹಣದಿಂದ ಹೊಲಿಗೆ ಯಂತ್ರ ಖರೀದಿಸಿ ಮೊಮ್ಮಕ್ಕಳ ಬದುಕು ರೂಪಿಸಿದ ಮಹಿಳೆ!

ಅತ್ಯಂತ ಹಿಂದುಳಿದ ತಾಲೂಕು ಎನ್ನುವ ಪಟ್ಟಿಯಲ್ಲಿದ್ದ ಸಂಡೂರನ್ನು ಪ್ರಗತಿಯ ಪಥದಲ್ಲಿ ಧಾಪುಗಾಲು ಹಾಕುವಂತೆ ಮಾಡಿದ್ದು ಶಾಸಕರಾದ ಸಂತೋಷ್ ಲಾಡ್ ಮತ್ತು ಈ.ತುಕಾರಾಮ್ ಎಂದು ತಿಳಿಸಿದ ಸಿಎಂ ಅವರು, ಸಂಡೂರಿನ ಅಭಿವೃದ್ಧಿಯನ್ನು ತಲೆ ಮೇಲೆ ಹೊತ್ತುಕೊಂಡು ಹಗಲಿರುಳು ಕೆಲಸ ಮಾಡಿರುವ ಈ. ತುಕಾರಾಮ್ ಅವರ ಪತ್ನಿ ಅನ್ನಪೂರ್ಣಮ್ಮ ಗೆದ್ದರೆ ನಾನೇ ಗೆದ್ದಂತೆ. ಅನ್ನಪೂರ್ಣಮ್ಮ ಅವರ ಗೆಲುವು ಸಂಡೂರಿನ ಅಭಿವೃದ್ಧಿಗೆ ವೇಗ ತರುತ್ತದೆ ಎಂದು ತಿಳಿಸಿದರು.

692 ದಿನಗಳ ರೈತರ ಹೋರಾಟಕ್ಕೆ ಸುಖಾಂತ್ಯ ಹಾಡೋಣ: ಸಿಎಂ ಭರವಸೆ

ಸಂಡೂರಿನ ಕುಡುತಿನಿಯಲ್ಲಿ ಕಳೆದ 692 ದಿನಗಳಿಂದ ನಡೆಯುತ್ತಿರುವ ರೈತರ ಹೋರಾಟದ ಸ್ಥಳಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ನಿಮ್ಮ 692 ದಿನಗಳ ಹೋರಾಟಕ್ಕೆ ಉಪ ಚುನಾವಣೆ ಮುಗಿಯುತ್ತಿದ್ದಂತೆ ಸುಖಾಂತ್ಯ ಹಾಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.

2010 ರಲ್ಲಿ ರೈತರ ಗಮನಕ್ಕೆ ಬಾರದಂತೆ ಜಮೀನು ಸ್ವಾಧೀನ ಪಡಿಸಿಕೊಂಡು ಆಗಿನ ಬಿಜೆಪಿ ಸರ್ಕಾರ ರೈತ ಕುಟುಂಬಗಳ ಬಾಯಿಗೆ ಮಣ್ಣು ಹಾಕಿದೆ ಎಂದು ಪ್ರತಿಭಟನಾಕಾರರು ದೂರಿದರು.

ಈ ಸುದ್ದಿಯನ್ನೂ ಓದಿ | Karnataka Rain: ನ.10ಕ್ಕೆ ಬೆಂಗಳೂರು ಸೇರಿ ದಕ್ಷಿಣ ಒಳನಾಡು, ಕರಾವಳಿ ಭಾಗದಲ್ಲಿ ಮಳೆ ನಿರೀಕ್ಷೆ

ಪ್ರತಿಭಟನಾನಿರತ ರೈತರ ಸಮಸ್ಯೆ ಆಲಿಸಿ, ಮನವಿ ಸ್ವೀಕರಿಸಿದ ಮುಖ್ಯಮಂತ್ರಿಗಳು, ಸಂಸದ ಈ.ತುಕಾರಾಮ್ ಅವರು ನಿಮ್ಮ ಸಮಸ್ಯೆಗಳನ್ನೆಲ್ಲಾ ವಿವರಿಸಿ ಮನವಿ ನೀಡಿದ್ದಾರೆ. ಮನವಿಯ ಮೇಲೆಯೇ ವಿಶೇಷ ಸಭೆ ಕರೆಯಲು ಸೂಚಿಸಿದ್ದೇನೆ. ಚುನಾವಣೆ ಮುಗಿಯುತ್ತಿದ್ದಂತೆ ಮೀಟಿಂಗ್ ಕರೆಯುತ್ತೇನೆ. ಕೆಐಎಡಿಬಿ ಸೇರಿ ಸಂಬಂಧಪಟ್ಟ ಎಲ್ಲಾ ಇಲಾಖೆಗಳ ಸಭೆ ಕರೆದು ಚರ್ಚಿಸೋಣ. ಪರಿಹಾರ ಕಂಡುಕೊಳ್ಳೋಣ ಎಂದು ಭರವಸೆ ನೀಡಿದರು. ನಮ್ಮ ಸರ್ಕಾರ ರೈತರ ಹಿತ ಕಾಯಲು ಏನೇನು ಮಾಡಬೇಕೋ, ಎಲ್ಲವನ್ನೂ ಮಾಡಲು ಸಿದ್ದವಿದೆ ಎಂದು ಇದೇ ವೇಳೆ ಸಿಎಂ ಸಿದ್ದರಾಮಯ್ಯ ತಿಳಿಸಿದರು.