Friday, 20th September 2024

ನುನ್‌ಕುನ್‌ನಲ್ಲಿ ಬುದ್ಧ ನಗುತ್ತಿದ್ದಾನೆ ಸ್ಮೈಲ್‌…ಪ್ಲೀಸ್..

ಅಲೆಮಾರಿಯ ಡೈರಿ

ಸಂತೋಷಕುಮಾರ ಮೆಹೆಂದಳೆ

mehandale100@gmail.com

ಚಳಿಗಾಲದಲ್ಲಿ ಹಿಮದಿಂದಲೂ, ಅದ್ಭುತವಾದ ತಿಳಿಬಿಸಿಲಿಗೂ ತೆರೆದುಕೊಳ್ಳುತ್ತಾ, ಕಂಡಲ್ಲಿ ನಿಂತು ಚಿತ್ರಿಸಿಕೊಳ್ಳುವ, ಇಂದು ಪೋಸ್ ಹಾಕಿಕೊಂಡು ಬಿಡೋಣ ಎನ್ನುವ ಉಮೇದಿಗೆ ನಿಮ್ಮನ್ನು ದೂಡುವ ಜಾಗವೇನಾದರೂ ಇದ್ದರೆ ಅದು ಬುದ್ಧ ನಗುವ ತಾಣ. ಇತ್ತ ತಿರುಗಿದರೂ ಫೋಟೊ ಅತ್ತ ತಿರುಗಿದರೂ ಫೋಟೊ. ಅಷ್ಟೆ.. ಮನದಲ್ಲಿ ಏನೇ ಸಂಕಟಗಳಿದ್ದರೂ, ಪೋಸಿಗಾಗಿಯಾದರೂ ನಿಮ್ಮನ್ನು ಸ್ಮೈಲ್ ಮಾಡಿಸಬಲ್ಲ ತಾಣವಿದ್ದರೆ ಅದು ಮುಲ್ಬೇಕ್.

ಇದನ್ನು ಹೆಚ್ಚಿನ ಪ್ರವಾಸಿಗರು ಅರ್ಧ ಗಂಟೆ ನಿಂತು ಮುಂದೆ ಸಾಗುವ ಟ್ರಾನ್ಸಿಟ್ ಮಾಡಿಕೊಳ್ಳುವ ತಪ್ಪು ಮಾಡುತ್ತಾರೆ. ಅದರ ಬದಲಿಗೆ ಮುಂದೆ ಹೋಗಿ ತಂಗುವುದಕ್ಕಿಂತ ಇಲ್ಲಿನ ಹೂವಿನ ಗದ್ದೆಗಳ ಮಧ್ಯೆ ಹರವಿರುವ ರೆಸಾರ್ಟ್‌ಗಳಲ್ಲಿ ಕಾಲು ಚಾಚಿದರೆ ಅದಕ್ಕಿಂತ ಚೆಂದ ಮತ್ತೊಂದಿರಲಿಕ್ಕಿಲ್ಲ. ಆದರೆ ಆ ಬಗ್ಗೆ ಹೆಚ್ಚಿನ ಪ್ರವಾಸಿಗರು ಮುಂದಿನ ಆಕರ್ಷಕ ಹೆಸರಿನ. ರೋಚಕ ಇತಿಹಾಸದ ಕಾರ್ಗಿಲ ಕಡೆಗೆ ಒಲವು ತೋರುವುದರಿಂದ ಇದು ಕೈ ತಪ್ಪುತ್ತದೆ. ಅದರಲ್ಲೂ ಜೋಜಿಲಾ ಪಾಸ್ ಕ್ರಾಸ್ ಮಾಡಿ ಮೇಲಕ್ಕೇರುವ ಭರದಲ್ಲಿ ಕಣಿವೆಯನ್ನು ನೋಡಿ ಸಂಭ್ರಮಿಸುವ ಆತುರ ಮೊದಲೊಮ್ಮೆ ಕೊಂಚ ತಣಿದು, ಆ ಎತ್ತರದಲ್ಲಿ ಕೊಂಚ ದಣಿವೂ ಆಗುವುದರಿಂದ ಸಂಜೆಯ ಮುನ್ನ ಕಾರ್ಗಿಲ್ ಸೇರಿ ಬಿಡುವ ಆತುರದಲ್ಲಿ ಮುಲ್ಬೇಕ್ ಹೆಚ್ಚಿನ ಪ್ರವಾಸಿಗರಿಗೆ ಮುಗ್ಗರಿಸಿ ಬಿಡುತ್ತದೆ.

ಆದರೆ ಸಮಯಾವಕಾಶವಿದ್ದಲ್ಲಿ ಟ್ಯಾಕ್ಸಿಗಳವರು ಪ್ರವಾಸಿಗರನ್ನು ತಾವಾಗೇ ನಿಲ್ಲಿಸಿ ಸುತ್ತಲಿನ ಅತ್ಯದ್ಭುತ ಪರಿಸರಕ್ಕೆ ಪರಿಚಯಿಸುತ್ತಾರೆ. ಅದರಲ್ಲೂ ಬೆಳಗಿನ ಜಾವದ ಗೋಲ್ಡನ್ ಲೈಟ್ ಸಿಕ್ಕುವ ಸಮಯದಲ್ಲಿ ನೀವ ಲ್ಲಿದ್ದರೆ ಅದರ ಮಜವೇ ಬೇರೆ. ಹಾಗಾಗಬೇಕೆಂದರೆ ನಮ್ಮ ಬಿಡಾರ ಮುಲ್ಬೇಕ್ನಲ್ಲಿರಲೇಬೇಕು. ಇಲ್ಲದಿದ್ದರೆ ನಿಮ್ಮ ಶ್ರೀನಗರ – ಲೇಹ್ – ಲಢಾಕ್ ಪ್ರವಾಸ ಪೂರ್ಣಗೊಳ್ಳಲಿಕ್ಕಿಲ್ಲ. ಶ್ರೀನಗರದಿಂದ ಹೊರಡುವ ಏರು ಮುಖದ ರಸ್ತೆಯ ಚೆಂದವೇ ಬೇರೆ. ಅದರಲ್ಲೂ ಗಾಂಧಾರ ಬಾಲ್ ದಾಟುತ್ತಿದ್ದಂತೆ ತೆರೆದುಕೊಳ್ಳುವ ಕೇಸರಿ ಹೂವಿನ ಕಣಿವೆ ದಾಟಿ ಅಪ್ಪಟ ಧೂಳಿನ ಜೋಜಿಲಾವರೆಗೂ ಭೂಮಿಯ ಪದರುಗಳ ಬದಲಾವಣೆಯೇ ಒಂದು ದೃಶ್ಯ ಕಾವ್ಯ.

ಒಂದಿನವಿಡೀ ಸಾಗುತ್ತಾ ಲೇಹ್ ಹೆದ್ದಾರಿಯ ಮೇಲೆ ಹಠಾತ್ತನೆ ತೆರೆದುಕೊಳ್ಳುವ ಮುಲ್ಬೇಕ್ ಹಿಮ ಸುರಿವ ಕಾಲದಲ್ಲೂ ಆಕರ್ಷಕ ತಾಣ. ಹಿಮದ ಹೊಡೆತಕ್ಕೆ ಸಿಕ್ಕು ಹೆದ್ದಾರಿ ಪೂರ್ತಿ ಮುಚ್ಚಿ ಹೋಗುತ್ತದಲ್ಲ ಅದಕ್ಕೂ ಮೊದಲು ಕೊಂಚಕೊಂಚವಾಗಿ ಈ ರಸ್ತೆಯಲ್ಲಿ ಚಲಿಸಿ ತಲುಪಬಹುದಾದ ದಾರಿಯಲ್ಲಿ ಕೊನೆಯ ತಾಣ ಇದು. ನಂತರದಲ್ಲಿ ಏನಿದ್ದರೂ ರಸ್ತೆ ಎನ್ನುವುದು ಸೋನ್ ಮಾರ್ಗಕ್ಕಿಂತ ಮೊದಲೇ ಮುಗಿದು ಹೋಗುತ್ತದೆ. ಹಿಂದಕ್ಕೆ 12 ಸಾವಿರ ಅಡಿ ಎತ್ತರದ ಅತ್ಯಂತ ದುರ್ಗಮ ಜೋಜಿಲಾ ಪಾಸ್. ಅದರ ಮಧ್ಯೆ ಸಿಕ್ಕುವ ಬಟಾಲ್. ಮುಂದೆ ಸರಿದರೆ ಅನಾಹುತಕಾರಿ ಯುದ್ಧಕ್ಕೆ ಹೆಸರು ಮಾಡಿದ್ದ ಕಾರ್ಗಿಲ್. ಅದರ ಮಗ್ಗುಲ 12,198 ಅಡಿ ಎತ್ತರ ಅಮ್ಲಜನಕದ ಕೊರತೆಯಲ್ಲಿ ಬೆರಳು ನೀಲಿಗಟ್ಟಿಸುವ ಭಯಾನಕ ಚಳಿಯ ‘ನಮಿಕಾ-ಲಾ ಪಾಸ್’ ಈ ಮಧ್ಯೆ ಸರಕ್ಕನೆ ರಸ್ತೆಯ ಮಧ್ಯದ ಅದ್ಭುತ ದೃಶ್ಯಾವಳಿಗೆ ಸಾಕ್ಷಿಯಾಗುವ ‘ಬುದ್ಧ ಸ್ಮೈಲಿಂಗ್’ ಚೆಂದದ ರಸ್ತೆಯ ಮೇಲೆ ಭರ್ರ‍ನೆ ಸಾಗುವವರನ್ನು ತಡೆದು ನಿಲ್ಲಿಸುತ್ತದೆ.

ಚಾರಣಿಗರಿಗೆ, ಪ್ರವಾಸಿಗರಿಗೆ, ಸಾಹಸಿ ಚಟುವಟಿಕೆಗಳಿಗೆ ಇದು ಬೇಸ್‌ಕ್ಯಾಂಪ್. ಅದಕ್ಕೂ ಮೊದಲು ಲ್ಯಾಂಡ್ ಸ್ಕೇಪ್ ಎನ್ನುವುದೇನಾದರೂ ಇದ್ದರೆ ಜುಲೈ ಮತ್ತು ಅಗಸ್ಟ್‌ವರೆಗಿನ ಕಾಲಾವಧಿಗೆ ಇದು ಬೆ ಎಕ್ಸಾಂಪಲ್. ಇತಿಹಾಸದಲ್ಲಿ ಮೊಘಲರ ದಾಳಿಗೆ ಮೊದಲು ತುತ್ತಾಗುವ ಪ್ರದೇಶವೇ ಈ ಕಾಶ್ಮೀರ ಕಣಿವೆ ಗಳಾಗಿದ್ದವು. ಅದರಲ್ಲೂ ಮುಲ್ಬೇಕ್ ಪ್ರವೇಶ ದ್ವಾರದ ಉದ್ದಾನು ಉದ್ದದ ಅಜಾನುಬಾಹು ಬುದ್ಧ ಈ ದಾಳಿಯ ಹೊರತಾಗಿಯೂ ಬದುಕಿದ್ದೇ ದೊಡ್ಡ ಆಶ್ಚರ್ಯ.

‘ಮೈತ್ರೇಯಿ ಬುದ್ಧ’ ಎನ್ನುವ ದಾರಿಯ ಪಕ್ಕದ ಕಲ್ಲಿನ ಪರ್ವತದಲ್ಲಿ ಕೊರೆದು ನಿಲ್ಲಿಸಲಾದ, ಎತ್ತರದ ಚೆಂದದ ಮೂರ್ತಿಯೊಂದಿಗೆ ತೆರೆದುಕೊಳ್ಳುವ ಮುಲ್ಬೇಕ್ ಕಣಿವೆ ಚೆಂದ ಎನ್ನಲು ಅಲ್ಲಿ ಕ್ಲಿಕ್ಕಿಸುವ ಚಿತ್ರಗಳೇ ಸಾಕ್ಷಿ. ಎತ್ತರದ ರಸ್ತೆಯ ಇಕ್ಕೆಲದಲ್ಲಿ ಕಂಡುಬರುವ ಅಭೂತಪೂರ್ವ ಲ್ಯಾಂಡ್‌ಸ್ಕೇಪಿಂಗ್ ಕೃತಕ ವ್ಯವ್ಯಸ್ಥೆಗಳೇ ಎನ್ನಿಸುವಷ್ಟು ನೈಜ.

ಕ್ರಿ.ಶ. 1378 -1441ರ ಕಾಲಾವಽಯಲ್ಲಿ ಪಶ್ಚಿಮ ಲಢಾಕ್ ಅನ್ನು ಆಳಿದ ರಾಜ ಸೊಕಾಫಾ-ಡೀ ಮುಲ್ಬೇಕ್ ನ್ನು ಅಭಿವೃದ್ಧಿಪಡಿಸಿದ ಎನ್ನುವುದು ಒಂದೆಡೆ ಯಾದರೆ.  ‘ಖಿರೋಸ್ತಿ’ ಲಿಪಿಯಲ್ಲಿ ಇತಿಹಾಸದ ಬಗ್ಗೆ ಈ ಬಂಡೆಯ ಹಿಂಬಾಗದ ಕೊರೆಯಲಾಗಿರುವ ದಾಖಲೆ ಹತ್ತು ಶತಮಾನದಾಚೆಗಿನ ಮಾಹಿತಿ ಪ್ರಮುಖ ತಲೆಮಾರುಗಳ ಕೊಂಡಿಯಾಗಿದೆ. ಇದರ ಹೊರತಾಗಿ ಕಾಶ್ಮೀರದ ರಾಜ ಪ್ರಭಾವಳಿ ಇತ್ಯಾದಿಗಳಿಗೆ ಈವರೆಗೆ ಯಾವ ದಾಖಲೆಯೂ ಇಲ್ಲವೇ ಇಲ್ಲ. ಅದರ ಮುಂಭಾಗದ ದೊಡ್ಡದಾದ ಬುದ್ಧನ ಮೂರ್ತಿಯನ್ನು ಏಕಶಿಲಾ ಬೆಟ್ಟದಲ್ಲಿ ಕೊರೆಯಲಾಗಿದ್ದು ಅದನ್ನು ಸ್ಮಾರಕವಾಗಿ ರಕ್ಷಿಸಲಾಗುತ್ತಿದೆ.

ಸುಮಾರು 35 ಅಡಿ ಎತ್ತರದ ಏಕ ಶಿಲಾಬುದ್ಧನ ಮೂರ್ತಿ ಎಂಟನೇ ಶತಮಾನಕ್ಕೂ ಮೊದಲಿನದ್ದು. ಅಚ್ಚರಿಯ ರೀತಿಯಲ್ಲಿ ಇದು ದಾಳಿಗಳ ಹೊರತಾಗಿ ಬದುಕಿದೆ. ಇಲ್ಲಿ ಚಳಿಗೆ ಒಗ್ಗುವಂತಹ ಚೆಂದದ ಕಡು ಕಪ್ಪು ಚಹ ಕೊಡುವ, ಟೀ ಶಾಪ್ನಲ್ಲಿ ಮರೆಯದೆ ಸೊರಕ್ಕೆಂದು ಶಬ್ದವಾಗಿ ಹೀರಿ ಮುಂದಕ್ಕೆ ಹೊರಟರೆ ಕಣ್ಣಿನ ಇಕ್ಕೆಲಗಳಲ್ಲಿ ಹಸಿರು ರಂಗಿನ ಚಿತ್ರ ಚಿತ್ತಾರ.

ಎರಡು ಬೌದ್ಧರ ಗೊಂಪಾಗಳನ್ನು ಹೊಂದಿರುವ ಮುಲ್ಬೇಕ್ ಮೂಲ ರಸ್ತೆಯೇ 10839 ಅಡಿ ಎತ್ತರದಲ್ಲಿದ್ದರೆ (ಈ ಎತ್ತರದಲ್ಲಿ ಆಮ್ಲಜನಕದ ಪೂರೈಕೆ ಗಣನೀಯ ವಾಗಿ ಕಡಿಮೆಯಾಗುತ್ತಿರುತ್ತದೆ) ಈ ಗೊಂಪಾಗಳು ಇನ್ನೂ ಒಂದು ಸಾವಿರ ಅಡಿ ಎತ್ತರದಲ್ಲಿವೆ. ಹನ್ನೊಂದುವರೆ ಸಾವಿರ ಅಡಿ ಎತ್ತರದಲ್ಲಿರುವ ಇವನ್ನು ತಲುಪಲು ಎರಡು ಗಂಟೆಗಳ ಕಾಲ್ನಡಿಗೆ ಅವಶ್ಯಬೇಕು. ಕಡಿದಾದ ಮೆಟ್ಟಿಲ ಹಾದಿ ನಿರ್ಮಿಸಲಾಗಿದೆ. ಆದರೆ ಮುಲ್ಬೇಕ್ ಹೇಗೆ ತೀರ ರಮಣೀಯ ಎನ್ನಿಸುತ್ತದೋ ಹಾಗೆ ಈ ದಾರಿ ಅಗತ್ಯಕ್ಕಿಂತ ಹೆಚ್ಚಿನ ಶೃಂಗಾರ ಕನ್ಯೆ ಎಂದರೆ ತಪ್ಪಿಲ್ಲ. ಗೊತ್ತಿಲ್ಲದೆ ರಸಿಕತೆ ಹೆಚ್ಚಾಗುತ್ತದಾ..? ಉತ್ತರ ಈ ಗೊಂಪಾಗಳ ದಾರಿಯಲ್ಲಿದೆ.

ಅದರಲ್ಲೂ ಎತ್ತರ ಏರಿದಂತೆಲ್ಲ ಕಣ್ತೆರೆದುಕೊಳ್ಳುವ ವಿಶಾಲ ಚಿತ್ರಶಾಲೆಗೆ ನನ್ನ ಬರಹ ಅಪೂರ್ಣ ಎಂದರೆ ತಪ್ಪಿಲ್ಲ. ಸ್ಥಳೀಯ ಹಳ್ಳಿ ‘ರಾಜ್ಕಾಲೋನ್’ ಮೂಲಕ ಇಳಿದು ಬರುವಾಗ ದಿಂಗ್ರಿಯಲ್ಲಿ ಮ್ಯಾಗಿ, ಟೀ ಮತ್ತು ರೆಡಿ ಫುಡ್ ಗಳ ಪಾಕೆಟ್ ಲಭ್ಯತೆ ನಮಗೆ ಅಹಾರ ಮತ್ತು ನೀರಿನ ಪ್ರಾಮುಖ್ಯತೆಯ ಪಾಠ ಕಲಿಸುತ್ತವೆ. ಇದೆಲ್ಲ ಬೇಕಾಗುತ್ತದೆ ಕೂಡಾ. ಉಸಿರು ಏರಿಳಿಯುವ ರಭಸದಲ್ಲಿ ದೇಹ ನೀರಿನ ಅಂಶ ಕಡಿತಗೊಳಿಸಿಕೊಂಡು ಸುಸ್ತು ಹೊಡೆಸುತ್ತಿರುತ್ತದೆ. ಕೈಗೆ ಸಿಕ್ಕಿದೆಲ್ಲ ಗಬಗಬ ಅಷ್ಟೆ.

ರಸ್ತೆಯ ಬಲಬದಿಯಲ್ಲಿ ಅಗಾಧ ಎತ್ತರದ ಹಲವು ಬಣ್ಣದ, ಅಚ್ಚ ಕಡು ಕೆಂಪಿನ ವರ್ಣಗಳ ಬಂಡೆಗಳ ಆಕರ್ಷಕ ಏರು ಮೈ ನೋಟ ಮತ್ತು ಎಡಭಾಗದ ಕಣಿವೆ ಆಕರ್ಷಕ. ಇವೆರಡರ ಮಧ್ಯದಲ್ಲಿ ಇಳಿಜಾರ ಛಾವಣಿಯ ರಂಗಿನ ಮನೆಗಳು. ಹಾಗಾಗಿ ಇಲ್ಲಿನ ಸುತ್ತಮುತ್ತಲಿನ ನಾಲ್ಕೈದು ಕಿ.ಮೀ.ವರೆಗೂ ಎಲ್ಲೂ ಫೋಟೊಕ್ಕಾಗಿ ಪ್ರವಾಸಿಗರ ಹಿಂಡು ದಾಂಗುಡಿ. ಮೇಲೆರಿದಂತೆಯೇ ಒಂದೆರಡು ಗಂಟೆ ಕಣಿವೆಗಿಳಿದು ಸಂಭ್ರಮಿಸಬಹುದಾದ ಚೆಂದದ ಹಳ್ಳಿ ಗೊಂಪಾಲಾ. ಇಳಿಯೋದು ಸುಲಭ ಆದರೆ ವಾಪಸ್ಸು ಮುಖ್ಯ ರಸ್ತೆಗೆ ಏರಿಕೊಳ್ಳುವಾಗ ಮತ್ತೊಮ್ಮೆ ಶ್ವಾಸಕೋಶಗಳ ಪರೀಕ್ಷೆ ಆಗಿರುತ್ತದೆ.

ಇದು ಸಹಜ ಪ್ರವಾಸಿಗರ ಪಟ್ಟಿಯಲ್ಲಿ ಬರುವುದಿಲ್ಲವಾದ್ದರಿಂದ ಗೊಂಪಾಲ ಅಥವಾ ರಾಜ್ಕಾಲೋನ್ ಬಗ್ಗೆ ಮಾಹಿತಿ ಮತ್ತು ದಾರಿ ಸ್ಥಳೀಯ ವಾಸಿಗಳನ್ನು ಕೇಳಿ ದಾಗ ಮಾತ್ರ ದಕ್ಕುತ್ತದೆ. ದಕ್ಕದಿದ್ದರೆ ಮತ್ಯಾವತ್ತೂ ಅಚ್ಚ ರಂಗಿನ ಶೃಂಗಾರ ಕನ್ಯೆ ಒಲಿಯಲಾರಳು. ಉಳಿದದ್ದೇನೆ ಆದರೂ ಮುಲ್ಬೇಕ್ ಕಣ್ಣಿಗೆ ಕಂಡೂ ಕಾಣದ ರಸ್ತೆಯ ಮೇಲಿನ ಆಯ್ಕೆ. ಸುತ್ತಮುತ್ತಲೆಲ್ಲ ಎಲ್ಲೂ ಕ್ಯಾಮೆರಾ ಯೋಗ್ಯ ಎನ್ನಿಸುವಾಗ ಪಟಕ್ಕನೆ ನಮ್ಮ ಗಾಡಿ ಇಲ್ಲಿಂದ ಸರಿದು ಹೋಗಿರುತ್ತದೆ. ಅದಕ್ಕೆ ಬದಲಾಗಿ ಮುಂದಕ್ಕೆ ಹೋಗಿ ಸಂಜೆಯ ಕಟುಚಳಿಯ ಕಾರ್ಗಿಲ್‌ನಲ್ಲಿ ವಸತಿ ಹೂಡುವ ಬದಲಿಗೆ ಮುಲ್ಬೇಕ್‌ನ ಆಸು ಪಾಸಿನ ಹಲವು ಊರುಗಳಲ್ಲಿ ರೆಸಾರ್ಟ್, ಹೋಮ್ ಸ್ಟೇ ಮಾಡಿಕೊಂಡಲ್ಲಿ ಬೆಳಗಿನ ಈ ಗೋಲ್ಡನ್‌ಲೈಟ್ ಮಿಸ್ ಆಗುವ ಮಾತೇ ಇಲ್ಲ.

ಅದರಲ್ಲೂ ಕೇವಲ ನಾಲ್ಕೈದು ಕಿ.ಮೀ. ಹಿಂದೆ ಇರುವ ನುನ್ಕುನ್ ಕೈಗೆಟುಕುವ ದರದ ರೆಸಾರ್ಟ್ ಮತ್ತು ಸ್ಟೇ ಹೋಮ್‌ಗಳು ಬೈಕ್ ರೈಡರ್ಸ್‌ಗಳ ಅಗತ್ಯ ತೀರಿಸುವ ಆಪ್ತ ತಾಣ. ಅಗಸೆ ಹೊಲದ ಮತ್ತು ನೀಲ ನೀರ ನದಿ ಮುಖ ಭೂಮಿಯಲ್ಲಿ ವಿಶಾಲ ಡೇರೆಗಳ ಟೆಂಟ್ ಹೌಸುಗಳ ಮಧ್ಯೆ ರಾತ್ರಿಯ ಅನುಭವಕ್ಕೆ ‘ನುನ್ಕುನ್ ಹೇಳಿ ಮಾಡಿಸಿದ ಪ್ರದೇಶ. ಬಿಸಿ ಸೂಪು, ಖಡಕ್ ರೊಟ್ಟಿ ಜತೆಗೆ ಸ್ಥಳೀಯ ಖಿಂಜಾ ಸಬ್ಜಿ’ ಕಡಲೆ ಹಿಟ್ಟಿನ ಅಪರಾವತಾರ. ನಾನು ಜುಣಕಾ ಎಂದುಕೊಂಡೆ. ಅಲೆಮಾರಿಗೆ ಇದಕಿಂತ ರುಚಿಕಟ್ಟಾದ ಊಟ ಸಿಕ್ಕುವುದಾದರೂ ಹೇಗೆ..?