Sunday, 10th November 2024

ಉಗ್ರಗಾಮಿಗಳಿಗೆ ಪಾಠ ಕಲಿಸಬೇಕಿದೆ

ಅಫಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರು ಪ್ರಜಾಪ್ರಭುತ್ವ ಸರಕಾರವನ್ನು ಕಿತ್ತೊಗೆದು ತಮ್ಮದೇ ಹಿಡಿತ ಸಾಧಿಸಿರು ವುದು ಜಾಗತಿಕವಾಗಿ ತೀವ್ರ ಆತಂಕಕಾರಿ ಬೆಳವಣಿಗೆ. ಇಂದು ಅಫ್ಘಾನಿಸ್ತಾನದಲ್ಲಿ ನಡೆಯುತ್ತಿರುವ ಘನಘೋರ ದೃಶ್ಯಗಳನ್ನು ನೋಡುತ್ತಿದ್ದರೆ, ನಾವು ಯಾವ ಯುಗದಲ್ಲಿ ಇದ್ದೇವೆ ಎಂಬ ಭಯವಾಗುತ್ತಿದೆ. ತಾಲಿಬಾನ್ ಉಗ್ರರಿಗೆ ಅಫ್ಘಾನಿಸ್ತಾನದಿಂದ ಯುರೋಪ್ ಗಡಿಯವರೆಗೆ ಇಸ್ಲಾಮಿಕ್ ಆಡಳಿತ ಸ್ಥಾಪಿಸುವ ಚಿಂತನೆ ಇರುವುದರಿಂದ ಅಫ್ಘಾನಿಸ್ತಾನದ ಮೇಲಿನ ತಾಲಿಬಾನ್ ಹಿಡಿತ ಬೇರೆ ಯಾವುದೇ ರಾಷ್ಟ್ರಗಳಿಗಿಂತ ಭಾರತದ ಮೇಲೆ ತೀವ್ರ ಪರಿಣಾಮ ಬೀರಲಿದೆ.

ಜೈಷ್-ಎ-ಮೊಹಮ್ಮದ್‌ನಂತಹ ಭಯೋತ್ಪಾದಕ ಗುಂಪುಗಳು ಪರಿಸ್ಥಿತಿಯನ್ನು ಬಳಸಿಕೊಳ್ಳುವ ಸಾಧ್ಯತೆ ಬಹಳಷ್ಟಿದೆ. ಭಾರತ ವಿರೋಧಿ ಭಯೋತ್ಪಾದಕ ಸಂಘಟನೆಗಳಿಗೆ ಅಫ್ಘಾನಿಸ್ತಾನವು ಸುರಕ್ಷಿತ ಸ್ವರ್ಗವಾಗಿ ಪರಿಣಮಿಸುವುದರಿಂದ ಭಯೋತ್ಪಾದನಾ ಚಟುವಟಿಕೆಗಳನ್ನು ಹೆಚ್ಚಿಸಲು ಜಮ್ಮು-ಕಾಶ್ಮೀರಕ್ಕೆ ಉಗ್ರರನ್ನು ಕಳುಹಿಸಿಕೊಡುವ ಸಾಧ್ಯತೆ ಬಹಳಷ್ಟಿದೆ.

ಅಫ್ಘಾನಿಸ್ತಾನದಲ್ಲಿನ ತಾಲಿಬಾನ್ ಆಡಳಿತ ಪಾಕಿಸ್ತಾನ ಸೇನೆ ಮತ್ತು ಅದರ ಗೂಢಚಾರ ಸಂಸ್ಥೆ ಐಎಸ್‌ಐಗೆ ನೆರವಾಗುವುದರಲ್ಲಿ ಎರಡನೇ ಮಾತೇ ಇಲ್ಲ. ಪಾಕಿಸ್ತಾನವು ಭಯೋತ್ಪಾದನೆ ತರಬೇತಿಯನ್ನು ಪಾಕ್ ಆಕ್ರಮಿತ ಕಾಶ್ಮೀರದಿಂದ ಅಫ್ಘಾನಿಸ್ತಾನಕ್ಕೆ ವರ್ಗಾಯಿಸುವ ಮೂಲಕ ಅಂತಾರಾಷ್ಟ್ರೀಯ ಸಮುದಾಯದ ಕಣ್ಣಿಗೆ ಮಣ್ಣೆರಚಿದರೂ ಅಚ್ಚರಿಯಿಲ್ಲ.

ತಾಲಿಬಾನ್‌ನ ಇಂತಹ ನಡೆಗಳು ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕ ಸಂಘಟನೆಗಳಿಗೆ ಇನ್ನಷ್ಟು ಧೈರ್ಯ ತುಂಬಲಿರುವುದರಿಂದ ಭಾರತದಲ್ಲಿ ಉಗ್ರ ಚಟುವಟಿಕೆಗಳು ಮತ್ತಷ್ಟು ಹೆಚ್ಚಳವಾಗಲಿವೆ ಎಂಬುದು ಒಪ್ಪಿಕೊಳ್ಳಬೇಕಾದ ಸತ್ಯ. ಇದು ಭಾರತದ ಮೇಲಿನ ಪರಿಣಾಮವಾದರೆ ಬೇರೆ ಬೇರೆ ದೇಶಗಳು ಬೇರೆಯದ್ದೇ ರೀತಿ ತಾಲಿಬಾನಿಗಳಿಂದ ಸಂಕಷ್ಟ ಸಿಲುಕಲಿವೆ. ಹೀಗಾಗಿ ಭಯೋತ್ಪಾದನೆಯ ಮೂಲಕ ಕ್ರೂರ ಕೃತ್ಯ ಗಳಲ್ಲಿ ತೊಡಗುವ ಇಂಥ ಉಗ್ರರಿಗೆ ಜಾಗತಿಕ ಸಮೂಹ ಸರಿಯಾದ ಪಾಠ ಕಲಿಸಬೇಕಿದೆ.

ಭಯೋತ್ಪಾದನೆಯನ್ನು ಬೇರು ಸಮೇತ ಕಿತ್ತೊಗೆಯಲು ವಿಶ್ವದ ಎಲ್ಲ ರಾಷ್ಟ್ರಗಳೂ ಒಕ್ಕೊರಲಿನಿಂದ ಕೆಲಸ ಮಾಡಬೇಕಿದೆ.