Friday, 20th September 2024

ಆಫ್ಘನ್ ಜನರ ರಕ್ಷಣೆಗೆ ವಿಶ್ವಸಂಸ್ಥೆ ಮುಂದಾಗಲಿ

ಆಫ್ಘನ್ ನೆಲದಿಂದ ತನ್ನ ಸೇನಾ ತುಕಡಿಗಳನ್ನು ತಾಲಿಬಾನಿಗಳಿಗೆ ಕೊಟ್ಟ ಗಡುವಿನ ಮುನ್ನವೇ ಅಮೆರಿಕ ಖಾಲಿ ಮಾಡಿದೆ. ಕಾಬೂಲ್‌ನಲ್ಲಿದ್ದ ತನ್ನ ರಾಯಭಾರ ಕಚೇರಿಗೂ ಬೀಗ ಹಾಕಿದ್ದು, ತನ್ನ ಹೊಣೆಗಾರಿಕೆಯೆಂದು ಹೇಳಿಕೊಂಡು ಬಂದಿದ್ದ ಕೆಲಸಕ್ಕೆ ತಿಲಾಂಜಲಿ ಇಟ್ಟಿದೆ. ಈ ಬೆಳವಣಿಗೆ ಬೆನ್ನಲ್ಲೇ ಆಫ್ಘನಿಸ್ತಾನದ ನೆಲದಲ್ಲಿ
ತಾಲಿಬಾನಿಗಳ ಅಟ್ಟಹಾಸ ಮುಂದುವರಿದಿದೆ.

ಕಾಬೂಲ್ ವಿಮಾನ ನಿಲ್ದಾಣದಲ್ಲಿ ಬಾಂಬ್ ಸೋಟ ಮಾಡಿದ್ದ ನೆನಪು ಹಸಿರಾಗಿರುವಾಗಲೇ ಹೆಲಿಕಾಪ್ಟರ್‌ಗೆ ವ್ಯಕ್ತಿಯೊಬ್ಬರನ್ನು ನೇತು ಹಾಕಿದ ವಿಡಿಯೊವೊಂದು ಹರಿದಾಡಿದೆ. ತಾಲಿಬಾನಿಗಳ ಇಂತಹ ಕ್ರೂರ ಕೃತ್ಯ ಗಳಿಂದ ಆಫ್ಘನಿಸ್ತಾನದ ಜನ ಸಹಜವಾಗಿಯೇ ಆತಂಕಕ್ಕೆ ಒಳಗಾಗಿದ್ದಾರೆ. ೨೦ ವರ್ಷಗಳ ಹಿಂದೆ ದಮನ ಕಾರಿ ಆಡಳಿತ ನಡೆಸಿದ್ದ ತಾಲಿಬಾನಿಗಳು ಈಗ ಅಂಥದ್ದೇ ಆಡಳಿತವನ್ನು ಮತ್ತೆ ಹೇರುತ್ತಿದ್ದು, ಇಡೀ ಜಗತ್ತೇ ಚಿಂತಿತವಾಗಿದೆ. ೨೦ ವರ್ಷಗಳ ಕಾಲ ಆಫ್ಘಾನಿಸ್ತಾನವನ್ನು ಪ್ರಜಾಪ್ರಭುತ್ವವಾದಿ ಸಮಾಜವಾಗಿ ರೂಪಿಸಲು ಮತ್ತು ಶಾಂತಿ-ಸಹನೆಯ ಆಡಳಿತವನ್ನು ಅಲ್ಲಿ ನೆಲೆಗೊಳಿಸಲು ದುಡಿದ ಲಕ್ಷಾಂತರ ಜನರಿಗೆ ಈಗ ಭ್ರಮನಿರಸನವಾಗಿದೆ.

ಹಿಂಸಾತ್ಮಕ ರಾಜಕೀಯ ಪ್ರತೀಕಾರಕ್ಕೆ ಒಳಗಾಗುವ ಅಪಾಯದಿಂದ ಆಫ್ಘಾನಿಸ್ತಾನದ ಜನರನ್ನು ರಕ್ಷಿಸ ಬೇಕಾದ ಹೊಣೆಗಾರಿಕೆ ಎಲ್ಲ ಪ್ರಜಾಪ್ರಭುತ್ವವಾದಿ ದೇಶಗಳ ಮೇಲಿದೆ ಆದರೆ ಪ್ರಜಾಪ್ರಭುತ್ವದ ನೆಲೆಗಟ್ಟಿ ನಲ್ಲಿಯೇ ರಾಷ್ಟ್ರವನ್ನು ಕಟ್ಟಿರುವ ಅನೇಕ ದೇಶಗಳು ತಾಲಿಬಾನ್ ಸರಕಾರಕ್ಕೆ ಬೆಂಬಲ ಘೋಷಿಸುವ ಮೂಲಕ ಪ್ರಜಾಪ್ರಭುತ್ವದ ಮೇಲಿನ ನಂಬಿಕೆಯನ್ನು ಹುಸಿಗೊಳಿಸುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ವಿಶ್ವಸಂಸ್ಥೆಗೆ ಮೌನಕ್ಕೆ ಜಾರಿರುವುದು ಸರಿಯಲ್ಲ. ಜನರ ಹಕ್ಕುಗಳನ್ನು ಕಸಿದುಕೊಂಡು ಅಲ್ಲಿ ದಮನಕಾರಿ ಆಡಳಿತ ನಡೆಸದಂತೆ ತಾಲಿಬಾನ್ ಪಡೆಗಳ ಮೇಲೆ ಒತ್ತಡ ಹೇರುವ ಕೆಲಸ ವಿಶ್ವಸಂಸ್ಥೆಯಿಂದಲೂ ಪರಿಣಾಮ ಕಾರಿಯಾಗಿ ಆಗಬೇಕಿದೆ.

ಅಲ್ಲಿನ ಜನರಿಗೆ ತುರ್ತು ಆಹಾರ, ಶಿಕ್ಷಣ ನೀಡುವ ಕೆಲಸ ವಿಶ್ವಸಂಸ್ಥೆಯ ಅಂಗಸಂಸ್ಥೆಗಳಿಂದ ಆಗಬೇಕಿದೆ. ಈ ನಿಟ್ಟಿನಲ್ಲಿ ಎಲ್ಲ ರಾಷ್ಟ್ರಗಳೂ ವಿಶ್ವಸಂಸ್ಥೆಗೆ ಬೆಂಬಲ ಘೋಷಿಸಬೇಕಿದೆ