ನ್ಯೂಯಾರ್ಕ್: ಅಮೆರಿಕದ ನ್ಯೂಯಾರ್ಕ್‌ನ ಬ್ರೂಕ್ಲಿನ್‌ನಲ್ಲಿರುವ ಸುರಂಗ ನಿಲ್ದಾಣದಲ್ಲಿ ಸಂಭವಿಸಿದ ಶೂಟೌಟ್ ನಲ್ಲಿ ಕನಿಷ್ಠ 16 ಮಂದಿಗೆ ಗುಂಡೇಟು ತಗುಲಿದ್ದು, ಹಲವರಿಗೆ ಗಾಯ ಗಳಾಗಿವೆ.
ಬ್ರೂಕ್ಲಿನ್‌ನಲ್ಲಿರುವ ಸನ್ಸೆಟ್ ಪಾರ್ಕ್ನ 36 ನೇ ಸ್ಟ್ರೀಟ್ ನ ಸುರಂಗ ನಿಲ್ದಾಣದಲ್ಲಿ ಗುಂಡು ಹಾರಿ ಸಿದ್ದು, ವರದಿಗಳ ಪ್ರಕಾರ ಶೂಟೌಟ್ ನಲ್ಲಿ 16 ಮಂದಿಗೆ ಗುಂಡೇಟು ತಗುಲಿದೆ ಎಂದು ಅಗ್ನಿಶಾಮಕ ಇಲಾಖೆ ಮಾಹಿತಿ ನೀಡಿದೆ.
ಅತೀ ಹೆಚ್ಚು ಪ್ರಯಾಣಿಕರಿದ್ದ ಸಂದರ್ಭದಲ್ಲಿ ಮಾಸ್ಕ್ ಧರಿಸಿದ್ದ ವ್ಯಕ್ತಿ ಏಕಾಏಕಿ ಗುಂಡಿನ ದಾಳಿ ಆರಂಭಿಸಿದ್ದಾನೆ. ಈ ವೇಳೆ ಪ್ರಯಾಣಿಕರಿಗೆ ಗುಂಡೇಟು ತಗುಲಿದೆ ಎನ್ನಲಾಗಿದೆ.
ಸ್ಥಳಕ್ಕೆ ದೌಡಾಯಿಸಿದ ನ್ಯೂಯಾರ್ಕ್ ಪೊಲೀಸರು ನಿಲ್ದಾಣವನ್ನು ವಶಕ್ಕೆ ಪಡೆದಿದ್ದು, ನಿಲ್ದಾಣದಲ್ಲಿದ್ದ ಪ್ರಯಾಣಿಕರನ್ನು ಸುರಕ್ಷಿತವಾಗಿ ಹೊರಗೆ ತರುವ ಕಾರ್ಯಾಚರಣೆ ನಡೆಸಿದ್ದಾರೆ. ಘಟನೆ ನಡೆದ ಸನ್ಸೆಟ್ ಪಾರ್ಕ್ನ 36 ನೇ ಸ್ಟ್ರೀಟ್ ನ ಸುರಂಗಮಾರ್ಗ ನಿಲ್ದಾಣದ ಲೈನ್ ನಲ್ಲಿ ತೀವ್ರ ಶೋಧ ಕಾರ್ಯಾಚರಣೆ ನಡೆಸಿದ್ದಾರೆ.
ಕಾರ್ಯಾಚರಣೆ ವೇಳೆ ಸುರಂಗ ಮಾರ್ಗದಲ್ಲಿ ಸ್ಫೋಟಕ ಡಿವೈಸ್ ಗಳು ಪತ್ತೆಯಾಗಿವೆ. ಮುಂಜಾಗ್ರತಾ ಕ್ರಮವಾಗಿ ಈ ಮಾರ್ಗದಲ್ಲಿ ಬರುವ ಇತರೆ ನಿಲ್ದಾಣಗಳನ್ನು ಮತ್ತು ಈ ಮಾರ್ಗದಲ್ಲಿ ಸೇರುವ ಪ್ರದೇಶಗಳಲ್ಲಿನ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.