Yagati Raghu Nadig Column: ಎಲ್ಲಿಗೆ ಪಯಣಾ...ಯಾವುದೋ ದಾರೀ, ಏಕಾಂಗಿ ಸಂಚಾರಿ!
ಪುಢಾರಿ ನುಂಗಣ್ಣನವರು ಕಾರ್ಯ ನಿಮಿತ್ತವಾಗಿ ದೂರದ ಊರಿಗೆ ತಮ್ಮ ಕಾರಿನಲ್ಲಿ ಸ್ವತಃ ತಾವೇ ಡ್ರೈವ್ ಮಾಡಿಕೊಂಡು ಹೋಗಿದ್ದರು. ಬೆಂಗಳೂರಿಗೆ ಹಿಂದಿರುಗುವ ಮಾರ್ಗದಲ್ಲಿ ಅವರು ‘ಚಾರ್ಮಾಡಿ ಘಾಟ್’ ಅನ್ನು ಹಾದುಬರಬೇಕಿತ್ತು. ಹೀಗೆ ಬರುತ್ತಿರುವಾಗ ಘಾಟ್ ನಲ್ಲಿ ಕಾರು ಕೆಟ್ಟುಹೋಯಿತು. ತಾವೇ ಡ್ರೈವ್ ಮಾಡಬೇಕು ಎಂಬ ಉತ್ಸಾಹದಲ್ಲಿ ಡ್ರೈವರ್‌ಗೂ ಬರೋದು ಬೇಡ ಎಂದು ಹೇಳಿದ್ದಕ್ಕೆ ತಮಗೆ ತಾವೇ ಬೈದು ಕೊಂಡರು ನುಂಗಣ್ಣ


ಯಗಟಿ ರಘು ನಾಡಿಗ್
ವಿವಿಧ ವಿನೋದಾವಳಿ...
ಪುಢಾರಿ ನುಂಗಣ್ಣನವರು ಕಾರ್ಯ ನಿಮಿತ್ತವಾಗಿ ದೂರದ ಊರಿಗೆ ತಮ್ಮ ಕಾರಿನಲ್ಲಿ ಸ್ವತಃ ತಾವೇ ಡ್ರೈವ್ ಮಾಡಿಕೊಂಡು ಹೋಗಿದ್ದರು. ಬೆಂಗಳೂರಿಗೆ ಹಿಂದಿರುಗುವ ಮಾರ್ಗದಲ್ಲಿ ಅವರು ‘ಚಾರ್ಮಾಡಿ ಘಾಟ್’ ಅನ್ನು ಹಾದುಬರಬೇಕಿತ್ತು. ಹೀಗೆ ಬರುತ್ತಿರುವಾಗ ಘಾಟ್ ನಲ್ಲಿ ಕಾರು ಕೆಟ್ಟುಹೋಯಿತು. ತಾವೇ ಡ್ರೈವ್ ಮಾಡಬೇಕು ಎಂಬ ಉತ್ಸಾಹದಲ್ಲಿ ಡ್ರೈವರ್‌ಗೂ ಬರೋದು ಬೇಡ ಎಂದು ಹೇಳಿದ್ದಕ್ಕೆ ತಮಗೆ ತಾವೇ ಬೈದುಕೊಂಡರು ನುಂಗಣ್ಣ. ಸಹಾಯಕ್ಕೆ ಯಾರನ್ನಾದರೂ ಕರೆಯೋಣವೆಂದರೆ ಅದು ನಿರ್ಜನ ಪ್ರದೇಶ. ಕೊನೆಗೆ ತಮಗೆ ತಿಳಿದಿದ್ದ ವಿದ್ಯೆಯನ್ನೆಲ್ಲಾ ಪ್ರಯೋಗಿಸಿ ಕಾರನ್ನು ಒಂದು ಹಂತಕ್ಕೆ ತರುವ ಹೊತ್ತಿಗೆ ‘ಚಾರ್ಮಾಡಿ ಘಾಟ್’ನಲ್ಲಿ ಸಂಪೂರ್ಣ ಕತ್ತಲಾವರಿಸಿತ್ತು. ಕಾರೇನೋ ‘ಸ್ಟಾರ್ಟ್’ ಆಯಿತು, ಆದರೆ ಕಾರಿನ ‘ಹೆಡ್ ಲೈಟ್’ ಕೈಕೊಟ್ಟಿತು. ಅಮಾವಾಸ್ಯೆಯ ರಾತ್ರಿ ಬೇರೇ, ಸುತ್ತ ಮುತ್ತ ತುಂಬಾ ಹುಣಿಸೇಮರಗಳು ಇದ್ದುದನ್ನು ನೋಡಿ, ಬೇಡಬೇಡವೆಂದರೂ ಬಾಲ್ಯ ದಲ್ಲಿ ಕೇಳಿದ್ದ ‘ಕೊಳ್ಳಿದೆವ್ವ’ದ ಕಥೆ ಪುಢಾರಿ ನುಂಗಣ್ಣನವರಿಗೆ ನೆನಪಾಗಿ, ಪಂಚೆಯೇಕೋ ಒದ್ದೆಯಾದಂತಾಯಿತು..!!
ಹೇಗಾದರೂ ಮಾಡಿ ಅಲ್ಲಿಂದ ಜಾಗ ಖಾಲಿ ಮಾಡಬೇಕೆಂದು ನಿರ್ಧರಿಸಿದ ನುಂಗಣ್ಣನವರು ಒಂದು ಉಪಾಯ ಮಾಡಿದರು. ಅದೇ ಮಾರ್ಗದಲ್ಲಿ ಬಂದ ಕಾರ್ ಒಂದರ ಹಿಂಭಾಗದ ಲೈಟ್ ಅನ್ನೇ ಅನುಸರಿಸಿಕೊಂಡು ಆ ಕಾರನ್ನು ಹಿಂಬಾಲಿಸಿಕೊಂಡು ತಮ್ಮ ಕಾರನ್ನು ಚಾಲನೆ ಮಾಡಲು ಪ್ರಾರಂಭಿಸಿದರು.
ಇದನ್ನೂ ಓದಿ: Yagati Raghu Naadig Column: ಋತುಮತಿಯಿಂದ ಋಷಿಪಂಚಮಿಯವರೆಗೆ...!
ಮುಂದೆ ಸಾಗುತ್ತಿದ್ದ ಕಾರು ಎಡಭಾಗದ ಇಂಡಿಕೇಟರ್ ಆನ್ ಮಾಡಿ ಎಡಕ್ಕೆ ಚಲಿಸಿದರೆ ಇವರೂ ಎಡಕ್ಕೆ ತಮ್ಮ ಕಾರನ್ನು ತಿರುಗಿಸಿದರು; ಮುಂದಿನ ಕಾರು ಬಲಕ್ಕೆ ತಿರುಗಿದರೆ ಇವರೂ ತಮ್ಮ ಕಾರನ್ನು ಬಲಕ್ಕೆ ತಿರುಗಿಸುತ್ತಿದ್ದರು. ಒಂದು ಪಕ್ಷ ಮುಂದಿನ ಕಾರು ಸೂಚನೆ ನೀಡಿ ಬ್ರೇಕ್ ಹಾಕಿದರೆ ಇವರೂ ತಮ್ಮ ಕಾರಿಗೆ ಬ್ರೇಕ್ ಹಾಕುತ್ತಿದ್ದರು. ಸಾಕಷ್ಟು ದೂರವನ್ನು ಹೀಗೇ ಕ್ರಮಿಸಿದ ನುಂಗಣ್ಣನವರು ತಮ್ಮ ಜಾಣತನಕ್ಕೆ ತಾವೇ ಮೆಚ್ಚಿ ಕೊಂಡು, ಎಡಗೈನಲ್ಲಿ ‘ಸ್ಟಿಯರಿಂಗ್ ವೀಲ್’ ಹಿಡಿದುಕೊಂಡು ಬಲಗೈನಲ್ಲಿ ತಮ್ಮ ಬೆನ್ನನ್ನು ತಾವೇ ತಟ್ಟಿಕೊಂಡರು.
ಮರುದಿನ ಪತ್ರಿಕಾಗೋಷ್ಠಿ ಕರೆದು ಇದನ್ನು ಬಣ್ಣಾಬಣ್ಣಿಯಾಗಿ ಬಣ್ಣಿಸಿ ಪ್ರಚಾರ ತೆಗೆದು ಕೊಳ್ಳಬೇಕು ಎಂದೇ ಮನದಲ್ಲಿ ಲೆಕ್ಕ ಹಾಕುತ್ತಿದ್ದರು. ಇದರ ಜತೆಜತೆಗೇ ಮುಂದುಗಡೆಯ ಕಾರಿನ ಇಂಡಿಕೇಟರ್‌ನ ನಿರ್ದೇಶನದಂತೆ ತಮ್ಮ ಕಾರನ್ನೂ ಎಡಕ್ಕೂ, ಬಲಕ್ಕೂ ತಿರುಗಿಸು ವುದು, ಬ್ರೇಕ್ ಹಾಕುವುದು ನಡೆದೇ ಇತ್ತು. ಆದರೆ ಒಂದು ಹಂತದಲ್ಲಿ ಅವರಿಗೆ ಏನೂ ಕಾಣದಂತಾಗಿ, ದುರದೃಷ್ಟವಶಾತ್ ನುಂಗಣ್ಣನವರ ಕಾರು ಮುಂದಿನ ಕಾರಿಗೆ ಢಿಕ್ಕಿ ಹೊಡೆದು, ನುಂಗಣ್ಣನವರ ಕಾರಿನ ಮುಂಭಾಗ ಜಜ್ಜಿ ಹೋಯಿತು.....ತಕ್ಷಣವೇ ಧುಮು ಧುಮು ಎನ್ನುತ್ತಲೇ ಕಾರಿನಿಂದ ಕೆಳಗಿಳಿದ ನುಂಗಣ್ಣನವರು ಮುಂದಿನ ಕಾರ್‌ನವ ನೊಂದಿಗೆ ಜಗಳಕ್ಕಿಳಿದರು: “ಅಲ್ಲಯ್ಯಾ, ನಿನ್ನ ಕಾರು ಎಡಕ್ಕೆ ತಿರುಗುವಾಗ ನೀನು ಎಡಕ್ಕೆ ಇಂಡಿಕೇಟರ್ ಹಾಕುತ್ತಿದ್ದೆ, ಬಲಕ್ಕೆ ತಿರುಗುವಾಗ ಬಲಕ್ಕೆ ಇಂಡಿಕೇಟರ್ ಹಾಕುತ್ತಿದ್ದೆ, ಬ್ರೇಕ್ ಹಾಕುವಾಗಲೂ ಅದರ ಸಿಗ್ನಲ್ ಬರುತ್ತಿತ್ತು ನಿನ್ ಕಡೆಯಿಂದ; ಈಗೇನಯ್ಯಾ ಆಗಿದೆ ನಿಂಗೆ ರೋಗಾ.? ಕಾರ್‌ನ ಸಡನ್ನಾಗಿ ನಿಲ್ಲಿಸೋಕೆ ಮುಂಚೆ ಒಂದು ‘ಸಿಗ್ನಲ್’ ಕೊಡ್ಬೇಕು ಅಂತ ನಿಂಗೆ ಗೊತ್ತಾಗ್ಲಿಲ್ವಾ.....?" ಎಂದು ಮುಂದಿನ ಕಾರ್‌ನವನಿಗೆ ‘ಆವಾಜ್’ ಹಾಕಿದರು ಪುಢಾರಿ ನುಂಗಣ್ಣ!
ಕೆಂಡವನ್ನು ಉಗುಳುತ್ತಿದ್ದ ನುಂಗಣ್ಣನವರ ಕಣ್ಣನ್ನೂ, ಒದ್ದೆಯಾಗಿದ್ದ ಅವರ ಪಂಚೆ ಯನ್ನೂ ತನ್ನ ಕಣ್ಣಿನಲ್ಲೇ ಅಳೆದ ಮುಂದಿನ ಕಾರಿನವ ಯಾವುದೇ ಉದ್ವೇಗಲ್ಲದೆ, ತಣ್ಣನೆ ಯ ದನಿಯಲ್ಲೇ ಉತ್ತರಿಸಿದ: “ನನ್ ಮನೆ ಕಾರ್ ಷೆಡ್‌ನಲ್ಲಿ ನನ್ನ ಕಾರನ್ನ ನಿಲ್ಲಿಸೋಕೆ ನಿಮಗ್ಯಾಕೆ ಸ್ವಾಮೀ ಸಿಗ್ನಲ್ ಕೊಡ್ಬೇಕೂ?!"