Surendra Pai Column: ʼಘೋಸ್ಟ್ ಫಾರೆಸ್ಟ್ʼ ಬಗ್ಗೆ ನಿಮಗೆ ಗೊತ್ತೇ ?
Surendra Pai Column: ʼಘೋಸ್ಟ್ ಫಾರೆಸ್ಟ್ʼ ಬಗ್ಗೆ ನಿಮಗೆ ಗೊತ್ತೇ ?
Ashok Nayak
December 2, 2024
ಸುರೇಂದ್ರ ಪೈ
ನಾವೆಲ್ಲ ಭೂತ ಪ್ರೇತಗಳ ಬಗ್ಗೆ ಬಹಳಷ್ಟು ಕಥೆ ಗಳನ್ನು ಕೇಳಿದ್ದೇವೆ. ಭೂತಗಳು ಸ್ಮಶಾನದಲ್ಲಿ, ದಟ್ಟ ಕಾಡಿನಲ್ಲಿ, ಪಾಳು ಬಿದ್ದ ಮನೆಗಳಲ್ಲಿ ಹಾಗೂ ಮರಗಳಲ್ಲಿ ವಾಸವಾಗಿರುತ್ತದೆ ಎಂದೆ ಕೇಳಿರುತ್ತೇವೆ. ಭೂತದ ಮನೆಗಳ ಬಗ್ಗೆ ಕೇಳಿರುತ್ತೇವೆ, ಆದರೆ ಎಂದಾದರೂ ಭೂತದ ಕಾಡಿನ ಬಗ್ಗೆ ಕೇಳಿದ್ದೀರಾ? ಹೋಗಲಿ ಅಂಥ ಒಂದು ಭೂತ ಕಾಡು ಇದೆ ಎಂದಾದರೂ ಗೋತ್ತೇ?
ಜರ್ಮನಿಯ ನಿನ್ಹೇಗನ್ ಪಶ್ಚಿಮ ಭಾಗದಲ್ಲಿ ಅಂಥದೊಂದು ಅಪರೂಪದ ಹಾಗೂ ವಿಶ್ವದ ಏಕೈಕವಾಗಿರುವ ‘ಘೋ ಫಾರೆಸ್ಟ್’ ಇದೆ. ಇದರನಿಜವಾದ ಹೆಸರು ಗೆಸ್ಪೆನ್‌ಸ್ಟ್‌ರ್ವಾಲ್ಡ. ಈ ಕಾಡು ಬಾಲ್ಟಿಕ್ ಸಮುದ್ರದ ಪಕ್ಕದಲ್ಲಿದೆ. 180 ಹೆಕ್ಟೇರ್ ಪ್ರದೇಶವನ್ನು ಆವರಿಸಿರುವ ಈ ಅರಣ್ಯವು ಬೀಚ್, ಹಾರ್ನ್ಬೀಮ್ ಮತ್ತು ಓಕ್ ಸಸ್ಯವರ್ಗದಿಂದ ಕೂಡಿದೆ. ಕೆಲವು ಎತ್ತರದ ಮರಗಳು ಸುಮಾರು ೨೦೦ ವರ್ಷಗಳಷ್ಟು ಹಳೆಯದಾಗಿದೆ. ಇದು ೧.೩ ಕಿಮೀ ಉದ್ದ ಮತ್ತು ೧೦೦ ಮೀ ಅಗಲದ ನಿಸರ್ಗ ಮೀಸಲು ಪ್ರದೇಶವಾಗಿದೆ.
ಉಪ್ಪುಸಹಿತ ಸಮುದ್ರದ ಗಾಳಿ ಮತ್ತು ಹೆಚ್ಚಿನ ಆರ್ದ್ರತೆಯಿಂದಾಗಿ ಅನೇಕ ಮರಗಳನ್ನು ಅಸಾಮಾನ್ಯ ತಿರುಚಿದ ರೂಪಗಳನ್ನು ತಾಳಿವೆ. ಅವುಗಳ ಕೊಂಬೆಗಳು ಮುಖ್ಯವಾಗಿ ಮರದ ಒಂದು ಬದಿಯಲ್ಲಿ ಬೆಳೆಯುತ್ತವೆ ಮತ್ತು ಆಗಾಗ್ಗೆ ತಿರುಚಿದ ಅಥವಾ ಹಾವಿನಂತೆ ಕಾಣುತ್ತವೆ. ಕಾಡಿನಲ್ಲಿ ಮಂಜು ತುಂಬಿದಾಗ, ಮರಗಳ ಮೂಲಕ ಬೀಸುವ ಗಾಳಿಯಿಂದಾಗಿ, ಅವುಗಳು ದೆವ್ವಗಳ ರೂಪ ತಾಳಿದಂತಹ ಅನುಭವವನ್ನುನೀಡುತ್ತವೆ. ಅವು ಪ್ರವಾಸಿಗರಿಗೆ ದೆವ್ವಗಳು ಓಡಾಡಿದಂತೆ ಕಾಣುತ್ತವೆ. ಹಾಗಾಗಿ ಸ್ಥಳೀಯವಾಗಿ ಈ ಪ್ರದೇಶವನ್ನು ‘ಘೋ ಫಾರೆಸ್ಟ್’ ಎನ್ನುತ್ತಾರೆ.ಈ ಪ್ರದೇಶವು ಪ್ರಕೃತಿಯ ವಿಸ್ಮಯಕ್ಕೆ ಸಾಕ್ಷಿ ಎಂಬಂತಿದೆ. ಸಾವಿರಾರು ಪ್ರವಾಸಿಗರು ಪ್ರಕೃತಿಯ ಈ ಸುಂದರ ದೃಶ್ಯವನ್ನು ಸವಿಯಲು ಇಲ್ಲಿಗೆ ಆಗಮಿಸುತ್ತಾರೆ. ಕಾಡಿನಲ್ಲಿ ಸಂಚರಿಸಲು ಅವಕಾಶವಿದ್ದು, ವಾಯು ವಿಹಾರವನ್ನು ಮಾಡಬಹುದು.
ಪಕ್ಕದ ಇರುವ ಬಾಲ್ಟಿಕ್ ಸಮುದ್ರದಲ್ಲಿ ಈಜುತ್ತಾ ಕಾಲ ಕಳೆಯಬಹುದು. ಭೂತದ ಮರಗಳಲ್ಲದೆ, ಅರಣ್ಯವು ವೈವಿಧ್ಯಮಯ ಸಸ್ಯ ಮತ್ತು ಪ್ರಾಣಿಗಳ ನೆಲೆಯಾಗಿದೆ. ಈ ವಿಶಿಷ್ಟ ಪರಿಸರ ವ್ಯವಸ್ಥೆಯಲ್ಲಿ ಬೆಳೆಯುವ ಅಪರೂಪದ ಆರ್ಕಿಡ್ಗಳು, ಅಣಬೆಗಳು ಮತ್ತು ಪಾಚಿ ಗಳು, ಮರಕುಟಿಗಗಳು, ಗೂಬೆಗಳು ಮತ್ತು ಯುರೋಪಿಯನ್ ನೈಟ್ಜಾರ್ ಸೇರಿದಂತೆ ವಿವಿಧ ಜಾತಿಗಳ ಪಕ್ಷಿಗಳನ್ನು ವೀಕ್ಷಣೆ ಮಾಡಲು ಪ್ರವಾಸಿಗರುಆಗಮಿಸುತ್ತಾರೆ. ಇಲ್ಲಿ ವರ್ಷದ ಎಲ್ಲ ದಿನವೂ ಬರಲು ಅವಕಾಶವಿದೆ. ಆದರೆ ಪ್ರತಿಯೊಂದು ಮಾಸದಲ್ಲೂ ಇದು ಭಿನ್ನವಾದ ಅನುಭವವನ್ನು ನೀಡುತ್ತದೆ. ನಿವೇನಾದರೂ ಜರ್ಮನಿಯ ನಿನ್ಹೇಗನ್ ಭೇಟಿ ನೀಡಿದರೆ ತಪ್ಪದೇ ಭೂತದ ಕಾಡಿನ ವಿಲಕ್ಷಣ ಸೌಂದರ್ಯವನ್ನು ಸವಿಯುಬಹುದು.