Turuvekere Prasad Column: ಇದೊಂದು ಪ್ರಕೃತಿ ಶಾಲೆ
ನಾವು ಕವಿಶೈಲಕ್ಕೆ ಭೇಟಿ ನೀಡಿದ ದಿನ ಆ ಗುಡ್ಡದ ಮೇಲೆ ಯಾರೊಬ್ಬ ಪ್ರವಾಸಿಗನೂ ಇರಲಿಲ್ಲ. ಮೊರೆವ ಗಾಳಿ ಯಲ್ಲಿ ಅನಂತ ಮೌನದಲ್ಲಿ ಕುವೆಂಪು ಅವರ ಭಾವಗಳೆಲ್ಲಾ ಅ
Ashok Nayak
December 31, 2024
ತುರುವೇಕೆರೆ ಪ್ರಸಾದ್
ಕನ್ನಡ ಮನಸುಗಳ ಮೇಲೆ ಅಪಾರ ಪ್ರಭಾವ ಬೀರಿದ ಕುವೆಂಪು ಅವರ ಜನ್ಮಸ್ಥಳಕ್ಕೆ ಒಂದು ಭೇಟಿ.
ಶಾಲಾದಿನಗಳಲ್ಲಿ ಪ್ರವಾಸ ಹೋಗಿದ್ದ ಮಸುಕು ನೆನಪು. ಅದು ಬಿಟ್ಟರೆ ಹಲವು ಬಾರಿ ತೀರ್ಥಹಳ್ಳಿಯಮೂಲಕವೇ ಹಾದು ಹೋದರೂ ಕವಿಶೈಲವನ್ನು ಮತ್ತೆ ಕಣ್ತುಂಬಿಕೊಳ್ಳುವ ಭಾಗ್ಯ ದಕ್ಕಿರಲಿಲ್ಲ. ಕೊನೆಗೆ, ಚಳಿಗಾಲದ ಒಂದು ಬೆಳ್ಳಂಬೆಳಿಗ್ಗೆ ಕುವೆಂಪು ಅವರ ಜನ್ಮಭೂಮಿ, ಕರ್ಮಭೂಮಿ, ತಪೋಭೂಮಿ ಎಲ್ಲವೂ ಆಗಿದ್ದ ಆ ಪರಮಪವಿತ್ರ ಪುಣ್ಯಕ್ಷೇತ್ರಕ್ಕೆ ಹೊರಟೇಬಿಟ್ಟವು.
ನಾವು ಕವಿಶೈಲಕ್ಕೆ ಭೇಟಿ ನೀಡಿದ ದಿನ ಆ ಗುಡ್ಡದ ಮೇಲೆ ಯಾರೊಬ್ಬ ಪ್ರವಾಸಿಗನೂ ಇರಲಿಲ್ಲ. ಮೊರೆವ ಗಾಳಿ ಯಲ್ಲಿ ಅನಂತ ಮೌನದಲ್ಲಿ ಕುವೆಂಪು ಅವರ ಭಾವಗಳೆಲ್ಲಾ ಅಲೆ ಅಲೆಯಾಗಿ ಅಲ್ಲಿ ಸುಳಿದಾಡಿದಂತಾಯಿತು. ನಗರದ ಜಂಜಡದ ಬದುಕಿನ ತಲ್ಲಣ,ಯೋಚನೆಗಳೆಲ್ಲಾ ಈ ಅಲೆಯಲ್ಲಿ ಲೀನವಾಗಿ ಒಂದು ಅದ್ಭುತ ಜಗತ್ತಿಗೆತೆರೆದುಕೊಂಡ ಅನುಭವವಾಯಿತು. ಆ ಅದಮ್ಯ, ಅನನ್ಯ ಪ್ರಶಾಂತತೆಯ ನಡುವೆಯೇ ರೂಪ ರೂಪಗಳನ್ನು ದಾಟಿ,ನಾಮಕೋಟಿಗಳನ್ನು ಮೀಟಿ ಅನಿಕೇತನದತ್ತ ಮನಸ್ಸು, ಚೇತನ ತುಡಿಯುತ್ತಿದೆಯೇನೋ ಎನಿಸಿ ರೋಮಾಂಚನವಾಯಿತು. ಆದರೂ ಎದೆಯ ಬಿರಿಯೆ ಬಾವದೀಟಿ ಚೇತನ ಮಾತ್ರ ಅನಿಕೇತನವಾಗದೆ ಅಲ್ಲೇ ಆ ಕವಿಶೈಲದಲ್ಲೇಹಕ್ಕಿಯಾಗಿಯೋ, ಬಳ್ಳಿಯಾಗಿಯೋ, ಹೂವಾಗಿಯೋ, ಒಂದು ಕಲ್ಲಾಗಿಯೋ ನೆಲೆಕಂಡುಕೊಳ್ಳಬೇಕು ಎನಿಸಿತು. ಕವಿಸಮಾಧಿ ಪಕ್ಕ ಒಂದಷ್ಟು ಹೊತ್ತು ನಿಂತಿದ್ದು, ಕುಳಿತದ್ದೇ ಬದುಕಿನ ಒಂದು ಅನನ್ಯ ಧನ್ಯತೆ!
ಕವಿಶೈಲವೊಂದು ಪ್ರಕೃತಿ ಶಾಲೆ. ಪ್ರಕೃತಿಯನ್ನು ಅನುಭವಿಸುವುದಷ್ಟೇ ಅಲ್ಲ, ಪ್ರಕೃತಿಯೊಂದಿಗೆ ಅನುಸಂಧಾನಮಾಡಿಕೊಂಡು ಜೀವಿಸುವುದನ್ನು ಈ ರಮಣೀಯ ತಾಣ ಕಲಿಸುತ್ತದೆ. ಪ್ರಕೃತಿಯ ಅನಂತ ವೈಭವಗಳನ್ನು,ವಿಸ್ಮಯಗಳನ್ನು, ನಿಗೂಢತೆಗಳನ್ನು ತೆರೆದಿಡುತ್ತಾ ಹೋಗುತ್ತದೆ. ಮೇಲ್ನೋಟಕ್ಕೆ ದೃಷ್ಟಿ ಹಾಯಿಸಿದಷ್ಟೂ ಕಣ್ಮನ ತಣಿಸುವ ಹಸಿರು, ಮರ, ಗಿಡ ಹೂವುಗಳ ಚಿತ್ತಾರ, ದುಂಬಿಗಳ ಜೇಂಕಾರ, ಹರಿಯುವ ನದಿ ತೊರೆಗಳ ನಿನಾದದ ಕಲ್ಪನೆಯ ಸಾಕಾರಕ್ಕೆ ಕವಿಶೈಲ ಸಾಕ್ಷಿಯಾಗುತ್ತದೆ. ಇದೊಂದು ಸದಾ ಕಾಡುವ ನಯನ ಮನೋಜ್ಞ ಸೊಬಗಿನಮೆರವಣಿಗೆ. ಹಾಗೇ ಈ ಪ್ರಕೃತಿಯೊಳಗಿನ ವ್ಯಾಪಕತೆ, ಅಚಲವಾಗಿ ನಿಂತ ಬಂಡೆ ಕಲ್ಲುಗಳು, ಮತ್ತೂ ಮತ್ತೂ ಎದೆತುಂಬುತ್ತಲೇ ಗಾಢವಾಗುವ ಮೌನ, ಪದೇ ಪದೇ ಕವಿ ಗುಂಗಿನದೇ ಧ್ಯಾನ, ಮನುಷ್ಯನ ಬದುಕಿನ ಶೋಧನೆಯಪರಿಮಿತಿಯನ್ನು ವಿಸ್ತರಿಸುತ್ತಾ ಹೋಗುತ್ತದೆ.
ಇದೇ ಕೊನೆ, ತುದಿ ಎಂದಾಗಲೆಲ್ಲಾ ಆ ಸೀಮಾರೇಖೆಯ ಲಂಘಿಸಿ ಮತ್ತೊಂದು ಅಚ್ಛರಿ ಮೈದಾಳುತ್ತಾ ಹೋಗುತ್ತದೆ.ಭಾವಲಹರಿಯ ರಿಂಗಣದಲ್ಲಿ ಮನಸ್ಸು ನಲಿದಾಡುತ್ತದೆ. ತಹತಹಿಸುವ ಆತ್ಮ ಆಧ್ಯಾತ್ಮದ ಅವಿಚ್ಛಿನ್ನ ಸಚ್ಚಿದಾ ನಂದ ಸ್ವರೂಪದಲ್ಲಿ ಅನಂತ ಶಾಂತಿಯನ್ನು ಕಂಡುಕೊಳ್ಳುತ್ತದೆ. ಇಲ್ಲಿನ ಕಲ್ಲು, ಬಂಡೆಗಳೂ ಜೀವ ತುಂಬಿಕೊಂಡು ಮಾತಾಡುತ್ತವೆ. ಭಾವದಲೆಗಳು ನನ್ನ ರಕ್ತನಾಳದಲ್ಲಿ ಮೊರೆ ಯುವುವು ಸೌಂದರ್ಯ ದಾನಂದಭರದಲ್ಲಿ.. ಎಂಬ ಕುವೆಂಪು ಅವರ ಕಾವ್ಯಸೆಲೆ ಎಂತಹವರನ್ನೂ ಜೀವನ್ಮುಖಿಯಾಗಿಸುತ್ತವೆ.
ಕುವೆಂಪು ಸಮಾಧಿಗೆ ಕೈ ಮುಗಿದು ಹಿಂದಿನ ಹಸಿರು ಹಾಸಿನ ಮೇಲೆ ನಡೆಯುವಾಗಿ ನಾನು ಹಸಿರು ಹುಲ್ಲಿನಬಯಲ ಮೇಲೆ ಕುಳಿತು ಆ ಮೇಘ ವಿರಚಿತ ಯಕ್ಷಲೋಕದಲ್ಲಿ ತಿರುಗಾಡಿದೆ. ಒಬ್ಬನೆಯೆ ಆ ಹೊನ್ನಿನ ಹೊಳಲಿ ನಲ್ಲಿ ಮನ ಬಂದಂತೆ ಸುತ್ತಿದೆಎಂಬ ಕುವೆಂಪು ಅವರ ಮಾತುಗಳು ನೆನಪಾಯಿತು. ಕುವೆಂಪು ಇಲ್ಲೇ ಈ ಪ್ರಕೃತಿಯ ಮದ್ಯೆ ಜೀವಂತವಾಗಿದ್ದಾರೆ ಎಂದು ಗಾಢವಾಗಿ ಅನಿಸಿಬಿಟ್ಟಿತು. ಈ ವಿಶ್ವವೆಲ್ಲವನು ನಿನ್ನಂತೆ ನಿಂತಲ್ಲೇ ಕಲ್ಪನೆಯ ತೆಕ್ಕೆಯಲಿ ತಬ್ಬಿ ಸಾಯಲು ಬಲ್ಲೆ! ಆದರೂ ನನಗಿನ್ನೂ ನಿನ್ನಿರವು ಬಂದಿಲ್ಲ, ಅದಕಾಗಿ ತಪವಗೈಯು ತಿಹೆನು! ಎಂದಿದ್ದರು ಕುವೆಂಪು. ಇಂತಹ ಸಾಕ್ಷಾತ್ಕಾರವಾದರೂ ನಮಗೆ ಆದರೆ ಅದೇ ಸಾರ್ಥಕತೆ, ಬದುಕು ಧನ್ಯ.
ನೀಲಗಿರಿ: ಬೆಳಗಿನಲಿ ಬೈಗಿನಲಿ ಮಾಗಿಯಲಿ ಚೈತ್ರದಲಿ ಮಳೆಯಲ್ಲಿ ಮಂಜಿನಲಿ ಹಗಲಿನಲಿ ರಾತ್ರಿಯಲಿ ದೃಶ್ಯ ವೈವಿಧ್ಯಮಂ ರಚಿಸಿ ನೀಂ ಭುವನದಲಿ ಸ್ವರ್ಗ ವಾಗಿಹೆ ನನಗೆ ನೀಲಗಿರಿ, ಬ್ರಹ್ಮಗಿರಿ ಎಂದಿದ್ದಾರೆ ಕುವೆಂಪು. ಇಂತಹ ಆನಂದಾನುಭೂತಿಯನ್ನು ಅನುಭವಿಸುವುದು ಅದೆಷ್ಟು ಜನ್ಮದ ಪುಣ್ಯವೋ? ಅದಕ್ಕೆ ಬೇಕಾದ ಏಕಾಂತ, ಮಾನಸಿಕ ತಯಾರಿ ಎಲ್ಲವೂ ಸುಲಭವಾಗಿ ದಕ್ಕುವಂತಹುದಲ್ಲ.
ಇದನ್ನೂ ಓದಿ: PatitaPavana Das Column: ಬಾಂಗ್ಲಾ ಗಲಭೆ ಮತ್ತು ಕೃಷ್ಣ ಪ್ರಜ್ಞೆಯ ಪ್ರಚಾರ