Professional: ವೃತ್ತಿಧರ್ಮ ಪಾಲಿಸಿದರೆ ಯಶಸ್ಸು ದೊರೆಯುತ್ತದೆ !
Professional: ವೃತ್ತಿಧರ್ಮ ಪಾಲಿಸಿದರೆ ಯಶಸ್ಸು ದೊರೆಯುತ್ತದೆ !
Ashok Nayak
December 14, 2024
ಸವಿತಾ ಜೈನ್
ಮೆಡಿಕಲ್ ಶಾಪ್‌ನಲ್ಲಿ ಸಹಾಯಕರಾಗಿದ್ದ ದಾವಣಗೆರೆಯ ಸವಿತಾ ಜೈನ್ ಅವರು ಇಂದು ಜೆನರಿಕ್ ಔಷಧ ಗಳ ಸಗಟು ವ್ಯಾಪಾರದಲ್ಲಿ ತೊಡಗಿಕೊಂಡಿದ್ದಾರೆ. ಕಠಿಣ ಶ್ರಮವಹಿಸಿ, ನಿಷ್ಠೆಯಿಂದ ಕೆಲಸ ಮಾಡಿ ಒಂದು ಹಂತ ತಲುಪಿದ್ದಾರೆ. ಇತ್ತೀಚಿಗೆ ‘ವಿಶ್ವವಾಣಿ ಗ್ಲೋಬಲ್ ಅಚೀವರ್ಸ್ ಪ್ರಶಸ್ತಿ’ಗೆ ಭಾಜನರಾಗಿ, ಮಾಲ್ದೀವ್ಸ್ ದೇಶದಲ್ಲಿ ಪ್ರಶಸ್ತಿಯನ್ನು ಸ್ವೀಕರಿಸಿದರು.
ನಾನು ಸವಿತಾ ಜೈನ್. ಹುಟ್ಟಿದ್ದು 1974ರಲ್ಲಿ. ಓದಿದ್ದು ಕೇವಲ 10ನೇ ತರಗತಿಯ ತನಕ. ಕನ್ನಡ ಮಾಧ್ಯಮದಲ್ಲಿವಿದ್ಯಾಭ್ಯಾಸ. ದಾವಣಗೆರೆಯಲ್ಲಿ ವಾಸ. ಬಾಲ್ಯದ ವಿಶೇಷ ಅನುಭವ ಅಂತ ಏನು ಇರಲಿಲ್ಲ. ಎಂಟನೇ ವಯಸ್ಸಿನಲ್ಲಿ ತಂದೆಯನ್ನು ಕಳೆದುಕೊಂಡೆ. ನಾವು ಐದು ಜನ ಹೆಣ್ಣುಮPಳು! ಅಪ್ಪ ಏನೂ ಆಸ್ತಿ ಬಿಟ್ಟು ಹೋಗಿರಲಿಲ್ಲ. ಅವರುಹೋದಾಗ ನನ್ನ ಕೊನೆಯ ತಂಗಿಯ ವಯಸ್ಸು ಕೇವಲ ಎರಡು ವರ್ಷ. ಅಪ್ಪ ಹೋಗಿದ್ದು ಮದ್ರಾಸ್ ಹತ್ತಿರ ಇರುವಪೆರಂಬೂರಿನಲ್ಲಿ. ಅವರು ತೀರಿಕೊಂಡ ನಂತರ, ಅಲ್ಲಿಂದ ಅಮ್ಮನ ತವರು ಮನೆ ದಾವಣಗೆರೆಯ ಹತ್ತಿರ ನೀಲನ ಹಳ್ಳಿಗೆ ಬಂದು ಹತ್ತು ಅಡಿ ಉದ್ದ, ಅಗಲ ಇರುವ ಚಿಕ್ಕ ರೂಮಿನಲ್ಲಿ ಅಮ್ಮನ ಜೊತೆ ಐದು ಜನ ಮಕ್ಕಳು ವಾಸ ವಾಗಿದ್ದೆವು. ಯಾವುದೇ ಆದಾಯ ಇರಲಿಲ್ಲ.
ಅಮ್ಮ ಕೂಲಿನಾಲಿ ಮಾಡಿ ಹೇಗೋ ಪರಿಸ್ಥಿತಿ ಹೊಂದಿಸುತ್ತಿದ್ದರು. ಆಗಿನ ದಿನಗಳಲ್ಲಿ ಸರಕಾರದಿಂದ ಬಡವರಿಗೆ ಹೆಚ್ಚಿನ ಸವಲತ್ತುಗಳು ಇರಲಿಲ್ಲ. ಇವತ್ತು ನಾನು ಅಂದಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರನ್ನು ನೆನಪು ಮಾಡಿಕೊಳ್ಳಬೇಕು. ಏಕೆಂದರೆ ಅವರು ಇದ್ದಾಗಲೇ ಬಡಜನರಿಗೆ ನ್ಯಾಯಬೆಲೆ ಅಂಗಡಿಯಲ್ಲಿ ಕಡಿಮೆ ಬೆಲೆಯ ನೂಲಿನ ಸೀರೆ, ಅಕ್ಕಿ, ಗೋಧಿ ವಿತರಣೆ ಆರಂಭವಾಯಿತು. ಅದರಿಂದಾಗಿ ನಮಗೆ ಅನುಕೂಲವಾಯಿತು.
ಹಪ್ಪಳ ಮಾಡುವ ಕಾಯಕಜೀವನ ನಿರ್ವಹಣೆಗಾಗಿ ನಮ್ಮ ಅಮ್ಮ ಕಾಳಿನ ಹಪ್ಪಳ ಮಾಡಲು ಆರಂಭಿಸಿದರು. ಒಂದು ದಿನಕ್ಕೆ 300 ಹಪ್ಪಳಮಾಡಿದರೆ ಒಂಬತ್ತು ರೂಪಾಯಿ ಸಿಗುತ್ತಿತ್ತು. ಅದರಲ್ಲಿ ಆರು ಜನರ ಹೊಟ್ಟೆ ತುಂಬಬೇಕಿತ್ತು. ಕಷ್ಟದ ಜೀವನ, ಬಡತನ, ಹಸಿವು ಕಲಿಸುವ ಪಾಠವನ್ನು ಯಾವ ವಿಶ್ವವಿದ್ಯಾನಿಲಯವೂ ಕಲಿಸುವುದಿಲ್ಲ. ಆಗಿನಿಂದಲೇ ನನಗೆ ಬದುಕಿನಲ್ಲಿ ಏನಾದರೂ ಮಾಡಬೇಕು ಅನ್ನುವ ತುಡಿತ. ಆದರೆ ದೈವ ಒಂದು ಹೊಡೆತ ಕೊಟ್ಟಿತು. ಅಮ್ಮನಿಗೆ ತೀವ್ರವಾದ ಸಕ್ಕರೆ ಕಾಯಿಲೆ ಶುರುವಾಯಿತು. ವೈದ್ಯರು ಬರೆದುಕೊಟ್ಟ ಮಾತ್ರೆಗಳನ್ನು ತೆಗೆದುಕೊಳ್ಳುವುದಕ್ಕೆ ಸಹ ನಮ್ಮ ಹತ್ತಿರ ಹಣ ಇರಲಿಲ್ಲ. ಒಂದು ಮಾತ್ರೆ ತಿನ್ನುವ ಬದಲು ಅರ್ಧ ಮಾತ್ರೆ ತಿನ್ನುತ್ತಾ ಇದ್ದರು ನನ್ನಮ್ಮ.
ಮಾತೃವಿಯೋಗ
ನನ್ನ 16ನೇ ವಯಸ್ಸಿನಲ್ಲಿ ನನ್ನಮ್ಮ ತೀರಿಕೊಂಡರು. ನಾನು ಅದೇ ತಾನೆ 10ನೇ ತರಗತಿಯ ಪರೀಕ್ಷೆ ಬರೆದಿದ್ದೆ. ಮುಂದೆ ಓದುವ ಆಸೆ ಇದ್ದರೂ ಅನುಕೂಲ ಇರಲಿಲ್ಲ. ಅಲ್ಲಿಂದ ಶುರುವಾಯಿತು ಮನೆಯಲ್ಲಿ ಕಷ್ಟದ ದಿನಗಳು, ಹೋರಾಟದ ದಿನಗಳು. ಸ್ವಲ್ಪ ದಿನ ತಾಯಿಯ ಅಕ್ಕನ ಮನೆಯಲ್ಲಿ ಇರಬೇಕಾಯಿತು. ಹದಿನಾರನೇ ವಯಸ್ಸಿಗೆ ಕೆಲಸಕ್ಕೆ ಸೇರಿದೆ. ತಿಂಗಳಿಗೆ ಕೇವಲ 150 ರುಪಾಯಿ ಸಂಬಳ. ಅದು ನನ್ನ ಬದುಕಿನಲ್ಲಿ ತಿರುವು ನೀಡಿದ ಒಂದು ಸಂದರ್ಭ. ನಾನು ಹೋಲ್‌ಸೇಲ್ ಔಷಧದ ಅಂಗಡಿಯಲ್ಲಿ ಕೆಲಸಕ್ಕೆ ಸೇರಿದ್ದೆ. ಅಲ್ಲಿಂದ ಸುಮಾರು 25 ವರ್ಷ ಕೆಲಸ ಮಾಡಿದೆ. ನಾನು ಬದುಕಿನಲ್ಲಿ ಏನಾದರೂ ಸಾಧಿಸಬೇಕು ಅಂತ ಅನಿಸುತ್ತಾ ಇತ್ತು. ಆದರೆ ಅಗತ್ಯವಿರುವ ಹಣಬಲ ಇರಲಿಲ್ಲ. ನಮ್ಮ ಮನೆಯಲ್ಲಿ ನಾವು ಐವರು ಅಕ್ಕ ತಂಗಿಯರಲ್ಲಿ ನಾನು ಮೂರನೆಯವಳು. ನನಗೆ ಮದುವೆ ಆಗಲಿಕ್ಕೆ ಮನಸ್ಸು ಒಪ್ಪಲಿಲ್ಲ. ನನ್ನ ತಂಗಿಯರಿಗೆ ಮದುವೆ ಮಾಡಿದೆ. ಅಷ್ಟರಲ್ಲಿ ನನ್ನ ವಯಸ್ಸು 30 ದಾಟಿತು.
ಸ್ವಸ್ತಿಕ್ ಫಾರ್ಮಾ2015 ರಲ್ಲಿ ಸ್ವಸ್ತಿಕ್ ಫಾರ್ಮಾ ಎಂಬ ಜೆನೆರಿಕ್ ಸಗಟು ಔಷಧ ವ್ಯಾಪಾರ ಸಂಸ್ಥೆಯನ್ನು ಆರಂಭಿಸಿದೆ. ವ್ಯವಹಾರ ಆರಂಭಿಸಿದ ಮೊದಲ ಒಂದು ವರ್ಷ ಬಹಳ ತೊಂದರೆಯಾಯಿತು. ಕೇವಲ ನಾಲ್ಕು ಲಕ್ಷ ರುಪಾಯಿಗಳನ್ನು ಕೈಯಲ್ಲಿಟ್ಟುಕೊಂಡು ವ್ಯಾಪಾರ ಆರಂಭಿಸಿದೆ. ಜೆನೆರಿಕ್ ಔಷಧಗಳ ಬಗ್ಗೆ ಹೆಚ್ಚಿನ ಮಾಹಿತಿ ಇರಲಿಲ್ಲ. ಮೆಡಿಕಲ್ ಶಾಪ್‌ಗಳಲ್ಲಿ ವಿಚಾರಿಸಿ, ನಿಧಾನವಾಗಿ ವ್ಯಾಪಾ ರದ ಒಳಹೊರಗುಗಳನ್ನು ತಿಳಿದುಕೊಂಡೆ. ಆಗ ತಾನೇ ಪ್ರಧಾನ ಮಂತ್ರಿಯವರು ಜೆನೆರಿಕ್ ಔಷಧಗಳ ಯೋಜನೆ ಆರಂಭಿಸಿದರು; ಜೆನರಿಕ್ ಔಷಧ ಬಳಕೆ ಅಲ್ಲಲ್ಲಿ ಆರಂಭವಾ ಯಿತು. ಜೆನರಲ್ಲಿ ಜನರಿಕ್ ಔಷಧಗಳ ಬಗ್ಗೆ ಜನರಲ್ಲಿ ಸಾಕಷ್ಟು ಅರಿವು ಮೂಡುತ್ತಾ ಬಂತು. ಇದರಿಂದ ನನ್ನ ವ್ಯವಹಾರಕ್ಕೆ ಅನುಕೂಲವಾಯಿತು.
2015 ರಲ್ಲಿ ಆರಂಭಗೊಂಡ ನನ್ನ ವ್ಯವಹಾರವು ಈಗ ಉತ್ತಮ ರೀತಿಯಲ್ಲಿ ನಡೆಯುತ್ತಿದೆ. ವಾರ್ಷಿಕ ವ್ಯವಹಾರ ಮೊದಲಿಗಿಂತ ಹಲವು ಪಟ್ಟು ಜಾಸ್ತಿಯಾಗಿದೆ. ಈಗ ದಾವಣಗೆರೆ ಜಿಲ್ಲೆಯಲ್ಲಿ ಹಲವು ಅಂಗಡಿಗಳಿಗೆ ಔಷಧಗಳನ್ನು ಸರಬರಾಜು ಮಾಡುತ್ತಿದ್ದೇನೆ. ನಾನು ವ್ಯವಹಾರ ಆರಂಭಿಸಿದಾಗ ಕೆಲವರು ಚುಚ್ಚು ಮಾತನ್ನು ಹೇಳಿದರು; ಅವಮಾನ ಬರುವ ರೀತಿಯಲ್ಲಿ ಮಾತನಾಡಿದರು. ಇದೇ ಸಮಯದಲ್ಲಿ ಆರ್ಥಿಕವಾಗಿ ಸಹ ಆಗಾಗ ತೊಂದರೆ ಯಾಗುತ್ತಿತ್ತು. ಎಲ್ಲವನ್ನೂ ಮೀರಿ ನಿಂತೆ. ವ್ಯವಹಾರದಲ್ಲಿ ಅದೃಷ್ಟ ಬೇಕು; ಆದರೆ ಕಠಿಣವಾಗಿ ಕೆಲಸ ಮಾಡು ವವರಿಗೆ ಮಾತ್ರ ಅದೃಷ್ಟ ಕೂಡಿಬರುತ್ತದೆ; ಸುಮ್ಮನೆ ಕುಳಿತರೆ ಅದೃಷ್ಟವು ಅದರ ಪಾಡಿಗೆ ಸುಮ್ಮನೆ ಇರುತ್ತದೆ.
ವೃತ್ತಿಧರ್ಮ ಪಾಲಿಸಬೇಕುಯಾವುದೇ ವ್ಯಾಪಾರದಲ್ಲೂ ಒಂದು ವೃತ್ತಿಧರ್ಮ ಅಂತ ಇರುತ್ತದೆ. ಅದನ್ನು ನಾವು ಪಾಲಿಸಬೇಕು. ಧೈರ್ಯ, ಛಲ,ಸಮಯದ ನಿರ್ವಹಣೆ, ತಾಳ್ಮೆ, ಹಿರಿಯರಲ್ಲಿ ಗೌರವ, ಕಿರಿಯರಲ್ಲಿ ಪ್ರೀತಿ ವಿಶ್ವಾಸ ಇದ್ದರೆ ಮತ್ತು ದೇವರೇ ನಮಗೆ ದಾರಿ ತೋರಿಸುತ್ತಾನೆ. ಇಂದು ನನ್ನ ವ್ಯವಹಾರ ಒಂದು ಹಂತಕ್ಕೆ ತಲುಪಿದೆ ಎಂದರೆ, ಇದರಲ್ಲಿ ನನ್ನ ವೈಯಕ್ತಿಕ ವಾದದ್ದು ಏನೂ ಇಲ್ಲ. ನಾನು ಈ ಹಂತ ಮುಟ್ಟಲು ನನಗೆ ಸಹಕರಿಸಿದ ಗುರು ಸಮಾನರಾದ ನನ್ನ ಸ್ನೇಹಿತರು, ಹಿರಿಯರು, ಅಕ್ಷರ ಕಲಿಸಿದ ಗುರುಗಳು, ನನ್ನ ಅಕ್ಕಂದಿರು,ನನ್ನ ಜೊತೆ ದುಡಿಯುತ್ತಿರುವ ನನ್ನ ಸಿಬ್ಬಂದಿ ವರ್ಗದ ಸಹಕಾರ ಮತ್ತು ಟೀಮ್ ವರ್ಕ್ ಇದನ್ನು ನಾನು ಮರೆಯುವುದಿಲ್ಲ.
ಉದ್ಯಮ ಈಗ ನಡೆಯುತ್ತಿದೆ. ಮಾಡಿದ್ದು ಇಷ್ಟು, ಇನ್ನೂ ಮಾಡಬೇಕಾಗಿರುವುದು ಬೆಟ್ಟದಷ್ಟು ಅನ್ನೋ ಭಾವನೆ ಇದೆ. ಸಮಾಜಕ್ಕೆ ಏನಾದರೂ ಕೊಡುಗೆ ನೀಡ ಬೇಕು, ಅನಾಥ ಮಕ್ಕಳಿಗೆ ಸಹಾಯ ಮಾಡಬೇಕು ಎಂಬ ಮನ ಸ್ಸಿದೆ. ಆ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತಳಾಗಿದ್ದೇನೆ. ಬಡತನ ಮತ್ತು ಕಷ್ಟದ ಅರಿವು ನನಗೆ ಇದೆ; ಆದ್ದರಿಂದ ಕಷ್ಟದಲ್ಲಿ ರುವವರಿಗೆ ಸಹಾಯ ಮಾಡಿದಾಗ ಒಂದು ರೀತಿಯ ತೃಪ್ತಿ ದೊರೆಯುತ್ತದೆ.
ಜ್ಞಾನಾರ್ಜನೆಗಾಗಿ ಪ್ರವಾಸದೇಶ ಸುತ್ತಬೇಕು ಕೋಶ ಓದಬೇಕು ಎನ್ನುವ ಗಾದೆ ಇದೆ. ಈಗಾಗಲೇ ಜರ್ಮನಿ, ಇಟಲಿ, ಸ್ವಿಜಲ್ಯಾಂಡ್ ಮತ್ತುನೇಪಾಳ ದೇಶಗಳಲ್ಲಿ ಪ್ರವಾಸ ಮಾಡಿದ್ದೇನೆ. ಈಗ ‘ವಿಶ್ವವಾಣಿ ಗ್ಲೋಬಲ್ ಅಚೀವರ್ಸ್ ಅವಾರ್ಡ್’ ಸಂದರ್ಭದಲ್ಲಿ ಮಾಲ್ಡಿವ್ಸ್ ದೇಶಕ್ಕೆ ಹೋಗಲು ಅವಕಾಶವಾಗಿದೆ. ಯಶಸ್ವಿ ವ್ಯಕ್ತಿಗಳು ಮತ್ತು ಸಾಧಕರ ಜೊತೆಯಲ್ಲಿ, ಸಮಾಜ ಸೇವಕರ ಜೊತೆಯಲ್ಲಿ ಮಾಲ್ದೀವ್ಸ್ ದೇಶದಲ್ಲಿ ಪ್ರಶಸ್ತಿ ದೊರಕಿದ್ದು ಬಹಳ ಸಂತೋಷವಾಗಿದೆ. ವಿಶ್ವವಾಣಿಯ ತಂಡ ಮತ್ತು ವಿಶ್ವೇಶ್ವರ ಭಟ್ ಅವರ ಮಾರ್ಗದರ್ಶನ ಅಮೂಲ್ಯ; ಎಲ್ಲರಿಗೂ ಮನದಾಳದ ಧನ್ಯವಾದಗಳು.
ಸವಿತಾ ಜೈನ್, ದಾವಣಗೆರೆ
ಶ್ರೀ ಸ್ವಸ್ತಿಕ್ ಫಾರ್ಮ ಯಾವುದೇ ಯಶಸ್ಸು ಸುಲಭವಾಗಿ ಒಲಿಯುವುದಿಲ್ಲ. ಅದರ ಹಿಂದೆ ಪರಿಶ್ರಮ, ಸಮಯ, ಸಮಯದ ನಿರ್ವಹಣೆ, ತಾಳ್ಮೆ ಒಂದು ಸಂಸ್ಥೆ ಯಶಸ್ವಿಯಾಗಲು ಸಾಧ್ಯ. 2016 ರಲ್ಲಿ 10 ಅಡಿ ಉದ್ದ 10 ಅಡಿ ಅಗಲ ಬಾಡಿಗೆ ಮಳಿಗೆಯಲ್ಲಿ ಶುರುವಾದ ಸ್ವಸ್ತಿಕ್ ಫಾರ್ಮ ಶುರುವಿನಲ್ಲಿ ಕಷ್ಟ ನಷ್ಟ ಅನುಭವಿಸಬೇಕಾಯಿತು. ನಂತರ ಸರಿಯಾದ ಸಮಯಕ್ಕೆ ಔಷದಗಳನ್ನು ತಲುಪಿಸಿವ ಮೂಲಕ ಸವಿತಾ ಜೈನ್‌ರವರ ಕುಟುಂಬ ವರ್ಗ, ಸಿಬ್ಬಂದಿ ವರ್ಗ ಹಗಲಿರುಳು ದುಡಿಯುವ ಎಲ್ಲರ ಪರಿಶ್ರಮದಿಂದಾಗಿ ಸ್ವಸ್ತಿಕ್ ಫಾರ್ಮ ಯಶಸ್ವಿಯಾಯಿತು. ನಂತರ ೨೦೨೨ ರಲ್ಲಿ ಎರಡನೇ ಸಂಸ್ಥೆ ಶ್ರೀ ಸ್ವಸ್ತಿಕ್ ಡಿಸ್ಟ್ರಿಬ್ಯೂಟರ್ಸ್‌ನ್ನು ಸವಿತಾ ಜೈನ್ ಅವರು ಸ್ಥಾಪಿಸಿದ್ದಾರೆ.
ವಿಳಾಸ : ಶ್ರೀ ಸ್ವಸ್ತಿಕ್ ಫಾರ್ಮ, ೭ ನೇ ಮುಖ್ಯರಸ್ತೆ, ಪಿ.ಜಿ ಬಡಾವಣೆ,ದಾವಣಗೆರೆ. ಮೊ: ೯೮೮೦೬೫೯೨೨೧
ವಿಶ್ವವಾಣಿ ಪತ್ರಿಕೆ ನನ್ನನ್ನು ಗುರುತಿಸಿ, ಗೌರವಿಸಿ, ಮಾಲ್ದೀವ್ಸ್‌ನಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ಪ್ರಶಸ್ತಿ ನೀಡಿ ನನ್ನ ಜವಾಬ್ದಾರಿ ಹೆಚ್ಚಿಸಿದೆ. ನನ್ನಲ್ಲಿ ಧೈರ್ಯ ತುಂಬಿದೆ. ವಿವಿಧ ಸಾಧಕರ ಜೊತೆ ಪರಿಚಯಿಸಿ, ಸಮಾಜಕ್ಕೆ ನಾವು ಏನಾದರೂ ಕೊಡಬೇಕು ಅನ್ನುವ ಕಾಳಜಿಯನ್ನುಎಚ್ಚರಿಸಿದೆ. ವಿಶ್ವವಾಣಿ ಬಳಗಕ್ಕೆ ನನ್ನ ಹೃದಯ ಪೂರ್ವಕ ಧನ್ಯವಾದಗಳು.ಸವಿತಾ ಜೈನ್, ಪ್ರಶಸ್ತಿ ಪುರಸ್ಕೃತರು
ಸವಿತಾರವರ ಆರಂಭಿಕ ದಿನಗಳು ಬಹಳ ಕಷ್ಟಕರವಾಗಿತ್ತು. ತಮ್ಮ ಪೂರ್ತಿ ಜೀವನವನ್ನು ವೃತ್ತಿ ಹಾಗೂ ಕುಟುಂಬಕ್ಕೆ ಮೀಸಲಿಟ್ಟಿದ್ದಾರೆ. ತಮ್ಮ ವೃತ್ತಿಯಲ್ಲಿ ಇದ್ದ ಶ್ರದ್ಧೆ, ಭಕ್ತಿ ಅವರನ್ನು ಈ ಮಟ್ಟಕ್ಕೆ ಬೆಳೆಸಿದೆ. ತಂದೆ ತಾಯಿ ಇಲ್ಲದ ಸಮಯದಲ್ಲಿ ಸಣ್ಣ ಫಾರ್ಮಾದಲ್ಲಿ ಕೆಲಸಕ್ಕೆ ಸೇರಿ 25 ವರ್ಷ ತಮ್ಮ ವೈಯಕ್ತಿಕ ಜೀವನ ಮರೆತು, ಕುಟುಂಬದ ಏಳಿಗೆಗಾಗಿ ದುಡಿದು, ಈಗ ಎರಡು ಫಾರ್ಮ ಸಂಸ್ಥೆಗಳನ್ನು ಕಟ್ಟಿ, ಸಾಕಷ್ಟು ಜನಕ್ಕೆ ಉದ್ಯೋಗ ನೀಡುವುದರ ಜೊತೆಗೆ ಸಾಮಾಜ ಸೇವೆಯಲ್ಲಿ ತೊಡಗಿದ್ದಾರೆ. ವಿಶ್ವವಾಣಿ ಪತ್ರಿಕೆಯು ಅವರನ್ನು ಗುರುತಿಸಿ ಜಾಗತಿಕ ಮಟ್ಟದ ಪ್ರಶಸ್ತಿ ನೀಡಿದ್ದಕ್ಕೆ ಧನ್ಯವಾದಗಳು.ಮಂಜುನಾಥ್. ಎಸ್.ಎನ್., ಶ್ರೀ ಗುರು ಫಾರ್ಮ. ದಾವಣಗೆರೆ.