Dr R G Hegde Column: ಹವ್ಯಕ ಸಂಸ್ಕೃತಿಯ ಒಳನೋಟಗಳು

ವಿಶ್ವಾದ್ಯಂತ ಹರಡಿರುವ ಹವ್ಯಕರು ಸೇರಿ ತಮ್ಮ ಇತಿಹಾಸ, ಸಂಸ್ಕೃತಿ, ವರ್ತಮಾನ ಮತ್ತು ಭವಿಷ್ಯದ ಕುರಿತು ಈ ಸಂದರ್ಭದಲ್ಲಿ ಚರ್ಚಿಸಿದ್ದು ಒಂದು ಮಹತ್ವದ ಬೆಳವಣಿಗೆ. ಪ್ರತಿ ಯೊಂದು ಸಮಾಜವೂ ಹೀಗೆ ತನ್ನತನವನ್ನು ಕಟ್ಟಿಕೊಳ್ಳುವುದು-ಇಟ್ಟು ಕೊಳ್ಳುವುದು ಒಳ್ಳೆ ಯದು

RG Hegde
Profile Ashok Nayak January 17, 2025

Source : Vishwavani Daily News Paper

ಹವ್ಯಕುಟುಂಬಿ

ಡಾ.ಆರ್‌.ಜಿ.ಹೆಗಡೆ

ಕೆಲ ದಿನಗಳ ಹಿಂದೆ ನಡೆದ ವಿಶ್ವ ಹವ್ಯಕ ಸಮ್ಮೇಳನ ಭಾರಿ ಯಶಸ್ವಿಯಾಯಿತು ಎನ್ನುವು ದರಲ್ಲಿ ಅನುಮಾನವಿಲ್ಲ. ಸಮ್ಮೇಳನದ ನೇತೃತ್ವ ವಹಿಸಿದ್ದವರಿಗೆ ಈ ಯಶಸ್ಸಿನ ಶ್ರೇಯ

ಸಲ್ಲಬೇಕು. ವಿಶ್ವಾದ್ಯಂತ ಹರಡಿರುವ ಹವ್ಯಕರು ಸೇರಿ ತಮ್ಮ ಇತಿಹಾಸ, ಸಂಸ್ಕೃತಿ, ವರ್ತಮಾನ ಮತ್ತು ಭವಿಷ್ಯದ ಕುರಿತು ಈ ಸಂದರ್ಭದಲ್ಲಿ ಚರ್ಚಿಸಿದ್ದು ಒಂದು ಮಹತ್ವದ ಬೆಳವಣಿಗೆ. ಪ್ರತಿಯೊಂದು ಸಮಾಜವೂ ಹೀಗೆ ತನ್ನತನವನ್ನು ಕಟ್ಟಿಕೊಳ್ಳುವುದು-ಇಟ್ಟು ಕೊಳ್ಳುವುದು ಒಳ್ಳೆಯದು.

ಏಕೆಂದರೆ, ಪ್ರತಿಯೊಂದು ಸಮಾಜಕ್ಕೂ ಅದರದ್ದೇ ಆದ ಜೀವನ ಶೈಲಿ, ವೈವಿಧ್ಯಮಯ ಊಟ, ವಿಶಿಷ್ಟ ವಾದ ಕಲೆ- ಸಂಸ್ಕೃತಿ-ಮಾತುಗಾರಿಕೆ ಇರುತ್ತವೆ. ಒಂದು ಪರಿಸರದ ಭಾಗ ವಾಗಿ ಬದುಕಿದ, ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡ ಹೆಜ್ಜೆಗುರುತುಗಳು ಇಂಥ

ಸಮಾಜಗಳಿಗೆ ಇರುತ್ತವೆ. ಇಂಥ ಸಮಾಜ- ಸಂಸ್ಕೃತಿಗಳು ಹೀಗೆ ತಮ್ಮನ್ನು ಗುರುತಿಸಿ ಕೊಂಡು ಎದ್ದು ನಿಂತಾಗ ಮಾತ್ರವೇ ಪಾಶ್ಚಾತ್ಯೀಕರಣವನ್ನು ತಡೆಯಲು ಸಾಧ್ಯ.

ಇಂಥ ವಿಭಿನ್ನ ಸಂಸ್ಕೃತಿಗಳು ಅಂತಾರಾಷ್ಟ್ರೀಯ ಪ್ರವಾಸೋದ್ಯಮದ ಪ್ರಮುಖ ಆಕರ್ಷಣೆಗಳು ಕೂಡ. ಮೊನ್ನಿನ ಸಮ್ಮೇಳನದಲ್ಲಿ, ಹವ್ಯಕ ಸಂಸ್ಕೃತಿ ಎಂದರೇನು ಎನ್ನುವ ಪ್ರಶ್ನೆಯ ಕುರಿತೂ ಚರ್ಚೆಗಳು ನಡೆದವು. ಆದ್ದರಿಂದ, ಹಿಂದೆ ಕಂಡುಂಡ ಹವ್ಯಕ ಜೀವನ ಶೈಲಿಯ ಒಳನೋಟಗಳನ್ನು ತೆರೆದಿಡುವ ಮೂಲಕ, ಹವ್ಯಕ ಸಂಸ್ಕೃತಿ ಎಂದರೇನು ಎಂಬುದನ್ನು ಇಲ್ಲಿ ಹಂಚಿಕೊಳ್ಳಲು ಯತ್ನಿಸಿದ್ದೇನೆ.

ಹವ್ಯಕರು ಮೂಲತಃ ಹಳ್ಳಿಗರು ಮತ್ತು ಕೃಷಿ ಆಧರಿಸಿ ಜೀವನ ನಡೆಸಿದವರು. ಹವ್ಯಕ ಹಳ್ಳಿಗಳು ಸಾಧಾರಣವಾಗಿ ಅಡಕೆ ತೋಟ, ಕಬ್ಬಿನ ಗದ್ದೆ, ಕರಡದ ಬೇಣ, ಸೊಪ್ಪಿನ ಬೆಟ್ಟ ಮತ್ತು ನೀರಿನಿಂದ ತುಂಬಿದಂಥವು. ಭಾರಿ ಮಳೆ ಬೀಳುವ ಪರಿಸರ, ನೀರುಗದ್ದೆ, ಹಳ್ಳ, ನದಿ, ಸಮುದ್ರ, ಯಕ್ಷಗಾನ ಇಂಥವುಗಳ ಪ್ರಭಾವ ಹವ್ಯಕ ಭಾಷೆಯ ಮೇಲಿದೆ. ಈ ಭಾಷೆಯಲ್ಲಿ ರುವ ಗಾದೆಗಳು, ಈಡಿಯಮ್ ಗಳು ಸಹಜವಾಗಿ ಇಂಥವನ್ನು ಹಿನ್ನೆಲೆಯಾಗಿ ಹೊಂದಿವೆ.

ಸಾಧಾರಣವಾಗಿ ಹವ್ಯಕ ಊರಿನ ರಚನೆ ಹೇಗಿರುತ್ತದೆಯೆಂದರೆ, 2-3 ಎಕರೆ ತೋಟ/ಬೇಣ, ಅದರ ನಡುವೆ ಮನೆ, ನಂತರ ಮುಂದಿನ ತೋಟ ಮತ್ತು ಅವರ ಮನೆ, ನಂತರ ಇನ್ನೊಬ್ಬ ರದ್ದು ಹೀಗೆ. ಹೀಗಾಗಿ ಅವೆಲ್ಲ ವಿಸ್ತೀರ್ಣದಲ್ಲಿ ದೊಡ್ಡ ಊರು ಗಳು; ಅಲ್ಲಿ ಮಾತು-ಗದ್ದಲ ಕೇಳಿಸುವುದೇ ಇಲ್ಲ. ಸಾಯಂಕಾಲ ಕೇಳಿಸುವುದು ಮೃದಂಗದ, ಚಂಡೆಯ ಸ್ವರ. ತೋಟಕ್ಕೆ ಹೋದವರನ್ನು ಕರೆಯಲು ‘ಕೂ’ ಹೊಡೆಯಬೇಕು, ಇಲ್ಲವೇ ಜಮಟೆ ಬಾರಿಸಬೇಕು!

ಮನೆಗಳು ಹೆಚ್ಚಾಗಿ ಕಲ್ಲು/ಮಣ್ಣಿನ ಗೋಡೆ ಹೊಂದಿ, ಚಾವಣಿಗೆ ಸೋಗೆ ಅಥವಾ ಹಂಚು

ಹೊದಿಸಿಕೊಂಡಿರುತ್ತಿದ್ದವು. ಇವು ಸೋಗೆ, ಅಡಕೆ-ತೆಂಗಿನ ಮರಗಳು, ತೆಂಗಿನ ಗರಿ, ಬಿದಿರು, ಬೆತ್ತದ ಬಳ್ಳಿ, ಬಾಳೆ ಬಳ್ಳಿ, ಕೂಗಲ ಬಳ್ಳಿ ಮುಂತಾದ ಪ್ರಾದೇಶಿಕವಾಗಿ ಲಭ್ಯವಿರುವ ಉತ್ಪನ್ನಗಳನ್ನು ಬಳಸಿ ಕಟ್ಟಿದಂಥವು. ಹಾವಿನ ಕಾಟ ತಪ್ಪಿಸುವ ಸಲುವಾಗಿ ಮನೆಗಳಿಗೆ ಚಿಕ್ಕ ಚಿಕ್ಕ ಕಿಟಕಿಗಳು ಇರುತ್ತಿದ್ದವು.

ವಾಸ್ತುಬಾಗಿಲು ಧಾರ್ಮಿಕ ಮಹತ್ವದ್ದು, ಅದರ ಮುಂದೆ ತಲೆಬಗ್ಗಿಸಿಯೇ ಹೋಗಬೇಕು. ಹಾಗಾಗಿ ಆ ಬಾಗಿಲನ್ನು ಎತ್ತರವಿರಿಸುತ್ತಿರಲಿಲ್ಲ. ಮಣ್ಣಿಗೆ ಸುಣ್ಣದ ನೀರು ಕುಡಿಸಿ, ನುಣುಪು ಕಲ್ಲಿನಿಂದ ಒರೆದು ಮಾಡಿದ ಥಳಥಳ ಹೊಳೆವ ನೆಲ. ಮನೆಗಳು ಬಹುತೇಕವಾಗಿ ಕಟ್ಟಿಗೆಯ ಅಂಕಣ ಹಾಕಿದವು, ಹೀಗಾಗಿ ಒಳಗೆ ಯಾವಾಗಲೂ ತಂಪು. ಹವ್ಯಕ ಮನೆ

ಗಳ ಮುಂದಿನ ಮತ್ತು ಮಹತ್ವದ ಭಾಗವೇ ‘ಹೊಳ್ಳಿ’. ರಾತ್ರಿ ಬೆಚ್ಚಗೆ ಸೊಪ್ಪು ಕಂಬಳಿ ಅಥವಾ ಹಡಗಂಬಳಿ ಹೊದ್ದು ಹೊಳ್ಳಿಯ ಮೇಲೆ ಮಲಗಿದರೆ ಸ್ವರ್ಗ. ಮಲಗಿದಲ್ಲಿಂದಲೇ ಬೆಳದಿಂಗಳು, ಅಮಾವಾಸ್ಯೆಯ ನಕ್ಷತ್ರಗಳ ರಾಶಿ, ಮಳೆಗಾಲದಲ್ಲಿ ಭಾರಿ ಜಡಿಯುವ ಮಳೆ, ಜೀರುಂಡೆಗಳ ಗಾನ ಇವೆಲ್ಲವನ್ನೂ ಅನುಭವಿಸಬಹುದು.

ತೋಟ, ಗುಡ್ಡಗಳು, ಮಳೆ, ಹಳ್ಳ, ಹೊಳೆ, ಪ್ರಕೃತಿ, ಕೀಟಗಳು, ಪ್ರಾಣಿಗಳು, ಹಾವು ಗಳು, ಹಕ್ಕಿಜಗತ್ತು ಎಲ್ಲವುಗಳ ಪರಿಚಯ ಹವ್ಯಕರಿಗೆ ಇರುತ್ತದೆ. ಒಟ್ಟಾರೆಯಾಗಿ ಪ್ರಕೃತಿಯು ಹವ್ಯಕರ ಬದುಕಿನ ಭಾಗ.ರೋಗ-ರುಜಿನ ಬಂದರೂ ಅವರಿಗೆ ಪ್ರಕೃತಿಯೇ ಔಷಧಿಯನ್ನು ಒದಗಿಸುತ್ತಿತ್ತು.

ಯಾವ ಗಿಡದ ತೊಪ್ಪಲನ್ನು ಅರೆದು ಕುಡಿಸಬೇಕು ಅಥವಾ ತೇದು ಹಚ್ಚಬೇಕು ಎನ್ನುವ ವಿಚಾರ ಹವ್ಯಕರಿಗೆ ಗೊತ್ತಿತ್ತು. ಮನೆಯಲ್ಲಿ ಶುಂಠಿ, ಜೇಷ್ಠಮಧು, ಉಳ್ಳಾಗಡ್ಡಿ, ಜಾಯಿ ಕಾಯಿ, ಕೊಡಸಗನ ಬೇರು ಇತ್ಯಾದಿ ಇದ್ದೇ ಇರುತ್ತಿದ್ದವು. ನೆಗಡಿ ಬಂದಾಗ ಉಳ್ಳಾಗಡ್ಡಿ-ಕಾಳು ಮೆಣಸಿನ ಕಷಾಯ ಕುಡಿದರೆ 2 ದಿನದಲ್ಲಿ ಮಾಯ. ಆ ಔಷಧಿಗಳನ್ನು ತೆಗೆದು ಕೊಳ್ಳಲು ಚಿತ್ರವಿಚಿತ್ರವಾದ ಪದ್ಧತಿಗಳಿದ್ದವು.

ಉದಾಹರಣೆಗೆ, ಕೆಲವು ಔಷಧಿಗಳನ್ನು ಒಯ್ಯುವಾಗ ರೋಗಿಗೆ ನೀಡುವ ತನಕ ಹಿಂದೆ ನೋಡಬಾರದು. ಇನ್ನು ಕೆಲವು ಔಷಧಿ ತೆಗೆದುಕೊಂಡು ಹೋಗಬೇಕಾದರೆ ಅವನ್ನು

ಕೊಡುವ ತನಕ ಮಾತನಾಡಬಾರದು, ಔಷಧಿಯನ್ನು ನೆಲಕ್ಕೆ ಇಡಬಾರದು ಹೀಗೆ ಸಂಪ್ರ ದಾಯಗಳಿದ್ದವು. ಔಷಧಿಗಳಿಗೆ ದುಡ್ಡು ಕೊಡುವ ಪದ್ಧತಿಯಿರಲಿಲ್ಲ, ಕೆಲವು ಸಂದರ್ಭ ದಲ್ಲಿ ಒಂದು ತೆಂಗಿನಕಾಯಿ ಕೊಡುವುದಿತ್ತು.

ಇಡೀ ಜೀವನದಲ್ಲಿ ಅಲೋಪತಿಯ ಒಂದೂ ಗುಳಿಗೆಯನ್ನು ತೆಗೆದುಕೊಳ್ಳದವರೂ ದ್ದರು. ಅವರು ಪ್ರಕೃತಿಯ ಲಯದ ಜತೆ ಬದುಕಿದ್ದು ಇದಕ್ಕೆ ಕಾರಣವಿರಬಹುದು. ಚಪ್ಪಲಿ ಹಾಕುವ, ವಿಶೇಷವಾಗಿ ಬಟ್ಟೆ ಧರಿಸುವ ಪದ್ಧತಿ ಇರಲಿಲ್ಲ; ಗಂಡಸರು ಸುಮಾರಾಗಿ ಒಂದು

ಅಂಗಿ (ಯಾವುದಕ್ಕಾದರೂ ಇರಲೆಂದು) ಮಾಡಿಸಿಡುತ್ತಿದ್ದರು.

ಕುಮಟಾಕ್ಕೆ ಅಥವಾ ಮದುವೆಗೆ ಹೋಗುವುದಿದ್ದರೆ ಮಾತ್ರವೇ ಅದನ್ನು ಹಾಕಿಕೊಳ್ಳುವುದು ಅಥವಾ ಹೆಗಲ ಮೇಲೆ ಇಟ್ಟುಕೊಳ್ಳುವುದು. ಊರಿನಲ್ಲೇ ಇರುವ ಹೊಲಿಗೆಯವ, ಯಾವ

ಬಣ್ಣದ ಬಟ್ಟೆ ಇದೆಯೋ ಅದರಲ್ಲೇ ಅಂಗಿ ಮಾಡಿಕೊಡುವುದು ವಾಡಿಕೆ; ಹೀಗಾಗಿ ಕೆಲವೊಮ್ಮೆ ಇಡೀ ಊರಿಗೇ ಸಮವಸ ಬಂದಂತೆ ಇರುತ್ತಿತ್ತು. ಹೆಂಗಸರಿಗೆ ವರ್ಷಕ್ಕೆ 2-3 ಸೀರೆ. ಅವರು ಒಂದೆರಡು ಪಲಕ ಮಾಡಿಸಿಡುತ್ತಿದ್ದರು. ಮನೆಯಲ್ಲಿರಬೇಕಾದರೆ ಹಾಕಿ ಕೊಳ್ಳುವ ಪದ್ಧತಿ ಕಡಿಮೆ. ಹಾಗೆಯೇ ಇಂದಿನ ಹಾಗೆ ಲಂಗ ಹಾಕಿ ಅದರ ಮೇಲೆ ಸೀರೆ ಯುಡುವ ಪದ್ಧತಿ ಇರಲಿಲ್ಲ.

ಸುಮಾರಾಗಿ ಹಾಕುವುದು ಕತ್ರುಡುಗೆ. ಗಂಡಸರು ಒಂದು ಕಚ್ಚೆಯುಟ್ಟು, ಅವಶ್ಯಕತೆ ಬಿದ್ದರೆ ಅದರ ಮೇಲಿಂದ ಒಂದು ಅಡ್ಡ ಟವೆಲ್ ಸುತ್ತುತ್ತಿದ್ದರು. ಮೇಲ್ಗಡೆ ಏನೂ ಇಲ್ಲ.

ಅನುಕೂಲಸ್ಥರು ನೀಲಿಬಣ್ಣದ ಒಂದೆರಡು ಅಂಡರ್ ವೇರ್ ಹೊಲಿಸಿಬಿಡುತ್ತಿದ್ದರು. ಒಟ್ಟಾರೆ, ಸರಳ ಜೀವನ ಹವ್ಯಕರದು. ಹವ್ಯಕರದು ಸಾಧಾರಣವಾಗಿ ಒಟ್ಟು ಕುಟುಂಬ, ಗಂಡ-ಹೆಂಡತಿಗೆ ಸರಾಸರಿ 6-8 ಮಕ್ಕಳು. ಕಟ್ಟಿಗೆಯ ಒಲೆಯ ಮೇಲೆ ಅಡುಗೆ ಮಾಡಬೇಕು. ಕರೆಂಟ್ ಇರಲಿಲ್ಲ, ಹಾಗಾಗಿ ಕರೆಂಟ್ಗೆ ಸಂಬಂಧಿಸಿದ ಯಾವುದೇ ರೀತಿಯ ಮಷೀನ್ ಇರಲಿಲ್ಲ. ಬಾವಿಯಿಂದ ನೀರು ತಂದುಕೊಳ್ಳಬೇಕು.

ನೀರು ಸೇದಲು ಬಾವಿಗೆ ಗಡಗಡೆ ಇರುತ್ತಿತ್ತು, ಕೆಲವೊಮ್ಮೆ ಸೊಂಟ ಬಗ್ಗಿಸಿ ಜಗ್ಗುವ ಬಾವಿ.

ಮಳೆಗಾಲಕ್ಕೆ ಸೌದೆಕೋಲು, ಮಡ್ಲುಗರಿ, ಕಾಯಿಸಿಪ್ಪೆ, ಗರಟೆ ತಂದಿಟ್ಟುಕೊಳ್ಳಬೇಕು. ಕೊಟ್ಟಿಗೆಯು ಹವ್ಯಕ ಸಂಸ್ಕೃತಿಯ ಅವಿಭಾಜ್ಯ ಅಂಗ. ಎಮ್ಮೆ-ದನಗಳು ಇರಲೇಬೇಕು, ಗೋಮಯಕ್ಕಾದರೂ ಆಕಳು ಬೇಕು. ಸ್ವಚ್ಛ ಗೊಳಿಸಲು/ ಶುದ್ಧಗೊಳಿಸಲು ಬೆಳಗಾದರೆ ಗೋಮಯ ಬೇಕೇಬೇಕು.

ಮನೆಯಲ್ಲಿ ಹಾಲು ಪುಷ್ಕಳವಾಗಿ ಇರುತ್ತಿತ್ತು ಎನ್ನಲಾಗದು. ಒಂದು ಸೊಲಗೆ ಅಥವಾ ಸೇರಿನಷ್ಟು ಹಾಲು ಕೊಡುವ ಆಕಳು ಇರುತ್ತಿತ್ತು. ಕೆಲವು ಮನೆಯಲ್ಲಿ ಇದ್ದುದ ರಲ್ಲಿಯೇ ಬೆಣ್ಣೆ ತೆಗೆದು ತುಪ್ಪ ಮಾಡಿ ಇಡುತ್ತಿದ್ದರು. ಆದರೆ ತುಪ್ಪವನ್ನು (ಶ್ರೀಮಂತರು ಬಿಟ್ಟು) ಮನುಷ್ಯರು ತಿನ್ನುವಂತಿರಲಿಲ್ಲ, ಅದು ದೇವರ ಪೂಜೆಗೆ ಅಥವಾ ಹೋಮಕ್ಕೆ ಮೀಸಲು. ಮಗಳು ಬಾಣಂತಿಯಾಗಿ ಬಂದರೆ ಅವಳಿಗೆ ತುಪ್ಪವನ್ನು ಬಡಿಸುವುದಿತ್ತು.

ಬೆಳಗ್ಗೆ ಆಸರಿಗೆ ಸುಮಾರಾಗಿ ದೋಸೆ ಅಥವಾ ತೆಳ್ಳವು. ದೋಸೆ ಎರೆದು ಕುತ್ರಿ ಹಾಕುವುದೇ 9 ಗಂಟೆಯ ತನಕವೂ ಒಂದು ಪೂರ್ಣಪ್ರಮಾಣದ ಕೆಲಸವಾಗುತ್ತಿತ್ತು. ಕೆಲವರ ಮನೆಯ ಪೂಜೆ ಸುದೀರ್ಘ; ಸಂಧ್ಯಾವಂದನೆಗೇ ತಾಸುಗಟ್ಟಲೆ ಸಮಯ ಹಿಡಿಯುತ್ತಿತ್ತು.

ಸುತ್ತಮುತ್ತಲ ವಾತಾವರಣದಲ್ಲಿ ಬೆಳೆದ ದಾಸವಾಳ, ಕರವೀರ, ನಂಜಟ್ಳೆ, ಹುಲಿಮೀಸೆ, ಕೋಟೆ ಹೂವು, ಪುಷ್ಪಾಳಿ, ಕಾಯ್ಕಡಿ ಹೂವು, ನಿತ್ಯಪುಷ್ಪ, ತೇರಿನಚಂಡೆ ಹೂವು, ದೂರ್ವೆ

ಇತ್ಯಾದಿ ಕೊಯ್ದು ತಂದು, ಗಂಧಮಂಗಲ ತೇಯ್ದಿಟ್ಟುಕೊಂಡು ಪೂಜೆ ನಡೆಯಬೇಕು. ದೇವರ ಮೂರ್ತಿಗಳಿಗೆ ಸ್ನಾನಮಾಡಿಸಿ ಗಂಧಮಂಗಲ ಹಚ್ಚಬೇಕು. ಒಂದೆರಡು ತಾಸಿನ ಕೆಲಸವದು.

ಅನ್ನ ಮಾಡಿ ದೇವರಿಗೆ ಉಣಬಡಿಸುವ ಪದ್ಧತಿ ಇತ್ತು. ಸಾಯಂಕಾಲ ಭಜನೆ, ಹಾಲು ಮುಂದಿಟ್ಟು ದೇವರಿಗೆ ಪೂಜೆ. ಮನೆಯ ಹಿರಿಯರು ಮಕ್ಕಳಿಗೆ ಸಂಸ್ಕೃತ ಶ್ಲೋಕ, ದೇವರ ಸ್ತುತಿ, ವಿಷ್ಣು ಸಹಸ್ರನಾಮ ಇತ್ಯಾದಿಗಳನ್ನು ಹೇಳಿಕೊಡುತ್ತಿದ್ದರು. ಗಂಡು ಮಕ್ಕಳಿಗೆ ಹೆಚ್ಚಾಗಿ 8ನೇ ವರ್ಷಕ್ಕೆ ಉಪನಯನ, ಗಾಯತ್ರಿ ಮಂತ್ರದ ಬೋಧನೆ. ಗಾಯತ್ರಿ ಜಪ

ವಾದ ನಂತರ, ಅಷ್ಟಾಕ್ಷರಿ ಮಾಡಿ ಪಂಚಾಕ್ಷರಿ ಹೇಳಬೇಕು. ಅವಾಚ್ಯ/ಅಶ್ಲೀಲ ಶಬ್ದಗಳನ್ನು ಹವ್ಯಕರು ಆಡುತ್ತಿದ್ದುದಿಲ್ಲ, ಅವು ಕೇಳಿಬಂದಿದ್ದು ನಂತರದಲ್ಲಿ. ಅಡುಗೆ ಸರಳವಾದ ಕೆಲಸ. ಬೇಸಗೆಯಲ್ಲಿ ಕುಚ್ಚಲಕ್ಕಿ ತಂದು ವರ್ಷಕ್ಕೆ ಬೇಕಾಗುವಷ್ಟು ಮೂಡೆ ಕಟ್ಟಿಡು ತ್ತಿದ್ದರು.

ಹಾಗೆಯೇ ಬೆಲ್ಲದ ಡಬ್ಬಗಳನ್ನು ಹೊಗೆ ಅಟ್ಟದ ಮೇಲೆ ಪೇರಿಸಿಡುತ್ತಿದ್ದರು. ಮನೆಯಲ್ಲಿ ತೆಂಗಿನಕಾಯಿ ಇರುತ್ತಿತ್ತು. ದೊಡ್ಡ ಬೊಡ್ಡೆ ಅಥವಾ ಚರಿಗೆಯಲ್ಲಿ ಅಕ್ಕಿ ಹೊಯ್ದು ಅನ್ನ

ಮಾಡುವುದು, ಮತ್ತೊಂದು ದೊಡ್ಡ ಅಗಲ ಪಾತ್ರೆಯಲ್ಲಿ ಹುಳಿ ಮಾಡುವುದು. ಆಗ ಯಾಕೋ ಭಾರಿ ಹಸಿವು, ಇಂದಿನ ೬ ಜನರ ಊಟವನ್ನು ಹೆಚ್ಚು ಕಡಿಮೆ ಒಬ್ಬರೇ ಮಾಡಿ ಬಿಡುತ್ತಿದ್ದರು. ಅರ್ಧ ಕೊಳಗ ಕೇಸರಿಬಾತು ತಿನ್ನುವ ತಾಕತ್ವಾನಿಗಳಿದ್ದರು.

ತರಕಾರಿ ತರುವ ಪದ್ಧತಿ ಇರಲಿಲ್ಲ. ಬಾಳೆದಿಂಡು, ಬಾಳೆಕಾಯಿ, ಮೊಟ್ಟ ಕೆಸವು, ಕರಿಕೆಸವು, ಪಂಜರ ಗಡ್ಡೆ, ಉಪ್ಪುನೀರಿಗೆ ಹಾಕಿಟ್ಟ ಮಾವಿನಕಾಯಿ, ಹಲಸಿನ ತೊಳೆ, ಮಗೆಕಾಯಿ, ಮನೆಯ ಸುತ್ತಮುತ್ತಲೇ ಬೆಳೆದ ಸವತೆ, ಬೆಂಡೆ, ಬದನೆ, ತೊಂಡೆ ಕಾಯಿ, ಬಸಳೆ ಇತ್ಯಾದಿ ಇರುತ್ತಿದ್ದವು. ತಂಬಳಿ ಮಾಡಲಂತೂ ಎಲಬದಿಗೆ ಸೊಪ್ಪು, ಇಲಿಕಿವಿ ಸೊಪ್ಪು, ಮಾವಿನ ಕಾಯಿ, ಜುಮ್ಮನಕಾಳು ಇತ್ಯಾದಿ ಲಭ್ಯವಿದ್ದವು.

ದಿನನಿತ್ಯದ ಅಡುಗೆಗೆ ಅನ್ನ, ಹುಳಿ, ತಂಬಳಿ ಮತ್ತು ಒಂದು ಗೊಜ್ಜು. ಹೆಚ್ಚು ಕಡಿಮೆ ಸಂಜೆಗೆ ಪ್ರತ್ಯೇಕ ಅಡುಗೆ ಪದ್ಧತಿ ಇರಲಿಲ್ಲ. ಹವ್ಯಕರ ಅಡುಗೆ, ಸಿಹಿತಿಂಡಿಗಳು ಅಕ್ಕಿ ಪ್ರಧಾನವಾದಂಥವು- ಸೂಳಗಡವು, ಕಡಬು, ದೊಡ್ನ ಹೀಗೆ. ಹವ್ಯಕರದು ಆತಿಥ್ಯದಲ್ಲಿ ಎತ್ತಿದ ಕೈ. ಯಾರಾದರೂ ಬಂದರೆ, ಅವರಿಗೆ ‘ಬಾರ’ ಎಂದು ಹೇಳಲೇಬೇಕು. ಬಂದು ಕುಳಿತ ನಂತರ ಅವರಿಗೆ ‘ಆಸರಿಗೆ ಬೇಕನ’ ಎಂದು ಕೇಳಲೇಬೇಕು.

ಕೂಡಲೇ, ಕನಿಷ್ಠಪಕ್ಷ ಬೆಲ್ಲ, ನೀರು ಕೊಡಲೇಬೇಕು. ಮಜ್ಜಿಗೆ ಇದ್ದವರು ‘ಮಜ್ಜಿಗೆ ಕೊಡಲನ’ ಎಂದು ಕೇಳುತ್ತಿದ್ದರು. ತಿಂಡಿ ತಿನ್ನುವ ಸಮಯದಲ್ಲಿ ಬಂದರೆ ಅವರು ಆಸರಿ ಕುಡಿಯಲೇಬೇಕು. ಕೆಲಸದವರು, ಬೇಡುವವರು ಕೂಡ ಇರಬಹುದು. ಊಟದ ಸಮಯ ದಲ್ಲಿ ಬಂದವರಿಗೂ ಅದೇ ಆತಿಥ್ಯ. ಅದೆಲ್ಲ ಮನೆಯ ಸಂಸ್ಕಾರದ ಪ್ರಶ್ನೆ. ಬೇಡುವವರಿಗೆ ಅಕ್ಕಿ ಹಾಕಿಯೇ ಕಳಿಸಬೇಕು, ಸಂಭಾವನೆಗೆ ಬರುವವರಿಗೆ ಅಡಕೆ ಕೊಟ್ಟೇ ಕಳಿಸಬೇಕು. ಹಬ್ಬ-ಹುಣ್ಣಿಮೆಗಳಿಗೆ ಸಂಬಂಽಗಳನ್ನು ಕರೆಯಲೇಬೇಕು.

ನವರಾತ್ರಿಯ ವೇಳೆ 9 ದಿನಗಳಲ್ಲಿ ಸುಮಾರು ಸಾವಿರ ಜನ ಊಟ ಮಾಡುತ್ತಿದ್ದರು. ಪ್ರತಿ ಸಂಬಂಧಿಕರ ಮನೆಗೂ ಹೋಗಿ ‘ಊಟಕ್ಕೆ ಬನ್ನಿ’ ಎಂದು ಕರೆಯಲೇಬೇಕು. ಹಾಗೆ ಬಂದವ ರಿಗೆ ಊಟ ಹಾಕಿ, ತೆಂಗಿನಕಾಯಿ ಇತ್ಯಾದಿ ನೀಡಿ ಕಳಿಸಲೇಬೇಕು. ಹವ್ಯಕರ ಕಲೆ, ಸಾಹಿತ್ಯ, ಜಾನಪದ ಶ್ರೀಮಂತವಾದುದು. ಮುಂಜಿಗೆ, ಮದುವೆಗೆ, ಸತ್ಯ ನಾರಾಯಣನಿಗೆ, ಗಣಪತಿಗೆ ಹಾಡುವ ಹಳೆಯ ಕಾಲದ, ಬಾಯಿಂದ ಬಾಯಿಗೆ ಹರಿದುಬಂದ ಹಾಡುಗಳಿವೆ.

ಮದುವೆ ಸಮಯದಲ್ಲಿ ಪರಸ್ಪರರ ಕಾಲೆಳೆಯುವ ‘ಹಳಿದ ಹಾಡು’ಗಳಿವೆ. ಯಕ್ಷಗಾನವು ಸಾಂಸ್ಕೃತಿಕ ಪ್ರಪಂಚಕ್ಕೆ ಹವ್ಯಕರ ಕೊಡುಗೆ. ಕಲೆಯ ಶ್ರೀಮಂತಿಕೆಯನ್ನು ಹೆಚ್ಚಿಸಿದ ವರು ಹವ್ಯಕರು. ಕೆರೆಮನೆ ಶಿವರಾಮ ಹೆಗಡೆ, ಶೇಣಿ ಗೋಪಾಲಕೃಷ್ಣ ಭಟ್ಟ, ಕೆರೆಮನೆ ಶಂಭು ಹೆಗಡೆ, ಚಿಟ್ಟಾಣಿ ರಾಮಚಂದ್ರ ಹೆಗಡೆ ಹೀಗೆ ಹಲವು ಹೆಸರುಗಳು ಇದಕ್ಕೆ ಸಾಕ್ಷಿ.

ಹವ್ಯಕರು ಮೂಲತಃ ಬಿಸಿನೆಸ್ ಮನಸ್ಥಿತಿಯವರಲ್ಲ, ಕೃಷಿ, ಶಿಕ್ಷಣ, ವೈದ್ಯಕೀಯ, ಕಾನೂನು, ಕಲೆ, ತಂತ್ರಜ್ಞಾನ ಇವು ಹವ್ಯಕರಿಗೆ ಹೆಚ್ಚು ಹೊಂದಿಕೊಳ್ಳುವ ಕ್ಷೇತ್ರಗಳು. ರಾಜಕೀಯದಲ್ಲಿದ್ದರೂ ತಮ್ಮ ಮೂಲ ಮೌಲ್ಯಗಳನ್ನು, ಅಂದರೆ ಉದಾರತೆ, ಸಂಕೋಚ, ವೈಯಕ್ತಿಕ ಘನತೆ ಇವನ್ನು ಬಿಡಲು ಹವ್ಯಕರಿಗೆ ಸಾಧ್ಯವಾಗುವುದಿಲ್ಲ!

(ಲೇಖಕರು ಮಾಜಿ ಪ್ರಾಂಶುಪಾಲರು ಮತ್ತು ಸಂವಹನಾ ಸಮಾಲೋಚಕರು)

ಇದನ್ನೂ ಓದಿ: Jagadeesh Maane Column: ಅದು ಭವ್ಯ ಕಾಲವಾಗಿತ್ತು...

Three labourers brutally assaulted by brick kiln owner
1:53 PM January 20, 2025

Assault case: ಮೂವರು ಕಾರ್ಮಿಕರ ಮೇಲೆ ಇಟ್ಟಿಗೆ ಭಟ್ಟಿ ಮಾಲೀಕ ಮಾರಣಾಂತಿಕ ಹಲ್ಲೆ; ಕೆಲಸಕ್ಕೆ ಬರುವುದು ವಿಳಂಬವಾಗಿದ್ದಕ್ಕೆ ರಾಕ್ಷಸಿ ಕೃತ್ಯ!

Saif Ali Khan, Ibrahim
2:50 PM January 16, 2025

Saif Ali Khan: 1,200 ಕೋಟಿ ರೂ. ಆಸ್ತಿಗಳ ಒಡೆಯ ಸೈಫ್‌ ಆಲಿ ಖಾನ್‌ನನ್ನು‌ ಆಟೋದಲ್ಲಿ ಆಸ್ಪತ್ರೆಗೆ ಕರೆದೊಯ್ದ ಪುತ್ರ ಇಬ್ರಾಹಿಂ; ಕಾರಣವೇನು?

Student dies 1
8:51 PM January 18, 2025

Heart Attack: ಕಾಲೇಜು ಮುಗಿಸಿ ಹೋಗುವಾಗ ಹೃದಯಾಘಾತವಾಗಿ ವಿದ್ಯಾರ್ಥಿನಿ ಸಾವು

robbery case shooting
1:49 PM January 16, 2025

Murder Case: ಸೆಕ್ಯೂರಿಟಿ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ ಮಾಡಿ 93 ಲಕ್ಷ ರೂ. ದರೋಡೆ

BBK 11 Mid week Elimination (1)
9:12 PM January 15, 2025

BBK 11: ಇಂದೇ ನಡೆಯಲಿದೆ ಮಿಡ್ ವೀಕ್ ಎಲಿಮಿನೇಷನ್: ಔಟ್ ಆದ ಸ್ಪರ್ಧಿ ಇವರೇ ನೋಡಿ

Saif ali Khan (1)
9:38 AM January 18, 2025

Saif Ali Khan: ರಕ್ತಸಿಕ್ತವಾದ ಬಟ್ಟೆ, ಸಂಪೂರ್ಣ ಅಸ್ವಸ್ಥರಾಗಿದ್ದ ಸೈಫ್‌! ಆ ರಾತ್ರಿ ನಡೆದಿದ್ದಾದರೂ ಏನು? ಆಟೋ ಡ್ರೈವರ್‌ ಹೇಳಿದ್ದೇನು?

Naga Sadhus
11:15 PM January 18, 2025

Maha Kumbh Mela: ಕುಂಭಮೇಳದ ವೇಳೆ ನಾಗ ಸಾಧುಗಳು ಬರುವುದೆಲ್ಲಿಂದ? ಬಳಿಕ ಅಪ್ರತ್ಯಕ್ಷರಾಗುವುದೇಕೆ? ಅವರ ನಿಗೂಢ ಪ್ರಪಂಚ ಹೇಗಿದೆ? ಇಲ್ಲಿದೆ ಸಮಗ್ರ ವಿವರ

Chaithra Kundapura remuneration (1)
7:13 AM January 16, 2025

BBK 11: ಬಿಗ್ ಬಾಸ್​ನಿಂದ ಹೊರಬಂದ ಚೈತ್ರಾ ಕುಂದಾಪುರಗೆ ಸಿಕ್ಕ ಹಣ ಎಷ್ಟು ಗೊತ್ತೇ?

Honnamaradi jatre
5:53 PM January 15, 2025

Honnamaradi Jatre: ವೈಭವದಿಂದ ನಡೆದ ಹೊನ್ನಮರಡಿ ಜಾತ್ರೆ; ಶ್ರೀ ರಂಗನಾಥಸ್ವಾಮಿ ದರ್ಶನ ಪಡೆದ ಸಾವಿರಾರು ಭಕ್ತರು

Eshwara Khandre
6:54 PM January 16, 2025

Bidar ATM Robbery: ಬೀದರ್ ಎಟಿಎಂ ದರೋಡೆ ಪ್ರಕರಣ; ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮಕ್ಕೆ ಸಚಿವ ಖಂಡ್ರೆ ಸೂಚನೆ