Harish Kera Column: ಶಾಲೆಗೆ ನೂರು, ನೆನಪುಗಳು ನೂರಾರು
ನನ್ನಂತೆ ಇಲ್ಲಿ ಓದುಬರಹ ಕಲಿತ ಸಾವಿರಾರು ಮಂದಿಯ ಭಾವಕೋಶದಲ್ಲಿ ಈ ಶಾಲೆಗೆ ವಿಶೇಷ ಸ್ಥಾನ. ಒಂದು ಪ್ರಾಥಮಿಕ ಶಾಲೆಗೆ ನೂರು ವರ್ಷ ತುಂಬುವುದು ಯಾಕಾದರೂ ಮುಖ್ಯ ವಾಗಬೇಕು? ಅದು ಬರಿಯ ಸರಕಾರಕ್ಕಷ್ಟೇ ಸಾಧನೆಯ ಸಂಗತಿಯಲ್ಲ. ಅದು ಊರಿನ ಹೆಮ್ಮೆಯ ಕಿರೀಟದ ಗರಿ.
ಕಾಡುದಾರಿ
ಹರೀಶ್ ಕೇರ
ಊರಿಗೊಂದು ಸರಕಾರಿ ಶಾಲೆಯಿರುವುದು ಆ ಊರಿನ ಸೌಭಾಗ್ಯ. ಸರಕಾರಿ ಶಾಲೆಗಳು ಮುಚ್ಚುತ್ತಿ ರುವ ಹೊತ್ತಿನಲ್ಲಿ ಈ ಮಾತನ್ನು ಮತ್ತೆ ಮತ್ತೆ ಹೇಳಬೇಕು. ಖಾಸಗಿ ಶಾಲೆಗಳು ಒಬ್ಬ ವ್ಯಕ್ತಿಯನ್ನಷ್ಟೆ ಶ್ರೀಮಂತಗೊಳಿಸಬಲ್ಲುದಾದರೆ, ಸರಕಾರಿ ಶಾಲೆಗಳು ಇಡೀ ಊರನ್ನೇ ಶ್ರೀಮಂತಗೊಳಿಸಬಲ್ಲುವು.
ಹೀಗೇ ನೋಡಿದರೆ ಎಲ್ಲ ಗ್ರಾಮೀಣ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗಳಂತೆ, ಸುತ್ತಮುತ್ತ ಹಸಿರು ಕಾಡು ಗುಡ್ಡಗಳ ನಡುವೆ, ಸಾಗಿಹೋಗುವ ಒಂದು ಡಾಮರು ರಸ್ತೆಯ ಪಕ್ಕದಲ್ಲಿ, ಆಚೆ ಈಚೆ ನಿಂತ ಕೆಲವು ಅಂಗಡಿ ಮುಂಗಟ್ಟುಗಳ ನಡುವೆ ಈ ಶಾಲೆಯೂ ಇದೆ.
ಅರ್ಧ ಭಾಗ ಮಂಗಳೂರು ಹಂಚು ಹೊದ್ದ ಹಳೆಯ ಕಟ್ಟಡ, ಇನ್ನರ್ಧ ಹೊಸದಾಗಿ ಕಟ್ಟಿಸಿದ ತಾರಸಿ ಕಟ್ಟಡ. ನಡುವೆ ಮಕ್ಕಳು ಆಟವಾಡುತ್ತಿರುವ ಕೆಮ್ಮಣ್ಣಿನ ಅಂಗಳ ಮತ್ತು ಆಗಾಗ ಕಲರವ ಎಬ್ಬಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುವ ಸಭಾಂಗಣ. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ದೇವಚಳ್ಳ ಪ್ರಾಥಮಿಕ ಶಾಲೆಗೆ ನೂರು ವರ್ಷ ತುಂಬಿತು ಅಂತ ಯಾರಾದರೂ ಹೇಳದಿದ್ದರೆ ಗೊತ್ತೇ ಆಗುವುದಿಲ್ಲ.
ಆದರೆ ನನ್ನಂತೆ ಇಲ್ಲಿ ಓದುಬರಹ ಕಲಿತ ಸಾವಿರಾರು ಮಂದಿಯ ಭಾವಕೋಶದಲ್ಲಿ ಈ ಶಾಲೆಗೆ ವಿಶೇಷ ಸ್ಥಾನ. ಒಂದು ಪ್ರಾಥಮಿಕ ಶಾಲೆಗೆ ನೂರು ವರ್ಷ ತುಂಬುವುದು ಯಾಕಾದರೂ ಮುಖ್ಯ ವಾಗಬೇಕು? ಅದು ಬರಿಯ ಸರಕಾರಕ್ಕಷ್ಟೇ ಸಾಧನೆಯ ಸಂಗತಿಯಲ್ಲ. ಅದು ಊರಿನ ಹೆಮ್ಮೆಯ ಕಿರೀಟದ ಗರಿ.
ಇದನ್ನೂ ಓದಿ: Harish Kera Column: ಸಮಯಾಸಮಯವುಂಟೆ ಭಕ್ತವತ್ಸಲ ನಿನಗೆ !
ಅಲ್ಲಿ ಕಲಿತ ಮಕ್ಕಳ, ಇಂದು ಹಿರಿಯರಾಗಿರುವವರ ಮನೋಮಂದಿರದ ಸಿರಿ. ಅಲ್ಲಿ ಕಲಿಸಿದ ಟೀಚರ್‌ಗಳ ಕೈಗಳು ಹಚ್ಚಿದ ದೀಪಮಾಲೆ. ಅಲ್ಲಿನ ಬೆಂಚು ಡೆಸ್ಕುಗಳು ಹೇಳುವ ಕತೆಗಳು. ಬೆಲ್ ಹೊಡೆದ ಸದ್ದಿಗೆ ಹೊರಬಂದು ಅಂಗಳದಲ್ಲಿ ಚಲಿಸುವ ರಂಗೋಲಿಗಳಂತೆ ಹರಡಿಕೊಳ್ಳುವ ಮಕ್ಕಳಿಗೆ ತಮ್ಮ ಹಿಂದೆ ನೂರು ವರ್ಷದ ಇತಿಹಾಸವಿದೆ ಎಂದು ತಿಳಿದಿರಲಿಕ್ಕಿಲ್ಲ. ಆದರೆ ಹಲವು ಪರಿವರ್ತನೆಗಳನ್ನು ಕಂಡ ಶಾಲೆಯ ಕಟ್ಟಡ ನಕ್ಕ ಮುಗುಳುನಗುವಿನಲ್ಲಿ ಸಾವಿರಾರು ಮನೋ-ಬುದ್ಧಿಗಳನ್ನು ಬೆಳಗಿದ ಬೆಳಕಿನ ಕಿಡಿಗಳಿರುತ್ತವೆ.
ಹೀಗಾಗಿ ಯಾವುದೇ ಒಂದು ಶಾಲೆ ನೂರು ವರ್ಷಗಳನ್ನು ಕಂಡು, ಇಂದೂ ದೃಢವಾಗಿ ನಡೆಯು ತ್ತಿದೆ ಎಂದಾದರೆ, ಅದು ಇತಿಹಾಸದಲ್ಲಿ ದಾಖಲಾಗಬೇಕಾದ ವಿಷಯವೇ. 1920ರಲ್ಲಿ ಆಗಿನ ಡಿಸ್ಟ್ರಿಕ್ಟ್ ಬೋರ್ಡ್ ಎಲಿಮೆಂಟರಿ ಶಾಲೆಯಾಗಿ ಎಲಿಮಲೆ ಸ್ಕೂಲ್ ಆರಂಭವಾಯಿತು. ಇದಕ್ಕೆ ವಿಸ್ತಾರವಾದ ಜಾಗವನ್ನು ಅಹಮದ್ ಸಾಹುಕಾರ್ ಎಂಬ ಹಿರಿಯರು ಆಗ ದಾನ ಮಾಡಿದರು ಎಂಬ ಒಂದು ಸಂಗತಿಯನ್ನು ಇಲ್ಲಿ ನೆನೆಯುವಾಗ, ಹರೇಕಳ ಹಾಜಬ್ಬ ಅವರ ಸಾಧನೆಯೂ ಜತೆಜತೆಗೇ ನೆನಪಾಗಿ ಹೃದಯ ತುಂಬಿಬರುತ್ತದೆ.
ಸ್ವತಃ ಅಹಮದ್ ಸಾಹುಕಾರರು ಎಷ್ಟು ಕಲಿತಿದ್ದರೋ ಇಂದು ತಿಳಿಯದು; ಆದರೆ ಊರಿನ ಮಕ್ಕಳೆಲ್ಲ ಕಲಿತು ದೊಡ್ಡ ಸಾಧಕರಾಗಲಿ ಎಂಬ ಲೋಕಹಿತದ ಅಖಂಡ ಬಯಕೆಯೊಂದು ಅವರಲ್ಲಿ ಇದ್ದಿತೆಂಬುದು ಮುಖ್ಯ. 1960ರಲ್ಲಿ ಹಿರಿಯ ಪ್ರಾಥಮಿಕ ಶಾಲೆಯಾಗಿ ಮೇಲ್ದರ್ಜೆಗೇರಿದ ಈ ಶಾಲೆಯಲ್ಲಿ ಇಂದಿನವರೆಗೂ ಸುಮಾರು 4500 ಮಕ್ಕಳು ಕಲಿತಿರಬಹುದು ಎಂಬ ಅಂದಾಜು. ಸುತ್ತಮುತ್ತಲಿನ ದೇವಚಳ್ಳ, ನೆಲ್ಲೂರು ಕೆಮ್ರಾಜೆ, ಅಮರಮುಡ್ನೂರು, ಮರ್ಕಂಜ ಗ್ರಾಮಗಳಿಗೆಲ್ಲ ಆಗ ಇದೇ ಕೇಂದ್ರ. ಆಗ ಮೂರು ಕೊಠಡಿಗಳ ಮಂಗಳೂರು ಹೆಂಚಿನ ಪುಟ್ಟ ಕಟ್ಟಡವಾಗಿ ಆರಂಭ ವಾದ ಇದು ಇಂದು ಸುಸಜ್ಜಿತವಾಗಿ ಬೆಳದುದರಲ್ಲಿ ನಮ್ಮ ನಾಡಿನ ಎಲ್ಲ ಸರಕಾರಿ ಶಾಲೆಗಳ ಏಳುಬೀಳುಗಳ ಕತೆಯನ್ನು ಗುರುತಿಸಬಹುದು.
ಕನ್ನಡ ಪ್ರಾಥಮಿಕ ಶಾಲೆಯಲ್ಲಿ ಕಲಿತವನು ತಾನು ಎಂದು ಹೆಮ್ಮೆಯಲ್ಲಿ ಹೇಳಿಕೊಳ್ಳುವ ಹಳೆಯ ವಿದ್ಯಾರ್ಥಿಗಳಲ್ಲಿ ನಾವು ಇಂದು ವಿಜ್ಞಾನಿಗಳು, ವೈದ್ಯರು, ಎಂಜಿನಿಯರ್ ಗಳು, ಅಧಿಕಾರಿಗಳನ್ನೆ ಕಾಣ ಬಹುದು. ಕಳೆದ ವರ್ಷ ಎಲ್‌ಕೆಜಿ, ಯುಕೆಜಿಯನ್ನೂ ಶುರು ಮಾಡಿದ ಈ ಶಾಲೆಯಲ್ಲಿ ಈ ವರ್ಷ ಆಂಗ್ಲ ಮಾಧ್ಯಮ ಒಂದನೇ ತರಗತಿ ಕೂಡ ಶುರುವಾಗುತ್ತಿದೆ.
ಒಂದು ಸಮಾಜ ಬದಲಾದಂತೆ ಅಲ್ಲಿನ ಶಿಕ್ಷಣವನ್ನು ನೋಡುವ ನೋಟ ಕೂಡ ಬದಲಾಗುತ್ತದೆ. ಮೂರು ದಶಕಗಳ ಹಿಂದೆ ಇಲ್ಲಿ ಪ್ರತಿವರ್ಷ ಸರಾಸರಿ ೩೫೦ ಮಕ್ಕಳು ಇರುತ್ತಿದ್ದರು. ಈ ವರ್ಷ 167 ಮಕ್ಕಳು ಮಾತ್ರ ಇದ್ದಾರೆ. ಇದರ ಎರಡು ಪಟ್ಟು ಮಕ್ಕಳು ಹೊಸದಾಗಿ ಶುರುವಾದ ಇಂಗ್ಲಿಷ್ ಮೀಡಿ ಯಂ ಶಾಲೆಗಳಿಗೆ ಹೋಗುತ್ತಿದ್ದಾರೆ. ಶಾಲೆಯ ಕಟ್ಟಡವೇನೋ ದೃಢವಾಗಿದೆ, ಕನ್ನಡದ ಪಂಚಾಂಗ ಮಾತ್ರ ನಡುಗುತ್ತಿದೆ, ಆ ಮಾತು ಬೇರೆ.
ಶಾಲೆಯೆಂದರೆ ಕಟ್ಟಡ ಮಾತ್ರವೇ? ಹಳೆ ವಿದ್ಯಾರ್ಥಿಗಳ ಭಾವಕೋಶದಲ್ಲಿ ಶಾಲೆಯೆಂದರೆ ಕಟ್ಟಡದ ಕೆಲವಂಶ ಮಾತ್ರ. ಉಳಿದ ಭಾಗವನ್ನು ಅಲ್ಲಿ ಕಲಿಸಿದ ಮೇಸ್ಟ್ರುಗಳು, ‘ಟೀಚಾ’ಗಳು, ಸಂಗಡ ಕುಳಿತ ಸಹಪಾಠಿಗಳು ತುಂಬಿಕೊಳ್ಳುತ್ತಾರೆ. ‘ಸವಿ ಸವಿ ನೆನಪು ಸಾವಿರ ನೆನಪು’ ಎಂದು ಒಂದೊಂದನ್ನೇ ಹೆಕ್ಕುವಂತಾಗುತ್ತದೆ. ಆರರಿಂದ ಹದಿನಾರು ವರ್ಷ- ಅದು ಮನುಷ್ಯನ ಒಟ್ಟಾರೆ ಪ್ರಜ್ಞೆಯ ಸ್ವರೂಪ ವನ್ನು ನಿರ್ಧರಿಸುವ ಕಾಲ.
ಯಾರೋ ಮೇಸ್ಟ್ರು ನಿಮ್ಮಲ್ಲಿರುವ ಹಾಡುವ ಪ್ರತಿಭೆಯನ್ನು ಗುರುತಿಸುತ್ತಾರೆ. ಇನ್ಯಾರೋ ಟೀಚರು ನಿಮ್ಮಲ್ಲಿರುವ ನೃತ್ಯ ಪ್ರತಿಭೆಯನ್ನು ಹೊರತೆಗೆಯುತ್ತಾರೆ. ಇಂದು ನೀವು ಒಳ್ಳೆಯ ಗಾಯಕರೋ ಡ್ಯಾನ್ಸರೋ ಆಗಿದ್ದೀರಿ. ಗಣಪತಿ ಮಾಸ್ಟ್ರು ವಾರದ ಕೊನೆಯ ಸಾಂಸ್ಕೃತಿಕ ಕಾರ್ಯಕ್ರಮದ ವೇಳೆ ನಿಮ್ಮ ಕೈಗೆ ಬಲವಂತವಾಗಿ ಮೈಕು ಕೊಟ್ಟು ‘ಭಾಷಣ ಮಾಡು’ ಎಂದು ಹೇಳುತ್ತಾರೆ.
ಅದುವರೆಗೂ ವೇದಿಕೆ ಎಂದರೆ ಮೈಕೈ ನಡುಗುತ್ತಿತ್ತು; ಅಂದಿನಿಂದ ನೀವು ಹೊಸ ಮನುಷ್ಯ ನಾಗಿ ದ್ದೀರಿ. ಎಷ್ಟು ಜನರ ಮುಂದೆ ಮಾತನಾಡಲೂ ಅಂಜಿಕೆಯಾಗುವುದಿಲ್ಲ.ನನಗೆ ಹೀಗೆ ಸಿಕ್ಕಿದವರು ರಾಮ ಅಜಿಲರು. ತಂಪು ಹೊತ್ತಿನಲ್ಲಿ ನೆನೆಯಬೇಕು ಅವರನ್ನು. ಶಾಲೆಯ ಲೈಬ್ರರಿ ಯಲ್ಲಿದ್ದ ಶಿವರಾಮ ಕಾರಂತರ, ನಾ.ಡಿಸೋಜರ ಕಾದಂಬರಿಗಳು, ಕುವೆಂಪು ಪದ್ಯಗಳನ್ನೆಲ್ಲ ಕೊಟ್ಟು ಓದಿಸಿ ದರು. ಕ್ಲಾಸಿಗೆ ಬಂದಾಗ ಪಾಠಕ್ಕಿಂತ ಹೆಚ್ಚಾಗಿ ಕತೆ ಹೇಳಿದರು.
‘ಶಾಲಾ ದಿನಕ್ಕೆ ಯಕ್ಷಗಾನ ತಾಳಮದ್ದಲೆ ಮಾಡುತ್ತೇವೆ’ ಎಂದರೆ ಸೈ ಎಂದು ರಿಹರ್ಸಲ್ ಮಾಡಿಸಿ ತಾವೇ ಎಲ್ಲಿಂದಲೋ ತಂದ ಚೆಂಡೆ ಬಾರಿಸಿದರು. ಮತ್ತೊಮ್ಮೆ ಶಾಲಾ ವಾರ್ಷಿಕೋತ್ಸವದ ದಿನ ‘ಕೌಂಡ್ಲಿಕ ವಧೆ’ ಯಕ್ಷಗಾನ ಆಡಿಸಿದ್ದರು. ಇದು ದ್ರೌಪದಿಯ ಪ್ರತಾಪದ ಕತೆ ಹೊಂದಿರುವ ಯಕ್ಷ ಗಾನ. ಇದರಲ್ಲಿ ದ್ರೌಪದಿ ಕೌಂಡ್ಲಿಕ ಎಂಬ ರಾಕ್ಷಸನನ್ನು ಕೊಲ್ಲುತ್ತಾಳೆ.
ರಾಮ ಅಜಿಲರೇ ಕೌಂಡ್ಲಿಕನ ಪಾತ್ರ ಮಾಡಿದರು. ಅದು ತಡರಾತ್ರಿ ಬೆಳಗಿನ ಜಾವ ನಿದ್ರೆಗಣ್ಣಿ ನಲ್ಲಿದ್ದಾಗ ನಡೆದ ಪ್ರಸಂಗ. ಅವರು ಅಂದು ರಂಗದ ಮೇಲೆ ಅಬ್ಬರಿಸಿದ ರೀತಿ ನೋಡಿದರೆ, ಕ್ಲಾಸಿ ನಲ್ಲಿ ನಿತ್ಯ ಕಾಣುವ ಸಾಧು ಸ್ವಭಾವದ ರಾಮ ಮಾಸ್ಟ್ರು ಇವರೇನಾ ಎಂದುಕೊಳ್ಳು ವಂತಾಗಿತ್ತು. ಸೋಮಣ್ಣ ಮಾಸ್ಟ್ರು ವರ್ಷಂಪ್ರತಿ ನಡೆಯುತ್ತಿದ್ದ ಶಾರದಾ ಪೂಜೆಯ ಹೊತ್ತಿಗೆ ಒಂದಷ್ಟು ಹಣ ಕೊಟ್ಟು ‘ಹೋಗಿ ಮಮ್ಮದೆಯ ಅಂಗಡಿಯಿಂದ ಅವಲಕ್ಕಿ ಬೆಲ್ಲ ತೆಂಗಿನಕಾಯಿ ತೆಗೆದುಕೊಂಡು ಬನ್ನಿ’ ಎಂದು ಕಳಿಸುತ್ತಿದ್ದರು. ಶಾಲೆಯ ಗಾರ್ಡನ್ ನಲ್ಲಿ ಬಿಡುತ್ತಿದ್ದ ದೀವಿ ಹಲಸು, ತೆಂಗಿನಕಾಯಿ ಗಳನ್ನೆಲ್ಲ ಮಕ್ಕಳ ನಡುವೇ ಏಲಂ ಮಾಡುತ್ತಿದ್ದರು.
ಅದರ ವ್ಯಾಪಾರದ ಅನುಭವ ಆಗುತ್ತಿತ್ತು. ಶಾರದಾ ಪೂಜೆಗೆ ಪುಸ್ತಕಗಳನ್ನು ಜೋಡಿಸುವಲ್ಲಿ ರಶೀದ್, ಫಾತಿಮಾ, ಆಂಟನಿ ನೆರವಾಗುತ್ತಿದ್ದರು. ಪದ್ಮಯ್ಯ ಮಾಸ್ಟ್ರು, ಬೊಳಿಯಮ್ಮ ಟೀಚರ್, ವೆಂಕಟರಮಣ ಮಾಸ್ಟ್ರು, ಗಣಪಯ್ಯ ನಾಯಕರು ಎಲ್ಲರೂ ಒಂದೊಂದು ಗುಣವನ್ನು ಮಕ್ಕಳಲ್ಲಿ ರೂಢಿಸಿದವರು. ಇವೆ ನನ್ನೊಬ್ಬನ ಅನುಭವ ಅಲ್ಲ; ಹಳ್ಳಿಯ ಪ್ರಾಥಮಿಕ ಶಾಲೆಗಳಲ್ಲಿ ಕಲಿತ ಎಲ್ಲರ ಅನುಭವ, ಆದ್ದರಿಂದ ಇದು ಸಾರ್ವತ್ರಿಕವಾದದ್ದು.
ನೆನಪಿನ ರಂಗಸ್ಥಳದಲ್ಲಿ ಎಷ್ಟೊಂದು ಗೆಳೆಯರು, ಗೆಳತಿಯರು ಹಾದುಹೋಗುತ್ತಾರೆ. ಪಕ್ಕದಲ್ಲಿ ಕುಳಿತವರು, ಹಿಂದೆ ಕುಳಿತು ಬೆನ್ನಿನಲ್ಲಿ ಬರೆದವರು, ಕಬಡ್ಡಿಯಲ್ಲಿ ಸದಾ ಪೈಪೋಟಿ ಕೊಡುತ್ತಿದ್ದ ವರು, ಗಣಿತ ಪೀರಿಯೆಡ್‌ನಲ್ಲಿ ಮೂತ್ರಶಂಕೆ ಅಂತ ಸುಳ್ಳು ಹೇಳಿ ಗುಡ್ಡಕ್ಕೆ ಓಡುತ್ತಿದ್ದಾಗ ಜತೆ ನೀಡಿ ದವರು, ಹೋಂವರ್ಕ್ ಕಾಪಿ ಮಾಡಲು ಕೊಡುತ್ತಿದ್ದವರು, ರಾಕೆಟ್ ಮಾಡಿ ಎಸೆಯುತ್ತಿದ್ದವರು, ಮಾರ್ಕು ತೆಗೆಯುತ್ತಿದ್ದವರು ಮತ್ತು ಸೊನ್ನೆ ಸುತ್ತುತ್ತಿದ್ದವರು... ಎಲ್ಲ ಎಲ್ಲಿದ್ದಾರೋ.
ಎಲ್ಲಾ ಒಮ್ಮೊಮ್ಮೆ ಸಹಪಾಠಿಗಳು ಸಿಗುತ್ತಾರೆ. ಅಂದಿನ ದಿನಗಳನ್ನು ಇಂದಿನ ಯಾವ ಲೇಪವಿಲ್ಲದೆ ಮುಗ್ದವಾಗಿ ನೆನಪಿಸಿಕೊಂಡು ನಕ್ಕು ನಲಿಯುವ ಮನಸ್ಸು ಎದುರಾದರೆ ಅದು ಪುಣ್ಯ. ಎಷ್ಟೋ ಸಲ ಸರಿದು ಬಿಟ್ಟಿರುತ್ತೇವೆ ನಮ್ಮದೇ ಆದ ಬದುಕಿನ ಸಮುದ್ರಗಳಂಚಿಗೆ. ಅಂಥ ಗೆಳೆಯರನ್ನು ಈ ಶಾಲೆ ಗಳು ಒಟ್ಟುಗೂಡಿಸಲಿ. ಮತ್ತು ಇದಕ್ಕೆ ಶಾಲೆಗಳಿಗೆ ನೂರಾಗುವುದಕ್ಕೂ ಕಾಯುವುದು ಬೇಡ.
ಖಾಸಗಿ ಶಾಲೆಗಳಂತಲ್ಲದೆ, ಸರಕಾರಿ ಶಾಲೆಯೆಂದರೆ ಸಮುದಾಯದ ಆಸ್ತಿ. ಅಲ್ಲಿ ಜಾತಿ-ಧರ್ಮ-ಲಿಂಗ-ವಯಸ್ಸಿನ ಭೇದವಿಲ್ಲದೆ ಎಲ್ಲರೂ ಬರುತ್ತಾರೆ, ಬರಬೇಕು. ಮಿತ್ರ ಸಮಾಜದವರು ನಾಟಕ ಆಡಿದರೆ, ಗೆಳೆಯರ ಬಳಗದವರು ಯಕ್ಷಗಾನ ಮಾಡಿದರೆ ರಿಹರ್ಸಲ್ ಮಾಡುವುದಕ್ಕೆ ಇದೇ ಜಾಗ. ದುರ್ಗಾಪರಮೇಶ್ವರಿ ಯಕ್ಷಗಾನ ಮಂಡಳಿಯ ಶನಿವಾರ ರಾತ್ರಿಯ ತಾಳಮದ್ದಳೆ ಕೂಟಕ್ಕೂ ಶಾಲೆಯ ಜಗಲಿಯೇ ಆಶ್ರಯ. ಮಹಿಳಾ ಸಂಘದ ವಾರದ ಸಭೆಗೆ ಇದೇ ತಾಣ.
ಪಂಚಾಯತಿಯ ಹಾಲ್‌ಗಳಂಥ ಸಾಮುದಾಯಿಕ ಜಾಗಗಳು ಇನ್ನೂ ರೂಪುಗೊಂಡಿಲ್ಲದ ಕಾಲ ದಲ್ಲಿ ಶಾಲಾ ಜಗುಲಿಗಳೇ ಊರವರು ಸೇರುವ ನೆಲೆ. ಹೀಗಾಗಿ ಊರಿನವರಿಗೆ ಶಾಲೆಯ ಮೇಲೆ ಎಲ್ಲಿಲ್ಲ ದ ಹಕ್ಕು. ಇಂದು ಅದೇ ಹಕ್ಕೇ ಶಾಲೆಯನ್ನು ಚಂದಗೊಳಿಸುವಲ್ಲಿಯೂ ನೆರವಾಗಿದೆ. ಊರಿನ ಪ್ರತಿ ಯೊಬ್ಬನೂ ಈ ಶಾಲೆ ತನ್ನದು ಎಂಬ ಭಾವನೆಯಲ್ಲಿ ದುಡ್ಡು ಹಾಕಿ, ಶ್ರಮದಾನ ಮಾಡಿ ಶಾಲೆಗೆ ಹೊಸ ಕೊಠಡಿಗಳು, ರಂಗಮಂದಿರ ಎಲ್ಲ ಮಾಡಿಸಿzರೆ. ಇದು ಪ್ರತಿ ಊರಿನಲ್ಲೂ ಆಗಬೇಕು.
ಊರಿಗೊಂದು ಸರಕಾರಿ ಶಾಲೆಯಿರುವುದು ಆ ಊರಿನ ಸೌಭಾಗ್ಯ. ಸರಕಾರಿ ಶಾಲೆಗಳು ಮುಚ್ಚು ತ್ತಿರುವ ಹೊತ್ತಿನಲ್ಲಿ ಈ ಮಾತನ್ನು ಮತ್ತೆ ಮತ್ತೆ ಹೇಳಬೇಕು. ಖಾಸಗಿ ಶಾಲೆಗಳು ಒಬ್ಬ ವ್ಯಕ್ತಿ ಯನ್ನಷ್ಟೆ ಶ್ರೀಮಂತಗೊಳಿಸಬಲ್ಲುದಾದರೆ, ಸರಕಾರಿ ಶಾಲೆಗಳು ಇಡೀ ಊರನ್ನೇ ಶ್ರೀಮಂತ ಗೊಳಿಸ ಬಲ್ಲುವು. ಅದರ ಶ್ರೀಮಂತಿಕೆ ಅದರ ಬಹುತ್ವ, ಎಲ್ಲರನ್ನು ಒಳಗೊಳ್ಳುವ ಸಾಂವಿಧಾನಿಕ ನೆಲೆ, ಇಡೀ ಸಮುದಾಯವನ್ನು ಆವರಿಸಿಕೊಳ್ಳುವ ವೈಶಾಲ್ಯಗಳಲ್ಲಿದೆ. ಒಂದು ಊರಿನ ಭಾವಕೋಶ ವಾಗಿ ಶಾಲೆ ಬೆಳೆಯುವುದು ಮತ್ತು ಆ ಶಾಲೆಯಲ್ಲಿ ಬೆಳೆದವರು ಅದನ್ನು ತಮ್ಮ ಜೀವನವಿಡೀ ಎದೆಯಲ್ಲಿ ಪದಕದಂತೆ ಧರಿಸಿರುವುದು ಎಷ್ಟು ಚಂದ!