Vinayak V Bhat Column: ಕನಕದಾಸರ ರಾಮ (ಧಾನ್ಯ) ಚರಿತೆ: ಸಾರ ಸಂಗ್ರಹ
ಭಾರದ್ವಾಜ ಮುನಿಗಳ ಆಶ್ರಮಕ್ಕೆ ಬಂದ ಶ್ರೀರಾಮನು ಅವರಿಗೆ ನಮಿಸಿ, ನಿಮ್ಮ ಅಗ್ನಿಹೋತ್ರವೇ ಮುಂತಾದ ನಿತ್ಯ-ನೈಮಿತ್ತಿಕ ಕರ್ಮಗಳು, ಜಪ-ತಪಗಳು ಸುಸೂತ್ರವಾಗಿ ನಡೆಯುತ್ತಿವೆಯೇ? ಕ್ರೂರ ದಾನವರಿಂದ ಏನೂ ದುರ್ಘಟನೆಗಳು ಸಂಭವಿಸಲಿಲ್ಲ ತಾನೆ? ಎನ್ನುತ್ತಾ ಅವರ ಕುಶಲೋಪರಿಗಯ್ಯು ತ್ತಾನೆ. ಹೀಗೆ ಮಾರ್ಗ ಮಧ್ಯದಲ್ಲಿ ಋಷಿಮುನಿಗಳನ್ನು ಸಂದರ್ಶಿಸುತ್ತಾ ಸಾಗುವ ಶ್ರೀರಾಮನ ಪರಿವಾರದ ಅಯೋಧ್ಯಾಪುರದವರೆಗಿನ ಪ್ರಯಾಣವನ್ನು ಬಹು ಸುಂದರವಾಗಿ ದಾಸರು ವರ್ಣಿ ಸುತ್ತಾ ಸಾಗುತ್ತಾರೆ.


ವಿದ್ಯಮಾನ
(ಭಾಗ-3)
ಮಸೆದುದಿತ್ತಂಡಕ್ಕೆ ಮತ್ಸರಪಿಸುಣ ಬಲರತಿ ನಿಷ್ಠುರರು ವಾದಿಸಲು ಕಂಡನು ನೃಪತಿ ಮನದಲಿ ನೋಡಿ ನಸುನಗುತ ಹಿಸುಣರಿ ವದಿರ ಮತ್ಸರವ ಮಾಣಿಸುವ ಹದನೇನೆನುತ ಯೋಚಿಸಿದ ಸುರ ಮುನಿಪರ ನೋಡೆ ಗೌತಮ ಮುನಿಪನಿಂತೆಂದ"- ಹೀಗೆ, ಭತ್ತ ಹಾಗೂ ರಾಗಿಯ ನಡುವೆ ತೀವ್ರವಾದ ವಾಗ್ವಾದ ನಡೆಯುತ್ತಿರುವುದನ್ನು ಕಂಡು ರಾಮನು ಇವರಿಬ್ಬರ ನಡುವಿನ ಮತ್ಸರವನ್ನು ಮಾಣಿಸುವ ಬಗೆ ಹೇಗೆ ಎಂದು ಯೋಚಿಸಿ, “ಪರಮ ಧಾನ್ಯದೊಳಿಬ್ಬರೇ ಇವರಿರಲಿ ಸೆರೆಯೊಳಗಾರು ತಿಂಗಳು ಹಿರಿದು-ಕಿರಿದೆಂಬಿವರ ಪೌರುಷವರಿಯಬಹುದಿನ್ನು ಪುರಕೆ ಗಮನಿಸಿ ನಾವು ನಿಮ್ಮನು ಕರೆಸುವೆವು ಕೇಳೆನುತಯೋಧ್ಯಾ ಪುರಿಗೆ ಪಯಣವ ಮಾಡಹೇಳಿದನಾ ವಿಭೀಷಣಗೆ".
“ಅರಸರಾದ ನಮಗೆ ಈ ನ್ಯಾಯವನ್ನು ನಿರ್ಣಯಿಸುವುದು ಬಹಳ ಕಷ್ಟದ ಕೆಲಸವಾಗಿದೆ. ಆದ್ದ ರಿಂದ, ಹರಿಹರ ಬ್ರಹ್ಮರನ್ನೇ ಅಯೋಧ್ಯೆಗೆ ಕರೆಸುತ್ತೇವೆ. ಅವರೇ ಈ ಸಮಸ್ಯೆಯನ್ನು ಬಗೆಹರಿಸಲಿ. ಇಲ್ಲಿರುವ ಧಾನ್ಯಗಳ ಪೈಕಿ, ಭತ್ತ ಹಾಗೂ ನರೆದಲೆಗಗಳು ಇನ್ನು ಆರು ತಿಂಗಳವರೆಗೂ ಸೆರೆಯೊಳ ಗಿರಲಿ. ಆಮೇಲೆ ಇವರನ್ನು ಅಯೋಧ್ಯೆಗೆ ಕರೆಸಿ ಇವರಿಬ್ಬರಲ್ಲಿ ಹೆಚ್ಚು ಯಾರು ಕಡಿಮೆ ಯಾರು ಎಂದು ತೀರ್ಮಾನಿಸೋಣ, ಇನ್ನು ಅಯೋಧ್ಯೆಗೆ ಹೊರಡೋಣ" ಎಂದು ಶ್ರೀರಾಮ ಆಜ್ಮಾಪಿಸು ತ್ತಾನೆ.
ಅಂತೆಯೇ, ದಾನವ ಹಾಗೂ ವಾನರ ಯೂಥದೊಡನೆ ರಾಮ ಲಕ್ಷ್ಮಣಾದಿಗಳು ಅಯೋಧ್ಯೆಯೆಡೆಗೆ ಪ್ರಯಾಣಿಸುತ್ತಾರೆ ಎನ್ನುವಲ್ಲಿಗೆ, ರಾಗಿ ಮತ್ತು ಭತ್ತದ ನಡುವಿನ ಸಂಘರ್ಷಕ್ಕೆ ತಾತ್ಕಾಲಿಕ ವಿರಾಮ ವಾದಂತಾಗುತ್ತದೆ.
ಇದನ್ನೂ ಓದಿ: Vinayak V Bhat Column: ಸುಮ್ನ ಇರಲಾರದೇ ಇರುವೆ ಬಿಟ್ಕಂಡಂತಾಯ್ತು !
ಮುಂದೆ, ಅಲ್ಲಿಂದ ಹೊರಟ ಶ್ರೀರಾಮನ ಪರಿವಾರ, ದಾರಿಯ ಮಧ್ಯದಲ್ಲಿ ಅನೇಕ ಮುನಿಗಳ ದರ್ಶನಾಶೀರ್ವಾದಗಳನ್ನು ಪಡೆಯುತ್ತಾ, ಭಾರದ್ವಾಜ ಮುನಿಯ ಆಶ್ರಮವಿರುವ ಪ್ರದೇಶವನ್ನು ತಲುಪುತ್ತದೆ (‘ಉರಗಮಾಲಿ, ಮತಂಗ, ಗಾರ್ಗ್ಯಾಂಗಿರಸ, ಗಾಲವ, ಕಣ್ವ, ಜಯಮುನಿ ಪರಶುರಾಮ, ಪರಾಶ, ಕೌಶಿಕ, ದಾಲ್ಬ್ಯ ಮೊದಲಾದ ವರಮುನಿಗಳೊಡನೈದಿ ಬಂದನು ಭರದಿ ಭಾರದ್ವಾಜ ಮುನಿ ರಘು ವರನ ಕಾಣಿಸಿಕೊಂಡು ಹರಸಿದರತುಳ ವಿಭವದಲಿ’).
ಭಾರದ್ವಾಜ ಮುನಿಗಳ ಆಶ್ರಮಕ್ಕೆ ಬಂದ ಶ್ರೀರಾಮನು ಅವರಿಗೆ ನಮಿಸಿ, ನಿಮ್ಮ ಅಗ್ನಿಹೋತ್ರವೇ ಮುಂತಾದ ನಿತ್ಯ-ನೈಮಿತ್ತಿಕ ಕರ್ಮಗಳು, ಜಪ-ತಪಗಳು ಸುಸೂತ್ರವಾಗಿ ನಡೆಯುತ್ತಿವೆಯೇ? ಕ್ರೂರ ದಾನವರಿಂದ ಏನೂ ದುರ್ಘಟನೆಗಳು ಸಂಭವಿಸಲಿಲ್ಲ ತಾನೆ? ಎನ್ನುತ್ತಾ ಅವರ ಕುಶಲೋಪರಿ ಗಯ್ಯುತ್ತಾನೆ. ಹೀಗೆ ಮಾರ್ಗ ಮಧ್ಯದಲ್ಲಿ ಋಷಿಮುನಿಗಳನ್ನು ಸಂದರ್ಶಿಸುತ್ತಾ ಸಾಗುವ ಶ್ರೀರಾಮನ ಪರಿವಾರದ ಅಯೋಧ್ಯಾಪುರದವರೆಗಿನ ಪ್ರಯಾಣವನ್ನು ಬಹು ಸುಂದರವಾಗಿ ದಾಸರು ವರ್ಣಿ ಸುತ್ತಾ ಸಾಗುತ್ತಾರೆ.
ಶಾಂಡಿಲ್ಯ ಮುನಿಯು ಧರ್ಮರಾಯನಿಗೆ ಹೇಳುತ್ತಿದ್ದ ಕಥೆಯನ್ನು ಮುಂದುವರಿಸುತ್ತಾನೆ. ಸೀತಾ-ರಾಮ-ಲಕ್ಷ್ಮಣರು ಅಯೋಧ್ಯೆಯನ್ನು ಪ್ರವೇಶಿಸಿದ ಮೇಲೆ, ರಥದಿಂದಿಳಿದು ಕೌಸಲ್ಯೆ-ಸುಮಿತ್ರೆ-ಕೈಕೆಯರ ಕಾಲಿಗೆ ನಮಸ್ಕರಿಸಿದರು. ಅವರಾದರೋ ಹೋಗಿದ್ದ ಪ್ರಾಣವು ಮರಳಿ ಬಂದಿತೆಂಬ ಸಂತಸದಲ್ಲಿ ಮಕ್ಕಳನ್ನು ಹರಸಿ ತಬ್ಬಿದರು.

ಭರತ-ಶತೃಘ್ನರು ರಾಮನಿಗೆ ನಮಿಸಿದರು. ಲಕ್ಷ್ಮಣನು ಭರತನಿಗೆ ನಮಿಸಿ ಶತೃಘ್ನನನ್ನು ಸಂತೈಸಿ ದನು. ಸುಗ್ರೀವ-ಜಾಂಬವಂತ ಮುಂತಾದವರೆಲ್ಲರೂ ರಾಜಮಾತೆಯರಿಗೆ ನಮಿಸಿದರು. ದಶರಥನ ಮಡದಿಯರು ಸೀತೆಯನ್ನು ಕರೆದು ಪ್ರೀತಿಯಿಂದ ತಕ್ಕೈಸಿ “ಬನದೊಳಗೆ ಬಲುನೊಂದಲಾ ಮಾನಿನಿಯೆ ಬಾರೌ ತಾಯೆ ಬಾರೆಂದೆನುತ ಕಂಬನಿದೊಡೆದು ಲಾಲಿಸಿದರು ಮಹಾಸತಿಯ".
ಭರತನು ಸೀತಾರಾಮ ಲಕ್ಷ್ಮಣಾದಿಯಾಗಿ ಎಲ್ಲರಿಗೂ ಮಣಿಭೂಷಣಾದಿಗಳನ್ನೂ, ರೇಷಿಮೆಯ ವಸಗಳನ್ನೂ ಕೊಟ್ಟು ಉಪಚರಿಸಿದನು. ವಿಭೀಷಣಾದಿಗಳಿಗೆ ಯುಕ್ತವಾದ ಕಾಣಿಕೆಗಳನ್ನು ಕೊಟ್ಟು ಸತ್ಕರಿಸಿದನು. ಅಲ್ಲಿಂದ ರಾಮನು ಎಲ್ಲರೊಡಗೂಡಿ ಅಯೋಧ್ಯೆಯನ್ನು ತಲುಪಿ, ಪುರಜನರು ಕೊಟ್ಟ ಕಾಣಿಕೆಗಳನ್ನೆಲ್ಲ ಸ್ವೀಕರಿಸುತ್ತಾ ಅರಮನೆಯನ್ನು ಪ್ರವೇಶಮಾಡಿದ.
ಮರುದಿನ, ಮಂಗಲ ಸ್ನಾನಾದಿಗಳನ್ನು ಮುಗಿಸಿ, ರಾಮನು ತನ್ನ ತಮ್ಮಂದಿರೊಡಗೂಡಿ ಓಲಗಕ್ಕೆ ನಡೆತಂದನು. ಆಗ ಮಂತ್ರಿ ಸುಮಂತ್ರನು ಅಲ್ಲಿದ್ದ ಕುಲಗುರುವಾದ ವಸಿಷ್ಠರಿಗೆ ನಮಿಸಿ, “ರಾಮ ನೃಪಾಲನಿಗೆ ರಾಜ್ಯಾಭಿಷೇಕವನ್ನು ನೆರವೇರಿಸಬಹುದಲ್ಲವೇ?" ಎಂದು ಅನುಮತಿ ಕೇಳಲು, ವಸಿಷ್ಠರು ಅದಕ್ಕೆ ತಮ್ಮ ಸಮ್ಮತಿ ಸೂಚಿಸುತ್ತಾರೆ. ಸುಮಂತ್ರನು ಸಂತಸಗೊಂಡು ರಾಮ ಪಟ್ಟಾಭಿ ಷೇಕಕ್ಕೆ ಮಾಡಬೇಕಾದ ಸಿದ್ಧತೆಗಳಲ್ಲಿ ತೊಡಗಿಕೊಳ್ಳುತ್ತಾನೆ.
ಸಾಮಂತ ಅರಸುಗಳನ್ನೆಲ್ಲ ಆಮಂತ್ರಿಸಲು ಓಲೆಗಳನ್ನು ಬರೆಸಿ ಕಳುಹಿಸುತ್ತಾನೆ. ರಾಮ ಪಟ್ಟಾಭಿ ಷೇಕದ ವಿಷಯವನ್ನು ತಿಳಿದು ಅಯೋಧ್ಯೆಯು ನವ ವಧುವಿನಂತೆ ಸಿಂಗಾರಗೊಂಡಿತು. ವಿವಿಧ ದೇಶಗಳಿಂದ ಜನರು, ಪಂಡಿತರು, ಕವಿಗಳು, ಗಾಯಕ, ನರ್ತಕರು, ದೈವಜ್ಞರು ಅಯೋಧ್ಯೆಗೆ ಬಂದು ಸೇರಿದರು. ಸನಕ ಸನಂದಾದಿ ತಪಸ್ವಿಗಳು ಅಯೋಧ್ಯೆಗೆ ದಯಮಾಡಿಸಿದರು.
ಅತ್ರಿ, ಭಾರದ್ವಾಜ, ವಿಶ್ವಾಮಿತ್ರ, ಗೌತಮ ವಾಮದೇವಾದಿ ಮಹಾಮುನಿಗಳೂ ಬಂದರು. ಚೋಳ, ಗುರ್ಜರ, ದ್ರವಿಡ, ವಂಗ, ಸಿಂಧು, ನೇಪಾಳ, ವಿದರ್ಭ, ಮಲೆಯಾಳ, ಆಂಧ್ರ, ಮರಾಠ, ಕರ್ಣಾಟ, ಕುಂತಳ ಹೀಗೆ ಹಲವಾರು ದೇಶದ ಅರಸರು ಅಯೋಧ್ಯೆಗೆ ಆಗಮಿಸಿದರು. ಹೀಗೆ ಎಲ್ಲ ದಿಕ್ಕುಗಳಿಂ ದಲೂ ಮುಖ್ಯಜನರೆಲ್ಲರೂ ಬಂದು ಕೂಡಿದರು.
ಪಟ್ಟಾಭಿಷೇಕ ಮಹೋತ್ಸವದ ದಿನವೂ ಬಂದೇ ಬಿಟ್ಟಿತು. ಸೀತಾದೇವಿಯ ಸಹಿತ ಶ್ರೀರಾಮನು ಸಿಂಹಾಸನದಲ್ಲಿ ಕುಳಿತು ಶೋಭಿಸುತ್ತಿರುವಾಗ, ಅನುಜ ಭರತನು ಛತ್ರವನ್ನು ಹಿಡಿದಿರುತ್ತಾನೆ, ಲಕ್ಷ್ಮಣನು ಚಾಮರವನ್ನು ಬೀಸುತ್ತಿದ್ದಾನೆ, ಶತೃಘ್ನನು ಚಿಮ್ಮಲುವನ್ನು (ಕೊಂಬಿನ ಗಿಂಡಿಯನ್ನು) ಹಿಡಿದಿರಲು, ಹನುಮಂತನು ಶ್ರೀರಾಮನ ಪಾದವನ್ನು ಸೇವಿಸುತ್ತಿದ್ದನಂತೆ. ಮುಂದೆ, ಸುಮುಹೂರ್ತ ಬಂದೊಡನೆ ಅಲ್ಲಿ ಸೇರಿದ್ದ ಮುನೀಶ್ವರರೆಲ್ಲರ ಸಮಕ್ಷಮದಲ್ಲಿ ಶ್ರೀರಾಮನಿಗೆ ಪಟ್ಟಾಭಿಷಿಂಚನವಾಯಿತು.
ಲಂಕೆಯಿಂದ ಹೊರಟು ಮಧ್ಯದಲ್ಲಿ ಮುನಿಗಳ ಆಶ್ರಮದಲ್ಲಿ ಆತಿಥ್ಯ ಸ್ವೀಕರಿಸಿ, ನೆಲ್ಲು ಮತ್ತು ರಾಗಿಗಳ ಜಗಳವನ್ನ ಪರಿಹರಿಸಲು, ಭರತನಿಗೆ ವಚನವಿತ್ತ ಅವಧಿಯೊಳಗೆ ಅಯೋಧ್ಯೆಯನ್ನು ತಲುಪಿ, ಋಷಿಮುನಿಗಳು ಸಾಮಂತರು ಮತ್ತು ಅನ್ಯದೇಶದ ರಾಜರುಗಳ ಸಮ್ಮುಖದಲ್ಲಿ ಶ್ರೀರಾಮ ನಿಗೆ ಪಟ್ಟಾಭಿಷೇಕವಾಗುವಲ್ಲಿಯವರೆಗಿನ ವೃತ್ತಾಂತವನ್ನು ಕನಕದಾಸರು ಬಹಳ ಸಂಕ್ಷಿಪ್ತವಾಗಿ, ಸುಂದರವಾದ ಭಾಮಿನಿ ಷಟ್ಪದಿಯ ಪದ್ಯಗಳಲ್ಲಿ ವರ್ಣಿಸವಲ್ಲಿಯವರೆಗೆ ಸುಮಾರು ರಾಮಧಾನ್ಯ ಚರಿತ್ರೆಯ 90 ಪದ್ಯಗಳು ಮುಗಿದಿರುತ್ತವೆ.
ಪಟ್ಟಾಭಿಷೇಕದ ಸಂದರ್ಭವನ್ನಂತೂ ಕಣ್ಣಿಗೆ ಕಟ್ಟುವ ಹಾಗೆ ಯಾರ‍್ಯಾರು ಎಲ್ಲಿ ನಿಂತಿದ್ದರು, ಯಾವಯಾವ ವಾದ್ಯಗಳು ಮೊಳಗಿದವು ಎನ್ನುವಲ್ಲಿಯವರೆಗೆ ವಿಶದವಾಗಿ ದಾಸರು ಬಿಂಬಿಸಿದ್ದಾರೆ. “ನರೆದಲೆಗ-ವ್ರಿಹಿಗರನ್ನು ಆರು ತಿಂಗಳು ಸೆರೆಯಲ್ಲಿ ಇಡುವಂತೆ ಆಜ್ಮಾಪಿಸಿzವು, ಈಗ ನೋಡಿದರೆ ಏಳು ತಿಂಗಳಾಗಿಬಿಟ್ಟಿವೆ, ಹಾಗಾಗಿ ಇನ್ನೂ ತಡಮಾಡುವುದು ಸರಿಯಲ್ಲ, ಕೂಡಲೇ ಅಯೋಧ್ಯೆಯ ಸಭೆಗೆ ಕರೆತನ್ನಿ" ಎಂದು ಪಟ್ಟಾಭಿಷಿಕ್ತನಾದ ರಾಮನು ಅಪ್ಪಣೆ ಕೊಡುತ್ತಾನೆ.
ಹನುಮಂತನು ಗೌತಮ ಮಹರ್ಷಿಗಳ ಆಶ್ರಮಕ್ಕೆ ಬಂದು, ನರೆದಲೆಗ ಹಾಗೂ ವ್ರಿಹಿಗರನ್ನು ಸೆರೆಮನೆಯಿಂದ ಬಿಡಿಸಿ ತಮ್ಮೊಡನೆ ಕರೆದುಕೊಂಡು ಕೂಡಲೆ ಅಯೋಧ್ಯೆಗೆ ಬರಬೇಕಾಗಿ ಬಿನ್ನವಿಸಿದನು. ಅದರಂತೆ ಗೌತಮ ಮಹರ್ಷಿಗಳು, ತಡಮಾಡದೇ ನರೆದಲೆಗ-ವ್ರಿಹಿಗರನ್ನೊಡ ಗೊಂಡು ಅಯೋಧ್ಯೆಗೆ ಹೊರಟುಬಂದರು. ಅಯೋಧ್ಯೆಗೆ ದಯಮಾಡಿಸಿದ ಗೌತಮ ಮಹರ್ಷಿ ಗಳನ್ನು ರಾಮನು ಪ್ರೀತ್ಯಾದರಗಳಿಂದ ಸ್ವಾಗತಿಸಿ ಸತ್ಕರಿಸುತ್ತಾನೆ.
ನಂತರದಲ್ಲಿ, ರಾಮನ ಅಪೇಕ್ಷೆಯಂತೆ ವಸುಗಳು, ಅಮರರು, ಭುಜಂಗಾಮರರು, ಅಸುರ, ಕಿನ್ನರ, ಯಕ್ಷ, ರಾಕ್ಷಸ, ಶಶಿ-ರವಿಗಳು, ಆದಿತ್ಯ, ವಿದ್ಯಾಧರರು, ಗುಹ್ಯಕರು, ವಸುಧೆಯಮರರು (ಬ್ರಾಹ್ಮ ಣರು), ಕ್ಷತ್ರಿಯರು, ಜೋಯಿಸರು, ವೈಶ್ಯ, ಚತುರ್ಥರು, ಉನ್ನತ ಕುಶಲ ವಿದ್ಯಾಧಿಕರು ಎಲ್ಲರೂ ನ್ಯಾಯ ನಿರ್ಣಯವಾಗುವ ಶ್ರೀರಾಮನ ಸಭೆಗೆ ಆಗಮಿಸುತ್ತಾರೆ. ಸಭೆಯೊಳಕ್ಕೆ ನರೆದಲೆಗ-ವ್ರಿಹಿಗರನ್ನು ಕರೆತರುತ್ತಿದ್ದಂತೆ, ನರೆದಲೆಗನು ನೇರವಾಗಿ ರಾಮನನ್ನು ಕುರಿತು “ಅಯ್ಯಾ, ರಘು ವರನೇ, ನಮ್ಮಿಬ್ಬರ ನಡುವಿನ ವ್ಯಾಜ್ಯ ಬಗೆಹರಿಸಲು ನೀವು ಯಾವ ನ್ಯಾಯವನ್ನು ತಿಳಿಸಲಿದ್ದೀರಿ?" ಎಂದು ಕುತೂಹಲದಿಂದ ಕೇಳುತ್ತಾನೆ.
ಅಲ್ಲಿಯ ಘನ ಸಭೆಯೊಳಿದ್ದ ದೇವತೆಗಳನ್ನೆ ನೋಡಿ ಶ್ರೀರಾಮ ಹೀಗೆ ಹೇಳುತ್ತಾನೆ. “ಆರು ನುಡಿಯರೆ! ನೀವು ಹಿರಿಯರು, ಮೀರಿಸುವರಾರಿವರೊಳಗೆ ಗುಣಸಾರನ್ ಆವನು ಪೇಳ್" ಎನಲು, “ಜಂಭಾರಿ ನಸುನಗುತ ಸಾರಹೃದಯನು ನರೆದಲೆಗ; ನಿಸ್ಸಾರನೀ ವ್ರಿಹಿ" ಎಂದು ಸತ್ವ ವಿಹೀನನಾದ ಭತ್ತದ ಮುಂದೆ ಹೃದಯದಲ್ಲಿ ಸಾರ ಸತ್ವವನ್ನು ಹೊಂದಿದ ನರೆದಲೆಗನೇ ಶ್ರೇಷ್ಠ ಎಂದು ದೇವೇಂದ್ರ ಘೋಷಣೆ ಮಾಡುವಾಗ, “ಅಹುದಹುದು, ಸುರಪನ ಮಾತು ನಿಶ್ಚಯವಹುದು; ನರೆದಲೆಗನೆ ಸಮರ್ಥನು, ಬಹಳ ಬಲಯುತ. ಸೆರೆಗೆ ತಳ್ಳಲು ಕಾಂತಿಗೆಡಲಿಲ್ಲ.
ಸಹಜವಿದು. ಪರಪಕ್ಷವಾದಡೆ ವ್ರಿಹಿಗ ಕರಗಿ ಕಂದಿದನು ಸೆರೆಯಲಿ. ವಿಹಿತವಿದು ಕೇಳ್" ಎಂದು, ದೇವೇಂದ್ರನು ನೀಡಿದ “ಸಾರಹೃದಯನು ನರೆದಲೆಗ; ನಿಸ್ಸಾರನೀ ವ್ರಿಹಿ" ಎಂಬ ಗುಣ ಭೂಯಿಷ್ಠ ವಾದ ನಿರ್ಣಯಕ್ಕೆ, ದೇವರ್ಷಿ ನಾರದರು ತಮ್ಮ ಒಪ್ಪಿಗೆಯ ಮುದ್ರೆಯನ್ನೊತ್ತಿದರು. ಮುಂದು ವರಿದು, “ಎಲ್ಲ ನವಧಾನ್ಯದಲಿ ಈತನೆ ಬಲ್ಲಿದನು, ಹುಸಿಯಲ್ಲ. ಬಡವರ-ಬಲ್ಲಿದರನಾರೈದು ಸಲಹುವನ್ ಇವಗೆ ಸರಿಯುಂಟೆ? ನೆಲ್ಲಿನಲಿ ಗುಣವೇನು, ಭಾಗ್ಯದಿ ಬಲ್ಲಿದರ ಪತಿಕರಿಸುವನು. ಅವನಲ್ಲಿ ಸಾರವ ಕಾಣೆ" ಎಂದು ಕಪಿಲ ಮುನಿಯು ಧ್ವನಿಗೂಡಿಸಿದರು.
ಹೀಗೆ, ದೇವೇಂದ್ರನೂ, ಋಷಿಗಳೂ ಧಾನ್ಯಗಳ ಪೈಕಿ ನರೆದಲೆಗನೇ ಉತ್ತಮನೆಂಬುದನ್ನು ಒಪ್ಪಿ ನುಡಿದಾಯಿತು. ನಿರ್ಣಯವನ್ನು ಚಕ್ರವರ್ತಿಯಾಗಿದ್ದ ಶ್ರೀರಾಮಚಂದ್ರ ಮಾಡುವುದಿಲ್ಲ, ದೇವತೆ ಗಳು ಮುನಿಗಳು ಹಾಗು ಸಮಾಜದ ಇತರ ಗಣ್ಯರುಗಳ ಸಾಮೂಹಿಕ ನಿರ್ಣಯಕ್ಕೆ ತನ್ನ ಮೆಚ್ಚುಗೆ ಯನ್ನು ಸೂಚಿಸುತ್ತಾನೆ ಅಷ್ಟೇ! ರಾಜಧರ್ಮವನ್ನು ಪಾಲಿಸುವ ಶ್ರೀರಾಮನ ನ್ಯಾಯ ನಿರ್ಣಯದ ಪರಿ ಹೇಗಿರುತ್ತಿತ್ತು ಎನ್ನುವುದನ್ನು ಕನಕದಾಸರು ಸದರಿ ರಾಮಚರಿತೆಯಲ್ಲಿ ವಿಶೇಷವಾಗಿ ತೋರಿಸಿ ದ್ದಾರೆ.
“ಸುರಮುನಿಗಳಿಂತೆನಲು, ಭೂಸುರ ವರರು, ಸಂತೋಷಿಸಲು ಸಭಿಕರು ’ನರೆದಲೆಗ ನೀ ಬಾರೆನುತ ರಾಮನೃಪಾಲ ಮೆಚ್ಚಿ ಕರೆದು ಕೊಟ್ಟನು ತನ್ನ ನಾಮವ ಧರೆಗೆ ರಾಘವನೆಂಬ ಪೆಸರಾ (ರಾಘವ -- ರಾಗಿ) ಯ್ತಿರದೆ ವ್ರಿಹಿ ನಾಚಿದನು ಸಭೆಯಲಿ ಶಿರವ ಬಾಗಿಸಿದ"- ಹೀಗೆ ಸುರಮುನಿಗಳು ನಿರ್ಣಯ ನೀಡಿದಮೇಲೆ, ಸಂತೋಷಗೊಂಡ ಶ್ರೀರಾಮನು, “ಎಲೈ ನರೆದಲೆಗ, ಬಾರಯ್ಯ ಇಲ್ಲಿ" ಎನ್ನುತ್ತಾ ತನ್ನ ಹತ್ತಿರ ಕರೆಸಿಕೊಂಡು ಮೆಚ್ಚಿ ಅವನಿಗೆ ತನ್ನ ಹೆಸರುಗಳಂದಾದ ‘ರಾಘವ’ ಎನ್ನುವ ಅಭಿದಾನ ವನ್ನು ಮೆಚ್ಚಿ ತುಂಬಿದ ಸಭೆಯಲ್ಲಿ ಕೊಡಮಾಡಿದ.
ಇದನ್ನೆಲ್ಲ ನೋಡುತ್ತಿದ್ದ ಭತ್ತ, ನಾಚಿಕೆಯಿಂದ ತಲೆತಗ್ಗಿಸಿತು ಎನ್ನುವಲ್ಲಿಗೆ ವಿವಾದಕ್ಕೊಂದು ಶಾಶ್ವತ ಪರಿಹಾರ ದೊರೆತಂತಾಯಿತು. “ಹರುಷ ತೋರಿದ ಮನದಿ ನಲಿವುತ ನರೆದಲೆಗನೈತಂದು ರಾಮನ ಸಿರಿಚರಣಕೆ ಅಭಿನಮಿಸೆ, ದೇವಾಸುರರು ಕೊಂಡಾಡೆ, ಹರಸಿ ಮುತ್ತಿನ ಸೇಸೆಯನು ಭೂ ಸುರರು ಮಂತ್ರಾಕ್ಷತೆಯನಿತ್ತು ಉಪಚರಿಸಿದರು ರಾಗಿಯನು".
ಶ್ರೀರಾಮನ ಹೆಸರನ್ನು ಪಡೆದು ರಾಗಿಯಾದ ನರೆದಲೆಗೆವು ರಾಮನ ಶ್ರೀಚರಣಗಳಿಗೆ ನಮಸ್ಕರಿಸಿ ಸಭೆಯಲ್ಲಿ ಎಲ್ಲರ ಮೆಚ್ಚುಗೆ, ಗೌರವ, ಆಶೀರ್ವಾದಗಳಿಗೆ ಪಾತ್ರವಾಗುತ್ತದೆ. ಆಗ, ಅಲ್ಲಿದ್ದ ದೇವತೆಗಳೆ ಕೊಂಡಾಡಿದರು ಮತ್ತು ಅಲ್ಲಿದ್ದ ಬ್ರಾಹ್ಮಣರು, ರಾಗಿಯ ತಲೆಯ ಮೇಲೆ (ಭತ್ತ) ಅಕ್ಕಿಯಿಂದಾಗುವ ಮಂತ್ರಾಕ್ಷತಾರೋಪಮಾಡಿ ಉಪಚರಿಸಿದರು ಎಂದು ಬರೆಯುವ ಮೂಲಕ, ದಾಸರು ಭತ್ತದ ಸ್ಥಾನವನ್ನು ಕುಂದಿಸದೇ, ರಾಗಿಯ ಸ್ಥಾನವನ್ನು ಎತ್ತರಿಸುವ ಚಾಣಾಕ್ಷತೆಯನ್ನು ತೋರಿಸುತ್ತಾರೆ,
ಹೀಗೆ ಸಭೆಯಲ್ಲಿ ರಾಗಿಯು ಎಲ್ಲರಿಂದ ಪ್ರಶಂಸೆ ಪಡೆದುದನ್ನು ಕಂಡು ತನಗಾದ ಅವಮಾನವನ್ನು ನೆನೆಯುತ್ತ ಚಿಂತೆಗೊಳಗಾಗಿ ನಿಂತಿದ್ದ ವ್ರಿಹಿಗನನ್ನು, ರಾಮನು ಕರೆದು ಪ್ರೇಮದಿಂದ ಮಾತನಾಡಿಸಿ ಸಾಂತ್ವನ ಹೇಳುವ ಸಂದರ್ಭ ಬಹಳ ಮಾರ್ಮಿಕವಾಗಿ ಮೂಡಿಬಂದಿದೆ. ಈ ಸಾಂತ್ವನಪ್ರದಾನದ ಪ್ರಸಂಗವೇನಿದೆ, ಅದು ಕನಕದಾಸರ ಹೃದಯವನ್ನೂ ಹಾಗೂ ಶ್ರೀರಾಮನ ಹೃದಯವನ್ನೂ ಒಟ್ಟಿಗೆ ನಮಗೆ ತೋರ್ಪಡಿಸುತ್ತದೆ.
“ಅಯ್ಯಾ ವ್ರಿಹಿಗ, ಏಕೆ ಕೊರಗುತ್ತೀಯೆ. ನಾವು ಭೂಮಿಯಲ್ಲಿ ನರೆದಲೆಗನೇ ಉತ್ತಮನೆಂದು ಹೇಳಿದ್ದನ್ನು ಕೇಳಿ ಬೇಸರವಾಯಿತೇ? ಈತನು ಕ್ಷಾಮಕಾಲದಲ್ಲೂ ಜನರನ್ನು ಕರುಣೆಯಿಂದ ಕಾಯುತ್ತಾನಾದ್ದರಿಂದ, ಅವನನ್ನು ಪುರಸ್ಕರಿಸಿದೆವು, ಅಷ್ಟೇ ಹೊರತು ನಿನ್ನನ್ನು ಹೀಗಳೆಯುವುದು ನಮ್ಮ ಉದ್ದೇಶವಲ್ಲ"- ‘ನಮ್ಮೆಡೆಗೆ ನೀನು ಸುರಧೇನುವಿನ ಸಮ. ನಿನ್ನ ಚಿತ್ತದಿ ಹಾನಿದೋರಲದೇಕೆ, ಬಿಡುಬಿಡು ಚಿಂತೆ ಯಾಕೆಂದ’. ಅಲ್ಲಿಗೇ ನಿಲ್ಲಿಸದೇ, ಅಕ್ಕಿಯ ಗುಣಗಳನ್ನು ರಾಮ ಎತ್ತಿ ಹೇಳುತ್ತಾನೆ.
“ದೇವರಿಗೆ ಪರಮಾನ್ನ ನೀ ಮನುಜಾವಳಿಗೆ ಪಕ್ವಾನ್ನವೀತನು ನೀವು ಧರೆಯೊಳಗಿಬ್ಬರತಿ ಹಿತದಲಿ ನೀವಿಹುದು. ನಾವು ಕೊಟ್ಟೆವು ವರವ, ಸಲ್ಲುವುದಾವ ಕಾಲದಲಿನ್ನು ನೀವೇ ಪಾವನರು ಸುಖಿಯೆಂದುಪಚರಿಸಿದನು ನೃಪತಿ". ರಾಗಿಯು ಮನುಷ್ಯರಿಗೆ ಪಕ್ವಾನ್ನವಾದರೆ ನೀನು ದೇವತೆಗಳಿಗೆ ನಿವೇದಿಸುವ ಪರಮಾನ್ನಕ್ಕೆ ಕಾರಣನಿದ್ದೀಯೆ.
ಹೀಗಾಗಿ, ಇಬ್ಬರೂ ಹಿತದಿಂದ ಸುಖದಿಂದ ಬಾಳಿರಿ ಎನ್ನುವ ವರವನ್ನಿತ್ತು ವ್ರಿಹಿಗನನ್ನು ಸಂತೈಸಿ, ಇತರ ಧಾನ್ಯಗಳನ್ನೂ ಹರಸಿ ರಾಮನು ಎಲ್ಲ ಧಾನ್ಯಗಳನ್ನೂ, ಪಟ್ಟಾಭಿಷೇಕಕ್ಕೆ ಸೇರಿದ್ದ ಸೇರಿದ್ದ ವಾನರ, ಸುರಾಸುರರುಗಳ ತಂಡವನ್ನು, ಆನೆ ಕುದುರೆ ಉತ್ತಮ ವಸಗಳು ಮುಂತಾದ ಸುವಸ್ತು ಗಳನ್ನು ಉಡುಗೊರೆಯಾಗಿತ್ತು ಕಳುಹಿಸಿಕೊಟ್ಟ ಎಂಬಲ್ಲಿಗೆ ಕನಕದಾಸರ ರಾಮಧಾನ್ಯ ಚರಿತೆಯು ಸುಖಾಂತ್ಯವನ್ನೇ ಕಾಣುತ್ತದೆ.
ಮುಂದೆ, ಗುರುಗಳಾದ ವಸಿಷ್ಠರ ಮಾರ್ಗದರ್ಶನದಲ್ಲಿ ತಮ್ಮಂದಿರುಗಳ ಸಹಿತ ಅತ್ಯಂತ ವೈಭವ ದಿಂದ ಆದಿ ಕೇಶವರಾಯನು ಸಾಮ್ರಾಜ್ಯವನ್ನು ಆಳಿದ ಎಂದು ಶಾಂಡಿಲ್ಯರು ಧರ್ಮರಾಜ ನಿಗೆ ಹೇಳಿ, “ಅರಸ ನೀ ಮನವೊಲಿದು ಕೇಳದ ಚರಿತೆ ತಾನೊಂದಿಲ್ಲ ಲೋಕದಿ, ಪರಮ ಪುಣ್ಯದ ರಾಮ ಕಥೆಯಿದ ಕೇಳ್ದೆ ನೀನಿಂದು ಕೊರತೆಯುಂಟೆ ಇಷ್ಟಭೋಗವ ಹರಿಕೊಡುವ ನಿಮಗಿನ್ನು ಯೆನುತುಪಚರಿಸಿ ಕಳುಹಿಸಿಕೊಂಡು ಮುನಿ ಹೊರವಂಟನಾಶ್ರಮಕೆ".
“ಧರ್ಮರಾಜ, ಲೋಕದಲ್ಲಿ ನೀನು ಕೇಳಿರದ ಕಥೆಯೇ ಇರಲಿಕ್ಕಿಲ್ಲ, ಆದರೆ ಇಂದು ನೀನು ಪುಣ್ಯತಮವಾದ ರಾಮ ಕಥೆಯನ್ನು ಕೇಳಿದ ಹಾಗಾಯಿತು, ಇನ್ನುಮೇಲೆ ನಿನಗೆ ಯಾವುದಕ್ಕೂ ಕೊರತೆಯುಂಟಾಗದು, ನಿಮಗೆ ಇಷ್ಟಭೋಗಗಳನ್ನು ಶ್ರೀಹರಿಯು ಕೊಡುತ್ತಾನೆ" ಎಂದು ಅಶೀರ್ವಾದ ಮಾಡಿ ಧರ್ಮರಾಜನಿಂದ ಬೀಳ್ಕೊಟ್ಟ ಶಾಂಡಿಲ್ಯರು ತಮ್ಮ ಆಶ್ರಮಕ್ಕೆ ತೆರಳಿದರು.
“ಗುರು ವಸಿಷ್ಠನ ಮತದಿ ತಮ್ಮಂದಿರು ಸಹಿತ ಸಾಮ್ರಾಜ್ಯವಾಳಿದ ವರದನಗಪತಿಯಾದಿ ಕೇಶವ ರಾಯ ವಿಭವದಲಿ" ಎಂದು, ರಾಮನಿಗೂ ತಮ್ಮ ಆರಾಧ್ಯನಾದ ಆದಿಕೇಶವನಿಗೂ ಅಭೇದವನ್ನು ಹೇಳುವ ಪದ್ಯ ಮತ್ತು “ಶರಧಿಶಯನ ಮುಕುಂದ ಸಚರಾಚರಭರಿತ ನಿರ್ಗುಣ ನಿರಾಮಯ ಸುರ ನರೋರಗವಂದ್ಯ ವರಪುರದಾದಿಕೇಶವನ ಚರಣದಂಕಿತಮಾಗಿ ಪೇಳಿದ ಪರಮಧಾನ್ಯದ ಚರಿತೆ ಸಂತತ ಧರೆಯೊಳಿಂತೊಪ್ಪಿಹುದು ಆಚಂದ್ರಾರ್ಕ ಪರಿಯಂತ" ಎನ್ನುವ ಶ್ರೀಮಂಗಳ ಪದ್ಯ ದೊಂದಿಗೆ, ಕನಕದಾಸರು ಶ್ರೀರಾಮಾಯಣದೊಳಗೆ ಅಳವಡಿಸಿದ ರಾಘವ ಧಾನ್ಯದ ಈ ವಿಶಿಷ್ಟ ಚರಿತ್ರೆಗೆ ವಿರಾಮ ಹೇಳುತ್ತಾರೆ. ಈ ಅಂಕಣದ ಕೊನೆಯ ಭಾಗವಾಗಿ, ಮುಂದಿನವಾರ ಈ ಚರಿತ್ರೆಯನ್ನು ಸ್ವಲ್ಪ ವಿಮರ್ಶೆ ಮಾಡೋಣ.
(ಮುಂದುವರಿಯುವುದು)