Thursday, 19th September 2024

’ಕುಂಬಳಕಾಯಿ ಕಳ್ಳ’ ಎಂದರೆ ಹೆಗಲ್ಯಾಕೆ ಮುಟ್ಟು ನೋಡಿಕೊಳ್ಳುತ್ತೀರಿ ’ಕುಮಾರಣ್ಣ’

ವೀಕೆಂಡ್‌ ವಿಥ್‌ ಮೋಹನ್‌

ಮೋಹನ್‌ ವಿಶ್ವ

camohanbn@gmail.com

ಕಳೆದ ಒಂದು ವಾರದಿಂದ ಸುಮಲತಾ ಹಾಗೂ ಕುಮಾರಸ್ವಾಮಿಯವರ ನಡುವಿನ ಮಾತಿನ ಚಕಮಕಿ ತಾರಕಕ್ಕೇರುತ್ತಿದೆ. ನೀ ಕೊಡೆ ನಾ ಬಿಡೆ ಎಂಬಂತೆ ಕುಮಾರಸ್ವಾಮಿಯವರ ಬಾಯಿ ಸುಮ್ಮನಿರುವುದಿಲ್ಲ, ಅದಕ್ಕೆ ಪ್ರತಿಕ್ರಿಯಿಸದೆ ಸುಮಲತಾರವರು ಬಿಡುವುದಿಲ್ಲ. ಮಂಡ್ಯ ಲೋಕಸಭಾ ಚುನಾವಣೆಯ ಸಮಯ ದಲ್ಲಿ ತಾವೊಬ್ಬ ಮುಖ್ಯಮಂತ್ರಿಯೆಂಬುದನ್ನೂ ಮರೆತು ಬಾಯಿಗೆ ಬಂದಂತೆ ಮಾತನಾಡಿ ಜನರ ಕೆಂಗಣ್ಣಿಗೆ ಗುರಿಯಾಗಿ ಕುಮಾರಣ್ಣ ಹೀನಾಯವಾಗಿ ಸೋಲುಂಡಿದ್ದರು.

ತಮ್ಮ ಮಗನ ರಾಜಕೀಯ ಜೀವನದ ಮೊದಲ ಚುನಾವಣೆಯಲ್ಲಿಯೇ ಸೋಲನ್ನು ಕಾಣಬೇಕಾದಂಥ ಪರಿಸ್ಥಿತಿ ಎದುರಿಸಬೇಕಾಯಿತು. ತೋಳ ಹಳ್ಳಕ್ಕೆ ಬಿದ್ದರೆ ಆಳಿಗೊಂದು ಕಂಬಂತೆ ಸುಮಲತಾ ಅವರ ಮೇಲೆ ‘ಜೆಡಿಎಸ್’ನ ಪ್ರತಿಯೊಬ್ಬ ನಾಯಕನೂ ಸಹ ಮುಗಿಬಿದ್ದರು. ಮಂಡ್ಯದ ಮೇಲೆ ಎಲ್ಲಿಲ್ಲದ ಪ್ರೀತಿ ಕುಮಾರಣ್ಣ ವರಿಗೆ ಬಂದಿತ್ತು. ಮಂಡ್ಯದ ಜನ ಸ್ವಾಭಿಮಾನಕ್ಕೆ ಹೆಸರುವಾಸಿಯಾದಂತವರು, ಅವರ ಸ್ವಾಭಿಮಾನಕ್ಕೆ ಧಕ್ಕೆ ತರುವ ಯಾರನ್ನಾದರೂ ಸರಿ ಬೆಳೆಸಿದ ರೀತಿ ಯಲ್ಲಿಯೇ ಮುಲಾಜಿಲ್ಲದೆ ಮನೆಗೆ ಕಳುಹಿಸಿಬಿಡುತ್ತಾರೆ. ೨೦೧೮ರ ವಿಧಾನಸಭಾ ಚುನಾವಣೆಯಲ್ಲಿ ಸಿದ್ದರಾಮಯ್ಯನವರು ದೇವೇಗೌಡರ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದರ ಪರಿಣಾಮವಾಗಿ ಮಂಡ್ಯ ಜಿಲ್ಲೆಯ ಒಕ್ಕಲಿಗ ಜನ ತಮ್ಮ ಸ್ವಾಭಿಮಾನಕ್ಕೆ ಪೆಟ್ಟು ತಂದಂಥ ಕಾಂಗ್ರೆಸ್ ಪಕ್ಷವನ್ನು ಇಡೀ ಜಿಲ್ಲೆಯಿಂದಲೇ ಮನೆಗೆ ಕಳುಹಿಸಿದರು.

ಚಲುವರಾಯಸ್ವಾಮಿಯಂಥ ಘಟಾನುಘಟಿ ನಾಯಕರನ್ನೇ ಸೋಲಿಸಿ ಮನೆಗೆ ಕಳುಹಿಸಿದರು. ಇದನ್ನೇ ಬಂಡವಾಳವನ್ನಿಗಿಸಿಕೊಂಡಂಥ ಕುಮಾರಸ್ವಾಮಿ ಮಂಡ್ಯ ಜನತೆಯನ್ನು ಲಘುವಾಗಿ ತೆಗೆದುಕೊಂಡು 2019ರ ಲೋಕಸಭಾ ಚುನಾವಣೆಯಲ್ಲಿ ಸುಮಲತಾರ ಬಗ್ಗೆ ಬಾಯಿಗೆ ಬಂದಂತೆ ಮಾತನಾಡಿದರು.
ಮಂಡ್ಯದ ಗಂಡು ಅಂಬರೀಷರ ಪತ್ನಿಯ ಬಗ್ಗೆ ಲಘುವಾಗಿ ಮಾತನಾಡಿದ್ದರ ಪರಿಣಾಮ ಮಂಡ್ಯದ ಜನತೆಯ ಸ್ವಾಭಿಮಾನಕ್ಕೆ ಪೆಟ್ಟು ಬಿದ್ದಿದ್ದು ಮಾತ್ರ ಸತ್ಯ, ೨೦೧೮ರಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬುದ್ಧಿ ಕಲಿಸಿದ ಹಾಗೆ ಕುಮಾರಣ್ಣನಿಗೂ ಲೋಕಸಭೆಯಲ್ಲಿ ಸರಿಯಾದಂಥ ಪಾಠವನ್ನೇ ಕಲಿಸಿದರು.

ನೂರಾರು ಕೋಟಿಯಷ್ಟು ಹಣವನ್ನು ಚುನಾವಣೆಯಲ್ಲಿ ಚೆಲ್ಲಿದರೂ ಸಹ ನಿಖಿಲ್ ಕುಮಾರಸ್ವಾಮಿ ಗೆಲ್ಲಲಾಗಲಿಲ್ಲ, ತಾವು ಆರಿಸಿ ಕಳುಹಿಸಿದಂಥ ರಾಜಕೀಯ ನಾಯಕರುಗಳ ಕತ್ತಿನಪಟ್ಟಿ ಹಿಡಿದು ತಮ್ಮ ಜಿಲ್ಲೆಯ ಅಭಿವೃದ್ಧಿಯ ಬಗ್ಗೆ  ಕೇಳುವ ಜನ ಮಂಡ್ಯದವರು. ಇಂಥ ಮಂಡ್ಯದ ಜನರನ್ನು ಲಘುವಾಗಿ ತೆಗೆದು ಕೊಳ್ಳುವುದು ರಾಜಕೀಯ ಆತ್ಮಹತ್ಯೆ ಮಾಡಿಕೊಂಡಂತೆ. ಅಂಬರೀಷ್‌ರ ಅಂತ್ಯಕ್ರಿಯೆಯನ್ನು ನಾನು ತುಂಬಾ ಹತ್ತಿರದಿಂದ ಕಂಠೀರವ ಸ್ಟುಡಿಯೋದಲ್ಲಿ ಸುಮಾರು ಎರಡು ತಾಸುಗಳ ಕಾಲ ನೋಡಿದ್ದೇನೆ, ಅಂಬರೀಷ್‌ರ ಅಂತ್ಯಕ್ರಿಯೆಯ ವೇಳೆ ಜೆಡಿಎಸ್ ಪಕ್ಷದ ನಾಯಕರು, ಅವರ ಮಕ್ಕಳು, ಸೊಸೆಯಂದಿರು ಮುಂದೆ ನಿಂತು ಅಂಬರೀಷ್ ಅವರ ಪಾರ್ಥೀವ ಶರೀರಕ್ಕೆ ಪೂಜೆ ಮಾಡುತ್ತಿದ್ದ ರೀತಿಯನ್ನು ನೋಡಿದರೆ ಅಂಬರೀಷರ ಮೇಲೆ ಇವರಿಗೆ ಅದೆಷ್ಟು ಅಭಿಮಾನ ವೆಂಬಂತೆ ಕಾಣುತ್ತಿತ್ತು.

ಮೃತದೇಹವನ್ನು ಹೊತ್ತುಕೊಂಡು ಕಟ್ಟಿಗೆಗಳ ಮೇಲೆ ಮಲಗಿಸುವಾಗ ಹೆಗಲು ಕೊಡುತ್ತಿದ್ದನ್ನು ನೋಡಿದರೆ ಇವರಿಗೆ ಅಂಬರೀಷರ ಮೇಲೆ ಅಪಾರ ಪ್ರೀತಿಯಿರು ವಂತೆ ಗೋಚರವಾಗುತ್ತಿತ್ತು. ಆದರೆ ನನಗೆ ಬೇರೆ ಏನೋ ಯೋಚನೆ ತಲೆಯಲ್ಲಿ ಹೊಳೆಯುತ್ತಿತ್ತು, ಅಂಬರೀಷ್ ಬದುಕಿದ್ದಾಗ ಅವರ ಬಗ್ಗೆ ಏನೇನೋ
ಮಾತ ನಾಡಿದವರೆಲ್ಲರೂ ಹಠಾತ್ತನೆ ಎಲ್ಲಿಲ್ಲದ ಪ್ರೀತಿಯನ್ನು ಅವರ ಸಾವಿನಲ್ಲಿ ತೋರಿಸುತ್ತಿದ್ದರು. ಮಂಡ್ಯದ ಜನತೆಯ ಮುಂದೆ ತಾವು ‘ಮಂಡ್ಯ ಗಂಡು’ ಅಂಬರೀಷರ ಅಂತ್ಯಕ್ರಿಯೆಯನ್ನು ಎಷ್ಟು ಅಚ್ಚುಕಟ್ಟಾಗಿ ಮಾಡಿಕೊಟ್ಟಿದ್ದೇವೆಂಬ ಸಂದೇಶವನ್ನು ಸಾರುವ ಒಂದೇ ಒಂದು ರಾಜಕೀಯ ಉದ್ದೇಶದಿಂದ ಮಾಡು ತ್ತಿದ್ದಾರೆಂಬ ಅನುಮಾನ ನನಗೆ ಅಂದೇ ಕಾಡುತ್ತಿತ್ತು, 2019ರ ಚುನಾವಣೆಯಲ್ಲಿ ಅದು ನಿಜವಾಗಿತ್ತು.

ಎಂದೂ ಕಣ್ಣಿಗೆ ಕಾಣಿಸದ ಜೆಡಿಎಸ್ ನಾಯಕರೆಲ್ಲರೂ ಅಂದು ಮಾತ್ರ ಅಂಬರೀಷರ ಪಾರ್ಥೀವ ಶರೀರದ ಪಕ್ಕದಲ್ಲಿಯೇ ಇದ್ದರು. ತಾನು ಕೇಂದ್ರ ಸರಕಾರದ ಬಳಿ
ಮಾತನಾಡಿ ‘ಹೆಲಿಕಾಪ್ಟರ್’ ತರಿಸಿ ಪಾರ್ಥೀವ ಶರೀರವನ್ನು ಮಂಡ್ಯಕ್ಕೆ ತೆಗೆದುಕೊಂಡು ಹೋದೆ ಎಂದು ಪದೇ ಪದೆ ಕುಮಾರಸ್ವಾಮಿ ಹೇಳುವುದನ್ನು ನೋಡಿ ದರೆ, ತಮ್ಮ ರಾಜಕೀಯ ಹಿತಾಸಕ್ತಿಯಿಂದ ಮಂಡ್ಯದ ಜನರ ಮುಂದೆ ಒಳ್ಳೆಯವನಾಗಲು ಹಾಗೆ ಮಾಡಿದರೆಂಬುದು ಸ್ಪಷ್ಟವಾಗುತ್ತದೆ. ಜೆಡಿಎಸ್ ನಾಯಕನ ಮಗಳೊಬ್ಬಳು ಅಂದು ಅಂಬರೀಷರ ಪಾರ್ಥೀವ ಶರೀರದ ಮುಂದೆ ಬಂದು ನಿಂತು ಕಣ್ಣೀರಿಡುತ್ತಾ ನಮಸ್ಕಾರ ಮಾಡುತ್ತಿದ್ದುದ್ದನ್ನು ಕಣ್ಣಾರೆ ಕಂಡ ನನ್ನ ಮನಸ್ಸಿಗೆ ಅಲ್ಲಿ ಬಹುದೊಡ್ಡ ನಾಟಕವೊಂದು ನಡೆಯುತ್ತಿದೆಯೆಂಬ ವಿಚಾರ ತಲೆಯಲ್ಲಿ ಬಂದಿತ್ತು, ಈಕೆಯು ತನ್ನ ತಂದೆಯ ಮುಂದಿನ ರಾಜಕೀಯ ವಾರಸುದಾರ ಳಾಗಲು ಈಗಲೇ ಮಂಡ್ಯದ ಜನತೆಯ ಮುಂದೆ ಪೀಠಿಕೆ ಹಾಕುತ್ತಿದ್ದಾಳೆಂಬುದು ಸ್ಪಷ್ಟವಾಗಿ ತಿಳಿಯುತ್ತಿತ್ತು.

ಲೋಕಸಭಾ ಚುನಾವಣೆಯ ವೇಳೆಯಲ್ಲಿ ಜೆಡಿಎಸ್ ನಾಯಕರು ಮಂಡ್ಯದ ಜನರ ಮುಂದೆ ಮತಬೇಟೆಯಾಡುವಾಗ ಅಂಬರೀಷರ ಅಂತ್ಯಸಂಸ್ಕಾರದ ವಿಚಾರ ವನ್ನಿಟ್ಟುಕೊಂಡೇ ಹಲವು ಸ್ಥಳೀಯ ನಾಯಕರ ಬಳಿ ತೆರಳಿದ್ದಂಥ ವಿಷಯ ರಹಸ್ಯವಾಗಿ ಉಳಿದಿಲ್ಲ. ಮಂಡ್ಯದ ಜನ ಅಂಬರೀಷರ ಅಂತ್ಯ ಸಂಸ್ಕಾರದ ವೇಳೆ ನಾಯಕರುಗಳು ನಡೆದುಕೊಂಡಂಥ ರೀತಿಯನ್ನು ಅನುಮಾನಾಸ್ಪದವಾಗಿಯೇ ನೋಡಿರುವ ವಿಷಯ ಜೆಡಿಎಸ್ ನಾಯಕರುಗಳಿಗೆ ತಿಳಿದಿಲ್ಲ. ಮಂಡ್ಯದಲ್ಲಿನ ನನ್ನ ಹಲವು ಸ್ನೇಹಿತರು ಇದೇ ವಿಷಯವನ್ನು ಅಂತ್ಯಕ್ರಿಯೆಯ ಮರುದಿನವೇ ನನಗೆ ಕರೆ ಮಾಡಿ ತಿಳಿಸಿದ್ದರು.

ಕುಮಾರಣ್ಣನಿಗೆ ಅಂಬರೀಷರ ಬಗ್ಗೆ ಅಷ್ಟು ಪ್ರೀತಿ ಇದ್ದಿದ್ದರೆ ತಮ್ಮ ಮಗನನ್ನು ಚುನಾವಣೆಗೆ ನಿಲ್ಲಿಸಲೇ ಬಾರದಿತ್ತು, ತಮ್ಮ ಮಗನಿಗಾಗಿ ಬೇರೆ ಯಾವ ಕ್ಷೇತ್ರವು ಇರಲಿಲ್ಲವೇ? ತಮ್ಮ ಪಕ್ಷಕ್ಕೆ ಏಳು ಸಂಸದರನ್ನು ನೀಡಿರುವ ಮಂಡ್ಯ ಜಿ ಸುರಕ್ಷಿತ ಕ್ಷೇತ್ರವೆಂದು ಕೊಂಡರು, ಆದರೆ ತಮ್ಮ ನಾಯಕರ ಬಾಯಿಯ ಮೇಲೆ ಹಿಡಿತವಿಲ್ಲದ ಕಾರಣದಿಂದ ಹೀನಾಯವಾಗಿ ಸೋತರು. 2018ರಲ್ಲಿ ನಡೆದ ಮಂಡ್ಯದ ಉಪಚುನಾವಣೆಯಲ್ಲಿ ಶಿವರಾಮೇ ಗೌಡರಿಗೆ ಮಂಡ್ಯದಿಂದ ಟಿಕೆಟ್ ನೀಡಿ ಮುಂದಿನ 2019ರ ಚುನಾವಣೆಯಲ್ಲಿಯೂ ಅವರಿಗೆ ಟಿಕೆಟ್ ನೀಡುವ ಭರವಸೆಯನ್ನು ನೀಡಿದ್ದರು, ಆದರೆ ಕೇವಲ ನಾಲ್ಕು ತಿಂಗಳ ನಂತರ ಶಿವರಾಮೇ ಗೌಡರಿಗೆ ಕೈ ಕೊಟ್ಟು ತಮ್ಮ ಮಗನಿಗೆ ಟಿಕೆಟ್ ನೀಡಿ, ಎಂದಿನಂತೆ ತಮ್ಮ ವಂಶಪಾರಂಪರ್ಯದ ರಾಜಕೀಯವನ್ನು ಮುಂದುವರಿಸಿದ್ದರು.

ಒಬ್ಬ ಮುಖ್ಯಮಂತ್ರಿಯಾಗಿ ಒಂದು ಹೆಣ್ಣಿನ ಮೇಲೆ ಯಾವ ಮಟ್ಟದಲ್ಲಿ ಮುಗಿಬಿದ್ದಿದ್ದರೆಂದರೆ ಸುಮಲತಾರವರು ತಮ್ಮ ಮನಸ್ಸಿನಲ್ಲಿನ ನೋವನ್ನು ಹೊರಗೆ ಹೇಳಿಕೊಳ್ಳಲಾಗದೆ ಅದೆಷ್ಟು ದಿನ ಮನೆಗೆ ತೆರಳಿದ ನಂತರ ಏಕಾಂತದಲ್ಲಿ ಅತ್ತಿದ್ದಾರೆಂಬುದನ್ನು ಅವರನ್ನೇ ಕೇಳಿದರೆ ತಿಳಿಯುತ್ತದೆ. ಮಂಡ್ಯದ ಗೌಡತಿಯನ್ನು ಹೊರಗಿನಿಂದ ಬಂದವರೆಂಬಂತೆ ಬಿಂಬಿಸುವ ಜೆಡಿಎಸ್ ಪಕ್ಷದ ಪ್ರಯತ್ನ ವ್ಯರ್ಥವಾಯಿತು. ತಮ್ಮ ಮನೆಗೆ ಬಂದಿರುವ ಸೊಸೆಯಂದಿರು ಮನೆ ಮಗಳಾಗ ಬಹುದು, ಆದರೆ ಮಂಡ್ಯದ ಗಂಡಿನ ಹೆಂಡತಿ ಯಾಗಿ ಬಂದಂಥ ಸುಮಲತಾ ಮಂಡ್ಯದ ಮಗಳಲ್ಲವಂತೆ, ದರ್ಶನ್ ಹಾಗೂ ಯಶ್ ಸುಮಲತಾರ ಪರವಾಗಿ ಗಟ್ಟಿಯಾಗಿ ನಿಂತರು. ಲಕ್ಷಾಂತರ ಅಭಿಮಾನಿಗಳು ಅವರ ಬೆನ್ನಿಗೆ ನಿಂತಿದ್ದಾರೆಂಬ ಸಾಮಾನ್ಯ ಜ್ಞಾನವಿಲ್ಲದೆ ಅವರಿಬ್ಬರ ಬಗ್ಗೆಯೂ ಬಾಯಿಗೆ ಬಂದಂತೆ ಕುಮಾರಸ್ವಾಮಿ ಮಾತನಾಡಿದರು.

ಸೋಲಿನ ಭಯದಿಂದಲೋ ಏನೋ ತಾವೊಬ್ಬ ಮುಖ್ಯಮಂತ್ರಿಯೆಂಬುದನ್ನೂ ಮರೆತು ತಾಳ್ಮೆ ಕಳೆದುಕೊಂಡು ಬಾಯಿಗೆ ಬಂದಂತೆ ಮಾತನಾಡಿದರು. ಸುಮಲತಾ ಹೆಸರಿನಮೂವರು ಅಭ್ಯರ್ಥಿಗಳನ್ನು ಚುನಾವಣೆಯಲ್ಲಿ ನಿಲ್ಲಿಸಿ ಮಂಡ್ಯದ ಜನತೆಗೆ ಗೊಂದಲವುಂಟಾಗುವಂತೆ ಮಾಡಿದ್ದರು. ಕನಕಪುರದಲ್ಲಿ ದೇವೇಗೌಡರನ್ನು ಸೋಲಿಸುವ ಸಲುವಾಗಿ ಡಿ.ಕೆ. ಶಿವಕುಮಾರ್ ಮಾಡಿದ ತಂತ್ರ ಮಂಡ್ಯದಲ್ಲಿ ನಡೆಯುತ್ತದೆ ಅಂದುಕೊಂಡಿದ್ದರೇನೋ! ಕಾಲ ಬದಲಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಮಾಡುವ ಕುತಂತ್ರಗಳೆಲ್ಲವೂ ಜನರಿಗೆ ಕ್ಷಣಮಾತ್ರದಲ್ಲಿ ತಿಳಿಯುತ್ತದೆ.

2019ರಲ್ಲಿ ಮಾಡಿದ ತಪ್ಪುಗಳನ್ನೇ ಕಳೆದೆರಡು ವಾರದಿಂದ ಕುಮಾರಸ್ವಾಮಿ ಪುನಃ ಮಾಡುತ್ತಿದ್ದಾರೆ. ಕೃಷ್ಣರಾಜ ಸಾಗರ ಅಣೆಕಟ್ಟಿನ ಸುತ್ತಮುತ್ತ ನಡೆಯು ತ್ತಿರುವ ಗಣಿಗಾರಿಕೆಯ ಪರಿಣಾಮವಾಗಿ ಅಣೆಕಟ್ಟಿನಲ್ಲಿ ಬಿರುಕುಂಟಾಗಿದೆ ಎಂದು ಸುಮಲತ ಹೇಳಿದ್ದರು. ಈ ವಿಷಯದಲ್ಲಿ ಸುಖಾಸುಮ್ಮನೆ ಕುಮಾರಸ್ವಾಮಿ ಮೂಗು ತೋರಿಸುವುದು ಬೇಕಿರಲಿಲ್ಲ, ಸ್ಥಳೀಯ ನಾಯಕರುಗಳೇ ಇದಕ್ಕೆ ಉತ್ತರಿಸಿ ಸುಮ್ಮನಿರಬಹುದಿತ್ತು. ಮಂಡ್ಯ ಜಿಲ್ಲೆಯನ್ನೇ ತಮ್ಮ ಮನೆಯೆಂಬಂತೆ ಲಘುವಾಗಿ ತೆಗೆದುಕೊಂಡು ಮತ್ತೆ ಬಾಯಿಗೆ ಬಂದಂತೆ ಕುಮಾರಸ್ವಾಮಿ ಮಾತನಾಡುತ್ತಿದ್ದಾರೆ.

ಆಣೆಕಟ್ಟು ಬಿರುಕು ಬಿಟ್ಟಿದ್ದರೆ ಸುಮಲತಾರನ್ನು ಅಡ್ಡವಾಗಿ ಮಲಗಿಸಿ ಎಂದು ಅತ್ಯಂತ ಕೆಟ್ಟದಾದ ಹೇಳಿಕೆಯನ್ನು ನೀಡುವ ಮೂಲಕ ತಮ್ಮ ಸಣ್ಣತನವನ್ನು ಜನರ ಮುಂದೆ ಪ್ರದರ್ಶಿಸಿದ್ದಾರೆ. 2006ರಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿzಗ ಮಾಡಿದ ಒಳ್ಳೆಯ ಕೆಲಸಗಳನ್ನು ಜನರು ಇಂದಿಗೂ ನೆನಪಿಸಿಕೊಳ್ಳುತ್ತಾರೆ,
ಆದರೆ ತಾವು ಮಾಡಿದ ಹೆಸರನ್ನು ಉಳಿಸಿಕೊಳ್ಳುವುದರಲ್ಲಿ ಕುಮಾರಸ್ವಾಮಿ ಯಶಸ್ವಿಯಾಗಲಿಲ್ಲ. ಮಾಜಿ ಮುಖ್ಯಮಂತ್ರಿ ಯಾಗಿ ಕುಮಾರಸ್ವಾಮಿಯವರು ಒಂದು ಹೆಣ್ಣಿನ ವಿರುದ್ಧ ಆಡುತ್ತಿರುವ ಮಾತುಗಳು ಅವರ ಘನತೆಗೆ ಶೋಭೆ ತರುವಂತದ್ದಲ್ಲ, 2019ರ ಚುನಾವಣೆಯ ಸೋಲನ್ನೇ ಮನಸ್ಸಿನಲ್ಲಿಟ್ಟುಕೊಂಡು ಬಾಯಿಗೆ ಬಂದಂತೆ ಮಾತನಾಡುತ್ತಿದ್ದರೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಮಂಡ್ಯದ ಜನ ಜೆಡಿಎಸ್ ಪಕ್ಷಕ್ಕೆ ಮತ್ತೊಮ್ಮೆ ಬುದ್ಧಿ ಕಲಿಸಿ ಇಡೀ ಜಿಲ್ಲೆಯಲ್ಲಿಯೇ ನೆಲೆಯಿಲ್ಲದಂತೆ ಮಾಡುವುದರಲ್ಲಿ ಯಾವುದೇ ಅನುಮಾನವಿಲ್ಲ.

ಸುಮಲತಾ ಒಬ್ಬ ಸಂಸದೆಯಾಗಿ ಕೃಷ್ಣ ಅಣೆಕಟ್ಟಿನ ವಿಷಯದಲ್ಲಿ ಪ್ರಶ್ನೆ ಮಾಡುವ ಅಧಿಕಾರವಿದೆ, ಪ್ರಶ್ನೆ ಮಾಡಿದ ತಕ್ಷಣ ಶಾಸಕರುಗಳು ಅಪರಾಧಿಗಳಾಗುವು ದಿಲ್ಲ. ಅಣೆಕಟ್ಟಿನ ಸುತ್ತಲೂ ನಡೆಯುತ್ತಿರುವ ಗಣಿಗಾರಿಕೆಯ ವಿರುದ್ಧ ಸುಮಲತಾ ಸಾರಿರುವ ಸಮರದಲ್ಲಿ ಸುಮಾರು 100 ಕೋಟಿಯಷ್ಟು ದಂಡವನ್ನು ವಸೂಲಿಮಾಡಿ ಸರಕಾರಕ್ಕೆ ಪಾವತಿಸುವಂತೆ ಮಾಡಿದ್ದಾರೆ. ಅಣೆಕಟ್ಟಿನಲ್ಲಿ ಬಿರುಕಿಲ್ಲವೆಂದರೆ ತಜ್ಞರನ್ನು ಮಾಧ್ಯಮದ ಮುಂದೆ ಕೂರಿಸಿಕೊಂಡು ಧೈರ್ಯವಾಗಿ ಸ್ಥಳೀಯ ನಾಯಕರು ಹೇಳಬೇಕಷ್ಟೆ, ಕುಮಾರಸ್ವಾಮಿಯವರೂ ಈ ವಿಷಯದಲ್ಲಿ ಮೂಗುತೂರಿಸುವುದು ಬೇಕಿರಲಿಲ್ಲ.

ಕುಮಾರಸ್ವಾಮಿಯವರು ಒಂದು ವಿಚಾರವನ್ನಂತೂ ಸ್ಪಷ್ಟವಾಗಿ ತಿಳಿದುಕೊಳ್ಳಬೇಕು, ಸುಮಲತಾರಿಗೆ ‘ಹೈ ಕಮಾಂಡ್’ ಇಲ್ಲ, ಅವರು ಸ್ವಾತಂತ್ರ್ಯ ಅಭ್ಯರ್ಥಿ ಯಾಗಿ ಗೆದ್ದಿರುವವರು. ಅವರ ನಿರ್ಧಾರವೇ ಅಂತಿಮ, ಯಾರಿಂದಲೂ ಅವರ ಬಾಯಿ ಮುಚ್ಚಿಸಲು ಸಾಧ್ಯವಿಲ್ಲ. ಬೆಂಕಿಗೆ ತುಪ್ಪ ಸುರಿದಷ್ಟೂ ಮತ್ತಷ್ಟು ಉರಿ ಹೆಚ್ಚಾಗುತ್ತದೆ, ಸುಮಲತಾರ ಒಂದೊಂದು ಮಾತಿನಲ್ಲೂ ತೂಕವಿದೆ. ಬಹುಷಃ ಕರ್ನಾಟಕ ಕಂಡಂಥ ಅತ್ಯಂತ ಪ್ರಬುದ್ಧ ಮಹಿಳಾ ರಾಜಕಾರಣಿ ಸುಮಲತಾ, ತಮ್ಮ ತಾಳ್ಮೆಯಿಂದಲೇ ಮುಖ್ಯಮಂತ್ರಿಯ ಮಗನ ವಿರುದ್ಧ ಲೋಕಸಭಾ ಚುನಾವಣೆಯನ್ನು ಗೆದ್ದಿರುವ ಸಂಸದೆ ಸುಮಲತಾ. ಸರಕಾರದ ಕಾರ್ಯಾಂಗ ವ್ಯವಸ್ಥೆಯೇ ಮುಖ್ಯಮಂತ್ರಿಗಳ ಅಡಿಯಲ್ಲಿರುವಾಗ ಅವರ ಮಗನ ವಿರುದ್ಧವೇ ಚುನಾವಣೆ ಗೆzಗಲೇ ಕುಮಾರ ಸ್ವಾಮಿಯವರಿಗೆ ಸುಮಲತಾರ ಶಕ್ತಿ ಅರಿವಾಗ ಬೇಕಿತ್ತು.

ಕುಂಬಳಕಾಯಿ ಕಳ್ಳನೆಂದರೆ ಹೆಗಲು ಮುಟ್ಟಿ ನೋಡಿಕೊಳ್ಳುವ ಹಾಗೆ ಕುಮಾರಸ್ವಾಮಿಯವರು ಗಣಿಗಾರಿಕೆಯ ವಿಚಾರದಲ್ಲಿ ಮೂಗುತೋರಿಸಿ ಮಂಡ್ಯ ಜನರ ಮುಂದೆ ಮತ್ತೊಮ್ಮೆ ಬೆತ್ತಲಾಗುತ್ತಿದ್ದಾರೆ. ಕುಮಾರಸ್ವಾಮಿಯವರ ಸಮಸ್ಯೆಯೆಂದರೆ ತಮ್ಮ ಸುತ್ತಲಿನ ಜನರು, ತಮ್ಮ ಸುತ್ತಲಿನ ಹೊಗಳುಭಟ್ಟರ ಪಟಾಲಂ ಮಾತು ಕೇಳಿಕೊಂಡು ಬಾಯಿಗೆ ಬಂದಂತೆ ಮಾತನಾಡಿ ತಾವು ಗಳಿಸಿರುವ ಜನಪ್ರಿಯತೆಯನ್ನು ಪ್ರತಿನಿತ್ಯ ಕಳೆದುಕೊಳ್ಳುತ್ತಿದ್ದಾರೆ. ಅವರ ಮಾತುಗಳನ್ನು ಕೇಳುವುದನ್ನು ಕಡಿಮೆಮಾಡಿ ತಮ್ಮ ಸ್ವಂತ ಬುದ್ಧಿಯಿಂದ ತುಸು ಆಲೋಚಿಸಿ ಅಳೆದು ತೂಗಿ ಮಾತನಾಡುವುದು ಉತ್ತಮ. ಘಟಾನುಘಟಿ ರಾಜಕೀಯ ನಾಯಕರನ್ನೇ ಮನೆಗೆ ಕಳುಹಿಸಿರುವ ರಾಜ್ಯ ಕರ್ನಾಟಕ, ಅಂತಹುದರಲ್ಲಿ ಲಘುವಾಗಿ ಪರಿಗಣಿಸಿ ಇದೇ ವರಸೆಯನ್ನು ಮುಂದುವರಿಸಿದರೆ ಜೆಡಿಎಸ್ ಪಕ್ಷಕ್ಕೆ ಅಪಾಯ ತಪ್ಪಿದ್ದಲ್ಲ.

ಸುಮಲತಾರವರು ಹೇಳಿದಂತೆ, ಪ್ರಜ್ವಲ್ ರೇವಣ್ಣರ ಪ್ರಬುದ್ಧತೆಯನ್ನು ನೋಡಿಯಾದರೂ ಕುಮಾರಸ್ವಾಮಿ ಅರ್ಥ ಮಾಡಿಕೊಳ್ಳಬೇಕು, ಒಂದು ಹೆಣ್ಣಿನ ಬಗ್ಗೆ ಮಾಧ್ಯಮದ ಮುಂದೆ ಮಾತನಾಡುವಾಗ ತೋರಿಸಬೇಕಾದಂಥ ತಾಳ್ಮೆ ಹಾಗೂ ಪ್ರಬುದ್ಧತೆಯನ್ನು ಕುಮಾರಸ್ವಾಮಿ ತೋರುತ್ತಿಲ್ಲ. ಮಂಡ್ಯದ ಗಣಿಗಾರಿಕೆಯ ಬಗ್ಗೆ ಜೆಡಿಎಸ್ ನಾಯಕರಿಗೆ ತಕರಾರಿಲ್ಲದಿದ್ದರೆ ಮೈಮೇಲೆ ಯಾಕೆ ಹುಳು ಬಿಟ್ಟುಕೊಂಡವರಂತೆ ಆಡಬೇಕು, ಗಣಿಗಾರಿಕೆಯಲ್ಲಿ ಯಾವುದೇ ಹಗರಣಗಳಿಲ್ಲವೆಂದು ಸಾಬೀತು ಮಾಡಲಿ, ಕಾನೂನು ಹೋರಾಟ ಮಾಡಲಿ ಅದನ್ನು ಬಿಟ್ಟು ಒಬ್ಬ ಸಂಸದೆಯ ಚಾರಿತ್ರ್ಯ ವಧೆ ಮಾಡುತ್ತಿದ್ದರೆ, ಜನರ ಮುಂದೆ ಮತ್ತಷ್ಟು ಬೆತ್ತಲಾಗುವು ದರಲ್ಲಿ ಯಾವುದೇ ಅನುಮಾನವಿಲ್ಲ.

ಪಕ್ಷದ ವರ್ಚಸ್ಸಿಗೆ ಹಾನಿಯಾಗುತ್ತಿದೆಯೆಂಬ ವಿಷಯ ತಿಳಿದಿದ್ದರೂ ಸಹ ದೇವೇಗೌಡರು ಯಾಕೆ ಸುಮ್ಮನಿದ್ದಾರೆ ತಿಳಿಯುತ್ತಿಲ್ಲ. ಸುಮಲತಾರ ಬದಲು ಬೇರೆ ಯಾರಾದರೂ ಈ ಮಾತುಗಳನ್ನು ಅಡಿದ್ದರೆ ದೇವೇಗೌಡರು ದೊಡ್ಡವರಿಂದ ಕರೆ ಮಾಡಿಸಿ ಬಾಯಿ ಮುಚ್ಚಿಸುತ್ತಿದ್ದರು, ಆದರೆ ಸುಮಲತಾರಿಗೆ ‘ಹೈ ಕಮಾಂಡ್’ ಇಲ್ಲ, ಹಾಗಾಗಿ ದೇವೇಗೌಡರಿಗೆ ಏನು ಮಾಡಲಾಗುತ್ತಿಲ್ಲ. ಸುಮಲತಾರವರು ಮಾಡುತ್ತಿರುವ ಆರೋಪಗಳು ನಿಜವಾಗಿರಬಹುದು ಅಥವಾ ಸುಳ್ಳಾಗಿರಬಹುದು, ತನಿಖೆಯಿಂದ ಮಾತ್ರ ತಿಳಿಯುತ್ತದೆ.

ಆದರೆ ಒಂದು ಆರೋಪ ಬಂದಾಗ ಜನರ ಮುಂದೆ ಆರೋಪದ ಬಗ್ಗೆ ಪ್ರತಿಕ್ರಿಯಿಸುವ ರೀತಿ ತಿಳಿದಿರಬೇಕು, ತಾಳ್ಮೆ ಕಳೆದುಕೊಂಡು ಬಾಯಿಗೆ ಬಂದಂತೆ ವಿರೋಧಿಗಳ ಚಾರಿತ್ರ್ಯವಧೆ ಮಾಡಲು ನಿಂತರೆ ರಾಜಕೀಯ ಜೀವನದಲ್ಲಿ ಅಲ್ಲೋಲಕಲ್ಲೋಲವಾಗುತ್ತದೆ. ಸುಮಲತಾ ಮಾಡುತ್ತಿರುವ ಆರೋಪದ ಹಿಂದೆ ಸ್ಥಳೀಯ ಕಾಂಗ್ರೆಸ್ ನಾಯಕರಿರುವ ವಿಷಯ ತಿಳಿದಿದ್ದರೂ ಸಹ ಕುಮಾರಸ್ವಾಮಿ ಮಂಡ್ಯದಲ್ಲಿ ರಾಜಕೀಯ ಅಸ್ತಿತ್ವವನ್ನು ಉಳಿಸಿಕೊಳ್ಳಲು ಪ್ರಬುದ್ಧತೆಯ
ತಂತ್ರಗಾರಿಕೆಯನ್ನು ಮಾಡಬೇಕೆ ಹೊರತು ನೆಲಮಟ್ಟಕ್ಕಿಳಿದು ಮಾತನಾಡಬಾರದು.

ಒಮ್ಮೆ ಆಡಿದ ಮಾತನ್ನು ಕುಮಾರಸ್ವಾಮಿಯವರು ಮತ್ತೊಮ್ಮೆ ಆಡಿದ್ದೇನೆಂದು ಒಪ್ಪಿಕೊಳ್ಳುವುದಿಲ್ಲ, ತಾನು ಆಡಿದ ಮಾತನ್ನು ಹೇಳೇ ಇಲ್ಲವೆಂದು ಹಲವು ಬಾರಿ ತಿರುಚಿ ಮಾತನಾಡಿದ ಉದಾಹರಣೆಯಿದೆ. ಕುಮಾರಸ್ವಾಮಿ ಈ ವಿಷಯಕ್ಕಾಗಿಯೇ ಸಾಮಾಜಿಕ ಜಾಲತಾಣಗಳಲ್ಲಿ ಅತಿ ಹೆಚ್ಚು  ‘ಟ್ರೋಲ್’ಗೆ ಒಳಗಾಗುವುದು, ನಾಲಗೆಯ ಮೇಲೆ ಹಿಡಿತವಿಲ್ಲದೆ ಜೆಡಿಎಸ್ ಪಕ್ಷದ ಜತೆ ಹೊಂದಾಣಿಕೆ ರಾಜಕೀಯಕ್ಕೆ ಕಟ್ಟುಬಿದ್ದಿರುವ ಮತ್ತೊಬ್ಬ ‘ಸಂಸದ’ ಜೆಡಿಎಸ್ ನಾಯಕರ ಪರವಾಗಿ ನಿಲ್ಲುವ ಸಲುವಾಗಿ ಸುಮಲತಾರ ವಿರುದ್ಧ ಮಾತನಾಡುತ್ತಿದ್ದಾನೆ. ಆರೋಪ ಪ್ರತ್ಯಾರೋಪಗಳೇನೇ ಇದ್ದರೂ ಸಹ ಬಾಯಿಗೆ ಕಡಿವಾಣ ಹಾಕಲಿಲ್ಲವೆಂದರೆ ಸಾಮಾಜಿಕ ಜೀವನದಲ್ಲಿ ಮುಂದುವರಿಯಲು ಸಾಧ್ಯವಾಗುವುದಿಲ್ಲ 2019ರ ಚುನಾವಣೆಯಲ್ಲಿ ಮಾಡಿದ ತಪ್ಪಿನಿಂದ ಮಂಡ್ಯದ ಜನ ಪಾಠ ಕಲಿಸಿದ ಮೇಲೂ ಸಹ ತನ್ನ ಮೊಂಡುವಾದವನ್ನು ಕುಮಾರಸ್ವಾಮಿ ಮುಂದುವರಿಸುತ್ತಿದ್ದರೆ 2023ರಲ್ಲಿ ಮತ್ತೊಮ್ಮೆ ಇತಿಹಾಸ ಪುನರಾವರ್ತನೆಯಾಗುವುದರಲ್ಲಿ ಯಾವುದೇ
ಅನುಮಾನವಿಲ್ಲ, ಕುಂಬಳಕಾಯಿ ಕಳ್ಳನೆಂದರೆ ಹೆಗಲು ಮುಟ್ಟಿಕೊಂಡು ನೋಡಿಕೊಳ್ಳುವುದನ್ನು ಮೊದಲು ಬಿಡಲಿ.

Leave a Reply

Your email address will not be published. Required fields are marked *