Saturday, 23rd November 2024

ಔಷಧ ವಿಜ್ಞಾನ ಗ್ರಂಥ ಡಿ ಮೆಟೀರಿಯ ಮೆಡಿಕ

ಹಿಂದಿರುಗಿ ನೋಡಿದಾಗ
ಡಾ.ನಾ.ಸೋಮೇಶ್ವರ

ಪ್ರಾಚೀನ ಜಗತ್ತಿನ ಎಲ್ಲ ಸಂಸ್ಕೃತಿಗಳಲ್ಲಿ ವೈದ್ಯಕೀಯ ಕೃತಿಗಳು ರಚನೆಯಾಗಿವೆ. ಈ ಕೃತಿಗಳಲ್ಲಿ ಶರೀರದ ರಚನೆ, ರೋಗಗಳ ವಿವರ, ಅವುಗಳಿಗೆ ಚಿಕಿತ್ಸೆ ಮತ್ತು ಶಸ್ತ್ರವೈದ್ಯಕೀಯದ ವಿವರಗಳಿವೆ.

ಇವುಗಳಲ್ಲಿ ಪ್ರಧಾನ ಭಾಗವೆಂದರೆ ಔಷಧಗಳನ್ನು ಸಿದ್ಧಪಡಿಸುವ ವಿಧಾನದ ಬಗೆಗಿನ ಮಾಹಿತಿ. ಔಷಧಗಳನ್ನು ಸಿದ್ಧಪಡಿಸುವುದು ಅಷ್ಟು  ಸುಲಭ ವಾಗಿರಲಿಲ್ಲ. ವೈದ್ಯಕೀಯ ತಿಳಿವಳಿಕೆಯ ಜತೆಗೆ ಅಪಾರ ತಾಳ್ಮೆಯಿರಬೇಕಾಗಿತ್ತು. ಔಷಧಗಳನ್ನು ವಿಧಿ ನಿಷೇಧಗಳಿಗೆ ಅನುಗುಣವಾಗಿ ತಯಾರಿಸ
ಬೇಕಿತ್ತು. ಹಾಗಾಗಿ ಈ ವಿದ್ಯೆಯನ್ನು ಹೆಚ್ಚು ಜನರು ಕಲಿಯುತ್ತಿರಲಿಲ್ಲ. ಹಾಗೆ ಕಲಿಯಬೇಕೆನಿಸಿದರೂ ಕಲಿಸುವವರು ವಿರಳ. ಹಾಗಾಗಿ ಔಷಧಗಳನ್ನು ತಯಾರಿಸುವ ವಿದ್ಯೆ ಕೆಲವೇ ಕೆಲವರ ಸ್ವತ್ತಾಗಿ ತಲೆತಲಾಂತರದಲ್ಲಿ ಹರಿದುಬರಲಾರಂಭಿಸಿತು. ಔಷಧಗಳ ತಯಾರಿಸಲು ಅಗತ್ಯ ವಸ್ತುಗಳನ್ನು ಮೂರು ಮೂಲಗಳಿಂದ ಪಡೆಯುತ್ತಿದ್ದರು. ಸಸ್ಯಜನ್ಯ ವಸ್ತು ಗಳು, ಪ್ರಾಣಿಜನ್ಯ ವಾಸ್ತುಗಳು ಹಾಗೂ ಖನಿಜಜನ್ಯ ರಾಸಾಯನಿಕಗಳು.

ಇವುಗಳಲ್ಲಿ ಸಸ್ಯ, ಪ್ರಾಣಿ ಹಾಗೂ ಖನಿಜ ವಸ್ತುಗಳ ಸಂಗ್ರಹಣೆ, ದೀರ್ಘಕಾಲ ಕೆಡದಂತೆ ರಕ್ಷಿಸಿಡುವ ತಂತ್ರ, ಯಾವ ಔಷಧಕ್ಕೆ ಯಾವ ವಸ್ತುವನ್ನು ಯಾವ ಪ್ರಮಾಣದಲ್ಲಿ ಬಳಸಬೇಕು, ಹೇಗೆ ಬಳಸಬೇಕು, ಯಾವ ರೂಪ ದಲ್ಲಿ ಬಳಸಬೇಕು, ದಿನಕ್ಕೆ ಎಷ್ಟು ಸಲ ಬಳಸಬೇಕು, ಸೇವಿಸಬೇಕಾದ ಔಷಧ ಪ್ರಮಾಣ, ಪಥ್ಯ ಪರಿಪಾಲನೆ ಇತ್ಯಾದಿಗಳು ಅತ್ಯಂತ ತಾಂತ್ರಿಕಮಯವಾಗಿದ್ದವು. ಹಾಗಾಗಿ ವೈದ್ಯಕೀಯದಲ್ಲಿ ಔಷಧ ನಿರ್ಮಾಣ ವಿಜ್ಞಾನವು ಒಂದು ಪ್ರತ್ಯೇಕ ಉಪ ವಿಜ್ಞಾನವಾಗಿ ಬೆಳೆಯಿತು. ನಮಗೆ ದೊರೆತಿರುವ ದಾಖಲೆಗಳ ಅನ್ವಯ, ಔಷಧಗಳ ತಯಾರಿಕಾ ವಿಜ್ಞಾನದ ಬಗ್ಗೆ ಬರೆದಿರುವ ಅತ್ಯಂತ ಪ್ರಾಚೀನ ದಾಖಲೆಯು, ಈಜಿಪ್ಟ್ ಸಂಸ್ಕೃತಿಯಲ್ಲಿ ದೊರೆ ತಿದೆ.

ಇದುವೇ ‘ಈಬರ್ಸ್ ಪ್ಯಾಪಿರಸ್’. ಕ್ರಿ.ಪೂ.1552ರಲ್ಲಿ ರಚನೆಯಾಗಿರಬಹುದಾದ 110 ಪುಟಗಳ ಪ್ಯಾಪಿರಸ್ ಹಾಳೆಗಳ ಕೃತಿಯಿದು. ಸುಮಾರು 20 ಮೀಟರ್ ಉದ್ದವಿದೆ. ಈ ಪ್ರತಿಯ ರಚನೆಯ ಕಾಲ ಕ್ರಿ.ಪೂ.1552. ಆದರೂ, ಇದರಲ್ಲಿರುವ ಮಾಹಿತಿಯು ಕ್ರಿ.ಪೂ.3400ವರ್ಷಗಳಷ್ಟು ಹಳೆಯದ್ದು. ಇದನ್ನು ಸ್ವಯಂ ‘ಥೊತ್’ ಎಂಬ ದೇವರೇ ಬರೆದ ಎಂದು ಈಜಿಪ್ಷಿ ಯನ್ನ ಸಾಂಪ್ರದಾಯಿಕ ನಂಬಿಕೆ. ಹಾಗಾಗಿ ಈಬರ್ಸ್ ಪ್ಯಾಪಿರಸ್ ಎನ್ನುವುದು ಪ್ರಾಚೀನ ಈಜಿಪ್ಷಿಯನ್ ಸಂಸ್ಕೃತಿಯಲ್ಲಿ ಬೆಳೆದು ಬಂದ ವೈದ್ಯಕೀಯ ವಿಜ್ಞಾನದ ಸಂಗ್ರಹ ಎನ್ನಬಹುದು. ಇದರಲ್ಲಿ ಈಜಿಪ್ಷಿಯನ್ನರು ಬಳಸುತ್ತಿದ್ದ  ಸುಮಾರು ೭೦೦ ಔಷಧಗಳನ್ನು ತಯಾರಿಸುವ ವಿವರಣೆಗಳಿವೆ. ಜತೆಗೆ ಮಂತ್ರ- ತಂತ್ರ ಪ್ರಯೋಗಗಳ ಬಗ್ಗೆ ಮಾಹಿತಿಯಿದೆ.

ಏಕೆಂದರೆ ರೋಗಗಳನ್ನುಂಟು ಮಾಡುವ ದುಷ್ಟಶಕ್ತಿಗಳಿವೆ ಎಂದು ಅವರು ನಂಬಿದ್ದರು. ಅವನ್ನು ಉಚ್ಛಾಟಿಸಲು ಮಂತ್ರಪ್ರಯೋಗವನ್ನು ಮಾಡು ತ್ತಿದ್ದರು. ಬಹುಶಃ ಇದು ಜಗತ್ತಿನ ಮೊತ್ತಮೊದಲ ಔಷಧ ವಿಜ್ಞಾನ ಸಂಗ್ರಹ ಎನ್ನಬಹುದು. ಭಾರತದಲ್ಲಿ ವೈದ್ಯಕೀಯದ ಆರಂಭವು ಪುರಾಣ ಗಳಲ್ಲಿ ಮಿಳಿತವಾಗಿದೆ. ಇದನ್ನು ಧನ್ವಂತರಿಯು ಭೂಮಿಗೆ ತಂದನು. ಕ್ರಿ.ಪೂ.೧೦೦೦ ವರ್ಷಗಳಷ್ಟು ಹಿಂದೆ ರಚನೆಯಾದ ಅಥರ್ವ ವೇದದಲ್ಲಿ ರೋಗಗಳ ಉಲ್ಲೇಖ ಹಾಗೂ ಅವುಗಳ ಶಮನಕ್ಕಾಗಿ ಬಳಸುತ್ತಿದ್ದ ಮೂಲಿಕೆಗಳ ಉಲ್ಲೇಖವಿದೆ. ವೇದಕಾಲದಲ್ಲಿ ಪ್ರಚಲಿತವಿದ್ದ ಆರೋಗ್ಯ ವಿಜ್ಞಾನ ವನ್ನು ಮೊದಲ ಬಾರಿಗೆ ಮಹರ್ಷಿ ಅಗ್ನಿವೇಶರು ಸಂಗ್ರಹಿಸಿದರು. ಇದನ್ನು ಕ್ರಿ.ಪೂ.800ರ ಹೊತ್ತಿಗೆ ಮಹರ್ಷಿ ಚರಕರು ಸಂಪಾದಿಸಿ ಚರಕ ಸಂಹಿತೆ ಯನ್ನು ರಚಿಸಿದರು.

ಕ್ರಿ.ಪೂ.800-ಕ್ರಿ.ಶ.1000 ವರೆಗಿನ ಕಾಲವನ್ನು ಆಯುರ್ವೇದದ ಸುವರ್ಣಯುಗವೆನ್ನಬಹುದು. ಚರಕಸಂಹಿತ, ಸುಶ್ರುತ ಸಂಹಿತ ಹಾಗೂ ಅಷ್ಟಾಂಗ
ಹೃದಯ ಸಂಹಿತಗಳು ಆಯುರ್ವೇದದ ಬೃಹತ್ ತ್ರಯೀ ಎಂದು ಹೆಸರಾಗಿವೆ. ಚರಕಸಂಹಿತೆಯಲ್ಲಿ ನಾನಾ ಔಷಧಗಳ ಮಾಹಿತಿಯಿದೆ. ಪ್ರಾಚೀನ ಚೀನಾ ದೇಶದಲ್ಲಿ, ಕ್ರಿ.ಪೂ.೧೬೮ ಕಾಲಮಾನಕ್ಕೆ ಸೇರಿದ ಮವಾಂಗ್ಡು ಸಮಾಧಿಯಲ್ಲಿ ೫೨ರ ರೋಗಗಳ ಉಪಶಮನದ ಔಷಧಗಳು ಎನ್ನುವ ಹಸ್ತಪ್ರತಿಯು ದೊರೆಯಿತು.

ಇದನ್ನು ಶೆನಾಂಗ್ ಎಂಬ ಪೌರಾಣಿಕ ವ್ಯಕ್ತಿಯು ಸಂಪಾದಿಸಿದ. ಕ್ರಿ.ಶ.100ರಲ್ಲಿ ಹಾನ್ ವಂಶಸ್ಥರು ಆಳುತ್ತಿದ್ದಾಗ, ಶೆನಾಂಗ್ ಬೆಂಕಾವೋ ಜಿಂಗ್ ಎಂಬ ಹೆಸರಿನಲ್ಲಿ ಪ್ರಕಟಿಸಿದ. ಇದರಲ್ಲಿ 252 ಮೂಲಿಕೆಗಳ ವಿವರಗಳು ಹಾಗೂ 365 ಔಷಧಗಳ ತಯಾರಿಕಾ ವಿಧಾನಗಳು ದಾಖಲಾಗಿವೆ. ಮುಂದೆ ಕ್ರಿ.ಶ.7
ನೆಯ ಶತಮಾನದ ಟಾಂಗ್ ವಂಶಸ್ಥರು ಆಳುತ್ತಿದ್ದ ಸಮಯದಲ್ಲಿ ಅದುವರೆಗೂ ಲಭ್ಯವಿದ್ದ ಚೀನೀ ಔಷಧ ತಯಾರಿಕಾ ವಿಜ್ಞಾನವನ್ನು ಸಂಗ್ರಹಿಸಿ ‘ಯಾವೋಶಿಂಗ್ ಲುನ್’ ಎಂಬ ಗ್ರಂಥವು ಚೀನೀ ವೈದ್ಯಕೀಯಕ್ಕೆ ಬುನಾದಿಯನ್ನು ಹಾಕಿತು.

ಹಿಪ್ರೋಕ್ರೇಟ್ಸ್ ತನ್ನ ಅ-ಯಿಸಂ ಮತ್ತು ಪ್ರೋಗ್ನೋಸ್ಟಿಕ್ಸ್ ಪುಸ್ತಕಗಳಲ್ಲಿ, ತನ್ನ ಕಾಲದಲ್ಲಿ ಪ್ರಚಲಿತವಿದ್ದ 265 ಔಷಧಗಳನ್ನು ಸಂಗ್ರಹಿಸಿದ. ಅವನ್ನು ಹೇಗೆ ನಾನಾ ರೋಗಗಳ ಉಪಶಮನದಲ್ಲಿ ಬಳಸಬಹುದು ಎನ್ನುವುದನ್ನು ದಾಖಲಿಸಿದ. ಹಿಪ್ರೋಕ್ರೇಟ್ಸಿನ ಶಿಷ್ಯ ಥಿಯೋ-ಸ್ಟಸ್ ಸಮಕಾಲೀನ ಸಸ್ಯಗಳ ಬಗ್ಗೆ ಸಮಗ್ರ ಮಾಹಿತಿಯನ್ನು ಸಂಗ್ರಹಿಸಿ ಹಿಸ್ಟೋರಿಯ ಪ್ಲಾಂಟಾರಂ ಎಂಬ ಗ್ರಂಥವನ್ನು ಕ್ರಿ.ಪೂ.೩೦೦ರಲ್ಲಿ ಬರೆದ. ಇದರಲ್ಲಿ ಸಸ್ಯಗಳ ವರ್ಗೀಕರಣದ ಜತೆಯಲ್ಲಿ ಅವುಗಳ ವೈದ್ಯಕೀಯ ಉಪಯೋಗದ ಬಗ್ಗೆಯೂ ದಾಖಲಿಸಿದ. ಗ್ಯಾಲನ್ ರೋಮನ್ ವೈದ್ಯನಾಗಿದ್ದು ಔಷಧಗಳ ತಯಾರಿಕೆಯಲ್ಲಿ ಆಸಕ್ತಿವಹಿಸಿದ್ದ.

ಆನ್ ಥೇರಿಯಾಕ್ ಟು ಪಿಸೋ, ಆನ್ ಥೇರಿಯಾಕ್ ತೊ ಪಾಂಪಿಲಸ್ ಮತ್ತು ಆನ್ ಆಂಟಿಡೋಟ್ಸ್ ಕೃತಿಗಳಲ್ಲಿ 64 ಔಷಧ ಘಟಕಗಳಿಂದಾದ ಸರ್ವ ರೋಗಹಾರಿ ಔಷಧದ ಬಗ್ಗೆ ಬರೆದ. ಔಷಧ ವಿಜ್ಞಾನ ಕ್ಷೇತ್ರದಲ್ಲಿ ಕಂಡುಬಂದ ಅತ್ಯಂತ ಪ್ರಮುಖವಾದ ಗ್ರಂಥವೆಂದರೆ ಪೆಡಾನಿಯಸ್ ಡಯಾ ಸ್ಕೋರಿಡೆಸ್ (ಕ್ರಿ. ಶ.40 ಕ್ರಿ.ಶ.90) ಬರೆದ ಡಿ ಮೆಟೀರಿಯ ಮೆಡಿಕ ಎಂಬ ಐದು ಸಂಪುಟಗಳ ಗ್ರಂಥ. ಈ ಗ್ರಂಥವು ಸುಮಾರು 1500 ವರ್ಷಗಳ ಕಾಲ ಯೂರೋಪ್ ಹಾಗೂ ಅರಬ್ ದೇಶಗಳಲ್ಲಿ ಪ್ರಮುಖ ಔಷಧ ವಿಜ್ಞಾನ ಗ್ರಂಥವಾಗಿ ತನ್ನ ಜನಪ್ರಿಯತೆಯನ್ನು ಉಳಿಸಿಕೊಂಡಿತು.

ಡಯಾಸ್ಕೋರಿಡೆಸ್ ಏಷ್ಯಾ ಮೈನರ್ ಪ್ರದೇಶದ, ಸಿಲೀಸಿ ಯ ಪ್ರಾಂತದ, ಅನಾಜ಼ರ್ಬಸ್ ಎಂಬಲ್ಲಿ ಹುಟ್ಟಿದ. ಹತ್ತಿರದಲ್ಲಿಯೇ ಇದ್ದ ಟಾರ್ಸಸ್ ಎಂಬ ಸ್ಥಳದಲ್ಲಿ ವೈದ್ಯಕೀಯ ಶಿಕ್ಷಣ ವನ್ನು ಪಡೆದ. ಇವನು ಗ್ರೀಕನಾಗಿದ್ದರೂ, ತನ್ನ ಹೆಸರಿನಲ್ಲಿ ಪೆಡಾನಿಯಸ್ ಎಂಬ ರೋಮನ್ ಹೆಸರನ್ನು ಸೇರಿಸಿ ಕೊಂಡಿರುವುದು ಗಮನೀಯ. ಬಹುಶಃ ಶ್ರೀಮಂತ ರೋಮನ್ ವ್ಯಕ್ತಿಯೊಬ್ಬನು ಈತನಿಗೆ ರೋಮ್ ನಾಗರಿಕನಾಗಲು ನೆರವಾಗಿರಬೇಕು. ಈತನು ತಾನು ರೋಮನ್ ಸೇನಾ ವೈದ್ಯ ಎಂದು ಹೇಳಿಕೊಂಡಿದ್ದಾನೆ. ಇವನು ಪೂರ್ವ ಮೆಡಿಟೇರೇನಿಯನ್ ಪ್ರದೇಶದ ಗ್ರೀಕನಾಗಿದ್ದ ಕಾರಣ, ತನ್ನ ಪರಿಸರದಲ್ಲಿ ದೊರೆಯುವ ಔಷಽಯ ವಸ್ತುಗಳನ್ನು ಕುರಿತು ಗ್ರಂಥವನ್ನು ಗ್ರೀಕ್ ಭಾಷೆಯಲ್ಲಿಯೇ ಬರೆದ.

ಇವನ ಪುಸ್ತಕವು ಕಾಲಕ್ರಮೇಣ ಲ್ಯಾಟಿನ್ ಭಾಷೆಗೆ ಡಿ ಮೆಟೀರಿಯ ಮೆಡಿಕ ಎಂಬ ಹೆಸರಿನಲ್ಲಿ ಅನುವಾದವಾಯಿತು. ಇದನ್ನು ವೈದ್ಯಕೀಯ ವಸ್ತು  ಗಳನ್ನು ಕುರಿತಂತೆ ಎಂದು ಅರ್ಥೈಸಬಹುದು. ಈ ಪದ ಪ್ರಯೋಗವು ಕ್ರಿ.ಶ.1ನೆಯ ಶತಮಾನದಿಂದ 20ನೆಯ ಶತಮಾನದವರೆಗೆ ಅಸ್ತಿತ್ವದಲ್ಲಿತ್ತು. ಕೊನೆಗೆ ಈ ಪ್ರಯೋಗದ ಬದಲು ಫಾರ್ಮಕಾಲಜಿ (ಔಷಧ ವಿಜ್ಞಾನ) ಎಂಬ ಹೊಸ ಹೆಸರು ಅಸ್ತಿತ್ವಕ್ಕೆ ಬಂದಿತು. ಹಾಗಾಗಿ ‘ಡಿ ಮೆಟೀರಿಯ ಮೆಡಿಕ’ವನ್ನು ವಿಶ್ವದ ಮೊದಲ ಬೃಹತ್ ಔಷಧ ವಿಜ್ಞಾನದ ಗ್ರಂಥ ಎಂದು ಕರೆಯಬಹುದು.

ಡಿ ಮೆಟೀರಿಯ ಮೆಡಿಕದಲ್ಲಿ 600 ಸಸ್ಯಗಳ ವಿವರಣೆಗಳಿವೆ. ಸಸ್ಯೋತ್ಪನ್ನಗಳಿಂದ ತಯಾರಿಸಬಹುದಾದ 4740 ಔಷಧಗಳ ತಯಾರಿಕಾ ವಿಧಾನಗಳಿವೆ. ಔಷಧಗಳ ವಿವಿಧ ಲಕ್ಷಣಗಳ, ಅಂದರೆ ಅವು ಜ್ವರಹಾರಕವೇ, ನೋವು ನಿವಾರಿಕವೇ, ನಿದ್ರಾಕಾರಕವೇ, ವಾಂತಿರೋಧಕವೇ ಎಂದು 360 ಗುಣಲಕ್ಷಣ
ಗಳನ್ನು ಉಲ್ಲೆಖಗಳಿವೆ. ಔಷಧಗಳ ತಯಾರಿಕೆಯಲ್ಲಿ ಬಳಸುವ ಪ್ರಾಣಿಜನ್ಯ ಹಾಗೂ ಖನಿಜಜನ್ಯ ವಸ್ತುಗಳ ವಿವರಗಳಿವೆ. ಡಯಾಸ್ಕೋರಿಡೆಸ್ ಔಷಧ ಸಸ್ಯಗಳನ್ನು ವರ್ಗೀಕರಣ ಮಾಡಿದ್ದಾನೆ. ವರ್ಗೀಕರಣವು ಸಸ್ಯಶಾಸ್ತ್ರೀವಾಗಿ ಇಲ್ಲ. ಬದಲಿಗೆ ಅವುಗಳ ಔಷಧಿಯ ಗುಣಲಕ್ಷಣಗಳನ್ನು ಆಧರಿಸಿ
ದೆ. ಡಿ ಮೆಟೀರಿಯ ಮೆಡಿಕದಲ್ಲಿ ಐದು ಸಂಪುಟಗಳಿವೆ. ಮೊದಲ ಸಂಪುಟದಲ್ಲಿ ಸುವಾಸನಾ ಸಸ್ಯತೈಲಗಳು, ಮುಲಾಮುಗಳು, ಲೇಪನಗಳು, ಗಿಡ ಮರ ಗಳು, ಪೊದೆಗಳು, ಹೂವುಗಳು, ರಸಭರಿತ ಹಣ್ಣುಗಳ ವಿವರಣೆಗಳಿವೆ.

ಎರಡನೆಯ ಸಂಪುಟದಲ್ಲಿ ನಾನಾ ಪ್ರಾಣಿಗಳು, ಪ್ರಾಣಿಗಳ ನಾನಾ ಅಂಗಗಳ ವೈದ್ಯಕೀಯ ಉಪಯೋಗಗಳು, ಪ್ರಾಣಿಜನ್ಯ ವಸ್ತುಗಳು, ಧಾನ್ಯಗಳು, ಬೇಳೆಕಾಳುಗಳ ಹಾಗೂ ಹಲವು ಮೂಲಿಕೆಗಳ ವಿವರಣೆಯಿದೆ. ಮೂರನೆಯ ಸಂಪುಟದಲ್ಲಿ ಸಸ್ಯ ಬೇರುಗಳು, ಗಡ್ಡೆಗಳು, ರಸಗಳು, ಮೂಲಿಕೆಗಳು, ಆಹಾರವಾಗಿ ಅಥವ ಔಷಧವಾಗಿ ಬಳಸಬಹುದಾದ ಬೀಜಗಳ ವರ್ಣನೆಯಿದೆ. ನಾಲ್ಕನೆಯ ಸಂಪುಟಗದಲ್ಲಿ ಕೆಲವು ಮೂಲಿಕೆಗಳು ಹಾಗೂ ಬೇರುಗಳ ವಿವರಗಳಿವೆ. ಈ ಸಂಪುಟದಲ್ಲಿ ಮತ್ತು ಬರಿಸುವ ಸಸ್ಯಗಳು ಹಾಗೂ ವಿಷ ಸಸ್ಯಗಳ ಸಮಗ್ರ ಮಾಹಿತಿಯಿದೆ.

ಐದನೆಯ ಸಂಪುಟದಲ್ಲಿ ವಿವಿಧ ದ್ರಾಕ್ಷಾರಸ ತಯಾರಿಕೆ ಹಾಗೂ ಖನಿಜಗಳ ಗುಣಲಕ್ಷಣಗಳ ಬಗ್ಗೆ ಮಾಹಿತಿಯಿದೆ. ಗ್ರೀಕ್ ಮತ್ತು ಲ್ಯಾಟಿನ್ ಭಾಷೆ ಯಲ್ಲಿದ್ದ ಡಿ ಮೆಟೀರಿಯ ಮೆಡಿಕ ಸಂಪುಟಗಳನ್ನು ಅರಾಬಿಕ್ ಭಾಷೆಗೆ ಅನುವಾದಿಸಿದರು. ಹಾಗಾಗಿ ಈ ಸಂಪುಟಗಳು ಯೂರೋಪ್ ಮತ್ತು ಮಧ್ಯ ಪ್ರಾಚ್ಯದಲ್ಲಿ ಸರ್ವಮಾನ್ಯವಾಯಿತು. ಮುದ್ರಣ ತಂತ್ರ ಜ್ಞಾನವಿಲ್ಲದ ಆ ದಿನಗಳಲ್ಲಿ ಈ ಸಂಪುಟಗಳನ್ನು ಮತ್ತೆ ಮತ್ತೆ ನಕಲು ಮಾಡಿ ಹಂಚಬೇಕಾಗಿತ್ತು. ಈ ಕೆಲಸವು ಶತ ಶತಮಾನಗಳ ಕಾಲ ನಡೆಯಿತು. ಈ ಪುಸ್ತಕವನ್ನು ನಕಲು ಮಾಡುವವರು ತಾವು ಅರಬ್ಬಿ ಇಲ್ಲವೇ ಭಾರತ ಮೂಲದಿಂದ ಪಡೆದಿದ್ದ ಅರಿವನ್ನೂ ಸೇರಿಸುತ್ತಿದ್ದರು.

ಕೊನೆಗೆ ಇಬ್ನ್ ಅಲ್ ಬೈತರ್ (1197-1248) ಎಂಬ ಅರಬ್ ವೈದ್ಯನು ಡಿ ಮೆಟೀರಿಯ ಮೆಡಿಕ ಗ್ರಂಥಕ್ಕೆ ತನ್ನ ಭಾಷ್ಯ ಬರೆದು ತಫ್ಸೀರ್ ಕಿತಾಬ್
ಡಯಾ ಸ್ಕುರಿಡಸ್‌ಎಂಬ ಹೆಸರಿನಲ್ಲಿ ಪ್ರಕಟಿಸಿದ. ಯೂರೋಪಿನ ಹಲವು ಭಾಷೆಗಳಿಗೆ ಅನುವಾದವಾಗಿ, ಹಲವು ಆವೃತ್ತಿಗಳು ಪ್ರಕಟವಾಗಿ, ೧೯ನೆಯ ಶತಮಾನದವರೆಗೆ ಅರ್ಧ ಜಗತ್ತನ್ನು ಆಳಿತು. ಅದಕ್ಕಾಗಿ ಒಂದು ಸಸ್ಯಕುಲಕ್ಕೆ ಡಯಾಸ್ಕೋರಿಯ ಎಂದು ಹೆಸರನ್ನು ನೀಡಿ, ಭಾರತದಿಂದ ಹಿಡಿದು,
ಇಂಡೋನೇಷ್ಯಾ ಮೂಲಕ ಚೀನದವರೆಗೆ ಹರಡಿರುವ ಒಂದು ಚಿಟ್ಟೆಗೆ ಆಂಪಿಟ್ಟ ಡಯಾಸ್ಕೋರಿಡೆಸ್ ಎಂದು ನಾಮಕರಣ ಮಾಡಿ ಆತನಿಗೆ ಗೌರವ ವನ್ನು ನೀಡಲಾಗಿದೆ.