BMTC: ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ ಬಿಎಂಟಿಸಿ ಹೊರೆ
BMTC: ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ ಬಿಎಂಟಿಸಿ ಹೊರೆ
Ashok Nayak
December 15, 2024
ಆದಾಯಕ್ಕಿಂತ, ವೆಚ್ಚವೇ ಹೆಚ್ಚಾಗಿದೆ ಎನ್ನುವ ಅಂಶ ಬಹಿರಂಗ
ಬಿಎಂಟಿಸಿಗೆ ಬೇಕಿದೆ ಸರಕಾರದ ಬೃಹತ್ ಬಂಡವಾಳ ಹೂಡಿಕೆ
ಅಪರ್ಣಾ ಎ.ಎಸ್. ಬೆಂಗಳೂರು
ಬೆಂಗಳೂರಿಗರ ಸಾರಿಗೆಯ ಜೀವನಾಡಿಯಾದ ಬಿಎಂಟಿಸಿಯ ಆರ್ಥಿಕ ಸ್ಥಿತಿಯು ದಿನದಿಂದ ದಿನಕ್ಕೆ ಕುಂಠಿತ ವಾಗುತ್ತಿದೆ. ಈ ಬೆಳವಣಿಗೆಯು ಅಪಾಯಕಾರಿಯಾಗಿದ್ದು ರಾಜ್ಯ ಸರಕಾರ ಈ ಕುರಿತು ಗಂಭೀರವಾಗಿ ಪರಿಗಣಿಸುವ ಅಗತ್ಯವಿದೆ ಎಂದು ಸಿಎಜಿ ವರದಿಯು ಎಚ್ಚರಿಕೆ ನೀಡಿದೆ.
ಅಧಿವೇಶನದಲ್ಲಿ ಮಂಡನೆಯಾದ 2017ರಿಂದ 2022ರವರೆಗೆ ಬಿಎಂಟಿಸಿ ಕಾರ್ಯನಿರ್ವಹಣೆ ಹಾಗೂ ಕಾರ್ಯ ಕ್ಷಮತೆಯ ಲೆಕ್ಕ ಪರಿಶೋಧನೆಯಲ್ಲಿ, ವರ್ಷದಿಂದ ವರ್ಷಕ್ಕೆ ಬಿಎಂಟಿಸಿಯ ವೆಚ್ಚ ಹಾಗೂ ಆದಾಯದಲ್ಲಿ ಅಂತರ ಹೆಚ್ಚಾಗುತ್ತಿದ್ದು, ಇದನ್ನು ಸರಕಾರವು ಗಂಭೀರವಾಗಿ ಪರಿಗಣಿಸಬೇಕು ಎಂದು ವರದಿ ಹೇಳಿದ್ದು, ಒಂದು ಕಡೆಯಲ್ಲಿ ಬಿಎಂಟಿಸಿ ನಿಗಮದ ವೆಚ್ಚ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದ್ದರೆ, ಇನ್ನೊಂದುನ ಕಡೆಯಲ್ಲಿ ಆದಾಯದಲ್ಲಿಯೂ ಭಾರೀ ಪ್ರಮಾಣದ ಬದಲಾವಣೆಯೂ ಕಂಡು ಬರುತ್ತಿಲ್ಲ.
ಆದರಲ್ಲೂ ಕರೋನಾದ ಸಂದರ್ಭದಲ್ಲಿ ಡಿಪೋದಿಂದ ಹೊರಗೆ ಬಾರದ ಬಸ್‌ಗಳಿಂದಲೂ ಭಾರೀ ಪ್ರಮಾಣದಲ್ಲಿ ನಷ್ಟವುಂಟಾಗಿದೆ ಎನ್ನುವ ಅಂಶವೂ ಈ ವೇಳೆ ಬಹಿರಂಗವಾಗಿದೆ. ಈ ವರದಿಯನ್ನು 2021-2022ರ ಆರ್ಥಿಕ ವರ್ಷ ದವರೆಗೆ ಮಾಡಲಾಗಿದೆ. ಆದರೆ 2022-23 ಹಾಗೂ 2023-24ರ ಆರ್ಥಿಕ ವರ್ಷದಲ್ಲಿ ಆದಾಯ ಪ್ರಮಾಣ ಬಹು ದೊಡ್ಡ ಪ್ರಮಾಣದಲ್ಲಿ ವೃದ್ಧಿಯಾಗಿದೆ. ಇದರೊಂದಿಗೆ ರಾಜ್ಯ ಸರಕಾರದ ಶಕ್ತಿ ಯೋಜನೆಯಿಂದ ಬಿಎಂಟಿಸಿಗೆ ಸರಕಾರದಿಂದ ಬರಬೇಕಿರುವ ಅನುದಾನ ಹೆಚ್ಚಳವಾಗಿದೆ. ಆದರೂ ಕೂಡಾ ಆದಾಯ-ವೆಚ್ಚ ಸರಿದೂಗಿಸಲು ಮಾತ್ರಬಿಎಂಟಿಸಿಗೆ ಸಾಧ್ಯವಾಗುತ್ತಿಲ್ಲ ಎನ್ನುವುದು ಅಧಿಕಾರಿಗಳ ಮಾತಾಗಿದೆ. ಆದ್ದರಿಂದ ಸಿಎಜಿ ವರದಿಯಲ್ಲಿರುವ ಶಿಫಾರಸ್ಸಿನಂತೆ ಸರಕಾರವೇ ನಿಗಮದ ಮಂಡಳಿಯ ನೆರವಿಗೆ ಬರುವುದು ಅನಿರ್ವಾಯವಾಗಿದೆ.
ಕರೋನಾದಿಂದ ತೀವ್ರ ಸಂಕಷ್ಟಕ್ಕೆ: ಸಿಎಜಿ ವರದಿಯಲ್ಲಿರುವ ಅಂಕಿ-ಅಂಶದ ಪ್ರಕಾರ ಕರೋನಾ ಕಾಲಿಡುವ ಮೊದಲು ಆದಾಯ ಹಾಗೂ ವೆಚ್ಚದ ಅನುಪಾತ ಶೇ.130ರಿಂದ 142ರ ಆಸುಪಾಸಿನಲ್ಲಿತ್ತು. ಆದರೆ ಕರೋನಾ ದಿಂದಾಗಿ ಸುಮಾರು ಎರಡು ವರ್ಷಗಳ ಕಾಲ ಬಿಎಂಟಿಸಿ ಸಂಪೂರ್ಣ ಸ್ಥಗಿತಗೊಂಡಿದ್ದರಿಂದ ಆದಾಯ ಹಾಗೂ ವೆಚ್ಚದ ನಡುವಿನ ಅನುಪಾನ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ ಎನ್ನುವುದು ಸ್ಪಷ್ಟವಾಗಿದೆ. ಕರೋನಾ ಸಮಯದಲ್ಲಿ ಬಿಎಂಟಿಸಿ ಬಸ್‌ಗಳು ಸಂಚಾರ ನಡೆಸದಿದ್ದರೂ, ನೌಕರರಿಗೆ ಪೂರ್ಣ ವೇತನ ನೀಡಲಾಗಿದೆ. ಆದರೆ ಬಿಎಂಟಿಸಿ ಆದಾಯದ ಮೂಲವಾಗಿರುವ ಟಿಕೆಟ್ ಸಂಗ್ರಹಣೆ ಸಂಪೂರ್ಣ ಕುಸಿದು ಹೋಗಿತ್ತು. ಇದರಿಂದಾಗಿ ಆದಾಯ ಹಾಗೂ ವೆಚ್ಚದ ಅನುದಾನ 230ರ ಗಡಿ ದಾಟಿದೆ ಎನ್ನಲಾಗಿದೆ.
ಬಿಎಂಟಿಸಿಗೆ ಟಿಕೆಟ್ ಮಾರಾಟದಿಂದ ಶೇ.64ರಷ್ಟು ಅನುದಾನ ಬಂದರೆ, ಕರ್ನಾಟಕ ಸರಕಾರದ ವಿವಿಧ ಯೋಜನೆ ಗಳ ಹಣ ಪಾವತಿ ಸೇರಿದಂತೆ ವಿವಿಧ ಕಾರಣಗಳಿಗೆ ಶೇ.21ರಷ್ಟು ಆದಾಯ ಬರಲಿದೆ. ಇನ್ನುಳಿದಂತೆ ಪಾಸ್, ಬಾಡಿಗೆ, ಜಾಹೀರಾತು ಸೇರಿದಂತೆ ವಿವಿಧ ಮೂಲಗಳಿಂದ ಶೇ.15ರಷ್ಟು ಅನುದಾನ ಮಾತ್ರ ಬರಲಿದೆ. ಆದರೆ ಕರೋನಾ ಸಮಯದಲ್ಲಿ ಟಿಕೆಟ್‌ನಿಂದ ಬರಬೇಕಿರುವ ಆದಾಯ ಶೂನ್ಯಕ್ಕೆ ಇಳಿದಿದ್ದರೆ, ಸರಕಾರದಿಂದ ವೇತನ ನೀಡಲುಮಾತ್ರ ಅನುದಾನ ನೀಡುವ ಸ್ಥಿತಿಯುಂಟಾಗಿತ್ತು. ಹೀಗಾಗಿ ಬಿಎಂಟಿಸಿ ಇಂದು ಈ ಪರಿಸ್ಥಿತಿ ತಲುಪಿದೆ. ಈ ನಷ್ಟದ ಹೊರೆಯಿಂದ ಹೊರಬರಲು ಸರಕಾರದ ಸಹಾಯ ಬಹುದೊಡ್ಡ ಮಟ್ಟದಲ್ಲಿಯೇ ಬಿಎಂಟಿಸಿಗಿದೆ ಎಂದು ಸಿಎಜಿ ವರದಿಯಲ್ಲಿ ಉಲ್ಲೇಖಿಸಿದೆ.
ವೆಚ್ಚ ಹೆಚ್ಚಲು ಕಾರಣವೇನು?ಬಿಎಂಟಿಸಿಯಲ್ಲಿನ ಆದಾಯ ಸರಿಸುಮಾರು ಒಂದೇ ರೀತಿಯಲ್ಲಿದ್ದರೂ, ವೆಚ್ಚ ಮಾತ್ರ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಇದಕ್ಕೆ ತೈಲ ದರ ಏರಿಕೆ, ಯಂತ್ರೋಪಕರಣಗಳ ದರ ಏರಿಕೆ ಕಾರಣದಿಂದ ವೆಚ್ಚ ಹೆಚ್ಚಳವಾದರೂ,ಪ್ರಯಾಣಿಕರ ಸಂಖ್ಯೆಯಲ್ಲಿ ಬಹುದೊಡ್ಡ ಪ್ರಮಾಣದ ಬದಲಾವಣೆಯಾಗಿಲ್ಲ ಹಾಗೂ ವಿವಿಧ ಕಾರಣಕ್ಕೆದರ ಏರಿಕೆಗೂ ಹೆಚ್ಚಿನ ಅವಕಾಶವಿಲ್ಲದಿರುವುದು ಈ ಸಮಸ್ಯೆಗೆ ಕಾರಣವಾಗಿದೆ. ಇದರೊಂದಿಗೆ ಸಿಬ್ಬಂದಿಗಳ ವೇತನ ಪರಿಷ್ಕರಣೆ, ನಿವೃತ್ತಿಯಾದ ಸಿಬ್ಬಂದಿಗಳಿಗೆ ನೀಡಬೇಕಿರುವ ಮೊತ್ತವೆಲ್ಲ ಹೆಚ್ಚಳವಾಗಿದೆ ಎನ್ನಲಾಗಿದೆ.
***
ಬಿಎಂಟಿಸಿ ಸಾರ್ವಜನಿಕ ಸಾರಿಗೆಯಾಗಿರುವುದರಿಂದ, ಸರಕಾರದಿಂದ ಆರ್ಥಿಕ ಸಹಾಯ ಅಗತ್ಯ
ಆರ್ಥಿಕ ಸುಸ್ಥಿರತೆ ಕಾಪಾಡಿಕೊಳ್ಳಲು, ನಿಯಮಿತ ಅನುದಾನ ಹಾಗೂ ಹೂಡಿಕೆ ಮಾಡುವುದು ಅನಿವಾರ್ಯ
ರಿಯಾಯಿತಿ ಬಸ್ ಪಾಸ್‌ಗಳ ಬಾಕಿ ಹಣವನ್ನು ಕೂಡಲೇ ಬಿಡುಗಡೆಗೊಳಿಸಬೇಕು
ಮುಂದಿನ ದಿನದಲ್ಲಿ ರಿಯಾಯಿತಿ ಬಸ್ ಪಾಸ್ ಸೇರಿದಂತೆ ಸರಕಾರದಿಂದ ಬರಬೇಕಿರುವ ಅನುದಾನವನ್ನು ಕಾಲಕಾಲಕ್ಕೆ ನೀಡಬೇಕು.