Children Education: ಮಕ್ಕಳ ಶಿಕ್ಷಣದಲ್ಲಿ ಕಾರ್ಯ ಕ್ಷಮತೆ ಕುಸಿತ
Children Education: ಮಕ್ಕಳ ಶಿಕ್ಷಣದಲ್ಲಿ ಕಾರ್ಯ ಕ್ಷಮತೆ ಕುಸಿತ
Ashok Nayak
December 16, 2024
ಸಿಎಜಿ ನಡೆಸಿರುವ ಸಮೀಕ್ಷೆಯ ವರದಿಯಲ್ಲಿ ಅಂಕಿ-ಅಂಶ ಬಯಲು
ರಂಜಿತ್ ಎಚ್.ಅಶ್ವತ್ಥ
ಬೆಂಗಳೂರು: ಸರಕಾರಿ ಶಾಲೆಯಲ್ಲಿಯೂ ಗುಣಮಟ್ಟದ ಶಿಕ್ಷಣ ನೀಡಬೇಕೆಂಬ ಕಾರಣಕ್ಕೆ ರಾಜ್ಯ ಸರಕಾರ ಮಾದರಿಶಾಲೆಗಳನ್ನು ಆರಂಭಿಸಿದೆ. ಆದರೆ ವಿದ್ಯಾರ್ಥಿಗಳಲ್ಲಿ ಕಾರ್ಯಕ್ಷಮತೆ ಕುಸಿಯುತ್ತಿದೆ. ಅದರಲ್ಲಿಯೂ ಪ್ರಮುಖ ವಿಷಯಗಳಲ್ಲಿ ವಿದ್ಯಾರ್ಥಿಗಳ ಶ್ರೇಣಿ ಕುಸಿ ಯುತ್ತಿದೆ ಎಂಬ ಆತಂಕಕಾರಿ ವಿಷಯ ಬಯಲಾಗಿದೆ.
128 ಮಾದರಿ ಶಾಲೆ ಹಾಗೂ 16 ಶೈಕ್ಷಣಿಕ ಬ್ಲಾಕ್‌ಗಳಲ್ಲಿ ಸಿಎಜಿ ನಡೆಸಿರುವ ಸಮೀಕ್ಷೆ ಆಧಾರದಲ್ಲಿ ಮಹಾ ಲೆಕ್ಕ ಪರಿಶೋಧಕರು ವರದಿ ನೀಡಿದ್ದಾರೆ. ಈ ವರದಿಯಲ್ಲಿ ನಾಲ್ಕನೇ ತರಗತಿಗೆ ಹೋಲಿಸಿದರೆ, ಏಳನೇ ತರಗತಿಗೆಬರುವ ವೇಳೆಗೆ ವಿದ್ಯಾರ್ಥಿಗಳ ಕಾರ್ಯಕ್ಷಮತೆ ಕುಗ್ಗಿರುವುದು ಸ್ಪಷ್ಟವಾಗಿದೆ. 4ನೇ ತರಗತಿಯಲ್ಲಿ ಶೇ.1.39 ವಿದ್ಯಾರ್ಥಿಗಳು ಎ+ ಪಡೆದಿದ್ದರೆ, ಏಳನೇ ತರಗತಿ ವೇಳೆಗೆ ಇದರ ಸರಾಸರಿ ಸಂಖ್ಯೆ ಶೇ.0.59ಕ್ಕೆ ಕುಸಿಯುತ್ತಿದೆ.
ಒಂದರಿಂದ ಒಂಬತ್ತನೇ ತರಗತಿವರೆಗೆ ಅನುತೀರ್ಣಗೊಳಿಸುವುದಕ್ಕೆ ಅವಕಾಶವಿಲ್ಲದಿದ್ದರೂ ವಿದ್ಯಾರ್ಥಿಗಳಕಾರ್ಯಕ್ಷಮತೆ ಹಾಗೂ ಓದಿನಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ಪೂರಕ ತರಗತಿಗಳನ್ನು ತೆಗೆದುಕೊಳ್ಳುವಉದ್ದೇಶದಿಂದ ಶಾಲೆಗಳಲ್ಲಿ ಶ್ರೇಣಿ ವ್ಯವಸ್ಥೆ ಪರಿಚಯಿ ಸಲಾಗಿದೆ. 4ನೇ ತರಗತಿಯಲ್ಲಿರುವ ‘ಸಿ’ ಶ್ರೇಣಿಗೆ ಹೋಲಿಸಿದರೆ ೭ನೇ ತರಗತಿಗೆ ಕಡಿಮೆ ವಿದ್ಯಾರ್ಥಿಗಳಿದ್ದಾರೆ.
ಆದರೆ ಎ+, ಎನಲ್ಲಿ ಗಣನೀಯ ಕುಸಿತ ಕಾಣುತ್ತಿರುವುದು ಭವಿಷ್ಯ ದೃಷ್ಟಿಯಿಂದ ಎಚ್ಚರಿಕೆಯ ಸಂಕೇತವಾಗಿದೆ. ಆದ್ದರಿಂದ ವಿದ್ಯಾರ್ಥಿ ಗಳನ್ನು ಓದಿನತ್ತ ಸೆಳೆಯಲು, ಕಾರ್ಯಕ್ಷಮತೆಯಲ್ಲಿ ಹೆಚ್ಚಿಸಲು ಇನ್ನಷ್ಟು ಕಾರ್ಯಕ್ರಮ ಗಳನ್ನು ರೂಪಿಸಬೇಕು ಎನ್ನುವ ಸಲಹೆಯನ್ನು ಸರಕಾರಕ್ಕೆ ನೀಡಲಾಗಿದೆ. ಪ್ರಮುಖವಾಗಿ 2018ರಿಂದ 21ರ ಈ ಸಮೀಕ್ಷಾ ವರದಿಯಲ್ಲಿ, ಒಂದನೇ ತರಗತಿಯ ಶೇ.50ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಒಂದನೇ ತರಗತಿಯ ಪಠ್ಯವನ್ನು ಓದಲು ಅಸಮರ್ಥರಾಗಿದ್ದಾರೆ.
ಅದೇ ರೀತಿ ಮೂರನೇ ತರಗತಿಯ ವಿದ್ಯಾರ್ಥಿಗಳಲ್ಲಿ ಶೇ.9.8 ಮಾತ್ರ ಎರಡನೇ ತರಗತಿಯ ಪಠ್ಯವನ್ನು ಓದಲು ಮಾತ್ರ ಸಮರ್ಥರಾಗಿದ್ದಾರೆ. ಇದೇ ರೀತಿ 2018ರ ಅನ್ವಯ ಎಂಟನೇ ತರಗತಿಯ ಶೇ.38 ವಿದ್ಯಾರ್ಥಿಗಳಿಗೆ ಮಾತ್ರ ಭಾಗಾಕಾರ ಮಾಡಲು ಬರುತ್ತದೆ ಎನ್ನುವ ಆತಂಕಕಾರಿ ವಿಷಯ ಬೆಳಕಿಗೆ ಬಂದಿದೆ. ಆದ್ದರಿಂದ ವಿದ್ಯಾರ್ಥಿಗಳಿಗೆ ನೀಡುತ್ತಿರುವ ಶಿಕ್ಷಣದಲ್ಲಿ ಬದಲಾವಣೆ ತರಬೇಕಿದೆ. ವಿದ್ಯಾರ್ಥಿಗಳ ಕಾರ್ಯಕ್ಷಮತೆಗೆ ಹೆಚ್ಚಿನ ಒತ್ತು ನೀಡಬೇಕಿದೆ ಎಂದು ಸಲಹೆ ನೀಡಲಾಗಿದೆ.
ಪಿಟಿ ಕ್ಲಾಸ್ ಇಲ್ವಂತೆನಿಗದಿತ ಸರಕಾರಿ ಶಾಲೆಗಳಲ್ಲಿ ಸಮೀಕ್ಷೆ ನಡೆಸಿದ ಸಮಯದಲ್ಲಿ ಬಹುತೇಕ ಶಿಕ್ಷಕರು ಸರಿಯಾದ ಸಮಯಕ್ಕೆ ಬಂದರೂ, ಕೆಲವರು ಬರುವುದಿಲ್ಲ ಎನ್ನುವ ಆರೋಪವನ್ನು ವಿದ್ಯಾರ್ಥಿಗಳು ಮಾಡಿದ್ದಾರೆ. ಇದರೊಂದಿಗೆ ಉಚಿತ ಪಠ್ಯಪುಸ್ತಕ, ಬಿಸಿಯೂಟ ಸರಿಯಾಗಿ ಲಭಿಸುತ್ತಿದೆ. ಆದರೆ ಅನೇಕ ವಿದ್ಯಾರ್ಥಿಗಳು ತಮ್ಮ ಶಾಲೆಯಲ್ಲಿ ದೈಹಿಕ ಶಿಕ್ಷಣದ ಕೊರತೆ, ಕ್ರೀಡೆಗೆ ಸೂಕ್ತ ಪ್ರೋತ್ಸಾಹ ಹಾಗೂ ಸೌಲಭ್ಯವಿಲ್ಲವೆಂದು ಆರೋಪಿಸಿದ್ದಾರೆ. ಇದರೊಂದಿಗೆ ಕುಡಿಯುವ ನೀರು, ಶೌಚಾಲಯ, ಸೇರಿದಂತೆ ಮೂಲಸೌಕರ್ಯದ ಕೊರತೆಯಿದೆ ಎನ್ನುವ ಅಂಶ ತಿಳಿದುಬಂದಿದೆ.
ಪ್ರಮುಖ ವಿಷಯಗಳಲ್ಲೇ ಕುಸಿತಪ್ರಮುಖವಾಗಿ ನಾಲ್ಕನೇ ಹಾಗೂ ಏಳನೇ ತರಗತಿ ವಿದ್ಯಾರ್ಥಿಗಳು ಇಂಗ್ಲಿಷ್, ಗಣಿತ ಹಾಗೂ ವಿಜ್ಞಾನದಲ್ಲಿ ಹಿಂದೆ ಬಿದ್ದಿದ್ದಾರೆ ಎನ್ನುವುದು ವರದಿಯಲ್ಲಿ ಸ್ಪಷ್ಟವಾಗಿದೆ. ನಾಲ್ಕನೇ ತರಗತಿಯ ಶೇ.69.22 ವಿದ್ಯಾರ್ಥಿಗಳ ಒಟ್ಟಾರೆ ಅಂಕದಲ್ಲಿ ಇಂಗ್ಲಿಷ್‌ನಲ್ಲಿ ಶೇ.50ಕ್ಕಿಂತ ಕಡಿಮೆ ಅಂಕಗಳನ್ನು ಪಡೆದಿದ್ದರು. ಆದರೆ ಏಳನೇ ತರಗತಿಯಲ್ಲಿ ಈ ಪ್ರಮಾಣ 67.35ಕ್ಕೆ ಕುಸಿದಿದೆ. ಆದರೆ ಗಣಿತ ವಿಷಯದಲ್ಲಿ ನಾಲ್ಕನೇ ತರಗತಿಯಲ್ಲಿ ಶೇ.63.80ರಷ್ಟು ವಿದ್ಯಾರ್ಥಿ ಗಳು 50ಕ್ಕಿಂತ ಕಡಿಮೆ ಅಂಕ ಪಡೆದಿದ್ದರೆ, ಏಳನೇ ತರಗತಿಗೆ ಇದು ಶೇ.74ಕ್ಕೆ ಏರಿಕೆಯಾಗಿದೆ. ಇದೇ ರೀತಿ, ವಿಜ್ಞಾನದಲ್ಲಿ 50ಕ್ಕಿಂತ ಕಡಿಮೆ ಅಂಕ ಪಡೆದ ಪ್ರಮಾಣ ಶೇ.68.22ರಿಂದ 70.54ಕ್ಕೆ ಏರಿಕೆಯಾಗಿರುವುದು ಆತಂಕಕಾರಿ ಅಂಶ ವಾಗಿದೆ. ಈ ಮೂಲಕ ವಿದ್ಯಾರ್ಥಿಗಳಿಗೆ ಗಣಿತ ಹಾಗೂ ವಿಜ್ಞಾನ ವಿಷಯದಲ್ಲಿ ಕಾರ್ಯಕ್ಷಮತೆ ಕುಸಿಯುತ್ತಿರುವುದು ಸಿಎಜಿ ವರದಿಯಲ್ಲಿ ಬಹಿರಂಗವಾಗಿದೆ.
ಕಾರ್ಯಕ್ಷಮತೆ ಹೆಚ್ಚಿಸಲು ನೀಡಿರುವ ಶಿಫಾರಸು? ಶೈಕ್ಷಣಿಕ ಸುಧಾರಣೆಗೆ ನಿಯತಕಾಲಿಕ ವಿಶ್ಲೇಷಣೆ ಅಗತ್ಯ
? ಕಲಿಕಾ ಫಲಿತಾಂಶದ ದತ್ತಾಂಶವನ್ನು ಸಮಗ್ರವಾಗಿ ಮೌಲ್ಯಮಾಪನ ಮಾಡಲು ಕ್ರಮವಹಿಸಿ
? ಬೋಧನಾ ವಿಧಾನಗಳನ್ನು ಪರಿಷ್ಕರಿಸಬೇಕು
? ಬೋಧನೆಯ ನಡವಳಿಕೆ ಸುಧಾರಿಸಲು ಸಮೀಕ್ಷೆಗಳನ್ನುನಡೆಸಬೇಕು