Election: ನೌಕರರ ಸಂಘದ ಮತ ಸಮರ ಸರಕಾರದ ಬೆಂಬಲಕ್ಕೆ ಸೆಣಸಾಟ
ಮುಖ್ಯವಾಗಿ ಯಾವ ಅಭ್ಯರ್ಥಿ ಸರಕಾರದ ಬೆಂಬಲ ಪಡೆಯುತ್ತಾರೋ ಅವರು ಗೆಲ್ಲುವ ಸಾಧ್ಯತೆ ಇದೆ. ಆದರೆ ಹಾಲಿ ಅಧ್ಯಕ್ಷ ಷಡಕ್ಷರಿ ಹಿಂದಿನಿಂದಲೂ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ
Ashok Nayak
December 25, 2024
ಶಿವಕುಮಾರ್ ಬೆಳ್ಳಿತಟ್ಟೆ ಬೆಂಗಳೂರು
ಅಧ್ಯಕ್ಷರ ಆಯ್ಕೆಗೆ ಡಿ.27ರಂದು ಚುನಾವಣೆ
ಜಾತಿ, ಪ್ರತಿಷ್ಠೆಗಳ ಮೇಲಾಟ
ಕಳೆದ ಎರಡು ತಿಂಗಳಿನಿಂದ ಸದ್ದಿಲ್ಲದೆ ನಡೆಯುತ್ತಿರುವ ರಾಜ್ಯ ಸರಕಾರಿ ನೌಕರರ ಚುನಾವಣೆ ಇದೀಗ ಅಂತಿಮಘಟ್ಟ ತಲುಪಿದ್ದು, ಸರಕಾರದ ಬೆಂಬಲ ಗಿಟ್ಟಿಸಿದವರು ಅಧ್ಯಕ್ಷರಾಗುವ ಸಾಧ್ಯತೆಯಿದೆ.
ನೂರು ವರ್ಷಗಳನ್ನು ಪೂರೈಸಿರುವ ಸರಕಾರಿ ನೌಕರರ ಸಂಘದ ಚುನಾವಣೆ ಈಗ ಅಧ್ಯಕ್ಷ ಮತ್ತು ಖಜಾಂಚಿ ಆಯ್ಕೆ ಹಂತಕ್ಕೆ ಬಂದು ನಿಂತಿದೆ. ಇದರಲ್ಲಿ ಹಾಲಿ ಅಧ್ಯಕ್ಷ ಷಡಕ್ಷರಿ ಹಾಗೂ ಹೊಸ ಮುಖದ ಅಭ್ಯರ್ಥಿ ಹಾಸನ ಜಿಲ್ಲೆ ಅಧ್ಯಕ್ಷ, ಮಾಜಿ ರಾಜ್ಯಾಧ್ಯಕ್ಷ ಮಂಜೇ ಗೌಡರ ಸಹೋದರ ಕೃಷ್ಣೇಗೌಡ ನಡುವೆ ಅಧ್ಯಕ್ಷ ಗಾದಿಗೆ ಸಮರ ನಡೆಯು ತ್ತಿದ್ದು, ಇದರಲ್ಲಿ ಜಾತಿ ಮತ್ತು ಪ್ರತಿಷ್ಠೆಗಳದ್ದೇ ಮೇಲಾಟವಾಗಿದೆ. ಖಜಾಂಚಿ ಹುದ್ದೆಗೆ ನಾಗರಾಜ್ ಜುಮ್ಮಣ್ಣನವರ್ ಹಾಗೂ ಶಿವರುದ್ರಯ್ಯ ಸ್ಪರ್ಧೆ ಮಾಡಿದ್ದು, ಇಲ್ಲಿ ಜಾತಿಗಳ ಲೆಕ್ಕಾಚಾರದ ಹೋರಾಟ ತೀವ್ರವಾಗಿದೆ.
ಮುಖ್ಯವಾಗಿ ಯಾವ ಅಭ್ಯರ್ಥಿ ಸರಕಾರದ ಬೆಂಬಲ ಪಡೆಯುತ್ತಾರೋ ಅವರು ಗೆಲ್ಲುವ ಸಾಧ್ಯತೆ ಇದೆ. ಆದರೆಹಾಲಿ ಅಧ್ಯಕ್ಷ ಷಡಕ್ಷರಿ ಹಿಂದಿನಿಂದಲೂ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಆಶೀರ್ವಾದದೊಂದಿಗೆ ಅಧ್ಯಕ್ಷ ರಾಗಿದ್ದರಿಂದ ಇವರಿಗೆ ಈಗಿನ ಕಾಂಗ್ರೆಸ್ ಬೆಂಬಲ ಎಷ್ಟರಮಟ್ಟಿಗೆ ಸಿಗುತ್ತದೆ ಎನ್ನುವ ಬಗ್ಗೆ ಹೇಳಲಾಗದು.
ಆದರೆ ಕೃಷ್ಣೇಗೌಡರಿಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆಶೀರ್ವಾದ ಇರುವ ಸಾಧ್ಯತೆಯನ್ನು ತಳ್ಳಿಹಾಕಲಾಗುತ್ತಿಲ್ಲ. ಈ ಹಿನ್ನೆಲೆ ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ಈಗಾಗಲೇ ಕೃಷ್ಣೇಗೌಡ ಗೆಲುವಿಗೆ ಶ್ರಮಿಸು ತ್ತಿದ್ದಾರೆ ಎನ್ನಲಾಗಿದೆ. ಇದರ ಮಧ್ಯೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತರೆನ್ನಲಾದ ಮಂಜೇಗೌಡ ಸಿಎಂ ಆಶೀರ್ವಾದದೊಂದಿಗೆ ಸಹೋದರನ ಗೆಲುವು ಕಾಣಬೇಕೆಂದು ಯತ್ನಿಸಿದ್ದಾರೆ. ಇನ್ನು ಜಾತಿ ಲೆಕ್ಕಾಚಾರದಲ್ಲಿ ನಡೆಯುತ್ತಿರುವ ಈ ಚುನಾವಣೆಯಲ್ಲಿ ಷಡಕ್ಷರಿ ಹಿಂದೆ ಲಿಂಗಾಯತ ಸಮುದಾಯದ ಮತಗಳಿವೆ ಎನ್ನಲಾಗುತ್ತಿದೆ.
ಇದಕ್ಕೆ ಪ್ರತಿಯಾಗಿ ಕೃಷ್ಣೆಗೌಡರ ಹಿಂದೆ ಒಕ್ಕಲಿಗ ಸಮಾಜದ ದೊಡ್ಡ ನಾಯಕರೇ ಇದ್ದಾರೆ ಎಂದು ಹೇಳಲಾಗುತ್ತಿದೆ. ಇವರ ಪೈಕಿ ಅತಿ ಹೆಚ್ಚು ಮತದಾರರಿರುವ ಪರಿಶಿಷ್ಟ ಜಾತಿ ಮತ್ತು ಪಂಗಡ ಹಾಗೂ ಹಿಂದುಳಿದ ವರ್ಗಗಳ ಮತ ಗಳನ್ನು ಪಡೆದವರಿಗೆ ಗೆಲುವು ಖಚಿತ ಎನ್ನುವ ಲೆಕ್ಕಚಾರ. ಹೀಗಾಗಿ ಷಡಕ್ಷರಿ ಗುಂಪಿನಿಂದ ಖಜಾಂಚಿಗೆ ಸ್ಪರ್ಧಿಸಿ ರುವ ನಾಗರಾಜ್ ಜುಮ್ಮಣ್ಣನವರ್ ಹಿಂದುಳಿದ ವರ್ಗಗಳ ಮತಗಳನ್ನು, ಅದರಲ್ಲೂ ಕುರುಬ ಸಮಾಜ ಮತಗಳೂ ಹೆಚ್ಚಿನ ರೀತಿಯಲ್ಲಿ ಪಡೆಯಲು ಯತ್ನಿಸಬಹುದು. ಇದಕ್ಕೆ ವಿರುದ್ಧವಾಗಿ ಖಜಾಂಚಿ ಅಭ್ಯರ್ಥಿ ಶಿವರುದ್ರಯ್ಯ ದಲಿತ ಮತಗಳನ್ನು ಪಡೆಯಲು ಪ್ರತಿ ಆಟ ರೂಪಿಸಿರುವ ಸಾಧ್ಯತೆ ಇದೆ.
ಏನಿದು ಚುನಾವಣೆ, ಹೇಗಿರುತ್ತೆ?ರಾಜ್ಯ ಸರಕಾರಿ ನೌಕರರ ಸಂಘಕ್ಕೆ ಪ್ರತಿ ಐದು ವರ್ಷಕ್ಕೊಮ್ಮೆ ಚುನಾವಣೆ ನಡೆಯಲಿದ್ದು, ಸುಮಾರು 5:50 ಲಕ್ಷ ಕ್ಕೂ ಹೆಚ್ಚು ಮತದಾರರಿದ್ದಾರೆ. ಆರಂಭದಲ್ಲಿ 189 ತಾಲೂಕುಗಳು, 32 ಜಿಲ್ಲೆಗಳು ಬೆಂಗಳೂರು ಕೇಂದ್ರದ ರಾಜ್ಯ ಪರಿಷತ್ ಘಟಕಗಳಿಗೆ ಚುನಾವಣೆ ನಡೆಯಲಿದೆ. ಇದರ ಪೈಕಿ ರಾಜ್ಯ ಪರಿಷತ್ತಿಗೆ ಎಲ್ಲ ಇಲಾಖೆಗಳಿಂದ 102 ಮಂದಿ ಯನ್ನು ಆಯ್ಕೆ ಮಾಡಲಾಗುತ್ತದೆ. ಹೀಗೆ ಎಲ್ಲ ಘಟಕಗಳಿಂದ ಎರಡು ತಿಂಗಳ ಹಿಂದೆಯೇ ಒಟ್ಟು 964 ಪದಾಧಿ ಕಾರಿಗಳು ಆಯ್ಕೆಯಾಗಿದ್ದಾರೆ. ಇವರು ರಾಜ್ಯದ ಅಧ್ಯಕ್ಷ ಮತ್ತು ಖಜಾಂಚಿ ಹುದ್ದೆಗೆ ಡಿ.27ರಂದು ನಡೆಯುವ ಅಧ್ಯಕ್ಷ ಮತ್ತು ಖಜಾಂಚಿ ಚುನಾವಣೆಯಲ್ಲಿ ತಮ್ಮ ನಾಯಕರನ್ನು ಆಯ್ಕೆ ಮಾಡಿಕೊಳ್ಳಲಿದ್ದಾರೆ.
ಯಾವ ಅಭ್ಯರ್ಥಿ ರಣತಂತ್ರ ಹೇಗಿದೆ?ಹಾಲಿ ಅಧ್ಯಕ್ಷರು ಎನ್‌ಪಿಎಸ್ ವಿರುದ್ಧ ಹೋರಾಟ ಮಾಡಲಿಲ್ಲ, ಬೆಂಬಲ ನೀಡಲಿಲ್ಲ ಟೀಕೆಗಳಿವೆ. ಬೈಲಾ ಅಕ್ರಮತಿದ್ದುಪಡಿ ಮತ್ತು ವೇತನ ಆಯೋಗದ ಅನ್ಯಾಯ ಸರಿಪಡಿಸಲಿಲ್ಲ ಎನ್ನುವ ಆರೋಪಗಳು ಪ್ರತಿಸ್ಪರ್ಧಿಯಿಂದಕೇಳಿ ಬರುತ್ತಿವೆ. ಆದರೆ ಷಡಕ್ಷರಿ ಅವರು ನೌಕರರ ಭವನ ನಿರ್ಮಾಣ ಮಾಡಿಸಿದ್ದು, ಜಿಲ್ಲೆಗಳಲ್ಲಿ ಭವನಗಳಿಗೆ ಅನುದಾನ ಕೊಡಿಸಿದ್ದು ಹಾಗೂ ಮಹಿಳೆಯರಿಗೆ ಶಿಶುಪಾಲನಾ ರಜೆ ಕೊಡಿಸಿದ್ದ ಮತ ಸೆಳೆಯಲು ನೆರವಾಗ ಬಹುದು. ಅದೇ ರೀತಿ ಪ್ರತಿಸ್ಪರ್ಧಿ ಕೃಷ್ಣೇಗೌಡ ಸಹೋದರ ಮಂಜೇಗೌಡರ ಹಳೆಯ ನೆಟ್‌ವರ್ಕ್‌ನಲ್ಲಿ ಗೆಲುವಿನ ಬಲೆ ಹೆಣೆದಿದ್ದಾರೆ. ಷಡಕ್ಷರಿ ಕಾಲದಲ್ಲಿ ಸಾಕಷ್ಟು ಅಕ್ರಮಗಳಾಗಿವೆ ಎನ್ನುವ ವಿಚಾರಗಳನ್ನು ಮುಂದಿಟ್ಟು ಮತ ಬೇಟೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: Shivakumar Bellithatte Story: ಚನ್ನಪಟ್ಟಣ ಉಪಸಮರಕ್ಕೆ ಯೋಗಿ ಅಭ್ಯರ್ಥಿ?