MUDA: ಮುಡಾ ಬಳಿ ಬಡಾವಣೆಯೂ ಇಲ್ಲ, ನಿವೇಶನಗಳೂ ಇಲ್ಲ
MUDA: ಮುಡಾ ಬಳಿ ಬಡಾವಣೆಯೂ ಇಲ್ಲ, ನಿವೇಶನಗಳೂ ಇಲ್ಲ
Ashok Nayak
December 16, 2024
ಆರೋಪ ಮುಕ್ತಕ್ಕೂ ಮುನ್ನ ನಿವೇಶನ ಮುಕ್ತವಾದ ಸಂಸ್ಥೆ
ಹೆಚ್ಚಿನ ಖಾಸಗಿ ಪ್ರೇಮ
ಶಿವಕುಮಾರ್ ಬೆಳ್ಳಿತಟ್ಟೆ ಬೆಂಗಳೂರು
ದೇಶದ ಗಮನ ಸೆಳೆದ ಮುಡಾ (ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ) ಪ್ರಕರಣದ ನಂತರ ಸರಕಾರ ಮುಡಾ ಆಡಳಿತ ಮತ್ತು ವ್ಯವಸ್ಥೆಯಲ್ಲಿ ಸಾಕಷ್ಟು ಸುಧಾರಣೆಗೆ ಕೈ ಹಾಕಿದೆ. ಮುಡಾಗಾಗಿಯೇ ಪ್ರತ್ಯೇಕ ಕಾಯ್ದೆ ರೂಪಿಸುವು ದಕ್ಕೂ ಮುನ್ನವೇ ಅನೇಕ ಸುಧಾರಣಾ ಕ್ರಮಗಳನ್ನು ಕೈಗೊಂಡಿದೆ. ಇದರ ಪ್ರಮುಖ ಭಾಗವಾಗಿ ಮುಡಾ ವ್ಯಾಪ್ತಿ ಯಲ್ಲಿದ್ದ ಬಡಾವಣೆಗಳನ್ನೆಲ್ಲಾ ಸ್ಥಳೀಯ ಸಂಸ್ಥೆಗಳಿಗೆ ಹಸ್ತಾಂತರಿಸುತ್ತಿದೆ.
ಆದರೆ ಅಧಿಕಾರಿಗಳ ಅಲಕ್ಷ್ಯದಿಂದಾಗಿ ಮುಡಾ ಬಳಿ ಈಗ ಅರ್ಜಿದಾರರಿಗೆ ಹಂಚಿಕೆ ಮಾಡಲು ನಿವೇಶನಗಳೇ ಇಲ್ಲ. ಅರ್ಜಿ ಸಲ್ಲಿಸಿ ೨೦ವರ್ಷಗಳಿಂದ ಸೂರಿಗಾಗಿ ಕಾಯುತ್ತಿರುವ ಅರ್ಜಿದಾರರಿಗೆ ನೀಡಲು ಮುಡಾ ಬಳಿ ಈಗ ತಮ್ಮದೇ ಬಡಾವಣೆಯೂ ಇಲ್ಲದೆ, ನಿವೇಶನಗಳೇ ಇಲ್ಲದೆ ಬರಿಗೈಯಲ್ಲಿ ಕುಳಿತಿದೆ. ಇರುವ 300 ಕೋಟಿ ವರಮಾನ ಮತ್ತುಒಂದಷ್ಟು ಹರಾಜು ಮಾಡಬಹುದಾದ ಮೂಲೆ ನಿವೇಶನಗಳನ್ನು ಬಿಟ್ಟರೆ ಮುಡಾ ಸ್ಥಿತಿ ಈಗ ಮಾರಾಬಟ್ಟೆ.
ಇದನ್ನೇ ಲಾಭ ಮಾಡಿಕೊಳ್ಳುತ್ತಿರುವ ಅಧಿಕಾರಿಗಳು ಮುಡಾ ಸಂಸ್ಥೆಯ ಮೂಲ ಉದ್ದೇಶವಾದ ಬಡವರಿಗೆಸೂರು ಒದಗಿಸುವುದನ್ನು ಬಿಟ್ಟು ಖಾಸಗಿ ಬಡಾವಣೆಗಳಿಗೆ ಅನುಮೋದನೆ ನೀಡಲು ಮುಂದಾಗಿದ್ದಾರೆ ಎನ್ನಲಾಗಿದೆ. ಹೆಚ್ಚಿನ ರೀತಿಯಲ್ಲಿ ತಮ್ಮ ಕೈ ಬೆಚ್ಚಗಿನ ಕಾಯಕದಲ್ಲಿ ತೊಡಗಿದ್ದಾರೆ ಎಂದು ತಿಳಿದುಬಂದಿದೆ.
ಇತ್ತೀಚಿನ ಮುಡಾ ಸಭೆಗಳಲ್ಲಿ ಶೇ.90ರಷ್ಟು ವಿಚಾರಗಳು ಖಾಸಗಿ ಬಡಾವಣೆಗಳಿಗೆ ಅನುಮೋದನೆ ನೀಡುವುದೇ ಆಗಿದ್ದು, ಈಗಾಗಲೇ ಪಿಂಚಣಿದಾರರ ಸ್ವರ್ಗ ಎನಿಸಿದ್ದ ಮೈಸೂರಿನಲ್ಲಿ ಈಗ ಬರೀ ಖಾಸಗಿ ಬಡಾವಣೆಗಳದ್ದೇ ಹಾವಳಿಯಾಗಿವೆ. ಇದರ ಮಧ್ಯೆ ಸರಕಾರ ಮುಡಾ ವ್ಯಾಪ್ತಿಯ ಬಡಾವಣೆಗಳನ್ನು ಸ್ಥಳೀಯ ಸಂಸ್ಥೆಗಳಿಗೆ ಹಸ್ತಾಂತ ರಿಸಿ ಸುಧಾರಣೆಗೆ ಕೈ ಹಾಕಿರುವುದರ ಲಾಭ ಪಡೆದುಕೊಳ್ಳುವಲ್ಲಿ ಶಾಸಕರು ಮುಂದಾಗಿದ್ದಾರೆ ಎನ್ನಲಾಗಿದೆ,ಅಂದರೆ ತಮ್ಮ ವ್ಯಾಪ್ತಿಯ ಖಾಸಗಿ ಬಡಾವಣೆಗಳನ್ನು ತಮ್ಮ ವ್ಯಾಪ್ತಿಯ ಪುರಸಭೆ, ನಗರಸಭೆ ಹಾಗೂ ಪಟ್ಟಣ ಪಂಚಾಯಿತಿಗಳಿಗೆ ಹಸ್ತಾಂತರಿಸಲು ಹೆಚ್ಚಿನ ಮುತುವರ್ಜಿ ವಹಿಸುತ್ತಿದ್ದಾರೆ, ಕಾರಣ ಖಾಸಗಿ ಬಡಾವಣೆಗಳ ದಾಖಲೆಗಳನ್ನು ಸುಲಭವಾಗಿ ಬೇಕಾದಂತೆ ಪಡೆಯಲು ಹಾಗೂ ಮುಡಾ ವ್ಯಾಪ್ತಿಯಲ್ಲಿದ್ದ ಬಡಾವಣೆಗಳನ್ನು ತಮ್ಮ ನಿಯಂತ್ರಣಕ್ಕೆ ಪಡೆಯಲು ಹವಣಿಸುತ್ತಿದ್ದಾರೆ ಎನ್ನಲಾಗಿದೆ.
ಮುಡಾ ವ್ಯಾಪ್ತಿಯ ಖಾಸಗಿ ಬಡಾವಣೆಗಳಲ್ಲಿದ್ದ ಒತ್ತುವರಿ ಕೇಸುಗಳು, ಕೋರ್ಟ್ ನಲ್ಲಿದ್ದ ವ್ಯಾಜ್ಯಗಳು ಹಾಗೂ ವಿವಾದಗಳನ್ನು ಇನ್ನುಮುಂದೆ ಶಾಸಕರೇ ಇತ್ಯಾರ್ಥಗೊಳಿಸಲು ಸಿದ್ಧತೆ ನಡೆಸುತ್ತಿದ್ದಾರೆ. ಮುಡಾಗೆ ಅಂಟಿರುವ ಅಕ್ರಮದ ಹಣೆಪಟ್ಟಿ ತೆಗೆಯಲು ಸರಕಾರ ಯತ್ನಿಸುತ್ತಿದ್ದರೆ, ಇತ್ತ ಸರಕಾರದ ಸುಧಾರಣಾ ಕ್ರಮದಲ್ಲಿ ಕೈ ಕಾಯಿಸಿ ಕೊಳ್ಳಲು ಶಾಸಕರು ಯತ್ನಿಸುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಏನಿದು ಸಮಸ್ಯೆ ಮುಡಾ ವ್ಯವಸ್ಥೆ ಸುಧಾರಣೆಗಾಗಿ ನಗರಾಭಿವೃದ್ಧಿ ಇಲಾಖೆ ಮುಡಾ ವ್ಯಾಪ್ತಿಯಲ್ಲಿರುವ ಬಡಾವಣೆ ಗಳನ್ನು ಸ್ಥಳೀಯ ಸಂಸ್ಥೆಗಳಿಗೆ ಕೆಲವೇ ದಿನಗಳಲ್ಲಿ ಹಸ್ತಾಂತರಿಸುವಂತೆ ಆದೇಶಿಸಿತ್ತು. ಇದಾದ ನಂತರ ಮುಡಾ ಅಧಿಕಾರಿಗಳು ಹಸ್ತಾಂತರ ಕಾರ್ಯ ಆರಂಭಿಸಿದ್ದು, ಮುಡಾ ವ್ಯಾಪ್ತಿಯಲ್ಲಿದ್ದ 900ಕ್ಕೂ ಹೆಚ್ಚು ಖಾಸಗಿ ಬಡಾವಣೆ ಗಳಲ್ಲಿ ಈತನಕ ಸುಮಾರು 400ಕ್ಕೂ 20ಕ್ಕೂ ಹೆಚ್ಚು ನಗರ ಸ್ಥಳೀಯ ಸಂಸ್ಥೆಗಳಿಗೆ ಹಸ್ತಾಂತರಿಸಿದೆ. ಆದರೆ ಈ ಹಂತದಲ್ಲಿ ನಡೆಯುತ್ತಿರುವುದರಿಂದ ಆಗುತ್ತಿರುವ ಎಡವಟ್ಟುಗಳೆಂದರೆ, ಅಭಿವೃದ್ಧಿ ಕಾಣದಿರುವ ಬಡಾವಣೆ ಗಳನ್ನೂ ಹಸ್ತಾಂತರಿಸಿರುವುದು. ಖಾಸಗಿ ಡೆವಲಪರ್ ಗಳು ಖಾಸಗಿ ಬಡಾವಣೆಗಳಲ್ಲಿ ರಸ್ತೆ, ನೀರು, ವಿದ್ಯುತ್, ಚರಂಡಿ ಗಳ ಸೌಲಭ್ಯ ನೀಡಿ ಪೂರ್ಣ ಅಭಿವೃದ್ಧಿ ಮಾಡದಿದ್ದರೂ ಅವುಗಳನ್ನು ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯಿತಿಗಳಿಗೆ ಹಸ್ತಾಂತರಿಸಲಾಗುತ್ತಿದೆ.
ಈಗ ಇಂಥ ಸೌಲಭ್ಯವಿಲ್ಲದ ಖಾಸಗಿ ಬಡಾವಣೆಗಳನ್ನು ಅಭಿವೃದ್ಧಿ ಮಾಡಲು ಹಣ ನೀಡುವವರು ಯಾರು ಎನ್ನುವ ಪ್ರಶ್ನೆ ಇದೆ, ಇಲ್ಲವೇ ಹಸ್ತಾಂತರಗೊಂಡ ಬಡಾವಣೆಗಳನ್ನು ಸ್ಥಳೀಯ ಸಂಸ್ಥೆಗಳೇ ಅಭಿವೃದ್ಧಿ ಮಾಡಬೇಕೇ. ಇದಕ್ಕಾಗಿ ಸರಕಾರ ಹಣ ಪಾವತಿಸುವುದೇ ಅಥವಾ ಅಭಿವೃದ್ಧಿ ಮಾಡದೆ ಅರ್ಧಕ್ಕೆ ಬಿಟ್ಟಿರುವ ಖಾಸಗಿ ಡೆವಲಪರ್ ಗಳು ಪಾವತಿಸಬೇಕೇ ಎನ್ನುವ ಚರ್ಚೆಗಳು ಆರಂಭವಾಗಿವೆ. ಆದರೆ ಕೆಲವು ಶಾಸಕರು ಖಾಸಗಿ ಡೆವಲಪರ್‌ಗಳನ್ನುರಕ್ಷಿಸಲು ಖಾಸಗಿ ಬಡಾವಣೆಗಳ ಅಭಿವೃದ್ಧಿ ವೆಚ್ಚವನ್ನು ಸರಕಾರದಿಂದಲೇ ಪಡೆಯುವ ಪ್ರಯತ್ನ ನಡೆಯುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರ 1987ರ ಕಾಯ್ದೆ ಪ್ರಕಾರ ಮುಡಾ ಜಮೀನುಗಳನ್ನು ಖರೀದಿಸಿ ಬಡಾವಣೆ ಗಳನ್ನು ನಿರ್ಮಿಸಿ ಬಡವರಿಗೆ ನಿವೇಶನಗಳನ್ನು ಹಂಚಿಕೆ ಮಾಡಬೇಕು. ಜತೆಗೆ ನಗರ ಅಭಿವೃದ್ಧಿ ದೃಷ್ಠಿಯಿಂದ ಖಾಸಗಿ ಡೆವಲಪರ್ ಗಳು ನಿರ್ಮಾಣ ಮಾಡುವ ಬಡಾವಣೆಗಳಿಗೆ ಕಾನೂನು ಪ್ರಕಾರ ಅನುಮೋದನೆ ನೀಡಬೇಕು. ಆದರೆ ಕಳೆದ ಅನೇಕ ವರ್ಷಗಳಲ್ಲಿ ಮುಡಾ ನಿರ್ಮಿಸಿದ್ದು ಬರೀ 18 ಬಡಾವಣೆಗಳನ್ನು ಮಾತ್ರ. ಉಳಿದಂತೆ ಇರುವ ೯೦೦ಕ್ಕೂ ಹೆಚ್ಚು ಬಡಾವಣೆಗಳು ಖಾಸಗಿ ಡೆವಲಪರ್‌ಗಳದ್ದು. ತಮ್ಮದೇ ಬಡಾವಣೆಗಳನ್ನು ನಿರ್ಮಿಸಿ ಬಡಾವರಿಗೆ ಸರಕಾರಿ ಮಾರ್ಗಸೂಚಿ ದರದಲ್ಲಿ ನಿವೇಶನಗಳನ್ನು ಹಂಚಿಕೆ ಮಾಡುವ ಬದಲು ತಮಗಿಚ್ಚಿಸಿದ ಬೆಲೆಯಲ್ಲಿ ಶ್ರೀಮಂತರಿಗೆ ನಿವೇಶನಗಳನ್ನು ಮಾರಾಟ ಮಾಡಿ ಅಪಾರ ಹಣ ಸಂಪಾದಿಸುವ ಖಾಸಗಿ ಡೆವಲಪರ್ ಗಳಿಗೆ ಮುಡಾ ಅಧಿಕಾರಿಗಳು ಮಣೆ ಹಾಕುತ್ತಾ ಬಂದಿದ್ದಾರೆ. ಈಗಲೂ ಅದನ್ನೇ ಮುಂದು ವರಿಸುತ್ತಿದ್ದಾರೆ. ಹೀಗಾಗಿ ಮುಡಾ ಬಳಿ ಸದ್ಯ ಯಾವುದೇ ಬಡಾವಣೆಯೂ ಇಲ್ಲ. ಜನರಿಗೆ ನೀಡಲು ಸೈಟುಗಳೂ ಇಲ್ಲದಂತಾಗಿದೆ ಎನ್ನುವುದು ಸರಕಾರದ ಗಮನಕ್ಕೆ ಬಂದಿದೆ.
ಈ ಹಿಂದೆ ವರ್ಷಕ್ಕೆ ಐದಾರು ಸಭೆಗಳನ್ನು ಮಾತ್ರ ನಡೆಸುತ್ತಿದ್ದ ಮುಡಾ ಅಧಿಕಾರಿಗಳು ಈಗ ಆಡಳಿತಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಬಂದ ಮೇಲೆ ತಿಂಗಳಿಗೆ ಎರಡು ಸಭೆಗಳನ್ನು ನಡೆಸಲಾಗುತ್ತಿದೆ. ಅದರಲ್ಲಿ ಹೆಚ್ಚು ಖಾಸಗಿ ಬಡಾವಣೆಗಳಿಗೆ ಅನುಮೋದನೆ ನೀಡುವ ನಿರ್ಧಾರಗಳೇ ಆಗುತ್ತಿವೆ. ಅಚ್ಚರಿ ಎಂದರೆ ಮುಡಾದಲ್ಲಿ ಇಷ್ಟೆಲ್ಲಾ ರಾದ್ಧಾಂತ ನಡೆದ ನಂತರವೂ ಆಯುಕ್ತರು ಮತ್ತು ಜಿಲ್ಲಾಧಿಕಾರಿಗಳು ತಮ್ಮದೇ ಬಡಾವಣೆ ನಿರ್ಮಿಸುವ ಬದಲುಖಾಸಗಿಗೆ ಬೆನ್ನುತಟ್ಟುತ್ತಿರುವುದು ಇತ್ತೀಚಿಗೆ ಮುಡಾ ಬೋರ್ಡ್ ಸಭೆಗಳ ನಿರ್ಣಯಗಳಿಂದ ತಿಳಿಯುತ್ತದೆ ಎಂದು ಸರಕಾರದ ಮೂಲಗಳು ತಿಳಿಸಿವೆ.
ಇದನ್ನೂ ಓದಿ: MUDA