No New Year Celebration: ಕೊಡಗು ಖಾಲಿ ಖಾಲಿ, ಇಲ್ಲ ಹೊಸ ವರ್ಷದ ಜಾಲಿ !
No New Year Celebration: ಕೊಡಗು ಖಾಲಿ ಖಾಲಿ, ಇಲ್ಲ ಹೊಸ ವರ್ಷದ ಜಾಲಿ !
Ashok Nayak
December 31, 2024
ಅನಿಲ್ ಎಚ್.ಟಿ. ಮಡಿಕೇರಿ
ಡಿಸೆಂಬರ್ ಒಂದು ತಿಂಗಳಲ್ಲಿ 7 ಲಕ್ಷ ಪ್ರವಾಸಿಗರು ಮಡಿಕೇರಿಗೆ
ವಾರದ ಮಧ್ಯೆ ಹೊಸವರ್ಷದ ಆಗಮನ, ಪ್ರವಾಸೋದ್ಯಮಕ್ಕೆ ತೊಡಕು
ಹೊಸ ವರ್ಷಾಚರಣೆಗೆ ಭರ್ತಿಯಾಗಲಿದೆ ಎಂದು ನಿರೀಕ್ಷೆ ಮೂಡಿಸಿದ್ದ ಸುಂದರ ತಾಣಗಳನ್ನು ಹೊಂದಿರುವ ಕೊಡಗು ಜಿಲ್ಲೆ ಪ್ರವಾಸಿಗರಿಲ್ಲದೇ ಬಿಕೋ ಎನ್ನುವಂತಾಗಿದೆ. ವಾರದ ಮಧ್ಯೆ ಹೊಸ ವರ್ಷ ಆಗಮಿಸುತ್ತಿದ್ದು ದೂರದೂರುಗಳಿಂದ ಕೊಡಗಿಗೆ ಪ್ರವಾಸಿಗರು ನಿರೀಕ್ಷಿಸಿದ ಸಂಖ್ಯೆಯಲ್ಲಿ ಬರುತ್ತಿಲ್ಲ.
ಕಳೆದ ಹಲವಾರು ವರ್ಷಗಳಿಂದ ಹೊಸವರ್ಷದ ಹಿಂದಿನ ದಿನ ಕೊಡಗು ಜಿಲ್ಲೆಗೆ ಸಾವಿರಾರು ಪ್ರವಾಸಿಗರು ಬರುತ್ತಿದ್ದರು. ಕೊಡಗಿನ ರೆಸಾರ್ಟ್, ಹೋಂ ಸ್ಟೇ, ಕಾಟೇಜ್, ಲಾಡ್ಜ್ ಗಳು ಭರ್ತಿಯಾಗಿ ಪ್ರವಾಸಿಗರು ಕೊಠಡಿ ಗಳಿಲ್ಲದೇ ಪರದಾಡುವ ಸ್ಥಿತಿ ಇರುತ್ತಿತ್ತು. ಆದರೆ ಈ ವರ್ಷ ಕೊಡಗಿನಲ್ಲಿ ಬಹುತೇಕ ರೆಸಾರ್ಟ್, ಕಾಟೇಜ್, ಹೋಂಸ್ಟೇ, ಲಾಡ್ಜ್ ಗಳು ಖಾಲಿಯಾಗಿಯೇ ಉಳಿದಿವೆ. ಹೆಚ್ಚಿನ ಪ್ರವಾಸಿಗರ ನಿರೀಕ್ಷೆಯಲ್ಲಿದ್ದ ಪ್ರವಾಸೋದ್ಯಮಿಗಳು ಕಂಗಾಲಾಗಿದ್ದಾರೆ. ಪ್ರವಾಸಿಗರ ಕೊರತೆ, ಉದ್ಯಮಿಗಳು ಕಂಗಾಲು: ಜಿಲ್ಲಾ ಕೇಂದ್ರ ಮಡಿಕೇರಿ, ಕುಶಾಲನಗರ, ಗೋಣಿಕೊಪ್ಪಲು, ಸೋಮವಾರಪೇಟೆ ವ್ಯಾಪ್ತಿಯಲ್ಲಿ ಪ್ರವಾಸಿಗರ ಕೊರತೆ ಕಾಡುತ್ತಿದೆ. ಹೊಸವರ್ಷ ಕೊಡಗಿನಲ್ಲಿ ಸಂಭ್ರಮದಿಂದ ಆಚರಿಸಲು ದೂರದೂರುಗಳಿಂದ ಜನರು ಬರುತ್ತಾರೆ ಎಂಬ ನಿರೀಕ್ಷೆ ಹುಸಿಯಾಗಿದೆ. ತಮಿಳು ನಾಡಿನಲ್ಲಿ ಜನವರಿ 5 ರವರೆಗೆ ರಜೆ ಇರುವುದರಿಂದಾಗಿ ಆ ರಾಜ್ಯದಿಂದ ಪ್ರವಾಸಿಗರು ಕೊಡಗಿಗೆ ಬರುತ್ತಿದ್ದಾರೆಯೇ ವಿನಾಃ ಬೆಂಗಳೂರು, ಮುಂಬೈ, ಆಂಧ್ರದ ಪ್ರವಾಸಿಗರು ಕಾಣುತ್ತಿಲ್ಲ.
ಈ ಬಾರಿ ಕ್ರಿಸ್‌ಮಸ್ ಬುಧವಾರ ಬಂದಿದ್ದು, ಶುಕ್ರವಾರ ಮತ್ತು ಶನಿವಾರ ಸರಕಾರಿ ರಜೆ ಇದ್ದ ಕಾರಣ ಈಮೂರೂ ದಿನಗಳು ಅತ್ಯಧಿಕ ಸಂಖ್ಯೆಯಲ್ಲಿ ಪ್ರವಾಸಿಗರು ಕೊಡಗಿಗೆ ಭೇಟಿ ನೀಡಿದ್ದರು. ಈ ಕೊಡಗಿಗೆ ಭೇಟಿ ನೀಡಲುಉದ್ದೇಶಿಸಿದ್ದ ಪ್ರವಾಸಿಗರು ಕಳೆದ ವಾರಾಂತ್ಯದಲ್ಲಿ ಆಗಮಿಸಿ ವಾಪಸ್ ಹೋಗಿದ್ದರಿಂದ ಪ್ರವಾಸಿಗರು ಹೊಸ ವರ್ಷಾಚರಣೆಗೆ ಬಂದಿಲ್ಲ.
ಜನವರಿ 2ರಿಂದ ರಾಜ್ಯವ್ಯಾಪಿ ಬಹುತೇಕ ಶಾಲಾ, ಕಾಲೇಜುಗಳು ಪ್ರಾರಂಭವಾಗುತ್ತಿರುವುದು, ಮಂಗಳವಾರ,ಬುಧವಾರವೂ ಐಟಿ ಸಂಸ್ಥೆಗಳೂ, ಸರಕಾರಿ ಕಚೇರಿಗಳಿಗೆ ಕೆಲಸದ ದಿನಗಳು. ಹೀಗಾಗಿ ನಗರ ಪ್ರದೇಶದ ಜನರು ತಾವಿರುವ ಸ್ಥಳದಲ್ಲೇ ಹೊಸವರ್ಷ ಆಚರಿಸಲು ಚಿಂತನೆ ನಡೆಸಿದ್ದಾರೆ. ಡಿಸೆಂಬರ್‌ನಲ್ಲಿ ಅತ್ಯಧಿಕ ಸಂಖ್ಯೆ: ಅಕ್ಟೋಬರ್, ನವಂಬರ್ ನಲ್ಲಿ ಕೊಡಗು ಜಿಲ್ಲೆಗೆ ಪ್ರವಾಸಿಗರು ನಿರೀಕ್ಷಿತ ಸಂಖ್ಯೆಯಲ್ಲಿ ಬರಲೇ ಇಲ್ಲ.
ಹೀಗಾಗಿ ಕೊಡಗಿನ ಪ್ರವಾಸೋದ್ಯಮಕ್ಕೆ ಭಾರಿ ಪೆಟ್ಟು ಬಿದ್ದಿತ್ತು. ಡಿಸೆಂಬರ್ ಮೊದಲ ವಾರದಿಂದ ಡಿ.೨೯ ರವರೆಗೆ ಅತ್ಯಧಿಕ ಸಂಖ್ಯೆ ಪ್ರವಾಸಿಗರು ಜಿಲ್ಲೆಗೆ ಭೇಟಿ ನೀಡಿದ್ದು, ಈ 1 ತಿಂಗಳಲ್ಲಿ ಅಂದಾಜು 7 ಲಕ್ಷ ಪ್ರವಾಸಿಗರು ಕೊಡಗಿಗೆ ಭೇಟಿ ನೀಡಿದ್ದಾರೆ. ಇದು ಸಾರ್ವಕಾಲಿಕ ದಾಖಲೆಯಾಗಿದ್ದು, ಕಳೆದ ವರ್ಷ ಡಿಸೆಂಬರ್ ನಲ್ಲಿ 3 ಲಕ್ಷ ಪ್ರವಾಸಿಗರು ಮಾತ್ರ ಭೇಟಿ ನೀಡಿದ್ದರು ಎಂದು ಕೊಡಗು ಹೋಟೆಲ್, ರೆಸಾರ್ಟ್, ರೆಸ್ಟೋರೆಂಟ್ ಸಂಘದ ಅಧ್ಯಕ್ಷ ಕುಂಡ್ಯೋಳಂಡ ದಿನೇಶ್ ಕಾರ್ಯಪ್ಪ ವಿಶ್ವವಾಣಿಗೆ ತಿಳಿಸಿದರು.
ನಿರೀಕ್ಷಿತ ವಹಿವಾಟಿಲ್ಲಹೊಸ ವರ್ಷಾಚರಣೆಗೆ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಸಿದ್ಧತೆ ಕೈಗೊಂಡಿದ್ದ ಅನೇಕ ರೆಸಾರ್ಟ್‌ಗಳು,ಕಾಫಿತೋಟಗಳ ನಡುವಣ ಹೋಂ ಸ್ಟೇಗಳಲ್ಲಿ ಪ್ರವಾಸಿಗರ ಬುಕ್ಕಿಂಗ್ ಇಲ್ಲದೆ ಉದ್ಯಮಿಗಳು ಮಂಕಾಗಿದ್ದಾರೆ. ಕ್ರಿಸ್‌ಮಸ್ ದಿನಗಳಲ್ಲಿ ಬಂದಷ್ಟೂ ಪ್ರವಾಸಿಗರು ಹೊಸ ವರ್ಷಾಚರಣೆಗೆ ಬರಲಿಲ್ಲ ಎಂಬ ನೋವು ಪ್ರವಾಸೋ ದ್ಯಮಿಗಳದು. ಕೊಡಗಿನ ಪ್ರವಾಸೋದ್ಯಮಿಗಳ ಪಾಲಿಗೆ 2025 ನೇ ವರ್ಷ ನಿರೀಕ್ಷಿತ ವಹಿವಾಟಿಲ್ಲದ ಆತಂಕದಿಂದ ಪ್ರಾರಂಭವಾಗುವಂತಾಗಿದೆ..
ಪ್ರವಾಸಿತಾಣಗಳೂ ಖಾಲಿ ಖಾಲಿ!ಕೊಡಗು ಜಿಲ್ಲೆಯಲ್ಲಿ ರೆಸಾರ್ಟ್, ಲಾಡ್ಜ್ ಗಳಲ್ಲಿಯೇ 12 ಸಾವಿರದಷ್ಟು ಕೊಠಡಿಗಳಿವೆ. ಹೊಸ ವರ್ಷಕ್ಕೆ ಶೇ.40 ರಷ್ಟುಕೋಣೆಗಳು ಮಾತ್ರ ಭರ್ತಿಯಾಗಿವೆ. ಹೋಂ ಸ್ಟೇಗಳಲ್ಲಿಯೂ ಇದೇ ಪರಿಸ್ಥಿತಿ. ಕೋವಿಡ್ ಲಾಕ್‌ಡೌನ್ ನಂತರ ಕೊಡಗು ಪ್ರವಾಸೋದ್ಯಮದಲ್ಲಿ ಚೇತರಿಕೆಯಾಗಲೇ ಇಲ್ಲ. ಹೊಸ ರೆಸಾರ್ಟ್‌ಗಳು ಪ್ರಾರಂಭವಾಗುತ್ತಿವೆಯಾದರೂ ನಿರೀಕ್ಷಿತ ವಹಿವಾಟಿಲ್ಲದೇ ಉದ್ಯಮಿಗಳು ನಿರಾಶೆಗೊಳಗಾಗಿದ್ದಾರೆ. ರಾಜಾಸೀಟ್, ಅಬ್ಬಿ ಫಾಲ್ಸ್ ಪ್ರವಾಸಿತಾಣಗಳೂ ಖಾಲಿ ಖಾಲಿ!
ಇದನ್ನೂ ಓದಿ: ಮಡಿಕೇರಿ ಹಲವೆಡೆ ಲಘು ಭೂಕಂಪನ