Rural Talent: ರಾಷ್ಟ್ರೀಯ ತಂಡದ ಕದ ತಟ್ಟಿದ ಗ್ರಾಮೀಣ ಪ್ರತಿಭೆ
Rural Talent: ರಾಷ್ಟ್ರೀಯ ತಂಡದ ಕದ ತಟ್ಟಿದ ಗ್ರಾಮೀಣ ಪ್ರತಿಭೆ
Ashok Nayak
December 23, 2024
ವೀರೇಶ ಎಸ್ ಕೆಂಭಾವಿ ಯಾದಗಿರಿ
ಯಾದಗಿರಿ ಜಿಲ್ಲೆ ಖೋ ಖೋ ಕ್ರೀಡಾಪಟು ಮರೆಪ್ಪನ ಚಿತ್ತ ವಿಶ್ವಕಪ್ ಗೆಲ್ಲುವತ್ತ
ಜ.13ರಿಂದ ವಿಶ್ವಕಪ್ ಪಂದ್ಯಾವಳಿ
ಮೊಟ್ಟ ಮೊದಲ ಬಾರಿಗೆ ನಡೆಯಲಿರುವ ಖೋಖೋ ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾರತ ತಂಡವನ್ನುಪ್ರತಿನಿಧಿಸಲು ಯಾದಗಿರಿ ಜಿಲ್ಲೆಯ ಯುವ ಪ್ರತಿಭೆಯೊಂದು ತುದಿಗಾಲಲ್ಲಿ ನಿಂತಿದೆ.
ಸುರಪುರ ತಾಲೂಕಿನ ದೇವರಗೋನಾಲ ಗ್ರಾಮದ ಬಡ ಪ್ರತಿಭಾವಂತ ಕ್ರೀಡಾಪಟು ಮರೆಪ್ಪ ಜ.13 ರಿಂದ 19ರವರೆಗೆ ದೆಹಲಿಯಲ್ಲಿ ನಡೆಯಲಿರುವ ಮೊಟ್ಟ ಮೊದಲ ಖೋಖೋ ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾರತ ತಂಡವನ್ನು ಪ್ರತಿನಿಧಿಸುವ ನಿರೀಕ್ಷೆಯಲ್ಲಿದ್ದಾರೆ.
ಜಗತ್ತಿನ 6 ಖಂಡಗಳ 24 ದೇಶಗಳು ಪಾಲ್ಗೊಳುತ್ತಿದ್ದು, ಪುರುಷ ಹಾಗೂ ಮಹಿಳಾ ತಂಡಗಳು ಸೇರಿದಂತೆ ೪೧ ತಂಡ ಗಳು ಈ ಪಂದ್ಯಾವಳಿಯಲ್ಲಿ ಭಾಗವಹಿಸಲಿದೆ. ಬಡತನದಲ್ಲಿ ಅರಳಿದ ಅಪ್ಪಟ ಗ್ರಾಮೀಣ ಪ್ರತಿಭೆಯಾಗಿರುವ ೨೨ರ ಹರೆಯದ ಮರೆಪ್ಪ, ಈಗಾಗಲೇ ರಾಜ್ಯ ತಂಡ ಸೇರಿ ಅಂತರ ವಿ.ವಿ ತಂಡಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ದೇಶದ ಅಗ್ರ ೬೦ ಖೋ ಖೋ ಕ್ರೀಡಾಪಟುಗಳ ಪೈಕಿ ಒಬ್ಬರಾಗಿ ಆಯ್ಕೆಯಾಗಿದ್ದು, ಇದೀಗ ಅಂತಿಮ ತಂಡದ ಕದ ತಟ್ಟಿದ್ದಾನೆ.
ಸದ್ಯ ದೆಹಲಿಯಲ್ಲಿ ಭಾರತ ಖೋಖೋ ಫೆಡರೇಶನ್ ವತಿಯಿಂದ ನಡೆಯುತ್ತಿರುವ ತರಬೇತಿಯಲ್ಲಿ ಭಾಗಿ ಯಾಗಿರುವ ಮರೆಪ್ಪ ಆಯ್ಕೆಗಾರರ ಗಮನ ಸೆಳೆಯುವ ನಿಟ್ಟಿನಲ್ಲಿ ಕಸರತ್ತು ನಡೆಸಿದ್ದು, ಡಿ. 26, 27ರಂದು ಅಂತಿಮ ತಂಡದ ಆಯ್ಕೆ ನಡೆಯಲಿದ್ದು, ತನ್ನ ಸ್ಥಾನ ಗಟ್ಟಿಗೊಳಿಸಲು ಕಾತುರರಾಗಿದ್ದಾರೆ. ಸುರಪುರ ತಾಲೂಕಿನ ದೇವರ ಗೋನಾಲ ಗ್ರಾಮದಲ್ಲಿ ಬಡ ಕುಟುಂಬದಲ್ಲಿ ಜನಿಸಿದ ಮರೆಪ್ಪ ಗುರಿಕಾರ, ಪ್ರಾಥಮಿಕ ಶಾಲಾ ಹಂತದಲ್ಲಿ ಖೋ ಖೋ ಕ್ರೀಡೆಯಲ್ಲಿ ಆಸಕ್ತಿ ಹೊಂದಿದ್ದು, ಆ ವಯಸ್ಸಿನಲ್ಲಿಯೇ ವಿವಿಧ ಕ್ರೀಡಾಕೂಟದಲ್ಲಿ ಭಾಗಿಯಾಗಿ ವಿಭಾಗೀಯ ಮಟ್ಟದವರೆಗೆ ತಮ್ಮ ಶಾಲೆಯನ್ನು ಪ್ರತಿನಿಧಿಸಿದ್ದಾರೆ.
ಇವರ ಈ ಸಾಧನೆ ಗುರುತಿಸಿ ಆಳ್ವಾಸ್ ಶಿಕ್ಷಣ ಸಂಸ್ಥೆ ಉಚಿತ ಶಿಕ್ಷಣ ನೀಡುವ ಜೊತೆಗೆ ಕ್ರೀಡಾ ಸಾಧನೆಗೆನೀರೆರೆದು ಹೆಮ್ಮರವಾಗಲು ಪ್ರೋತ್ಸಾಹಿಸಿದೆ.
ಮರೆಪ್ಪ ಸಾಧನೆ
4 ಬಾರಿ ಸೀನಿಯರ್ ಖೋಖೋ ಪಂದ್ಯಾವಳಿಯಲ್ಲಿ ಕರ್ನಾಟಕ ತಂಡದಲ್ಲಿ ಸ್ಥಾನ.
ಖೇಲೋ ಇಂಡಿಯಾದಲ್ಲಿ ಭಾಗಿ.
ಅಲ್ಟಿಮೇಟ್ ಖೋಖೋದಲ್ಲಿ ಗುಜರಾತ್ ತಂಡ ಪ್ರತಿನಿಧಿಸಿ ಉತ್ತಮ ಪ್ರದರ್ಶನ.
3 ಬಾರಿ ಮಂಗಳೂರು ವಿವಿ ತಂಡಕ್ಕೆ ಆಯ್ಕೆ.
18 ವರ್ಷ ವಯೋಮತಿ ತಂಡದಲ್ಲಿ 4 ವರ್ಷ ಕರ್ನಾಟಕದ ಪ್ರಮುಖ ಆಟಗಾರ.
ಇದನ್ನೂ ಓದಿ: skysports-pat-cummins-australia_6050191