World Havyaka Sammelana: ಹವ್ಯಕ ಸಮ್ಮೇಳನಕ್ಕೆ ಭಾವನಾತ್ಮಕ ಬೀಳ್ಕೊಡುಗೆ
World Havyaka Sammelana: ಹವ್ಯಕ ಸಮ್ಮೇಳನಕ್ಕೆ ಭಾವನಾತ್ಮಕ ಬೀಳ್ಕೊಡುಗೆ
Ashok Nayak
December 30, 2024
ಊರು, ನಗರ, ಪರ ಊರಿನ ಹವ್ಯಕರು ಹೊತ್ತೊಯ್ದ ಸವಿನೆನಪು
ಯಶಸ್ವಿ ಕಾರ್ಯಕ್ರಮಕ್ಕೆ ಅಭಿನಂದನೆಗಳ ಸುರಿಮಳೆ
ವಿನುತಾ ಹೆಗಡೆ ಶಿರಸಿ
‘ಅಯ್ಯೋ ಈವತ್ತು ಕಾರ್ಯಕ್ರಮ ಮುಗಿತು ಅಂದ್ರೆ ನಿಜವಾಗ್ಲೂ ಎಂಗ್ ಬೇಜರಾಗ್ತಿದ್ದು. ಇಷ್ಟದಿನ ಚಲೋಆಗಿತ್ತು. ಎಷ್ಟಾ ತಿಂಗಳಿಂದವ ಕಾರ್ಯಕ್ರಮ ಮಾಡ, ಮಾಡ ಹೇಳಿ ಮಾಡಕಂಡು ಕಡಿಗೂ ಮುಗ್ದೇ ಹೋತು ಕಾರ್ಯಕ್ರಮ. ಥೋ ಎಷ್ಟ ಬೇಜಾರಾಗ್ತು ಕಾರ್ಯಕ್ರಮ ಮುಗತ್ತು ಹೇಳದು. ಖುಷಿ, ಸಂಭ್ರಮ, ಮಸ್ತ್ ಮಜಾ ಆಗಿತ್ತು. ನಮ್ಮವೇ ಆದ್ರು ಎಷ್ಟೆಲ್ಲಾ ದೊಡ್ಡ ದೊಡ್ಡಜನ ಬಂದಿದ್ದ ಕೆಲವೊಬ್ರೆಲ ಇಷ್ಟೆಲ ದೊಡ್ಡ ಜನ ನಮ್ಮವು ಹೇಳದೂ ಗೊತ್ತಿತ್ತಿಲ್ಲ. ಎಂಥೆಂತ ಗಾಯಕರು ನಮ್ಮವು, ಎಷ್ಟೆಲ್ಲ ಸಾಧಕರು ನಮ್ಮವು ಅಬ್ಬಾ..ನಿಜವಾಗೂ ಸಮ್ಮೇಳನ ಸಾರ್ಥಕ ಆತು ಕಷ್ಟ ಪಟ್ಟು ಎಲ್ಲರೂ ಇದನ್ನ ಯಶಸ್ವಿಗೊಳಸಿದ್ದ ಹೇಳಲಕ್ಕು. ಇದಕ್ಕಿಂತ ಚಲೋ ಮಾಡಿ ಯಾವ ಕಾರ್ಯ ಕ್ರಮನು ಮಾಡಲ ಬತ್ತಿಲ್ಲೆ ಅನ್ನಂಗಾತಪ. ಆದ್ರೆ ಮುಗತ್ತು ಹೇಳೂ ಬೇಜಾರೂ ಕಾಣ್ತು.’
ಒಂದಿಬ್ಬರಲ್ಲ, ಹತ್ತಾರು ಜನರ ಮಾತು ಇಡೀ ಅರಮನೆ ಮೈದಾನದೊಳಗೂ ಹೊರಗೂ ಈ ರೀತಿಯಾಗಿ ಕೇಳಿಸು ತ್ತಿತ್ತು. ಮೂರುದಿನ ಆಯೋಜನೆಗೊಂಡಿದ್ದ ಅಖಿಲ ಹವ್ಯಕ ಮಹಾಸಭೆಯಿಂದ ನಗರದ ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ವಿಶ್ವ ಹವ್ಯಕ ಸಮ್ಮೇಳನದ ಕೊನೆಯ ದಿನ ಕಂಡ, ಕೇಳಿದ ಮಾತುಗಳಿವು.
ಹವ್ಯಕ ಸಮುದಾಯಕ್ಕೆ ಶ್ರೀಗಳ ಕಿವಿಮಾತು ನಿಜವಾಗಿಯೂ ನಾವು ನಮ್ಮನ್ನು, ನಮ್ಮವರನ್ನು, ನಮ್ಮ ತನವನ್ನು ನಾವು ಅಭಿನಂದಿಸಿಕೊಳ್ಳಲೇಬೇಕಾದ ಕ್ಷಣ. ಭಾನುವಾರ ಹವ್ಯಕ ಸಮ್ಮೇಳನದ ಕೊನೆಯ ದಿನ. ಐವತ್ತು ಸಾವಿರ ದಷ್ಟು ಹವ್ಯಕರು ಒಂದೆಡೆ ಸೇರಿಸಿರುವುದೇನು ಸಾಧಾರಣ ಕಾರ್ಯವಲ್ಲ. ಏಕೆಂದರೆ ನಾವು ಇರುವುದೇ ಬೆರಳೆಣಿಕೆ ಯಷ್ಟು ಲಕ್ಷ ಮಾತ್ರ. ಭಾನುವಾರದ ದಿನ ಎಲ್ಲ ಹವ್ಯಕ ಪರಂಪರೆಯ ಮಠಗಳ ಯತಿವರೇಣ್ಯರು ಭಾಗಿಯಾಗಿದ್ದು, ರಾಮಚಂದ್ರಾಪುರ ಮಠ, ಸ್ವರ್ಣವಲ್ಲೀ ಮಠ, ನೆಲೆಮಾವು ಮಠ, ಕಂಚೀ ಶ್ರೀಗಳ ಆಶೀರ್ವಾದ ಇವೆಲ್ಲವೂ ಆಗಮಿಸಿದ್ದ ಹವ್ಯಕರನ್ನು ಒಮ್ಮೆ ಎಚ್ಚರಿಸಿ ಆಶೀರ್ವದಿಸಿದ್ದಾರೆ.
ಹವ್ಯಕರನ್ನು ಒಗ್ಗೂಡಿಸಿದ ಸಾರ್ಥಕ ಸಮಾವೇಶ ಹೊರಟು ನಿಂತ ಕಾರುಗಳು, ಊರಿನ ಕಡೆ ಹೊರಟ ಬಸ್ ತುಂಬ ತುಂಬಿಕೊಂಡ ಹವ್ಯಕರು, ಕೈಯಲ್ಲಿದ್ದ ಬ್ಯಾಗಿನಲ್ಲಿ ಸನ್ಮಾನ ಪತ್ರ, ಪ್ರಶಸ್ತಿಗಳ ಪರಿಕರ. ಈ ನೆಪದಲ್ಲಾದರೂ ಮಕ್ಕಳಿದ್ದ ಊರಿಗೆ ಆಗಮಿಸಿದ ಪಾಲಕ, ಪೋಷಕರು. ಯಾವುದೋ ನೆಪಕ್ಕೆ ಬಾರದೇ ಉಳಿದವರು ಬಂದು ಹೋದ ಸಂಭ್ರಮ ಒಂದೇ ಎರಡೇ ಹವ್ಯಕರನ್ನು ಒಂದುಗೂಡಿಸಿ, ಹವ್ಯಕರನ್ನು ಬೆಸೆದ ಸಮ್ಮೇಳನ ಪ್ರತಿಯೊಬ್ಬರ ಮನ ದಲ್ಲೂ ನೂರಾರು ನೆನಪು, ಭಾವನೆ, ಬಂಧಗಳ ಕೊಂಡಿ ಕಟ್ಟಿಕೊಟ್ಟವು. ಈ ಮೂರು ದಿನದಲ್ಲಿ ಅನೇಕರು ತಮ್ಮ ಮಕ್ಕಳ ಮದುವೆ ಸಂಭಂಧಗಳನ್ನೂ ಮಾತನಾಡಿಕೊಂಡರು. ಕೆಲವರು ಕೆಲಸದ ವಿಷಯವನ್ನೂ ನೋಡಿ ಕೊಂಡರು. ಇನ್ನು ಕೆಲವರು ಉತ್ತಮ ಆಸ್ಪತ್ರೆಗೂ ಮಕ್ಕಳೊಂದಿಗೆ ಭೇಟಿಕೊಟ್ಟರು. ಈ ಮೂರು ದಿನದಲ್ಲಿ ಏನೆಲ್ಲ ನಡೆಯಿತು ಎಂದು ಕೇಳಿದರೆ ಒಬ್ಬರದೂ ಒಂದೊಂದು ಕಥೆ. ಮೂರು ದಿನದಲ್ಲಿ ಲಕ್ಷಾಂತರ ಹವ್ಯಕರ ಕಥೆಸ್ಮರಣೀಯ. ಹಲವರಿಗಂತೂ ನಗರವೇ ಹಳ್ಳಿಯಾದಂತೆ ಕಂಡುಬಂತು.
ಮಂಗಳೂರಿನ ಜನ ಹೆಚ್ಚಿನ ಸಂಖ್ಯೆಯಲ್ಲಿ ಭಾಗಿ: ವಿಶ್ವ ಹವ್ಯಕ ಸಮ್ಮೇಳನಕ್ಕೆ ಭಾನುವಾರದ ದಿನ ಉಡುಪಿ ಹಾಗೂ ಮಂಗಳೂರಿನ ಹವ್ಯಕರು ಅತಿಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದು ಕಂಡುಬಂತು. ಶುಕ್ರವಾರ ಹಾಗೂ ಶನಿವಾರದಂದು ಸಾಗರ, ಶಿವಮೊಗ್ಗ ಹಾಗೂ ಶಿರಸಿ, ಯಲ್ಲಾಪುರ ಭಾಗದ ಹವ್ಯಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಕೊನೆಯ ದಿನದ ಸಂಭ್ರಮ ಹಾಜಗೂ ಕಾರ್ಯಕ್ರಮಕ್ಕೆ ವಿದಾಯ ಹೇಳುವ ಆನಂದ ಭಾಷ್ಪ ಕಾರ್ಯಕರ್ತರ ಪಾಲಿಗಿತ್ತು.
ಪಕ್ಷಪಾತವಿರಲಿಲ್ಲ: ಮೂರು ದಿನದಲ್ಲಿ ಕಾಂಗ್ರೆಸ್ ಹವ್ಯಕರು, ಬಿಜೆಪಿ ಹವ್ಯಕರು, ಜೆಡಿಎಸ್ ಹವ್ಯಕರು ಎಂದು ಎಲ್ಲಿಯೂ ಭೇದ ಇರಲಿಲ್ಲ. ಎಲ್ಲ ಹವ್ಯಕರೂ ಒಂದೇ ಆಗಿದ್ದರು. ಹವ್ಯಕರ ಒಗ್ಗಟ್ಟು ಎಂದರೆ ಏನೆಂದು ಇಲ್ಲಿತೋರಿಸಿಕೊಟ್ಟಂತಿತ್ತು. ವೇದಿಕೆಯಲ್ಲೇ ಆದರೂ ಎಲ್ಲ ಪಕ್ಷದ ರಾಜಕಾರಣಿಗಳೂ ವೇದಿಕೆಯಲ್ಲಿದ್ದರು. ಎಲ್ಲ ಯತಿವರ್ಯರೂ ಇದ್ದರು. ಇಲ್ಲಿ ಯಾರೂ ಯಾರನ್ನೂ ಬೊಟ್ಟು ಮಾಡಿ ತೋರಿಸಿಲ್ಲ. ಎಲ್ಲರೂ ಒಂದು, ನಾವುಹವ್ಯಕರು. ನಮ್ಮಲ್ಲಿಗೆ ಅತಿಥಿಗಳು ಬಂದರೆ ಹೇಗೆ ಸತ್ಕಾರ ಮಾಡಬೇಕು ಎನ್ನುವ ಸಂಸ್ಕಾರ ಹವ್ಯಕರಿಗೆ ಗೊತ್ತು. ಆ ನಿಟ್ಟಿನಲ್ಲಿ ಇಷ್ಟೊಂದು ದೊಡ್ಡಮಟ್ಟದ ಕಾರ್ಯಕ್ರಮ ಯಶಸ್ವಿಯಾಗಿ ನಡೆಸಲು ಹವ್ಯಕರಿಂದ ಸಾಧ್ಯ ಎನ್ನುವು ದನ್ನು ತೋರಿಸಿಕೊಟ್ಟಿದೆ.
ಊಟದಲ್ಲೇನಿತ್ತು?ಸಮ್ಮೇಳನದ ಕೊನೆಯ ದಿನವಾದ ಭಾನುವಾರ ಜಿಲೇಬಿ ಸಿಹಿಪ್ರಿಯರನ್ನು ಆಕರ್ಷಿಸಿತ್ತು. ಶಿರಸಿ ಕಡೆಯ ಬೆಲ್ಲದ ಮನೋಹರ, ಕುಂಬಳಕಾಯಿ ಪಾಯಸ, ಸಾಗರ ಕಡೆಯ ತಿಳಿಸಾರು, ಮಂಗಳೂರಿನ ಬೀಟ್‌ರೂಟ್ ಪಲ್ಯ, ಪಲಾವ್ಊಟ ಮಾಡಿದವರು ಅನ್ನದಾತೋ ಸುಖೀಭವ ಎಂದಿದ್ದರು. ದಿನದಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಜನ ಪಾಕ ಶಾಲೆಗೆ ಧಾವಿಸಿದ್ದರು. ಎಂದಿಗಿಂತ ಹೆಚ್ಚು ಪಾಕಶಾಲೆಯ ಸವಿ ಸವಿದವರೇ ಹೆಚ್ಚು.
*
ಕಾರ್ಯಕ್ರಮ ರಾಶಿನು ಚಲೋ ಆತು. ಅದ್ಬುತವಾಗಿ ಆತು. ಜನಸ್ಪಂದನೆ ಚಲೋ ಇತ್ತು. ಎಲ್ಲರ ಇನ್ವಾಲ್ವ್‌ಮೆಂಟ್ ಇತ್ತು. ಎಲ್ಲರೂ ಸೇರಿ ಹವ್ಯಕ ಸಮ್ಮೇಳನ ಯಶಸ್ವಿ ಮಾಡಾತು. ಈ ಕಾರ್ಯಕ್ರಮ ನೋಡಿ ,ಇದು ಎಲ್ಲರೂ ಹವ್ಯಕರ ಒಗ್ಗಟ್ಟು ಪ್ರದರ್ಶನ ತಿಳಿವಂಗಾತು. ಇನ್ನೂ ಹೆಚ್ಚಾಗವು. ಕಾರ್ಯಕ್ರಮ ಅತ್ಯಂತ ಯಶಸ್ವಿ ಆಗಿದೆ, ನಮಗೆ ಹೆಮ್ಮೆ.
-ಶಶಾಂಕ ಹೆಗಡೆ, ಅಖಿಲ ಹವ್ಯಕ ಮಹಾಸಭಾ ನಿರ್ದೇಶಕ, ಶಿರಸಿ.
ಇದನ್ನೂ ಓದಿ: #VinuthaHegde