BasanaGowda Patil Yatnal: ಯತ್ನಾಳ ಹೋರಾಟದ ಹಿಂದೆ ಕಾಣದ ಕೈ ?
BasanaGowda Patil Yatnal: ಯತ್ನಾಳ ಹೋರಾಟದ ಹಿಂದೆ ಕಾಣದ ಕೈ ?
Ashok Nayak
December 12, 2024
ಪಂಚಮಸಾಲಿ ಮೀಸಲು ಅಪಾಯಕಾರಿ ರಾಜಕೀಯ ಪ್ರಹಸನಕ್ಕೆ ದಾರಿ ಮಾಡಿ ಕೊಡುವ ಸಾಧ್ಯತೆ
ಶಿವಕುಮಾರ್ ಬೆಳ್ಳಿತಟ್ಟೆ
ಬೆಂಗಳೂರು: ವಿಪರೀತಕ್ಕೆ ಹೋಗುವ ಆತಂಕ ಮೂಡಿಸಿರುವ ಪಂಚಮಸಾಲಿ ಹೋರಾಟ ರಾಜ್ಯದಲ್ಲಿ ಇನ್ನೂ ಅಪಾಯಕಾರಿ ರಾಜಕೀಯ ಪ್ರಹಸನಕ್ಕೆ ದಾರಿ ಮಾಡುವ ಸಾಧ್ಯತೆ ಇದೆ.
ಈಗಾಗಲೇ ಬೆಳಗಾವಿಯ ಸುವರ್ಣಸೌಧ ಬಳಿ ಜಯಮೃತ್ಯುಂಜಯ ಸ್ವಾಮಿ ನೇತ್ರತ್ವದಲ್ಲಿ ನಡೆದ ಪ್ರತಿಭಟನೆ, ಸರಕಾರದ ಮುಂದೆ ನೆತ್ತರು ಚೆಲ್ಲುವಂತೆ ಮಾಡಿ ಮುಂದಿನ ಹೋರಾಟದ ತೀವ್ರತೆಯನ್ನು ಈಗಾಗಲೇ ಸೂಚಿಸಿದೆ.
ಈ ಮೂಲಕ ಬೆಳಗಾವಿ ಅಧಿವೇಶನದ ಉದ್ದಕ್ಕೂ ಇದೊಂದು ರಾಜಕೀಯ ಅಸ್ತ್ರ, ಪ್ರತ್ಯತ್ತವಾಗಿ ಬಳಕೆ ಆಗಲಿದೆ. ಆದರೆ ವಾಸ್ತವದಲ್ಲಿ ಇದು ಯಾವುದೇ ಪಕ್ಷಕ್ಕೆ ಅಸ್ತ್ರವೂ ಅಲ್ಲ. ಪ್ರತಿ ಅಸ್ತ್ರವೂ ಆಗುವುದಿಲ್ಲ. ಏಕೆಂದರೆ ಪಂಚಮ ಸಾಲಿ ಮೀಸಲಾತಿಯನ್ನು ಪ್ರತಿಪಕ್ಷ ಬಿಜೆಪಿ ಈಗ ಕೇಳುತ್ತಿರುವ ರೀತಿಯೂ ವೈಜ್ಞಾನಿಕವಾಗಿಲ್ಲ.
ಇದನ್ನು ಸರಕಾರ ಕೂಡಲೇ ನಿರ್ಧರಿಸುವುದು ಕೂಡ ವೈಜ್ಞಾನಿಕವಾಗುವುದಿಲ್ಲ. ಕಾರಣ ಸದ್ಯ ಪ್ರವರ್ಗ 3ಬಿಯಲ್ಲಿ ಇರುವ ಪಂಚಮಸಾಲಿ ಸಮಾಜವನ್ನು ಏಕಾಏಕಿ ಪ್ರವರ್ಗ 2ಎಗೆ ಸೇರಿಸುವುದಾಗಲಿ, ಅದನ್ನು ಆಸಮಾಜದವರು ಕೇಳುತ್ತಿರುವುದಾಗಲಿ ಸದ್ಯ ವೈಜ್ಞಾನಿಕ ತಳಹದಿ ಮೇಲೆ ನಿಂತಿದೆ ಎಂದು ನೇರವಾಗಿಹೇಳಲಾಗದು. ಹೀಗಾಗಿ ಪಂಚಮಸಾಲಿ ಹೋರಾಟ ಇನ್ನೂ ಕೆಲ ಕಾಲ ನಡೆಯಲಿದ್ದು, ಇದು ಕೇವಲಪರಿಹಾರ ಸಿಗದ ರಾಜಕೀಯ ಪ್ರಹಸನವಾಗಿ ಉಳಿಯಲಿದೆ ಎನ್ನುತ್ತಾರೆ ಕಾನೂನು ತಜ್ಞರು.
ಯತ್ನಾಳ್ ದಿಢೀರ್ ಹೋರಾಟದ ಹಿಂದೇನು?ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ವಿರುದ್ಧ ಬಹಿರಂಗ ಸಮರ ಸಾರಿದ್ದ ಬಸನಗೌಡ ಪಾಟೀಲ್ ಯತ್ನಾಳ್ ದೆಹಲಿ ಭೇಟಿ ಸಂದರ್ಭದಲ್ಲಿ ಬಿಜೆಪಿ ಹೈಕಮಾಂಡ್ ಪಂಚಮಸಾಲಿ ಅಸ್ತ್ರ ಪ್ರಯೋಗಕ್ಕೆ ಸೂಚನೆ ನೀಡಿತ್ತು ಎನ್ನಲಾಗಿದೆ. ಹೀಗಾಗಿ ಬಹುತೇಕ ಮೂಲೆಗುಂಪಾಗಿದ್ದ ಪಂಚಮಸಾಲಿ ಹೋರಾಟ ಬೆಳಗಾವಿ ಅಧಿವೇಶನ ಆರಂಭವಾಗುತ್ತಿದ್ದಂತೆ ಮುನ್ನೆಲೆಗೆ ಬಂದಿತ್ತು. ಹಾಗೆ ನೋಡಿದರೆ ಈ ವಿಚಾರ ಬಿಜೆಪಿಯ ಬಹುತೇಕ ಮಂದಿಗೆ ಪಂಚಮಸಾಲಿ ಹೋರಾಟ ಇಷ್ಟು ತಾರಕಕ್ಕೆ ಹೋಗುವ ಕಲ್ಪನೆ ಕೂಡ ಇರಲಿಲ್ಲ ಎಂದು ಮೂಲಗಳು ತಿಳಿಸಿವೆ.
2ಎಗೆ ಬದಲಾಯಿಸುವುದು ಸುಲಭವಲ್ಲರಾಜ್ಯದಲ್ಲಿ ಹಿಂದುಳಿದ ವರ್ಗಗಳನ್ನು ಪ್ರವರ್ಗ-1, ಪ್ರವರ್ಗ-2ಎ, ಪ್ರವರ್ಗ-3ಎ ಹಾಗೂ ಪ್ರವರ್ಗ-3ಬಿ ಮೀಸಲು ಸೌಲಭ್ಯವಿದೆ. ವೀರಶೈವ ಲಿಂಗಾಯತ ಹಾಗೂ ಪಂಚಮಸಾಲಿ ಜಾತಿಗಳು 3ಬಿ ಅಡಿ ಮೀಸಲಾತಿ ಪಡೆಯುತ್ತಿವೆ. ಯಾವುದೇ ಸಮಾಜಕ್ಕೆ ಮೀಸಲು ಸೌಲಭ್ಯ ಕಲ್ಪಿಸಬೇಕಾದರೆ ಆ ಸಮಾಜಕ್ಕೆ ನಿಗದಿತ ಆಯೋಗದ ಶಿಫಾರಸ್ಸು ಅಗತ್ಯ. ಜತೆಗೆ ಆ ಸಮಾಜಕ್ಕೆ ಸಂಬಂಧಿಸಿದಂತೆ ಕುಲಶಾಸ್ತ್ರೀಯ ಅಧ್ಯಯನದ ವರದಿ ಇರಬೇಕು. ಹಾಗೆಯೇ ಆ ಸಮಾಜ ಉದ್ಯೋಗ ಮತ್ತು ಶಿಕ್ಷಣದಲ್ಲಿ ಎಷ್ಟರಮಟ್ಟಿಗೆ ಹಿಂದುಳಿದಿದ್ದಾರೆ, ಸರಕಾರದ ಸೌಲಭ್ಯ ಪಡೆದಿದ್ದಾರೆ ಎನ್ನುವ ಮಾಹಿತಿ ಇರಬೇಕು.
ಆದರೆ ಪಂಚಮಸಾಲಿ ಸಮಾಜದ ಬೇಡಿಕೆಗೆ ಆಯೋಗದ ಶಿಫಾರಸ್ಸಿನ ತಳಹದಿ ಇರುವ ವಾದ ಕೇಳಿ ಬರುತ್ತಿಲ್ಲ. ಜಯಪ್ರಕಾಶ್ ಹೆಗಡೆ ಅವರು ನೀಡಿರುವ ವರದಿಯನ್ನು ಕೂಡ ಸರಕಾರ ಅನುಮೋದಿಸಿದಂತೆ ಕಾಣುತ್ತಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಈ ಆಯೋಗಗಳ ವರದಿಯಲ್ಲಿ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲು ಕಲ್ಪಿಸಬೇ ಕೆಂದು ಆಯೋಗ ಶಿಫಾರಸು ಮಾಡಿದೆ ಎನ್ನುವ ಅಂಶವು ಬಹಿರಂಗವಾಗಿಲ್ಲ. ಹೀಗಾಗಿ ಏಕಾಏಕಿ ಪಂಚಮಸಾಲಿ 3ಬಿ ಯಿಂದ 2 ಎಗೆ ಬದಲಾಯಿಸುವುದು ಸುಲಭವಲ್ಲ ಎನ್ನುತ್ತಾರೆ ಅಧಿಕಾರಿಗಳು.
ಹಿಂದಿನ ಸರಕಾರದ ಎಡವಟ್ಟು ಏನು?ಈ ಹಿಂದಿನ ಬಸವರಾಜ ಬೊಮ್ಮಾಯಿ ಸರಕಾರ ಪಂಚಮಸಾಲಿಗಳನ್ನು ‘2ಎ’ಗೆ ಸೇರಿಸಿಲ್ಲ ಬದಲಾಗಿ, ಅಲ್ಪ ಸಂಖ್ಯಾತ ಮುಸ್ಲಿಂರಿಗೆ ನೀಡಿದ್ದ ಶೇ.4ರಷ್ಟು ಮೀಸಲಾತಿಯನ್ನು ರದ್ದುಪಡಿಸಿ, 3ಎ ಹಾಗೂ 3ಬಿಗೆ ತಲಾ ಶೇ.2 ರಂತೆ ಮೀಸಲಾತಿ ಹಂಚಿಕೆ ಮಾಡಿತ್ತು. ಇದನ್ನು ಆಕ್ಷೇಪಿಸಿ ಮುಸ್ಲಿಂರು ಸರ್ವೋಚ್ಚ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದ್ದರಿಂದ ಅದೀಗ ಯಥಾ ಸ್ಥಿತಿಯಲ್ಲಿದೆ. ಹಾಗೆ ನೋಡಿದರೆ ಹಿಂದಿನ ಬಿಜೆಪಿ ಸರಕಾರ ಒಕ್ಕಲಿಗರು ಮತ್ತು ವೀರಶೈವ ಲಿಂಗಾಯತರಿಗೆ ನೀಡಿದ ಈ ಸಲ ಶೇ.2ರಷ್ಟು ಹೆಚ್ಚಳ ಮಾಡಿರುವುದನ್ನು ಕೂಡ ಕೋರ್ಟ್‌ನಲ್ಲಿ ಪ್ರಶ್ನಿಸಿದರೆ ಅದಕ್ಕೂ ತೊಂದರೆ ಉಂಟಾಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ ಎನ್ನುತ್ತಾರೆ ಕಾನೂನು ತಜ್ಞರು.
ಪಂಚಮಸಾಲಿ ಸಮಾಜದವರು 2ಎ ಮೀಸಲು ಕೇಳುವುದು ಸಂವಿಧಾನ ವಿರೋಧವಾಗುತ್ತದೆ. ಬೇಕಿದ್ದರೆ ಅವರು 3ಬಿಯಲ್ಲಿ ಇರುವ ಮೀಸಲು ಪ್ರಮಾಣವನ್ನು ಹೆಚ್ಚಳಕ್ಕೆ ಒತ್ತಾಯಿಸಬಹುದು.-ಸಿ.ಎಸ್.ದ್ವಾರಕನಾಥ್ ಹಿಂದುಳಿದ ವರ್ಗಗಳ ಮಾಜಿ ಅಧ್ಯಕ್ಷ
ಇದನ್ನೂ ಓದಿ: #BasavanagowdaPatilYatnal