Friday, 20th September 2024

Brain in Chip : ಬ್ರೈನ್‌ ಇನ್‌ ಚಿಪ್‌ ಸಿದ್ಧಪಡಿಸಿದ ಐಐಎಸ್‌ಸಿ; ಕಂಪ್ಯೂಟರ್‌ ಕ್ಷೇತ್ರದಲ್ಲಿ ಭಾರತದ ಹೊಸ ಸಾಧನೆ

brain in chip

ಬೆಂಗಳೂರು: ಭಾರತೀಯ ವಿಜ್ಞಾನಿಗಳು ಕೃತಕ ಬುದ್ಧಿಮತ್ತೆಯಲ್ಲಿ (ಎಐ) ಕ್ರಾಂತಿಯನ್ನುಂಟು ಮಾಡುವ ಲಕ್ಷಣಗಳು ಗೋಚರಿಸುತ್ತಿವೆ. ಅಂದರೆ ಮೆದುಳಿನಂತೆ ಕಾರ್ಯನಿರ್ವಹಿಸುವ ವಿಶೇಷ ಚಿಪ್ ಅನ್ನು (Brain in Chip) ರಚಿಸಿದ್ದಾರೆ. ಈ ಚಿಪ್ 16,500 ರೀತಿಯಲ್ಲಿ ವಿಶೇಷ ರೀತಿಯ ಫಿಲ್ಮ್‌ನಲ್ಲಿ ಡೇಟಾ ಸಂಗ್ರಹ ಮಾಡುವ ಸಾಮರ್ಥ್ಯ ಹೊಂದಿದೆ. ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ (ಐಐಎಸ್‌ಸಿ) ವಿಜ್ಞಾನಿಗಳು ಈ ಆವಿಷ್ಕಾರ ಮಾಡಿದ್ದಾರೆ ಮತ್ತು ಇದನ್ನು ‘ನೇಚರ್’ ಎಂಬ ಪ್ರಸಿದ್ಧ ವಿಜ್ಞಾನ ನಿಯತಕಾಲಿಕದಲ್ಲಿ ಪ್ರಕಟಿಸಲಾಗಿದೆ.

ಈ ಹೊಸ ತಂತ್ರಜ್ಞಾನವು ನಮ್ಮ ಕಂಪ್ಯೂಟರ್‌ಗಳು ಕಾರ್ಯನಿರ್ವಹಿಸುವ ವಿಧಾನವನ್ನು ಸಂಪೂರ್ಣವಾಗಿ ಬದಲಾಯಿಸಬಹುದು. ಇದನ್ನು ಮೆದುಳನ್ನು ಅನುಕರಿಸುವ ‘ನ್ಯೂರೋಮಾರ್ಫಿಕ್ ಕಂಪ್ಯೂಟಿಂಗ್’ ಎಂದು ಕರೆಯಲಾಗುತ್ತದೆ. ಇಂದಿನ ಕಂಪ್ಯೂಟರ್‌ಗಳು ಪ್ರೋಗ್ರಾಮಿಂಗ್ ಪ್ರಕಾರ ಮಾತ್ರ ಕಾರ್ಯನಿರ್ವಹಿಸುತ್ತವೆ. ಆದರೆ ಈ ಚಿಪ್ ಮನುಷ್ಯನ ಮೆದುಳಿನಂತೆಯೇ ಅದರ ಸುತ್ತಲಿನ ಪರಿಸರದ ಪ್ರಭಾವದಿಂದ ಕೆಲಸ ಮಾಡುತ್ತದೆ.

ಎಐನ ಯಾವ ಸಮಸ್ಯೆಗಳು ಪರಿಹಾರ?

ಈ ಆವಿಷ್ಕಾರವು ಎಐ ಕ್ಷೇತ್ರದಲ್ಲಿ ಕ್ರಾಂತಿಯನ್ನುಂಟು ಮಾಡಬಹುದು. ಇದು ಲ್ಯಾಪ್ ಟಾಪ್‌ಗಳು ಮತ್ತು ಸ್ಮಾರ್ಟ್ ಫೋನ್ ಗಳಂತಹ ಸಾಮಾನ್ಯ ಸಾಧನಗಳಲ್ಲಿ ಚಾಟ್ ಜಿಪಿಟಿಯಂತಹ ದೊಡ್ಡ ಭಾಷಾ ಮಾದರಿಗಳನ್ನು ಕೆಲಸ ಮಾಡುತ್ತದೆ. ಈ ತಂತ್ರಜ್ಞಾನವು ಎಐನ ಎರಡು ದೊಡ್ಡ ಸಮಸ್ಯೆಗಳನ್ನು ಪರಿಹರಿಸುತ್ತದೆ. ಒಂದು ಹಾರ್ಡ್ ವೇರ್ ಕೊರತೆ ಮತ್ತು ಹೆಚ್ಚಿನ ವಿದ್ಯುತ್ ಬಳಕೆ.

ಇದನ್ನೂ ಓದಿ: Padma Awards 2024 Nominations: ಪದ್ಮ ಪ್ರಶಸ್ತಿಗೆ ನಾಮನಿರ್ದೇಶನ ಮಾಡಲು ಸೆ.15 ಕೊನೆಯ ದಿನ

ಈ ಚಿಪ್‌ನ ವಿನ್ಯಾಸವನ್ನು ಪ್ರೊಫೆಸರ್ ಶ್ರೀಬ್ರತಾ ಗೋಸ್ವಾಮಿ ಸಿದ್ಧಪಡಿಸಿದ್ದಾರೆ. ಈ ಚಿಪ್ ನಮ್ಮ ಮಿದುಳಿನಂತೆಯೇ ಡೇಟಾ ಸಂಗ್ರಹಿಸಲು ಮತ್ತು ಪ್ರಕ್ರಿಯೆಗೊಳಿಸಲು ಅಯಾನುಗಳ ಚಲನೆಯನ್ನು ಬಳಸುತ್ತದೆ. ಇದು ಕಂಪ್ಯೂಟರ್‌ನಂತೆಯೇ ಕಾರ್ಯನಿರ್ವಹಿಸುತ್ತದೆ. ಆದರೆ ಬಹಳ ಕಡಿಮೆ ಬ್ಯಾಟರಿ ಬಳಸುತ್ತದೆ ಮತ್ತು ಬಹಳ ಕಡಿಮೆ ಸ್ಥಳ ಸಾಕಾಗುತ್ತದೆ.

ಈ ತಂತ್ರಜ್ಞಾನ ಗೇಮ್ ಚೇಂಜರ್

“ಇಂಡಿಯಾ ಸೆಮಿಕಂಡಕ್ಟರ್ ಮಿಷನ್ ಸಂದರ್ಭದಲ್ಲಿ, ಈ ಬೆಳವಣಿಗೆಯು ಗೇಮ್ ಚೇಂಜರ್ ಎಂದು ಸಾಬೀತುಪಡಿಸಬಹುದು. ಇದು ಕೈಗಾರಿಕಾ, ಗ್ರಾಹಕ ಮತ್ತು ಕಾರ್ಯತಂತ್ರದಲ್ಲಿ ಕ್ರಾಂತಿಯನ್ನುಂಟು ಮಾಡುತ್ತದೆ ಎಂದು ಪ್ರೊಫೆಸರ್ ನವಕಾಂತ್ ಭಟ್ ಹೇಳಿದ್ದಾರೆ. ಭಾರತವು ಈಗ ಜಾಗತಿಕ ಮಟ್ಟದಲ್ಲಿ ನಾಯಕತ್ವದ ಪಾತ್ರ ವಹಿಸಲು ಸಜ್ಜಾಗಿದೆ. ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಸಹಯೋಗದೊಂದಿಗೆ, ಐಐಎಸ್‌ಸಿ ತಂಡವು ಈಗ ಸಮಗ್ರ ನ್ಯೂರೋಮಾರ್ಫಿಕ್ ಚಿಪ್ ಅನ್ನು ಅಭಿವೃದ್ಧಿಪಡಿಸುವತ್ತ ಗಮನ ಹರಿಸಿದೆ. “ಇದು ವಸ್ತುಗಳಿಂದ ಹಿಡಿದು ಸರ್ಕೀಟ್‌ವರೆಗೆ ಮತ್ತು ವ್ಯವಸ್ಥೆಗಳವರೆಗೆ ಸಂಪೂರ್ಣವಾಗಿ ದೇಶೀಯ ಪ್ರಯತ್ನ. ನಾವು ಈ ತಂತ್ರಜ್ಞಾನವನ್ನು ಸಿಸ್ಟಮ್-ಆನ್-ಎ-ಚಿಪ್ ಆಗಿ ಪರಿವರ್ತಿಸುವ ಹಾದಿಯಲ್ಲಿದ್ದೇವೆ. ಈ ಪ್ರಗತಿಯು ಭಾರತವನ್ನು ಜಾಗತಿಕ ತಂತ್ರಜ್ಞಾನ ನಾವೀನ್ಯತೆಯಲ್ಲಿ, ವಿಶೇಷವಾಗಿ ಎಐ ಹಾರ್ಡ್ ವೇರ್ ಅಭಿವೃದ್ಧಿಯಲ್ಲಿ ಮುಂಚೂಣಿ ಸ್ಥಾನದಲ್ಲಿ ನಿಲ್ಲಿಸಲಿದೆ.