Fraud Case: ಬೆಂಗಳೂರು ವಿವಿ ರಿಜಿಸ್ಟ್ರಾರ್ ಹುದ್ದೆ ಕೊಡಿಸುವುದಾಗಿ ಪ್ರೊಫೆಸರ್‌ಗೆ 35 ಲಕ್ಷ ವಂಚನೆ; ಕೇಸ್ ದಾಖಲು
Fraud Case: ಬೆಂಗಳೂರು ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಹುದ್ದೆ ಕೊಡಿಸುವುದಾಗಿ ನಿವೃತ್ತ ಪ್ರೊಫೆಸರ್ ಒಬ್ಬರಿಂದ 35 ಲಕ್ಷ ರೂ. ಪಡೆದು ವಂಚಿಸಿರುವ ಘಟನೆ ನಡೆದಿದೆ. ಈ ಸಂಬಂಧ ಗೋವಿಂದರಾಜನಗರ ಪೊಲೀಸ್ ಠಾಣೆಗೆ ನಿವೃತ್ತ ಪ್ರೊಫೆಸರ್ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.


ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಹುದ್ದೆ ಕೊಡಿಸುವುದಾಗಿ ಪ್ರೊಫೆಸರ್ ಒಬ್ಬರಿಗೆ 35 ಲಕ್ಷ ರೂ. ಪಡೆದು ವಂಚಿಸಿರುವ ಪ್ರಕರಣ (Fraud Case) ಬೆಳಕಿಗೆ ಬಂದಿದೆ. ನಿವೃತ್ತ ಪ್ರಾಧ್ಯಾಪಕ ಆರ್.ಕೆ.ಸೋಮಶೇಖರ್ (67) ಎಂಬುವವರು ಈ ಸಂಬಂಧ ಗೋವಿಂದರಾಜನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಹೀಗಾಗಿ ಹೊರಮಾವು ನಂದನಂ ಲೇಔಟ್ ನಿವಾಸಿ ಬಿ.ಜಿ.ರವಿಕುಮಾರ್ ಎಂಬುವವರ ವಿರುದ್ಧ ವಂಚನೆ, ನಂಬಿಕೆ ದ್ರೋಹ, ಜೀವ ಬೆದರಿಕೆ ಸೇರಿ ವಿವಿಧ ಆರೋಪದಡಿ ಎಫ್‌ಐಆರ್ ದಾಖಲಾಗಿದೆ ಎಂದು ತಿಳಿದುಬಂದಿದೆ.
ದೂರುದಾರ ಆರ್.ಕೆ.ಸೋಮಶೇಖರ್ 1983ರಿಂದ ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಕ್ಯಾಂಪಸ್‌ನ ಪರಿಸರ ವಿಜ್ಞಾನ ವಿಭಾಗದಲ್ಲಿ ಪ್ರೊಫೆಸರ್ ಆಗಿ ಕೆಲಸ ಮಾಡಿ, 2019ರಲ್ಲಿ ನಿವೃತ್ತರಾಗಿದ್ದರು. ಈ ನಡುವೆ 2010ರಲ್ಲಿ ಸ್ನೇಹಿತರ ಮೂಲಕ ಆರೋಪಿ ಬಿ.ಜಿ.ರವಿಕುಮಾರ್ ಪರಿಚಯವಾಗಿ ಬಳಿಕ ಸ್ನೇಹಿತರಾಗಿದ್ದರು. 2015ರಲ್ಲಿ ರವಿಕುಮಾರ್ ತನಗೆ ಪ್ರಭಾವಿ ರಾಜಕಾರಣಿಗಳ ಪರಿಚಯವಿದೆ, ನಿಮಗೆ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ರಿಜಿಸ್ಟ್ರಾರ್ ಹುದ್ದೆ ಕೊಡಿಸುತ್ತೇನೆ ಎಂದು ಹೇಳಿ ನಂಬಿಸಿದ್ದ.
ಬಳಿಕ ರಿಜಿಸ್ಟ್ರಾರ್ ಹುದ್ದೆಗೆ 50 ಲಕ್ಷ ರೂ. ಖರ್ಚಾಗಲಿದೆ ಎಂದು ರವಿಕುಮಾರ್ ಹೇಳಿದ್ದಾರೆ. ನಂತರ ಇಬ್ಬರೂ ಮಾತುಕತೆ ನಡೆಸಿ 35 ಲಕ್ಷ ರೂ.ಗೆ ತೀರ್ಮಾನಿಸಲಾಗಿತ್ತು. ಕೆಲಸ ಆಗದಿದ್ದಲ್ಲಿ ಹಣ ವಾಪಸ್ ಕೊಡುವುದಾಗಿಯೂ ರವಿಕುಮಾರ್ ಹೇಳಿದ್ದ ಎಂದು ಸೋಮಶೇಖರ್ ದೂರಿನಲ್ಲಿ ಆರೋಪಿಸಿದ್ದಾರೆ.
ಅದರಂತೆ ಸೋಮಶೇಖರ್ 2015ರ ಜುಲೈನಲ್ಲಿ ವಿವಿಧ ಹಂತಗಳಲ್ಲಿ ರವಿಕುಮಾರ್‌ಗೆ ನಗದು ರೂಪದಲ್ಲಿ ಒಟ್ಟು 35 ಲಕ್ಷ ರೂ. ನೀಡಿದ್ದಾರೆ. 6 ತಿಂಗಳೊಳಗೆ ಕೆಲಸ ಆಗಲಿದೆ ಎಂದು ರವಿಕುಮಾರ್ ಹೇಳಿದ್ದರು. ಈ ವಿಷಯವನ್ನು ಯಾರ ಬಳಿಯೂ ಹೇಳದಂತೆ ಸೂಚಿಸಿದ್ದರು. ಆರು ತಿಂಗಳ ಬಳಿಕ ವಿಚಾರಿಸಿದಾಗ ಇಲ್ಲದ ಸಬೂಬು ಹೇಳಿ ಆರೋಪಿ ರವಿಕುಮಾರ್ ದಿನ ದೂಡಿದ್ದಾರೆ.
ಅಷ್ಟರಲ್ಲಿ ತಾನು ಸೇವೆಯಿಂದ ನಿವೃತ್ತನಾಗಿದ್ದು, ತಮ್ಮ ಹಣ ವಾಪಸ್ ನೀಡುವಂತೆ ಕೇಳಿದ್ದೆ. ಒಂದು ವರ್ಷದ ಸಮಯ ಕೊಡಿ ಎಂದ ರವಿಕುಮಾರ್ ನಂತರವೂ ಹಣ ವಾಪಸ್ ನೀಡಿಲ್ಲ. 2024ರ ಡಿಸೆಂಬರ್‌ನಲ್ಲಿ ಕರೆ ಮಾಡಿ ಹಣ ವಾಪಸ್ ಕೇಳಿದ್ದಕ್ಕೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ ಎಂದು ಸೋಮಶೇಖರ್ ದೂರಿದ್ದಾರೆ.
ಈ ಸುದ್ದಿಯನ್ನೂ ಓದಿ | Operation Sindoor: ನೂರ್ ಖಾನ್ ವಾಯುನೆಲೆಯನ್ನು ನುಜ್ಜುಗುಜ್ಜು ಮಾಡಿದ ಬ್ರಹ್ಮೋಸ್; ಸ್ಯಾಟ್‌ಲೈಟ್ ಫೋಟೋ ರಿಲೀಸ್
ಈ ಮಧ್ಯೆ 2025ರ ಮಾ.9ರಂದು ವಿಜಯ ನಗರದ ಸರ್ವಿಸ್ ರಸ್ತೆಯಲ್ಲಿರುವ ಇಂದ್ರಪ್ರಸ್ಥ ಹೋಟೆಲ್‌ಗೆ ಕರೆಸಿಕೊಂಡಿದ್ದ ರವಿಕುಮಾರ್ ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಸೋಮಶೇಖರ್ ದೂರಿನಲ್ಲಿ ಆರೋಪಿಸಿದ್ದಾರೆ. ಇದೀಗ ಪ್ರಕರಣ ದಾಖಲಿಸಿಕೊಂಡಿರುವ ಗೋವಿಂದರಾಜನಗರ ಠಾಣೆ ಪೊಲೀಸ್ ತನಿಖೆ ನಡೆಸುತ್ತಿದ್ದಾರೆ.