IPL 2025 final: ಐಪಿಎಲ್ ಫೈನಲ್ ಪಂದ್ಯ ಕೋಲ್ಕತ್ತಾದಿಂದ ಅಹಮದಾಬಾದ್‌ಗೆ ಶಿಫ್ಟ್!
ಭಾರತ ಮತ್ತು ಪಾಕಿಸ್ತಾನ ನಡುವಿನ ಗಡಿ ಉದ್ವಿಗ್ನತೆಯಿಂದಾಗಿ ಸ್ಥಗಿತಗೊಂಡಿರುವ ಐಪಿಎಲ್ ಪಂದ್ಯಾವಳಿಯನ್ನು ಶೀಘ್ರದಲ್ಲೇ ಪುನರಾರಂಭಿಸುವ ಕುರಿತು ಇನ್ನೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಪಿಟಿಐ ಜತೆಗಿನ ಸಂದರ್ಶನದಲ್ಲಿ ಹೇಳಿದ್ದಾರೆ.


ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ 2025ರ ಫೈನಲ್ ಪಂದ್ಯವನ್ನು ಕೋಲ್ಕತ್ತಾದಿಂದ(Kolkata's Eden Gardens) ಬೇರೆಡೆಗೆ ಸ್ಥಳಾಂತರಿಸುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಪ್ರತಿಕೂಲ ಹವಾಮಾನವು ಸ್ಥಳ ಬದಲಾವಣೆಗೆ ಕಾರಣ ಎಂದು ಪಿಟಿಐ ವರದಿ ಮಾಡಿದೆ. ಅದರಂತೆ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ(Narendra Modi Stadium) ಈ ಬಾರಿಯ ಐಪಿಎಲ್ ಫೈನಲ್ ನಡೆಯುವ ಸಾಧ್ಯತೆ ಇದೆ.
ವಾಡಿಕೆಯಂತೆ ಕಳೆದ ಆವೃತ್ತಿಯಲ್ಲಿ ವಿಜೇತ ತಂಡದ ತವರು ಮೈದಾನದಲ್ಲಿ ಫೈನಲ್ ನಡೆಯಬೇಕು. ಕಳೆದ ಬಾರಿ ಕೆಕೆಆರ್ ಚಾಂಪಿಯನ್ ಆಗಿತ್ತು. ಹಿಂದಿನ ವೇಳಾಪಟ್ಟಿ ಪ್ರಕಾರ ಕೋಲ್ಕತಾದ ಈಡನ್ ಗಾರ್ಡನ್ಸ್‌ನಲ್ಲಿ ಮೇ 25 ರಂದು ಫೈನಲ್ ನಡೆಸಲು ನಿರ್ಧರಿಸಲಾಗಿತ್ತು. ಆದರೆ ಭಾರತ ಮತ್ತು ಪಾಕಿಸ್ತಾನ ನಡುವಿನ ಗಡಿ ಉದ್ವಿಗ್ನತೆಯಿಂದಾಗಿ ಮೇ 9 ರಿಂದ ಟೂರ್ನಿಯನ್ನು ಒಂದು ವಾರ ಸ್ಥಗಿತಗೊಳಿಸಲಾಗಿದೆ.
ಆದಾಗ್ಯೂ, ವಿದೇಶಿ ಆಟಗಾರರ ಲಭ್ಯತೆ ಮತ್ತು ಇತರ ವ್ಯವಸ್ಥಾಪನಾ ಸಮಸ್ಯೆಗಳಿಂದಾಗಿ ಟೂರ್ನಿಯನ್ನು ಮೇ 16 ಅಥವಾ ಮೇ 17 ರಂದು ಪುನರಾರಂಭಗೊಳ್ಳುವ ನಿರೀಕ್ಷೆಯಿದೆ. ಸದ್ಯ ಕೆಲ ದಿನಗಳ ವಿರಾಮದಿಂದಾಗಿ ಮೇ ಕೊನೆಗೆ ಅಥವಾ ಜೂನ್ ಮೊದಲ ವಾರ ಟೂರ್ನಿ ಕೊನೆಗೊಳ್ಳಬಹುದು. ಈ ವೇಳೆ ಕೋಲ್ಕತಾದಲ್ಲಿ ವಾಡಿಕೆಗೂ ಮುನ್ನವೇ ಮಳೆ ಆರಂಭವಾಗುವ ನಿರೀಕ್ಷೆ ಇದೆ. ಇದೇ ಕಾರಣಕ್ಕೆ ಬಿಸಿಸಿಐ ಫೈನಲ್ ಪಂದ್ಯವನ್ನು ಕೋಲ್ಕತಾದಿಂದ ಅಹಮದಾಬಾದ್‌ಗೆ ಸ್ಥಳಾಂತರಿಸುವ ಚಿಂತನೆ ನಡೆಸಿದೆ ಎನ್ನಲಾಗಿದೆ. ಆದರೆ ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಈ ಬಗ್ಗೆ ಇನ್ನೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ IPL 2025: ತವರಿಗೆ ಮರಳಿದ ಆರ್‌ಸಿಬಿಯ ಸಾಲ್ಟ್, ಬೆಥಲ್ ಐಪಿಎಲ್‌ಗೆ ಮರಳುವುದು ಅನುಮಾನ
"ಪಂದ್ಯಾವಳಿಯನ್ನು ಶೀಘ್ರದಲ್ಲೇ ಪುನರಾರಂಭಿಸುವ ಕುರಿತು ಇನ್ನೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಬಿಸಿಸಿಐ ಅಧಿಕಾರಿಗಳು ಪರಿಸ್ಥಿತಿಯ ಬಗ್ಗೆ ಕೆಲಸ ಮಾಡುತ್ತಿದ್ದಾರೆ" ಎಂದು ಶುಕ್ಲಾ ಪಿಟಿಐ ಜತೆಗಿನ ಸಂದರ್ಶನದಲ್ಲಿ ಹೇಳಿದ್ದಾರೆ.