India Pakistan conflict: ಗುಂಡಿನ ಚಕಮಕಿ ಇಲ್ಲ... ಸ್ಫೋಟದ ಸದ್ದಿಲ್ಲ... ಮೊದಲ ಬಾರಿಗೆ ಶಾಂತಿಯುತವಾಗಿ ರಾತ್ರಿ ಕಳೆದ ಕಾಶ್ಮೀರ
ಕಾಶ್ಮೀರದ ಪಹಲ್ಗಾಮ್ ಜಿಲ್ಲೆಯ ಬೈಸರನ್ ಕಣಿವೆಯಲ್ಲಿ ಏಪ್ರಿಲ್ ೨೨ರಂದು ನಡೆದ ಭಯೋತ್ಪಾದಕ ದಾಳಿಯ ಬಳಿಕ ಭಾರತ ಮತ್ತು ಪಾಕಿಸ್ತಾನದ ಗಡಿ ನಿಯಂತ್ರಣ ರೇಖೆಯ ಉದ್ದಕ್ಕೂ ಉದ್ವಿಗ್ನತೆ ಹೆಚ್ಚಾಗಿತ್ತು. ಎರಡೂ ದೇಶಗಳ ನಡುವೆ ಮಿಲಿಟರಿ ಸಂಘರ್ಷ ಉಂಟಾಗಿತ್ತು. ಇದಾದ ಬಳಿಕ ಇದೇ ಮೊದಲ ಬಾರಿಗೆ ಕಾಶ್ಮೀರದಲ್ಲಿ ಶಾಂತತೆ ಕಂಡು ಬಂದಿದೆ.


ಕಾಶ್ಮೀರ: ಸುಮಾರು 21 ದಿನಗಳ ಬಳಿಕ ಜಮ್ಮು ಮತ್ತು ಕಾಶ್ಮೀರದಲ್ಲಿ (Jammu and Kashmir) ಭಾನುವಾರ ರಾತ್ರಿ ಶಾಂತಿಯುತವಾಗಿತ್ತು. ಯಾವುದೇ ಗುಂಡಿನ ದಾಳಿಯ ಸದ್ದು, ಎಚ್ಚರಿಕೆ ಸೈರನ್ ಗಳು ಇಲ್ಲಿನ ಜನರ ನಿದ್ದೆಗೆಡಿಸಲಿಲ್ಲ. ದಾಳಿಯ ಆತಂಕವಿತ್ತಾದರೂ ಅಂತಹ ಯಾವುದೇ ಘಟನೆಗಳು ನಡೆಯಲಿಲ್ಲ. ಭಾರತ ಮತ್ತು ಪಾಕಿಸ್ತಾನದ ನಡುವೆ ಗಡಿ ರೇಖೆಯ ಉದ್ದಕ್ಕೂ (Line of Control) ಉದ್ವಿಗ್ನತೆ ಕಾಣಿಸಿಕೊಂಡ ಬಳಿಕ ಇದೇ ಮೊದಲ ಬಾರಿಗೆ ಇಲ್ಲಿ ಪಾಕಿಸ್ತಾನದಿಂದ (India Pakistan conflict) ಯಾವುದೇ ದಾಳಿಯ ಘಟನೆಗಳು ನಡೆದಿಲ್ಲ ಎಂದು ರಕ್ಷಣಾ ವಕ್ತಾರರು ತಿಳಿಸಿದ್ದಾರೆ.
ಕಾಶ್ಮೀರದ ಪಹಲ್ಗಾಮ್ ಜಿಲ್ಲೆಯ ಬೈಸರನ್ ಕಣಿವೆಯಲ್ಲಿ ಏಪ್ರಿಲ್ 22ರಂದು ನಡೆದ ಭಯೋತ್ಪಾದಕ ದಾಳಿಯ ಬಳಿಕ ಭಾರತ ಮತ್ತು ಪಾಕಿಸ್ತಾನದ ಗಡಿ ನಿಯಂತ್ರಣ ರೇಖೆಯ ಉದ್ದಕ್ಕೂ ಉದ್ವಿಗ್ನತೆ ಹೆಚ್ಚಾಗಿತ್ತು. ಎರಡೂ ದೇಶಗಳ ನಡುವೆ ಮಿಲಿಟರಿ ಸಂಘರ್ಷ ಉಂಟಾಗಿತ್ತು. ಇದಾದ ಬಳಿಕ ಇದೇ ಮೊದಲ ಬಾರಿಗೆ ಕಾಶ್ಮೀರದಲ್ಲಿ ಶಾಂತತೆ ಕಂಡು ಬಂದಿದೆ. ಶನಿವಾರ ಭಾರತ ಮತ್ತು ಪಾಕಿಸ್ತಾನ ಕದನ ವಿರಾಮ ಒಪ್ಪಂದಕ್ಕೆ ಬಂದ ಬಳಿಕವೂ ರಾತ್ರಿ ಡ್ರೋನ್ ದಾಳಿ ಪ್ರಯತ್ನಗಳು ನಡೆದಿದ್ದವು. ಆದರೆ ಭಾನುವಾರ ರಾತ್ರಿ ಜಮ್ಮು ಮತ್ತು ಕಾಶ್ಮೀರ ಶಾಂತಿಯುತ ರಾತ್ರಿಯನ್ನು ಕಂಡಿದೆ ಎಂದು ರಕ್ಷಣಾ ವಕ್ತಾರ ಲೆಫ್ಟಿನೆಂಟ್ ಕರ್ನಲ್ ಸುನೀಲ್ ಬರ್ತ್ವಾಲ್ ಸೋಮವಾರ ತಿಳಿಸಿದ್ದಾರೆ.
ಗಡಿ ರಾಜ್ಯಗಳಾದ್ಯಂತದ ನಗರಗಳಲ್ಲಿ ಭಾನುವಾರದಿಂದಲೇ ಸಾಮಾನ್ಯತೆಯ ಲಕ್ಷಣಗಳನ್ನು ಕಾಣತೊಡಗಿದೆ. ಭಾನುವಾರ ಮತ್ತು ಸೋಮವಾರಗಳ ನಡುವಿನ ರಾತ್ರಿಯಲ್ಲಿ ಕೇಂದ್ರಾಡಳಿತ ಪ್ರದೇಶದಲ್ಲಿ ಯಾವುದೇ ಅಹಿತಕರ ಘಟನೆಗಳು ವರದಿಯಾಗಿಲ್ಲ ಎಂದು ಅವರು ಹೇಳಿದರು. ಪಹಲ್ಗಾಮ್ ಭಯೋತ್ಪಾದಕ ದಾಳಿಯ ಅನಂತರ ಉಗ್ರರ ವಿರುದ್ಧ ಭಾರತ ಪ್ರಾರಂಭಿಸಿದ ಆಪರೇಷನ್ ಸಿಂದೂರ್ ಕಾರ್ಯಯೋಜನೆಯು ಪಾಕಿಸ್ತಾನಕ್ಕೆ ಆಘಾತವನ್ನು ಉಂಟು ಮಾಡಿತ್ತು. ಇದರಿಂದ ಅದು ಯದ್ವಾತದ್ವಾ ಹೋರಾಟಕ್ಕೆ ಮುಂದಾಯಿತು. ಆದರೆ ಪಾಕಿಸ್ತಾನದ ದಾಳಿಯನ್ನು ತಡೆಗಟ್ಟುವಲ್ಲಿ ಭಾರತ ಯಶಸ್ಸು ಕಂಡಿತು.
ಆದರೆ ಈ ಸಂಘರ್ಷದ ಪರಿಣಾಮ ಗಡಿ ನಿಯಂತ್ರಣ ರೇಖೆ ಮತ್ತು ಅಂತಾರಾಷ್ಟ್ರೀಯ ಗಡಿಯುದ್ದಕ್ಕೂ ಇರುವ ಪ್ರದೇಶಗಳಲ್ಲಿ ಆತಂಕವನ್ನು ಉಂಟು ಮಾಡಿತ್ತು. ಶನಿವಾರ ಎರಡು ರಾಷ್ಟ್ರಗಳು ಕದನ ವಿರಾಮ ಘೋಷಣೆ ಮಾಡಿದ ಬಳಿಕವೂ ಪಾಕಿಸ್ತಾನದ ಸೇನೆಯು ಡ್ರೋನ್ ದಾಳಿಗಳನ್ನು ನಡೆಸಿ ಕದನ ವಿರಾಮ ಉಲ್ಲಂಘನೆ ನಡೆಸಿತ್ತು. ಆದರೆ ಭಾನುವಾರ ರಾತ್ರಿ ಮಾತ್ರ ಕಾಶ್ಮೀರದಲ್ಲಿ ಶಾಂತತೆ ಬಂದಿದೆ. ಮೇ 10ರಂದು ರಾತ್ರಿ, ಜಮ್ಮು ಮತ್ತು ಕಾಶ್ಮೀರದ ಕೆಲವು ಪ್ರದೇಶಗಳಲ್ಲಿ ಡ್ರೋನ್ ಪತ್ತೆಯಾಗಿತ್ತು, ಆದರೆ ಬಳಿಕ ಭಾರತವು ಪಾಕಿಸ್ತಾನಕ್ಕೆ ಪ್ರತೀಕಾರದ ಎಚ್ಚರಿಕೆ ನೀಡಿದ ಅನಂತರ ಪಾಕ್ ತಣ್ಣಗಾಗಿದೆ.
ಇದನ್ನೂ ಓದಿ: Operation Sindoor: ನಮಗೆ ಸಹಾಯ ಕೊಡಿ, ಪಾಕ್ ಅನ್ನು ಬಗ್ಗುಬಡಿಯುತ್ತೇವೆ: ಬಲೂಚಿ ಉಗ್ರರು
ಭಾರತ ಮತ್ತು ಪಾಕಿಸ್ತಾನ ಗುಂಡಿನ ಚಕಮಕಿಯನ್ನು ನಿಲ್ಲಿಸಿದ ಅನಂತರ ಜಮ್ಮು ಮತ್ತು ಕಾಶ್ಮೀರದ ಅಖ್ನೂರ್, ರಾಜೌರಿ, ಪೂಂಚ್, ಉರಿ, ಶ್ರೀನಗರ ಮತ್ತು ಜಮ್ಮು ಮತ್ತು ಪಂಜಾಬ್‌ನ ಫಿರೋಜ್‌ಪುರ ಮತ್ತು ಅಮೃತಸರದಂತಹ ನಗರಗಳು ಸಾಮಾನ್ಯ ಸ್ಥಿತಿಯ ಲಕ್ಷಣಗಳನ್ನು ತೋರಿಸಲು ಪ್ರಾರಂಭಿಸಿದವು. ನಾಲ್ಕು ದಿನಗಳ ತೀವ್ರ ಮಿಲಿಟರಿ ಸಂಘರ್ಷದ ಸಮಯದಲ್ಲಿ ರಾಜಸ್ಥಾನ ಮತ್ತು ಹರಿಯಾಣದ ಕೆಲವು ನಗರಗಳಲ್ಲಿ ಪಾಕಿಸ್ತಾನದ ಕಡೆಯಿಂದ ಸ್ಪೋಟಕಗಳು, ಶೆಲ್ ಮತ್ತು ಗುಂಡಿನ ದಾಳಿಗಳಾಗಿದ್ದು, ಇದರಿಂದ ತೀವ್ರ ಹಾನಿಯಾಗಿವೆ.