Pregnancy With IVF: IVF ಮೂಲಕ ತಾಯಿಯಾಗುತ್ತಿರುವ ನಟಿ ಭಾವನಾ; ಇದರ ಪ್ರಕ್ರಿಯೆ ಹೇಗಿರುತ್ತದೆ? ಕಾನೂನು ಏನು ಹೇಳುತ್ತದೆ?
ಅವಿವಾಹಿತರಾಗಿರೇ ಉಳಿದಿರುವ ಭಾವನಾ ಇದೀಗ ಐವಿಎಫ್ ತಂತ್ರಜ್ಞಾನದ(Pregnancy With IVF) ಮೂಲಕ ಅವಳಿ ಮಕ್ಕಳ ತಾಯಿಯಾಗುತ್ತಿರುವ ಸಂಗತಿಸೋಶಿಯಲ್ ಮೀಡಿಯಾದಲ್ಲಿ (Social Media) ಭಾರೀ ಚರ್ಚೆಗೀಡಾಗುತ್ತಿದೆ. ಈ ನಡುವೆ ಐವಿಎಫ್ ಪ್ರಕ್ರಿಯೆ ಹೇಗಿರುತ್ತದೆ? ಇದಕ್ಕೆ ಕಾನೂನು ಏನು ಹೇಳುತ್ತದೆ? ಎಂಬ ಪ್ರಶ್ನೆ ಹಲವರಲ್ಲಿದೆ. ಅದಕ್ಕೆ ಉತ್ತರ ಇಲ್ಲಿದೆ.


ಬೆಂಗಳೂರು: ಸಿನಿಮಾ ಕ್ಷೇತ್ರ ಮತ್ತು ರಾಜಕೀಯ ಜೀವನದಲ್ಲಿ ಸದಾ ಬ್ಯುಸಿ ಆಗಿರುವ ನಟಿ ಭಾವನಾ ರಾಮಣ್ಣ ಎರಡು ದಿನಗಳ ಹಿಂದೆ ತಾವು ತಾಯಿಯಾಗುತ್ತಿರುವ ಬಗ್ಗೆ ಗುಡ್‌ನ್ಯೂಸ್‌ವೊಂದನ್ನು ಹಂಚಿಕೊಂಡಿದ್ದರು. ಅವಿವಾಹಿತರಾಗಿರೇ ಉಳಿದಿರುವ ಭಾವನಾ(Bhavana Ramanna) ತಮ್ಮ 40ನೇ ವಯಸ್ಸಿನಲ್ಲಿ ಐವಿಎಫ್ ತಂತ್ರಜ್ಞಾನದ(Pregnancy With IVF) ಮೂಲಕ ಅವಳಿ ಮಕ್ಕಳ ತಾಯಿಯಾಗುತ್ತಿರುವ ಸಂಗತಿ ಬಹಳ ಸದ್ದು ಮಾಡುತ್ತಿದೆ. ಭಾವನಾ IVF (ಐವಿಎಫ್) ಮೂಲಕ ಭಾವನಾ ಗರ್ಭ ಧರಿಸಿರುವ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ (Social Media) ಪರ ವಿರೋಧದ ಟೀಕೆ ಹೆಚ್ಚಾಗುತ್ತಿದೆ. ಹಾಗಿದ್ದರೆ ಅವಿವಾಹಿತರಾಗಿಯೇ ಇದ್ದುಕೊಂಡು ಐವಿಎಫ್ ಮೂಲಕ ಮಕ್ಕಳನ್ನು ಪಡೆಯಬಹುದೇ? ಕಾನೂನು ಏನು ಹೇಳುತ್ತದೆ? ಅಷ್ಟಕ್ಕೂ ಈ ಐವಿಎಫ್ ಪ್ರಕ್ರಿಯೆ ಹೇಗಿರುತ್ತದೆ? ಇಲ್ಲಿದೆ ಸಂಪೂರ್ಣ ವಿವರ.
ಮದುವೆ ಆಗದೆ ಮಗು ಪಡೆಯಬಹುದೆ?
ಹಾಗಿದ್ದರೆ ಮದುವೆ ಆಗದೇ ಮಹಿಳೆಯೊಬ್ಬರು ಈ ರೀತಿ ತಾಯಿ ಆಗಬಹುದೇ? IVF ತಜ್ಞೆ ಡಾ. ಕಾಮಿನಿ ಹೇಳುವ ಪ್ರಕಾರ ತಾಯಿಯಾಗುವುದು ಪ್ರತಿಯೊಬ್ಬ ಹೆಣ್ಣುಮಗಳ ಹಕ್ಕು. ಕಾನೂನು ಪ್ರಕ್ರಿಯೆಗಳನ್ನು ಸರಿಯಾದ ರೀತಿಯಲ್ಲಿ ಪೂರ್ಣಗೊಳಿಸಿದರೆ ತಾಯ್ತನವನ್ನು ಪಡೆಯುವುದು ಮಹಿಳೆಯ ಹಕ್ಕು. ಅದಕ್ಕೆ ಯಾರೂ ಅಡಚಣೆ ಮಾಡುವಂತಿಲ್ಲ. ನೆರವಿನ ಸಂತಾನೋತ್ಪತ್ತಿ ತಂತ್ರಜ್ಞಾನ(ART) ಕಾನೂನಿನ ನಿಯಮದ ಪ್ರಕಾರ ಒಬ್ಬ ಮಹಿಳೆ 50ವರ್ಷದವರೆಗೆ ಐವಿಎಫ್ ಮೂಲಕ ಮಕ್ಕಳನ್ನು ಪಡೆಯಬಹುದಾಗಿದೆ. ಮಹಿಳೆಯ ಅಂಡಾಂಶಗಳು ಸರಿಯಾಗಿದ್ದಾಗ ಮಕ್ಕಳನ್ನು ಪಡೆಯಲು ಸಾಧ್ಯ ಇದೆ. ಭಾವನಾ ಅವರ ನಡೆಯಲ್ಲಿ ಯಾವುದೇ ತಪ್ಪಿಲ್ಲ. ಅವರ ತಾಯ್ತನದ ಕನಸು ನನಸಾಗಿದೆ ಎಂದಿದ್ದಾರೆ.
IVFನಿಂದ ಮಗು ಪಡೆಯುವ ಪ್ರಕ್ರಿಯೆ ಹೇಗಿರುತ್ತದೆ?
ಫಲವತ್ತಾದ ಅಂಡಾಣುವನ್ನು ಅಂಡಾಶಯದಿಂದ ಹಿಂಪಡೆದಾಗ ಮತ್ತು ಪ್ರಯೋಗಾಲಯದಲ್ಲಿ ವೀರ್ಯದ ಜೊತೆಗೆ ಫಲವತ್ತಾಗಿಸಲಾಗುತ್ತದೆ ಇಲ್ಲಿಂದ IVF ಪ್ರಕ್ರಿಯೆಯು ಪ್ರಾರಂಭವಾಗುತ್ತದೆ. ಫಲೀಕರಣ ಪ್ರಕ್ರಿಯೆಯ ನಂತರ, ಫಲವತ್ತಾದ ಮೊಟ್ಟೆಯನ್ನು ಗರ್ಭಾಶಯಕ್ಕೆ ವರ್ಗಾಯಿಸಲಾಗುತ್ತದೆ. ಫಲವತ್ತಾದ ಮೊಟ್ಟೆಯನ್ನು ಗರ್ಭಾಶಯದ ಗೋಡೆಯಲ್ಲಿ ಅಳವಡಿಸಿಕೊಂಡಾಗ, ಗರ್ಭಧಾರಣೆಯನ್ನು ಸಾಧಿಸಬಹುದು. ಸಾಮಾನ್ಯವಾಗಿ, IVF ನ ಒಂದು ಪೂರ್ಣ ಚಕ್ರವು 17 ರಿಂದ 20 ದಿನಗಳು ತೆಗೆದುಕೊಳ್ಳುತ್ತದೆ. ಆದರೆ ವ್ಯಕ್ತಿಯ ಆರೋಗ್ಯ ಸ್ಥಿತಿಗಳನ್ನು ಅವಲಂಬಿಸಿ ಪ್ರಕ್ರಿಯೆಯು ದೀರ್ಘವಾಗಿರುತ್ತದೆ.
ಐವಿಎಫ್ ಅನ್ನು ಅಂಡಾಶಯದ ಪ್ರಚೋದನೆ, ಅಂಡಾಣು ಮರುಪಡೆಯುವಿಕೆ, ವೀರ್ಯ ಮರುಪಡೆಯುವಿಕೆ ಮತ್ತು ಫಲೀಕರಣದ ನಂತರ ಅಂಡಾಣುವಿನ ವರ್ಗಾವಣೆಯಂತಹ ನಿರ್ಣಾಯಕ ಹಂತಗಳ ಅಡಿಯಲ್ಲಿ ವರ್ಗೀಕರಿಸಲಾಗಿದೆ. ಈ ಎಲ್ಲಾ ಹಂತಗಳನ್ನು ಪೂರ್ಣಗೊಳಿಸಿದ ನಂತರ, ಭ್ರೂಣ ವರ್ಗಾವಣೆಯ ನಂತರ ಸುಮಾರು ಒಂಬತ್ತರಿಂದ 14 ದಿನಗಳ ನಂತರ ವೈದ್ಯರು ರಕ್ತ ಪರೀಕ್ಷೆಯನ್ನು ತೆಗೆದುಕೊಳ್ಳುತ್ತಾರೆ ಮತ್ತು ಅವರು ಗರ್ಭಿಣಿಯಾಗಿದ್ದಾರೆಯೇ ಎಂದು ನಿರ್ಧರಿಸುತ್ತಾರೆ.
ವೀರ್ಯ ದಾನಿಗಳನ್ನು ನಿರ್ಧರಿಸುವವರು ಯಾರು?
ಹಾಗಿದ್ದರೆ ಅವಿವಾಹಿತ ಮಹಿಳೆಯರು ಮಗುವನ್ನು ಪಡೆಯಬೇಕಾದರೆ ವೀರ್ಯ ದಾನಿಗಳನ್ನು ನಿರ್ಧರಿಸುವವರು ಯಾರು? ಡಾ. ಕಾಮಿನಿ ಹೇಳುವ ಪ್ರಕಾರ, ಇದನ್ನು ನಿರ್ಧರಿಸುವವರು ಆ ಮಹಿಳೆಯೇ ಆಗಿರುತ್ತಾಳೆ. ರಕ್ತ ಪೂರೈಕೆಗಾಗಿ ಬ್ಲಡ್ ಬ್ಯಾಂಕ್‌ಗಳಿರುವ ಹಾಗೆ ವೀರ್ಯ ಪೂರೈಕೆಯ ಬ್ಯಾಂಕ್‌ಗಳೂ ಇರುತ್ತವೆ. ಥರ್ಡ್ ಪಾರ್ಟಿ ರಿಪ್ರೊಡಕ್ಷನ್ ಅಂತ ಇದಕ್ಕೆ ಹೇಳುತ್ತೇವೆ. ಆಕೆಯ ಅವಶ್ಯಕತೆಗೆ ಅನುಗುಣವಾಗಿ, ಆಕೆಯ ಬೇಡಿಕೆಗಳಿಗೆ ಹೊಂದುವಂತಹ ಸ್ಯಾಂಪಲ್‌ಗಳನ್ನು ಬ್ಯಾಂಕ್‌ನವರು ಆಯ್ದು ಕೊಡುತ್ತಾರೆ. ಅವಿವಾಹಿತರಾಗಿದ್ದಲ್ಲಿ ಅವರಿಗೆ ತಿಳಿದಿರುವ ಅಥವಾ ಅನಾಮಧೇಯ ದಾನಿಯಿಂದ ಫಲವತ್ತಾದ ಮೊಟ್ಟೆ ಅಥವಾ ವೀರ್ಯವನ್ನು ಪಡೆಯುವ ಮೂಲಕ IVF ಮಾಡಬಹುದು.
ಕಾನೂನು ಏನು ಹೇಳುತ್ತದೆ?
ಇಷ್ಟೆಲ್ಲಾ ತಿಳಿದ ಮೇಲೆ ಕಾನೂನು ಪ್ರಕ್ರಿಯೆಗಳ ಬಗ್ಗೆ ತಿಳಿಯೋಣ. ಅವಿವಾಹಿತರು ಐವಿಎಫ್ ಮೂಲಕ ಮಕ್ಕಳು ಪಡೆಯಬೇಕಾದರೆ ಕೆಲವೊಂದು ಕಾನೂನು ಪ್ರಕ್ರಿಯೆಗಳಿವೆ. ಅವುಗಳೇನೆಂಬುದನ್ನು ತಿಳಿಯೋಣ. ಹೊಸ ART ಕಾನೂನಿನಡಿಯಲ್ಲಿ ಭಾರತದಲ್ಲಿ ಒಂಟಿ ತಾಯಂದಿರು ಅಥವಾ ಅವಿವಾಹಿತ ಮಹಿಳೆಯರು ಸೇರಿದಂತೆ ಒಂಟಿ ಮಹಿಳೆಯರಿಗೆ IVF ಕಾನೂನುಬದ್ಧವಾಗಿದೆ. ಹೊಸ ಕಾನೂನು ಇಪ್ಪತ್ತೊಂದು ವರ್ಷಕ್ಕಿಂತ ಮೇಲ್ಪಟ್ಟ ಮತ್ತು ಭಾರತದ ಪ್ರಜೆಯಾಗಿರುವ ಯಾವುದೇ ಮಹಿಳೆ ART ಸೇವೆಗಳನ್ನು ಪಡೆಯಬಹುದು ಎಂದು ಹೇಳುತ್ತದೆ. ಇದರರ್ಥ ಒಂಟಿ ಮಹಿಳೆಯರು ಈಗ ವಿವಾಹಿತ ದಂಪತಿಗಳಂತೆಯೇ IVF ಚಿಕಿತ್ಸೆಗೆ ಅರ್ಹರಾಗಿದ್ದಾರೆ. ಹೀಗೆ ಅವಿವಾಹಿತರಾಗಿದ್ದುಕೊಂಡು ಐವಿಎಫ್ ಮೂಲಕ ಮಕ್ಕಳನ್ನು ಪಡೆಯುತ್ತಿರುವ ಮಹಿಳೆಯರಿಗೆ ಕೆಲವೊಂದು ನಿಯಮಗಳಿವೆ.
- 21 ರಿಂದ 45 ವರ್ಷ ವಯಸ್ಸಿನವರಾಗಿರಬೇಕು
- ಭಾರತೀಯ ನಾಗರಿಕರಾಗಿರಬೇಕು.
- IVF ಚಿಕಿತ್ಸೆಗೆ ಒಳಗಾಗಲು ರೋಗಿಗಳು ವೈದ್ಯಕೀಯವಾಗಿ ಸದೃಢರಾಗಿರಬೇಕು.
- ತಾಯಿ ಮತ್ತು ಮಗುವಿನ ಮೇಲೆ ಚಿಕಿತ್ಸೆಯಿಂದ ಅಡ್ಡಪರಿಣಾಮ ಸಂಭವಿಸಬಹುದಾದ ಯಾವುದೇ ಖಾಯಿಲೆಗಳು ಇರಬಾರದು
- ತಿಳಿದಿರುವ ಅಥವಾ ಅನಾಮಧೇಯ ದಾನಿಯಿಂದ ವೀರ್ಯ ದಾನವನ್ನು ಪಡೆಯಬೇಕು