ಟ್ರ್ಯಾಕ್ಟರ್‌ಗೆ ಬಾಡಿಗೆ ನೀಡಲು ಹಣವಿಲ್ಲದೆ ಸ್ವತಃ ನೊಗ-ನೇಗಿಲು ಹೊತ್ತ ವೃದ್ಧ ದಂಪತಿಯ ನೆರವಿಗೆ ಧಾವಿಸಿದ ಸಚಿವ; ಸಾಲ ಮರುಪಾವತಿ
Latur Farmer: ಎತ್ತು, ಟ್ರ್ಯಾಕ್ಟರ್‌ಗೆ ಬಾಡಿಗೆ ನೀಡಲು ಹಣವಿಲ್ಲದೆ, ಕಾರ್ಮಿಕರಿಗೆ ಕೂಲಿ ನೀಡಲು ಸಾಧ್ಯವಾಗದೆ ಸ್ವತಃ ನೊಗ-ನೇಗಿಲು ಹಿಡಿದು ಗದ್ದೆ ಉತ್ತ ವೃದ್ಧ ದಂಪತಿಯ ವಿಡಿಯೊ ಇತ್ತೀಚೆಗೆ ವೈರಲ್ ಆಗಿ ಹಲವರು ಮರುಗಿದ್ದರು. ಇದೀಗ ಸಚಿವ ಬಾಬಾಸಾಹೇಬ್ ಪಾಟೀಲ್ ಶನಿವಾರ ಈ ರೈತ ದಂಪತಿಯ 42,500 ರೂ. ಸಾಲವನ್ನು ತೀರಿಸಿದ್ದಾರೆ.


ಮುಂಬೈ: ಸಾಲ ಮಾಡಿಕೊಂಡ ಕಾರಣ ಎತ್ತು, ಟ್ರ್ಯಾಕ್ಟರ್‌ಗೆ ಬಾಡಿಗೆ ನೀಡಲು ಹಣವಿಲ್ಲದೆ, ಕಾರ್ಮಿಕರಿಗೆ ಕೂಲಿ ನೀಡಲು ಸಾಧ್ಯವಾಗದೆ ಸ್ವತಃ ನೊಗ-ನೇಗಿಲು ಹಿಡಿದು ಗದ್ದೆ ಉತ್ತ ವೃದ್ಧ ದಂಪತಿಯ ವಿಡಿಯೊ ಇತ್ತೀಚೆಗೆ ವೈರಲ್ (Viral Video) ಆಗಿತ್ತು. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿ ದೇಶವೇ ಮರುಗಿತ್ತು. ಬೆಳೆ ನಾಶವಾದ ಹಿನ್ನೆಲೆಯಲ್ಲಿ ಸಾಲ ಮಾಡಿದ್ದರಿಂದ ಅನಿವಾರ್ಯವಾಗಿ 75 ವರ್ಷದ ಪತಿ ನೊಗ ಹೊತ್ತಿದ್ದರೆ, 65 ವರ್ಷದ ಪತ್ನಿ ನೇಗಿಲು ಹಿಡಿದು ನೆಲ ಹದ ಮಾಡುತ್ತಿರುವುದು ವಿಡಿಯೊದಲ್ಲಿ ಕಂಡು ಬಂದಿತ್ತು. ಇದೀಗ ಸಚಿವರೊಬ್ಬರು ಈ ದಂಪತಿಯ ನೆರವಿಗೆ ಧಾವಿಸಿದ್ದಾರೆ. ಹೌದು, ಸಚಿವ ಬಾಬಾಸಾಹೇಬ್ ಪಾಟೀಲ್ (Babasaheb Patil) ಶನಿವಾರ (ಜು. 5) ಈ ರೈತ ದಂಪತಿಯ 42,500 ರೂ. ಸಾಲವನ್ನು ತೀರಿಸಿದ್ದಾರೆ.
ಲಾತೂರ್ ಜಿಲ್ಲೆಯ ಹಡೋಲ್ಟಿ ಗ್ರಾಮದ ಅಂಬಾದಾಸ್ ಪವಾರ್ ಮತ್ತು ಅವರ ಪತ್ನಿ ಮುಕ್ತಾಭಾಯಿ ತಮ್ಮ 2.5 ಎಕ್ರೆ ಕೃಷಿ ಭೂಮಿಯನ್ನು ತಾವೇ ಉಳುಮೆ ಮಾಡಿದ್ದರು. 75 ವರ್ಷದ ಪತಿಯ ಹೆಗಲಿಗೆ ನೊಗ ಕಟ್ಟಿ 65 ವರ್ಷದ ಪತ್ನಿ ನೇಗಿಲು ಬಳಸಿ ಗದ್ದೆ ಉತ್ತಿದ್ದರು. ಹಣ ಇಲ್ಲದ ಕಾರಣ ಅನಿವಾರ್ಯವಾಗಿ ತಾವು ಈ ಕಾರ್ಯಕ್ಕೆ ಇಳಿಯಬೇಕಾಯ್ತು ಎಂದು ತಿಳಿಸಿದ್ದರು. ಈ ವಿಚಾರ ತಿಳಿದು ಹಲವರು ಮರುಗಿದ್ದರು.
#WATCH | Maharashtra | An elderly farmer tills dry land by tying himself to traditional plough in drought-hit area in Latur pic.twitter.com/9geMReVGB0
— ANI (@ANI) July 2, 2025
ಈ ಸುದ್ದಿಯನ್ನೂ ಓದಿ: ಟ್ರ್ಯಾಕ್ಟರ್‌ಗೆ ಬಾಡಿಗೆ ನೀಡಲು ಹಣವಿಲ್ಲ; ನೇಗಿಲು ತಾವೇ ಹೊತ್ತು ಗದ್ದೆ ಉಳುಮೆಗೆ ಇಳಿದ ವೃದ್ಧ ದಂಪತಿ: ಅನ್ನದಾತರ ಸ್ಥಿತಿ ಕಂಡು ಮರುಗಿದ ದೇಶ
ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಬಳಿಕ ಈ ವಿಚಾರ ಸಚಿವ ಬಾಬಾಸಾಹೇಬ್ ಪಾಟೀಲ್ ಅವರ ಗಮನಕ್ಕೆ ಬಂತು. ಕೂಡಲೇ ಅವರು ಅಂಬಾದಾಸ್ ಪವಾರ್ ಅವರನ್ನು ಸಂಪರ್ಕಿಸಿ ತಮ್ಮ ಬಾಕಿ ಇರುವ ಬೆಳೆ ಸಾಲವನ್ನು ಮರುಪಾವತಿಸುವುದಾಗಿ ಭರವಸೆ ನೀಡಿದರು. ಅಂಬಾದಾಸ್ ಪವಾರ್ ಹಡೋಲ್ಟಿ ಸಹಕಾರಿ ಸಂಘದಿಂದ ಪಡೆದ ಸಾಲದ ಪೈಕಿ 42,500 ರೂ. ಬಾಕಿ ಉಳಿಸಿಕೊಂಡಿದ್ದರು. ಹೀಗಾಗಿ ಪಾಟೀಲ್ ಶನಿವಾರ ಭೇಟಿ ನೀಡಿ ಸೊಸೈಟಿಯ ಪದಾಧಿಕಾರಿಗಳಿಗೆ ಈ ಮೊತ್ತವನ್ನು ಹಸ್ತಾಂತರಿಸಿದರು ಮತ್ತು ಪವಾರ್ ಅವರಿಗೆ ಕ್ಲಿಯರೆನ್ಸ್ ಪ್ರಮಾಣಪತ್ರವನ್ನು ನೀಡುವಂತೆ ಸೂಚಿಸಿದರು.
ʼʼರೈತರ ಸಮಸ್ಯೆಗಳನ್ನು ಪರಿಹರಿಸಲು ಸರ್ಕಾರ ಬದ್ಧವಾಗಿದೆ ಮತ್ತು ಅವರ ಪರಿಸ್ಥಿತಿಯನ್ನು ಸುಧಾರಿಸಲು ವಿವಿಧ ಕಲ್ಯಾಣ ಯೋಜನೆಗಳನ್ನು ಜಾರಿಗೆ ತರುತ್ತಿದೆʼʼ ಎಂದು ಸಚಿವರು ಭರವಸೆ ನೀಡಿದರು. ದಿನಕ್ಕೆ ಸುಮಾರು 2,500 ರೂ. ಖರ್ಚು ಮಾಡಿ ಎತ್ತುಗಳು ಅಥವಾ ಟ್ರ್ಯಾಕ್ಟರ್‌ಗಳನ್ನು ಬಾಡಿಗೆ ಪಡೆಯಲು ಯಾವುದೇ ಮಾರ್ಗವಿಲ್ಲದೆ ಪತ್ನಿ ಜತೆಗೆ ಗದ್ದೆ ಹೂಳಿದ್ದಾಗಿ ಪವಾರ್ ಈ ವೇಳೆ ತಿಳಿಸಿದರು.
ಇನ್ನು ಶುಕ್ರವಾರ ಕ್ರಾಂತಿಕಾರಿ ಶೇತ್ಕರಿ ಸಂಘಟನೆಯ ಲಾತೂರ್ ಜಿಲ್ಲಾ ಘಟಕವು ಪವಾರ್ ಅವರಿಗೆ ಒಂದು ಜೋಡಿ ಎತ್ತುಗಳನ್ನು ಉಡುಗೊರೆಯಾಗಿ ನೀಡಿತು. ಮೆರವಣಿಗೆ ಮೂಲಕ ಹಡೋಲ್ಟಿಯಲ್ಲಿರುವ ಅವರ ಮನೆಗೆ ಎತ್ತುಗಳನ್ನು ಕರೆ ತರಲಾಯಿತು. ತೆಲಂಗಾಣದ ಚಾರಿಟಬಲ್ ಟ್ರಸ್ಟ್ ಕೂಡ ಪವಾರ್ ಅವರನ್ನು ಭೇಟಿ ಮಾಡಿ 1 ಲಕ್ಷ ರೂ.ಗಳ ಚೆಕ್ ಹಸ್ತಾಂತರಿಸಿತು.