Cabinet meeting: ಇಂದು ಮಲೆ ಮಹದೇಶ್ವರ ಬೆಟ್ಟದಲ್ಲಿ ಜರ್ಮನ್ ಟೆಂಟ್‌ನಲ್ಲಿ ಸಚಿವ ಸಂಪುಟ ಸಭೆ
ಗುರುವಾರ ಮಧ್ಯಾಹ್ನ 12ರಿಂದ 3 ರವರೆಗೆ ಸಂಪುಟ ಸಭೆ, ಅದಾದ ಬಳಿಕ ಮಲೆ ಮಹದೇಶ್ವರ ಬೆಟ್ಟ (Male Mahadeshwara Hills) ಅಭಿವೃದ್ಧಿ ಪ್ರಾಧಿಕಾರದ ಸಭೆ ನಡೆಯಲಿದೆ. ಸಿಎಂ ಗುರುವಾರದಂದು ಬೆಟ್ಟದಲ್ಲಿ ವಾಸ್ತವ್ಯ ಹೂಡಲಿದ್ದು ಶುಕ್ರವಾರ ಚಾಮರಾಜನಗರಕ್ಕೆ ಬರಲಿದ್ದಾರೆ. ಮಲೆ ಮಹದೇಶ್ವರ ಬೆಟ್ಟದ ವಜ್ರಮಲೆ ಭವನ ಸಮೀಪ ಜರ್ಮನ್ ಟೆಂಟ್‌ನಲ್ಲಿ ಸಚಿವ ಸಂಪುಟ ಸಭೆ ನಡೆಯಲಿದೆ.

ಸಚಿವ ಸಂಪುಟ ಸಭೆ ನಡೆಯಲಿರುವ ಟೆಂಟ್

ಚಾಮರಾಜನಗರ: ಪ್ರಸಿದ್ಧ ಯಾತ್ರಾ ಸ್ಥಳವಾದ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ (Male Mahadeshwara Hills) ಇಂದು ಸಚಿವ ಸಂಪುಟ ಸಭೆ (Cabinet meeting) ನಡೆಯಲಿದೆ. ಇಡೀ ಕ್ಷೇತ್ರ ವಿದ್ಯುತ್ ದೀಪಾಲಂಕಾರದಿಂದ ಜಗಮಗಿಸುತ್ತಿದೆ. ಮೈಸೂರು ವಿಭಾಗದ 8 ಜಿಲ್ಲೆಗಳ ಅಭಿವೃದ್ಧಿ ಬಗ್ಗೆ ಹಲವು ನಿರ್ಣಯ, ಯೋಜನೆ ಘೋಷಣೆ ಆಗಲಿದೆ. ಚಾಮರಾಜನಗರ ಜಿಲ್ಲೆಗೆ ಸಂಬಂಧಿಸಿದಂತೆ ನೀರಾವರಿ ಯೋಜನೆ, ಮೂಲಸೌಕರ್ಯ ಅಭಿವೃದ್ಧಿ, ಗಿರಿಜನರಿಗೆ ವಸತಿ ಸೌಕರ್ಯ, ಪ್ರವಾಸೋದ್ಯಮಕ್ಕೆ ಉತ್ತೇಜನಕ್ಕೆ ಹೆಚ್ಚು ಅನುದಾನ ಅಥವಾ ವಿಶೇಷ ಪ್ಯಾಕೇಜ್‌ಗಳನ್ನು ಸಿಎಂ ಸಿದ್ದರಾಮಯ್ಯ (CM Siddaramaiah) ಘೋಷಿಸುವ ಸಾಧ್ಯತೆ ಇದೆ.
ಗುರುವಾರ ಮಧ್ಯಾಹ್ನ 12ರಿಂದ 3 ರವರೆಗೆ ಸಂಪುಟ ಸಭೆ, ಅದಾದ ಬಳಿಕ ಮಲೆ ಮಹದೇಶ್ವರ ಬೆಟ್ಟ ಅಭಿವೃದ್ಧಿ ಪ್ರಾಧಿಕಾರದ ಸಭೆ ನಡೆಯಲಿದೆ. ಸಿಎಂ ಗುರುವಾರದಂದು ಬೆಟ್ಟದಲ್ಲಿ ವಾಸ್ತವ್ಯ ಹೂಡಲಿದ್ದು ಶುಕ್ರವಾರ ಚಾಮರಾಜನಗರಕ್ಕೆ ಬರಲಿದ್ದಾರೆ. ಮಲೆ ಮಹದೇಶ್ವರ ಬೆಟ್ಟದ ವಜ್ರಮಲೆ ಭವನ ಸಮೀಪ ಜರ್ಮನ್ ಟೆಂಟ್‌ನಲ್ಲಿ ಸಚಿವ ಸಂಪುಟ ಸಭೆ ನಡೆಯಲಿದೆ.
ಸಚಿವ ಸಂಪುಟ ಸಭೆ ಹಿನ್ನೆಲೆಯಲ್ಲಿ ಇಡೀ ಕ್ಷೇತ್ರಕ್ಕೆ ವಿದ್ಯುತ್ ದೀಪಾಲಂಕಾರ ಮಾಡಲಾಗಿದ್ದು, ವಿಶೇಷ ಸ್ವಾಗತ ಕಮಾನುಗಳು ಕಣ್ಮನ ಸೆಳೆಯುತ್ತಿದೆ. ಸಂಪುಟ ಸಭೆ ಜೊತೆಗೇ ವಜ್ರಮಲೆ ನೂತನ ವಸತಿ ಗೃಹ, ಮಲೆಮಹದೇಶ್ವರ ಮ್ಯೂಸಿಯಂ, ಸೋಲಾರ್ ವಿದ್ಯುತ್ ಪ್ಲಾಂಟ್ ಲೋಕಾರ್ಪಣೆ ಆಗಲಿದೆ. ವಿವಿಧ ಕಾಮಗಾರಿಗಳಿಗೆ ಸಿಎಂ ಸಿದ್ದರಾಮಯ್ಯ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ಸಂಪುಟ ಸಭೆ ಹಿನ್ನೆಲೆ ಖಾಕಿ ಹೈ ಅಲರ್ಟ್ ಆಗಿದ್ದು 2 ಸಾವಿರಕ್ಕೂ ಅಧಿಕ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಬಂದೋಬಸ್ತ್‌ಗಾಗಿ ಇಬ್ಬರು ಡಿಐಜಿ ನೇತೃತ್ವದಲ್ಲಿ ಇಬ್ಬರು ಎಸ್ಪಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ 2, ಡಿವೈಎಸ್ಪಿ 11, ಇನ್ಸ್ಪೆಕ್ಟರ್ 31, ಸಬ್ ಇನ್ಸ್ಪೆಕ್ಟರ್ 85, ಸಹಾಯಕ ಸಬ್ ಇನ್ಸ್ಪೆಕ್ಟರ್ 125, ಪೇದೆಗಳು796 , ಮಹಿಳಾಪೇದೆ 41, ಕೆಎಸ್ಆರ್ ಆರ್ ಪಿ, ಡಿಯರ್ 7, ಗೃಹರಕ್ಷಕ ದಳ 6 ಸಿಬ್ಬಂದಿಗಳು ಸೇರಿದಂತೆ ಹಿರಿಯ ಅಧಿಕಾರಿಗಳು ಹಾಗೂ ಪೊಲೀಸರು ಸೇರಿದಂತೆ 2,000ಕ್ಕೂ ಅಧಿಕ ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದೆ.
ಸಂಪುಟ ಸಭೆಗಳು ಇದುವರೆಗೆ ವಿಧಾನಸೌಧದಲ್ಲಿ, ಬೆಳಗಾವಿ ಸುವರ್ಣಸೌಧ ಕಟ್ಟಡಗಳಲ್ಲಿ ನಡೆದಿತ್ತು. ಆದರೆ, ಇದೇ ಮೊದಲ ಬಾರಿಗೆ ಜರ್ಮನ್ ಟೆಂಟ್‌ನಲ್ಲಿ ಕ್ಯಾಬಿನೆಟ್ ಮೀಟಿಂಗ್ ನಡೆಯುತ್ತಿದೆ. ವಜ್ರಮಲೆ ಮುಂಭಾಗದ ಖಾಲಿ ನಿವೇಶನದಲ್ಲಿ ಜರ್ಮನ್ ಟೆಂಟ್ ಹಾಕಲಾಗಿದ್ದು ಸಂಪುಟ ಸಭೆ ನಡೆಯುವ ಸ್ಥಳವನ್ನು ಅಲಂಕೃತಗೊಳಿಸಲಾಗಿದೆ, ಇಡೀ ಟೆಂಟ್ ಸಂಪೂರ್ಣ ಹವಾನಿಯಂತ್ರಿತವಾಗಿದೆ. ಸಂಪುಟ ಸಭೆಯ ಬದಿಯಲ್ಲಿ ವಿವಿಧ ಕಾಮಗಾರಿ ಉದ್ಘಾಟನೆ, ಶಂಕುಸ್ಥಾಪನೆ ನೆರವೇರಿಸಲು ಮತ್ತೊಂದು ಟೆಂಟ್ ಹಾಕಲಾಗಿದೆ.
ಇದನ್ನೂ ಓದಿ: Male Mahadeshwar hills: ಮಲೆ ಮಹದೇಶ್ವರ ದೇಗುಲದ ಗೋಪುರ ಏರಿ ಆತ್ಮಹತ್ಯೆಗೆ ಯತ್ನಿಸಿದ ಭೂಪ!