Chikkaballapur News: ಜನವಿರೋಧಿ ನೀತಿಗಳ ವಿರುದ್ಧ ಮೇ ೨೦ರಂದು ದೇಶದ್ಯಂತ ಸಾರ್ವತ್ರಿಕ ಮುಷ್ಕರ ಹಮ್ಮಿಕೊಳ್ಳಲಾಗಿದೆ : ಸಿಐಟಿಯು ರಾಜ್ಯಾಧ್ಯಕ್ಷೆ ವರಲಕ್ಷ್ಮೀ
ದುಡಿಯುವ ವರ್ಗಕ್ಕೆ ಮಾರಕವಾಗಿರುವ ನಾಲ್ಕು ಕಾರ್ಮಿಕ ಕಾಯಿದೆಗಳನ್ನು ಜಾರಿಗೊಳಿಸಲು ಕೇಂದ್ರ ಸರಕಾರ ಮುಂದಾಗಿದೆ. ಕಾರ್ಮಿಕ ಸಂಘಟನೆಗಳ ಬೇಡಿಕೆಗಳನ್ನು ಗಾಳಿಗೆ ತೂರಿದೆ. ದಿನಕ್ಕೆ 600 ರೂಪಾಯಿ ಕನಿಷ್ಠ ವೇತನ ನಿಗದಿ ಮಾಡಬೇಕು, ಇದಕ್ಕಿಂದ ಕಡಿಮೆ ಹಣಕ್ಕೆ ದುಡಿಸಿಕೊಳ್ಳ ಬಾರದು ಎಂದು ಕೋರ್ಟ್ ಹೇಳಿದೆ

ಕೇಂದ್ರದ ಜನವಿರೋಧಿ ನೀತಿಗಳ ವಿರುದ್ಧ ಮೇ ೨೦ರಂದು ದೇಶದ್ಯಂತ ಸಾರ್ವತ್ರಿಕ ಮುಷ್ಕರ ಹಮ್ಮಿಕೊಳ್ಳಲಾಗಿದೆ ಎಂದು ಸಿಐಟಿಯು ರಾಜ್ಯಾಧ್ಯಕ್ಷೆ ವರಲಕ್ಷ್ಮೀ ತಿಳಿಸಿದರು.

ಚಿಕ್ಕಬಳ್ಳಾಪುರ : ಕೇಂದ್ರದ ನರೇಂದ್ರ ಮೋದಿ ಸರಕಾರವು ಕಾರ್ಪೊರೇಟ್ ಮತ್ತು ಬಂಡವಾಳ ಶಾಹಿಗಳ ಪರ ನಿಂತಿದ್ದು, ಭೂಸ್ವಾಧೀನದ ಮೂಲಕ ರೈತರನ್ನು ಕೂಲಿಕಾರ್ಮಿಕರನ್ನಾಗಿ ಮಾಡಲು ಹೊರಟಿದೆ.ಜನವಿರೋಧಿ ನೀತಿಗಳ ವಿರುದ್ಧ ಮೇ 20ರಂದು ಸಾರ್ವತ್ರಿಕ ಮುಷ್ಕರ ಹಮ್ಮಿಕೊಳ್ಳ ಲಾಗಿದೆ ಎಂದು ಸಿಐಟಿಯು ರಾಜ್ಯಾಧ್ಯಕ್ಷೆ ವರಲಕ್ಷ್ಮೀ ಹೇಳಿದರು. ಚಿಕ್ಕಬಳ್ಳಾಪುರ ನಗರದ ಅಂಬೇಡ್ಕರ್ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ದುಡಿಯುವ ವರ್ಗಕ್ಕೆ ಮಾರಕವಾಗಿರುವ ನಾಲ್ಕು ಕಾರ್ಮಿಕ ಕಾಯಿದೆಗಳನ್ನು ಜಾರಿಗೊಳಿಸಲು ಕೇಂದ್ರ ಸರಕಾರ ಮುಂದಾಗಿದೆ. ಕಾರ್ಮಿಕ ಸಂಘಟನೆಗಳ ಬೇಡಿಕೆಗಳನ್ನು ಗಾಳಿಗೆ ತೂರಿದೆ. ದಿನಕ್ಕೆ 600 ರೂಪಾಯಿ ಕನಿಷ್ಠ ವೇತನ ನಿಗದಿ ಮಾಡಬೇಕು, ಇದಕ್ಕಿಂದ ಕಡಿಮೆ ಹಣಕ್ಕೆ ದುಡಿಸಿಕೊಳ್ಳ ಬಾರದು ಎಂದು ಕೋರ್ಟ್ ಹೇಳಿದೆ ಎಂದರು.
1948ರ ಕನಿಷ್ಠ ವೇತನ ಕಾಯಿದೆಯ ಪ್ರಕಾರ ಪ್ರತಿಯೊಬ್ಬ ಕಾರ್ಮಿಕನ ವೇತನ ಹೆಚ್ಚಳ ಆಗುತ್ತದೆ. ಆದರೆ, ಕೇಂದ್ರ ಸರಕಾರ ವೇತನ ಸಂಹಿತೆಯಡಿ ೪ ಕಾನೂನುಗಳನ್ನು ಜಾರಿಗೊಳಿಸಲು ಮುಂದಾ ಗಿದ್ದು, ಈ ಕಾರ್ಮಿಕ ವಿರೋಧಿ ಕಾನೂನಿಗಳಿಂದ ಇನ್ನು ಮುಂದೆ ಯಾವೊಬ್ಬ ಕಾರ್ಮಿಕನ ವೇತನವೂ ಹೆಚ್ಚಳ ಆಗುವುದಿಲ್ಲ. ಕೇವಲ 187 ರೂಪಾಯಿ ಫ್ಲೋರ್ ವೇಜ್ ನಿಗದಿ ಮಾಡಿದೆ ಎಂದು ಕಳವಳ ವ್ಯಕ್ತಪಡಿಸಿದರು.
ದೇಶದಲ್ಲಿರುವ ಅತೀ ಹೆಚ್ಚು ಅಸಂಘಟಿತ, ಅನೌಪಚಾರಿಕ ಕಾರ್ಮಿಕರನ್ನು ಕಾರ್ಮಿಕ ಕಾನೂನಡಿ ಯಲ್ಲಿ ತರಬೇಕೆಂಬ ಕಾರ್ಮಿಕ ಸಂಘಟನೆಗಳ ಬೇಡಿಕೆಯನ್ನು ತಿರಸ್ಕರಿಸಿದೆ. 40 ಜನ ಕಾರ್ಮಿಕ ರಿದ್ದು, ವಿದ್ಯುತ್ ರಹಿತ ಉದ್ಯಮಗಳಲ್ಲಿರುವ ಕಾರ್ಮಿಕರು ಮತ್ತು 50ಕ್ಕಿಂತ ಕಡಿಮೆ ಗುತ್ತಿಗೆ ಕಾರ್ಮಿಕರನ್ನು ಹೊಂದಿರುವ ಗುತ್ತಿಗೆದಾರರು ಲೈಸೆನ್ಸ್ ಪಡೆಯುವಂತಿಲ್ಲ. ಇದರಿಂದಾಗಿ ದೇಶದ ಶೇ.70ರಷ್ಟು ಕಾರ್ಮಿಕರಿಗೆ ಕಾರ್ಮಿಕ ಕಾನೂನುಗಳು ಅನ್ವಯಿಸುವುದಿಲ್ಲ. ಇದರಿಂದ ಕಾರ್ಮಿಕರು ನಾನಾ ಸೌಲಭ್ಯ ವಂಚಿತರಾಗುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಮುಷ್ಕರ ಮಾಡುವವರಿಗೆ, ಬೆಂಬಲ ಸೂಚಿಸುವವರಿಗೆ ಜೈಲು, ದಂಡ, ಕೆಲಸದಿಂದ ತೆಗೆಯುವಂತ ಇತ್ಯಾದಿ ಕಾನೂನುಗಳನ್ನು ರೂಪಿಸಲಾಗುತ್ತಿದ್ದು, ಇದರಿಂದ ಇನ್ನು ಮುಂದೆ ಮುಷ್ಕರ ಮಾಡು ವಂತಿಲ್ಲ. ಸಂಘಗಳನ್ನು ಕಟ್ಟುವಂತಿಲ್ಲ. ಇಂತಹ ಮಾರಕವಾದ ಅಂಶಗಳನ್ನು ಈ ಕಾಯಿದೆಯಲ್ಲಿ ಅಡಕಗೊಳಿಸಲಾಗಿದ್ದು, ಇದರಿಂದ ದೇಶದ 11 ಕಾರ್ಮಿಕ ಸಂಘಟನೆಗಳ ಹಕ್ಕನ್ನು ಕಸಿಯಲು ಮುಂದಾಗಿದ್ದಾರೆ ಎಂದು ಕಿಡಿಕಾರಿದರು.
ಕೆಸಲದ ಅವಧಿಯನ್ನು 8-12ಗಂಟೆವರೆಗೆ ಹೆಚ್ಚಿಸಲು ಮುಂದಾಗಿದ್ದು, 50 ಗಂಟೆ ಇದ್ದ ಓಟಿ ಸಮಯವನ್ನು 125 ಗಂಟೆಗೆ ಹೆಚ್ಚಿಸಲು ಅವಕಾಶ ನೀಡಲಾಗಿದೆ. ಇದರಿಂದ ಕಾರ್ಮಿಕದ ಆರೋಗ್ಯ ದ ಮೇಲೆ ದುಷ್ಪರಿಣಾಮ ಉಂಟಾಗಲಿದ್ದು, ಹೃದಯ ಸಂಬಂಧಿ ಕಾಯಿಲೆಗಳು, ಒತ್ತಡ, ಮಾನಸಿಕ ಖಿನ್ನತೆಗೆ ಒಳಗಾಗಲಿದ್ದಾರೆ. ಒಟ್ಟಾರೆಯಾಗಿ 4 ಕಾರ್ಮಿಕ ಕಾಯಿದೆಗಳ ಮೂಲಕ ಸುಮಾರು 29ಕಾರ್ಮಿಕ ವಿರೋಧಿ ಕಾನೂನುಗಳನ್ನು ಜಾರಿಗೆ ತರಲು ಕೇಂದ್ರ ಸರಕಾರ ಮುಂದಾಗಿದ್ದು, ಇದನ್ನು ಕಾರ್ಮಿಕ ಸಂಘಟನೆಗಳು ಬಲವಾಗಿ ವಿರೋಧಿಸುತ್ತವೆ. ಅದಕ್ಕಾಗಿ ಮೇ 20 ರಂದು ಇಡೀ ದೇಶಾದ್ಯಂತ ಎಲ್ಲಾ ರಾಜ್ಯಗಳಲ್ಲಿ, ಜಿಲ್ಲೆಗಳಲ್ಲಿ, ತಾಲೂಕು ಮಟ್ಟದಲ್ಲೂ ಅಖಿಲ ಭಾರತ ಸಾರ್ವತ್ರಿಕ ಮುಷ್ಕರಕ್ಕೆ ಸಿಐಟಿಯು ಕರೆ ನೀಡಿದೆ. ಮುಷ್ಕರದಲ್ಲಿ ಲಕ್ಷಾಂತರ ಕಾರ್ಮಿಕರು ಭಾಗಿಯಾಗಲಿದ್ದಾರೆ. ಕೇಂದ್ರ ಸರಕಾರ ತಾಕತ್ತಿದ್ದರೆ ನಮ್ಮನ್ನ ಬಂಧಿಸಲಿ ಎಂದು ಸವಾಲೆಸೆದರು.
ಸುದ್ದಿಗೋಷ್ಠಿಯಲ್ಲಿ ಸಿಐಟಿಯು ಜಿಲ್ಲಾಧ್ಯಕ್ಷೆ ಲಕ್ಷ್ಮೀದೇವಮ್ಮ, ಜಿಲ್ಲಾ ಕಾರ್ಯದರ್ಶಿ ಸಿದ್ದ ಗಂಗಪ್ಪ, ಸುಜಾತ, ಮಂಜುಳ, ವೆಂಕಟಲಕ್ಷ್ಮಮ್ಮ ಸೇರಿದಂತೆ ಇನ್ನಿತರರು ಹಾಜರಿದ್ದರು.