Janardhana Reddy: ಅಕ್ರಮ ಗಣಿಗಾರಿಕೆ ಕೇಸ್‌ನಲ್ಲಿ ಜನಾರ್ದನ ರೆಡ್ಡಿಗೆ 7 ವರ್ಷ ಜೈಲು ಶಿಕ್ಷೆ; ಸಿಬಿಐ ಕೋರ್ಟ್ ಮಹತ್ವದ ತೀರ್ಪು
MLA Janardhana Reddy: ಗಂಗಾವತಿ ಶಾಸಕ, ಮಾಜಿ ಸಚಿವ ಜನಾರ್ದನ ರೆಡ್ಡಿ ಅವರ ವಿರುದ್ಧ ಅಕ್ರಮ ಗಣಿಗಾರಿಕೆ ಪ್ರಕರಣದ ತೀರ್ಪು ಹೊರಬದ್ದಿದೆ. ಸಿಬಿಐ ವಿಶೇಷ ಕೋರ್ಟ್ ತೀರ್ಪು ಪ್ರಕಟಿಸಿದ್ದು, ಜನಾರ್ದನ ರೆಡ್ಡಿ ಅಪರಾಧಿ ಎಂದು ಘೋಷಿಸಿದೆ. ಹೀಗಾಗಿ ಮತ್ತೆ ಜನಾರ್ದನಾ ರೆಡ್ಡಿ ಜೈಲು ಪಾಲಾಗುವ ಸಾಧ್ಯತೆ ಇದೆ.


ಹೈದರಾಬಾದ್: ಅಕ್ರಮವಾಗಿ ಕಬ್ಬಿನ ಅದಿರು ಸಾಗಣೆ ಮಾಡಿದ ಆರೋಪದಲ್ಲಿ ಮಾಜಿ ಸಚಿವ, ಶಾಸಕ ಜನಾರ್ದನ ರೆಡ್ಡಿ (Janardhana Reddy) ಅವರಿಗೆ ಬಂಧನದ ಭೀತಿ ಎದುರಾಗಿದೆ. ಓಬಳಾಪುರಂ ಮೈನಿಂಗ್ ಕಂಪನಿ (OMC) ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಜನಾರ್ದನ ರೆಡ್ಡಿ ಅಪರಾಧಿ ಎಂದು ಸಿಬಿಐ ಕೋರ್ಟ್ ತೀರ್ಪು ನೀಡಿದ್ದು, 7 ವರ್ಷಗಳ ಜೈಲು ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ. ಹೀಗಾಗಿ ಗಣಿದಣಿ ಮತ್ತೊಮ್ಮೆ ಜೈಲು ಸೇರುವ ಭೀತಿಯಲ್ಲಿದ್ದಾರೆ. ಈಗಾಗಲೇ ಮೂರೂವರೆ ವರ್ಷ ಜೈಲು ಶಿಕ್ಷೆ ಅನುಭವಿಸಿರುವ ಅವರಿಗೆ ಮತ್ತೊಮ್ಮೆ ಬಂಧನದ ಭೀತಿ ಎದುರಾಗಿದೆ. ಈ ತೀರ್ಪು ಪ್ರಶ್ನಿಸಿ ಅವರು ಹೈಕೋರ್ಟ್ ಕದ ತಟ್ಟುವ ಸಾಧ್ಯತೆ ಇದೆ.
ನ್ಯಾಯಾಲಯದ ವಿಚಾರಣೆ ಹಿನ್ನೆಲೆಯಲ್ಲಿ ಅವರು ಮೇ 5ರಂದು ಹೈದರಾಬಾದ್‌ಗೆ ತೆರಳಿದ್ದರು. ಮಂಗಳವಾರ (ಮೇ 6) ವಿಚಾರಣೆ ನಡೆಸಿದ ನಾಮಪಲ್ಲಿಯಲ್ಲಿರುವ ಸಿಬಿಐ ಕೋರ್ಟ್ ಜನಾರ್ದನ ರೆಡ್ಡಿ ದೋಷಿ ಎಂದು ತೀರ್ಪು ಪ್ರಕಟಿಸಿದೆ. ಓಎಂಸಿ ಎಂಡಿ ಶ್ರೀನಿವಾಸ ರೆಡ್ಡಿ ಎ1, ಜನಾರ್ದನ ರೆಡ್ಡಿ ಎ2, ರಾಜಗೋಪಾಲ್ ರೆಡ್ಡಿ ಎ3, ಅಲಿಖಾನ್ ಎ4 ಅಪರಾಧಿಗಳು.
ಜನಾರ್ದನ ರೆಡ್ಡಿ ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿಕೊಂಡಿದ್ದಾರೆ ಮತ್ತು ಅನುಮತಿ ನೀಡಿದ್ದಕ್ಕಿಂತ ಹೆಚ್ಚಿನ ಪ್ರದೇಶದಲ್ಲಿ ಕಬ್ಬಿಣದ ಅದಿರನ್ನು ವಿವೇಚನಾರಹಿತವಾಗಿ ಗಣಿಗಾರಿಕೆ ನಡೆಸಿದ್ದಾರೆ ಎಂಬ ಆರೋಪಗಳಿವೆ. ಅಕ್ರಮ ಸುಲಿಗೆ ಮತ್ತು ಅಕ್ರಮ ಹಣ ವರ್ಗಾವಣೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಕರ್ನಾಟಕ ಹಾಗೂ ಆಂಧ್ರದಲ್ಲಿ ದೂರು ದಾಖಲಾಗಿದೆ. ಇದನ್ನು ಸಿಬಿಐ ತನಿಖೆ ನಡೆಸುತ್ತಿತ್ತು. 2009ರಲ್ಲಿ ಸಿಬಿಐ ಒಎಂಸಿ ಕಂಪನಿಯ ಅಕ್ರಮ ಗಣಿಗಾರಿಕೆ ಆರೋಪ ಸಂಬಂಧ ತನಿಖೆ ಪ್ರಾರಂಭಿಸಿತ್ತು.