ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Madhugiri News: ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌; ಡಿವೈಎಸ್‌ಪಿಗೆ 14 ದಿನ ನ್ಯಾಯಾಂಗ ಬಂಧನ

Madhugiri News: ಜಮೀನು ವ್ಯಾಜ್ಯ ಸಂಬಂಧ ಪಾವಗಡ ಮೂಲದ ಮಹಿಳೆಯೊಬ್ಬಳು ದೂರು ನೀಡಲು ಡಿವೈಎಸ್‌ಪಿ ಕಚೇರಿಗೆ ಬಂದಿದ್ದಾಗ ಪುಸಲಾಯಿಸಿ ಠಾಣೆಯ ಶೌಚಗೃಹದಲ್ಲಿ ಲೈಂಗಿಕ ದೌರ್ಜನ್ಯ ಎಸಗಿದ್ದ ಹಿನ್ನೆಲೆಯಲ್ಲಿ ಸಂತ್ರಸ್ತೆ, ಮಧುಗಿರಿ ಠಾಣೆಯಲ್ಲಿ ದೂರು ನೀಡಿದ್ದರು.

Madhugiri News: ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌; ಡಿವೈಎಸ್‌ಪಿಗೆ 14 ದಿನ ನ್ಯಾಯಾಂಗ ಬಂಧನ

Profile Prabhakara R Jan 4, 2025 6:20 PM
ತುಮಕೂರು: ದೂರು ನೀಡಲು ಬಂದ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ (Madhugiri News) ಮಧುಗಿರಿ ಡಿವೈಎಸ್‌ಪಿ ರಾಮಚಂದ್ರಪ್ಪಕ್ಕೆ 14 ದಿನ ನ್ಯಾಯಾಂಗ ಬಂಧನ ವಿಧಿಸಿ ಮಧುಗಿರಿ ನ್ಯಾಯಾಲಯ ಆದೇಶಿಸಿದೆ. ಜಮೀನು ವ್ಯಾಜ್ಯ ಸಂಬಂಧ ಪಾವಗಡ ಮೂಲದ ಮಹಿಳೆಯೊಬ್ಬಳು ದೂರು ನೀಡಲು ಡಿವೈಎಸ್‌ಪಿ ಕಚೇರಿಗೆ ಬಂದಿದ್ದಾಗ ಪುಸಲಾಯಿಸಿ ಠಾಣೆಯ ಶೌಚಗೃಹದಲ್ಲಿ ಲೈಂಗಿಕ ದೌರ್ಜನ್ಯ ಎಸಗಿದ್ದ ಹಿನ್ನೆಲೆಯಲ್ಲಿ ಸಂತ್ರಸ್ತೆ, ಮಧುಗಿರಿ ಠಾಣೆಯಲ್ಲಿ ದೂರು ನೀಡಿದ್ದರು.
ದೂರು ದಾಖಲಾದ ಹಿನ್ನೆಲೆಯಲ್ಲಿ ಶುಕ್ರವಾರ ರಾತ್ರಿ (ಜ.3) ಡಿವೈಎಸ್‌ಪಿ ರಾಮಚಂದ್ರಪ್ಪನನ್ನು ಬಂಧಿಸಿದ್ದ ಪೊಲೀಸರು ಶನಿವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಮಧುಗಿರಿಯ ಹಿರಿಯ ಸಿವಿಲ್ ಹಾಗೂ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶರಾದ ಪ್ರಮೀಳಮ್ಮ ಅವರು ಆರೋಪಿಯನ್ನು 14 ದಿನ ನ್ಯಾಯಾಂಗ ಬಂಧನಕ್ಕೆ ನೀಡಿದ್ದಾರೆ. ಮಧುಗಿರಿ ಕಾರಾಗೃಹದಿಂದ ಡಿವೈಎಸ್‌ಪಿ ರಾಮಚಂದ್ರಪ್ಪನನ್ನು ಸೋಮವಾರ ಜಿಲ್ಲಾ ಕಾರಾಗೃಹಕ್ಕೆ ಕರೆದೊಯ್ಯಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಏನಿದು ಪ್ರಕರಣ?ಜಮೀನು ತಗಾದೆ ವಿವಾದಕ್ಕೆ ಸಂಬಂಧಿಸಿದಂತೆ ದೂರು ನೀಡಲು ಠಾಣೆಗೆ ಬಂದ ಮಹಿಳೆಯನ್ನು ಮಧುಗಿರಿ ಉಪವಿಭಾಗದ ಡಿವೈಎಸ್‌ಪಿ ರಾಮಚಂದ್ರಪ್ಪ, ಕಚೇರಿಯ ಶೌಚಾಲಯಕ್ಕೆ ಕರೆದುಕೊಂಡುಹೋಗಿ ತನ್ನ ಕಾಮತೃಷೆ ತೀರಿಸಲು ಬಲವಂತಪಡಿಸಿದ್ದಾರೆ ಎಂದು ಆರೋಪ ಕೇಳಿಬಂದಿತ್ತು. ಈ ಸನ್ನಿವೇಶದಲ್ಲಿ ಅದನ್ನು ಠಾಣೆಯಲ್ಲಿದ್ದ ಸಾರ್ವಜನಿಕರೊಬ್ಬರು ಶೌಚಾಲಯದ ಗೋಡೆಯ ಈಚೆಯಿಂದ ಮೊಬೈಲ್‌ನಲ್ಲಿ ಚಿತ್ರೀಕರಣ ಮಾಡಿಕೊಂಡಿದ್ದರು. ಆ ವಿಡಿಯೊ ವೈರಲ್ ಆಗಿ, ಎಲ್ಲೆಡೆ ಹರಿದಾಡಿತ್ತು. ಅಧಿಕಾರಿ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ ಕೇಳಿಬಂದಿದ್ದರಿಂದ ಡಿಜಿ, ಐಜಿಪಿ ಅಲೋಕ್ ಮೋಹನ್ ಅವರು ಡಿವೈಎಸ್‌ಪಿ ರಾಮಚಂದ್ರಪ್ಪರನ್ನು ಅಮಾನತು ಮಾಡಿ ಆದೇಶಿಸಿದ್ದರು. ಅದರ ಬೆನ್ನಲ್ಲೇ ಶುಕ್ರವಾರ ರಾತ್ರಿ ಡಿವೈಎಸ್‌ಪಿ ಬಂಧನವಾಗಿತ್ತು.
ಈ ಸುದ್ದಿಯನ್ನೂ ಓದಿ | Manipur Militants: ಎಲಾನ್ ಮಸ್ಕ್‌ನ ಸ್ಟಾರ್‌ಲಿಂಕ್ ಉಪಕರಣ ಬಳಸುತ್ತಿದ್ದ ಮಣಿಪುರ ಉಗ್ರಗಾಮಿಗಳು
ಮಹಿಳೆಯ ದೂರಿನಲ್ಲಿ ಏನಿದೆ?ನನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವ ಡಿವೈಎಸ್‌ಪಿ ರಾಮಚಂದ್ರಪ್ಪ ಅವರ ವಿರುದ್ಧ ಕಾನೂನು ರೀತ್ಯಾ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಪೊಲೀಸ್‌ ಅಧೀಕ್ಷಕರಿಗೆ ಸಂತ್ರಸ್ತ ಮಹಿಳೆ ದೂರು ನೀಡಿದ್ದರು.
ನಮ್ಮ ತಂದೆ, ಅವರ ಸಹೋದರರ ಜತೆ ಜಂಟಿಯಲ್ಲಿರುವ ಜಮೀನನ್ನು ವಿಭಾಗ ಮಾಡಿಸಿಕೊಡಲು ಕೋರಿ 2022ರಲ್ಲಿ ನಮ್ಮ ತಂದೆ ತಿರುಮಣಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಆದರೆ, ಪ್ರಯೋಜನವಾಗಿರಲಿಲ್ಲ. ಹೀಗಾಗಿ ಜಂಟಿಯಲ್ಲಿರುವ ಜಮೀನಿನಲ್ಲಿ ನಮ್ಮ ಭಾಗದ ಜಮೀನನ್ನು ನಮ್ಮ ಹೆಸರಿಗೆ ವಿಭಾಗ ಪತ್ರ ಮಾಡಿಸಿಕೊಡಲು ಕೋರಿ ಮಧುಗಿರಿ ಡಿ.ಎಸ್.ಪಿ. ಕಚೇರಿಗೆ ಡಿ.29ರಂದು ದೂರು ನೀಡಿದ್ದೆವು. ಈ ಅರ್ಜಿಯ ವಿಚಾರವಾಗಿ ವಿಚಾರಣೆಗೆ ಹಾಜರಾಗಲು ನನ್ನನ್ನು ಕರೆದಿದ್ದರು. ವಿಚಾರಣೆ ವೇಳೆ ನಮ್ಮ ದೊಡ್ಡಪ್ಪ ಮತ್ತು ಚಿಕ್ಕಪ್ಪ, ನಮ್ಮ ಭಾಗದ ಜಮೀನನ್ನು ನೋಂದಣಿ ಮಾಡಿಕೊಡುವುದಾಗಿ ಒಪ್ಪಿಕೊಂಡಿದ್ದರು.
ಜಮೀನಿನ ವಿಚಾರವಾಗಿ ನಮಗೆ ಅನುಕೂಲವಾಗಿದ್ದರಿಂದ ಡಿವೈಎಸ್‌ಪಿ ರಾಮಚಂದ್ರಪ್ಪ ಅವರನ್ನು ಭೇಟಿಯಾಗಿ ನನಗೆ ಮತ್ತೊಂದು ಸಮಸ್ಯೆ ಇದೆ. ನನ್ನ ಗಂಡ ನನ್ನ 12 ವರ್ಷದ ಮಗನನ್ನು ನನ್ನಿಂದ ದೂರ ಮಾಡಿ ಅವರ ಬಳಿಯೇ ಇಟ್ಟುಕೊಂಡಿದ್ದಾರೆ. ಅಲ್ಲದೇ ಗಂಡ ಇನ್ನೊಂದು ಮದುವೆ ಆಗಿದ್ದಾರೆ. ಹೀಗಾಗಿ ನನ್ನ ಮಗುವನ್ನು ನನಗೆ ಕೊಡಿಸಿ ಎಂದು ಕೇಳಿ ಕೊಂಡಿದ್ದೆ. ಆಗ ಡಿ.ವೈ.ಎಸ್. ಪಿ ಅವರು ಜಮೀನಿನ ವಿಚಾರವಾಗಿ ನಿನಗೆ ಅನುಕೂಲ ಮಾಡಿಕೊಟ್ಟಿದ್ದೇನೆ. ನಿನಗೆ ಮಗು ಕೊಡಿಸುವ ವಿಚಾರದಲ್ಲೂ ಸಹಾಯ ಮಾಡುತ್ತೇನೆ. ನಾನು ನಿನ್ನ ಬಳಿ ಏನು ಕೇಳುತ್ತೇನೋ ಅದನ್ನು ಕೊಡು, ನನ್ನೊಂದಿಗೆ ಸಹಕರಿಸು ಎಂದು ಹೇಳಿ, ನನ್ನನ್ನು ಅವರ ಕಚೇರಿಯ ರೆಸ್ಟ್ ರೂಮ್‌ಗೆ ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ.
ನನ್ನ ಅಸಹಾಯಕತೆಯನ್ನು ದುರುಪಯೋಗ ಪಡಿಸಿಕೊಂಡು ನನ್ನ ವಿರುದ್ಧ ಕಚೇರಿಯಲ್ಲಿಯೇ ಲೈಂಗಿಕ ದೌರ್ಜನ್ಯ ಎಸಗಿರುವ ಡಿ.ವೈ.ಎಸ್.ಪಿ. ರಾಮಚಂದ್ರಪ್ಪ ಎನ್.ಬಿ. ವಿರುದ್ಧ ಕಾನೂನು ರೀತ್ಯಾ ಕ್ರಮ ಕೈಗೊಳ್ಳಬೇಕು ಎಂದು ಸಂತ್ರಸ್ತೆ ದೂರಿನಲ್ಲಿ ಕೋರಿದ್ದಾರೆ.