J.C. Madhuswamy: ಸಂತೆಯಲ್ಲಿ ತಪ್ಪಿಸಿಕೊಂಡ ಮಗ ನಾನು, ಯಾರು ಕೈ ಹಿಡಿತಾರೋ ಗೊತ್ತಿಲ್ಲ ಎಂದ ಜೆ.ಸಿ.ಮಾಧುಸ್ವಾಮಿ
J.C. Madhuswamy: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಭೇಟಿಗೆ ರಾಜಕೀಯ ಬಣ್ಣ ಬೇಡ. ಬೆಂಗಳೂರಿನಲ್ಲಿ ಹಾಸ್ಟೆಲ್‌ಗೆ ಮತ್ತೊಂದಿಷ್ಟು ಜಾಗದ ಅಗತ್ಯವಿತ್ತು. ಅದರ ಬಗ್ಗೆ ಮಾತನಾಡಲು ಸಿದ್ದರಾಮಯ್ಯರನ್ನು ಭೇಟಿಯಾಗಿದ್ದೆ ಎಂದು ಬಿಜೆಪಿ ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದ್ದಾರೆ.


ತುಮಕೂರು: ಸಂತೆಯಲ್ಲಿ ತಪ್ಪಿಸಿಕೊಂಡ ಮಗ ನಾನು, ಯಾರು ಕೈ ಹಿಡಿದು ಮನೆಗೆ ಕರೆದುಕೊಂಡು ಹೋಗುತ್ತಾರೋ ಗೊತ್ತಿಲ್ಲ ಎಂದು ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು. ನಗರದಲ್ಲಿ ಮಾತನಾಡಿದ ಅವರು ಮುಂದಿನ ಚುನಾವಣೆಯಲ್ಲಿ ಸ್ಪರ್ಧೆ ಖಚಿತ. ರಾಜಕೀಯ ನಿವೃತ್ತಿ ತೆಗೆದುಕೊಳ್ಳುವುದಿಲ್ಲ. ಮುಂದಿನ ಚುನಾವಣೆಯಲ್ಲಿ ಚಿಕ್ಕನಾಯಕನಹಳ್ಳಿ ಕ್ಷೇತ್ರದಿಂದಲೇ ಸ್ಪರ್ಧಿಸುತ್ತೇನೆ ಎಂದು ದೃಢಪಡಿಸಿದರು.
ಹೇಮಾವತಿ ಲಿಂಕ್ ಕೆನಾಲ್‌ನಿಂದ ಜಿಲ್ಲೆಗೆ ತುಂಬಾ ಅನ್ಯಾಯವಾಗಲಿದೆ. ಲೋಕಸಭಾ ಚುನಾವಣೆಗೂ ಮುನ್ನ ಇದೇ ವಿಚಾರವಾಗಿ ನಾನು ಸುದ್ದಿಗೋಷ್ಠಿ ಕರೆದಾಗ ನಮ್ಮ ಪಕ್ಷದವರೇ ಸುದ್ದಿಗೋಷ್ಠಿಯಲ್ಲಿ ಭಾಗವಹಿಸದೆ ಅವಮಾನ ಮಾಡಿದರು. ಹಾಗಾಗಿ ನಾನು ಈಗಿನ ಹೋರಾಟದಲ್ಲಿ ಪಾಲ್ಗೊಳ್ಳುತ್ತಿಲ್ಲ ಎಂದು ಹೇಳಿದರು.
ಡಿ.ಕೆ.ಶಿವಕುಮಾರ್ ಅವರ ಕ್ಷೇತ್ರಕ್ಕೆ ನೀರು ತೆಗೆದುಕೊಂಡು ಹೋಗಲು ಪ್ರಯತ್ನಿಸುತ್ತಿದ್ದಾರೆ. ಅವರ ಕ್ಷೇತ್ರದ ಅಭಿವೃದ್ಧಿ ಚಿಂತೆ ಅವರಿಗೆ, ಆದರೆ ನಮ್ಮ ಜಿಲ್ಲೆಗೆ ಆಗುವ ತೊಂದರೆಗಳನ್ನು ಅವರಿಗೆ ಮನದಟ್ಟು ಮಾಡಿಕೊಟ್ಟು ಯೋಜನೆ ಆಗದಂತೆ ತಡೆಯಬೇಕಿದೆ. ಇಲ್ಲದಿದ್ದರೆ ಗುಬ್ಬಿಯಿಂದ ಕೆಳಗಡೆಗೆ ಭಾಗಗಳಿಗೆ ಭವಿಷ್ಯದಲ್ಲಿ ನೀರು ಸಿಗಲ್ಲ. ಇದನ್ನು ಶಿರಾ, ಮಧುಗಿರಿ, ಕೊರಟಗೆರೆ ಉಳಿದ ಭಾಗಗಳ ಜನಪ್ರತಿನಿಧಿಗಳು ಅರ್ಥ ಮಾಡಿಕೊಳ್ಳಬೇಕು ಎಂದರು.
ನನ್ನ ವೈಯಕ್ತಿಕ ಅಭಿಪ್ರಾಯದಲ್ಲಿ, ಪಾರ್ಟಿ ಸಿಸ್ಟಮ್ ಆಫ್ ಪಾಲಿಟಿಕ್ಸ್ ಪ್ರಜಾಪ್ರಭುತ್ವ ವ್ಯವಸ್ಥೆಗೆ ಅಡ್ಡಿಯಾಗುತ್ತಿದೆ. ಶಾಸಕರು ಮುಖ್ಯಮಂತ್ರಿಯನ್ನು ಆಯ್ಕೆ ಮಾಡಬೇಕೋ ಅಥವಾ ಹೊರಗಡೆ ಕುಳಿತು ವ್ಯಕ್ತಿಗಳು ‘ಇವರು ಸಿಎಂ, ಇವರು ಡೆಪ್ಯುಟಿ ಸಿಎಂ ಆಗಬೇಕು’ ಅಂತ ನಿಶ್ಚಯಿಸಬೇಕಾ ಎನ್ನುವ ಗೊಂದಲ ಇದೆ ಎಂದು ಮಾಧುಸ್ವಾಮಿ ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯರ ಭೇಟಿಗೆ ರಾಜಕೀಯ ಬಣ್ಣ ಬೇಡ. ಬೆಂಗಳೂರಿನಲ್ಲಿ ಹಾಸ್ಟೆಲ್‌ಗೆ ಮತ್ತೊಂದಿಷ್ಟು ಜಾಗದ ಅಗತ್ಯವಿತ್ತು. ಅದರ ಬಗ್ಗೆ ಮಾತನಾಡಲು ಸಿದ್ದರಾಮಯ್ಯರನ್ನು ಭೇಟಿಯಾಗಿದ್ದೆ. ಅವರು ಕೂಡ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ರಾಜಕೀಯ ವಿಚಾರಗಳ ಚರ್ಚೆ ನಡೆದಿಲ್ಲ ಎಂದರು.
ಈ ಸುದ್ದಿಯನ್ನೂ ಓದಿ | Devanahalli Land Protest: ಕೆಐಎಡಿಬಿಗೆ 1,777 ಎಕರೆ ಜಮೀನು ನೀಡಲು ರೈತರ ಒಪ್ಪಿಗೆ; ಸಿಎಂ ಸಿದ್ದರಾಮಯ್ಯಗೆ ಪತ್ರ