IND vs ENG: ಭಾರತ ತಂಡಕ್ಕೆ ಬ್ಯಾಟಿಂಗ್ ಕೋಚ್ ಆಗಿ ಸಿತಾಂಶು ಕೊಟಕ್ ನೇಮಕ!
ಭಾರತ ಕ್ರಿಕೆಟ್ ತಂಡಕ್ಕೆ ಸೌರಾಷ್ಟ್ರ ತಂಡದ ಮಾಜಿ ನಾಯಕ ಸಿತಾಂಶು ಕೊಟಕ್ ಅವರು ಬ್ಯಾಟಿಂಗ್ ಕೋಚ್ ಆಗಿ ನೇಮಕಗೊಂಡಿದ್ದಾರೆಂದು ವರದಿಯಾಗಿದೆ. ಇಂಗ್ಲೆಂಡ್ ವಿರುದ್ಧದ ಟಿ20ಐ ಸರಣಿಯ ವೇಳೆ ಅವರು ಭಾರತ ತಂಡಕ್ಕೆ ಸೇರ್ಪಡೆಯಾಗಲಿದ್ದಾರೆ.
ನವದೆಹಲಿ: ಇಂಗ್ಲೆಂಡ್ ವಿರುದ್ಧದ ಸೀಮಿತ ಓವರ್‌ಗಳ ಸರಣಿಯ ನಿಮಿತ್ತ ದೇಶಿ ಕ್ರಿಕೆಟ್ ದಿಗ್ಗಜ ಸಿತಾಂಶು ಕೊಟಕ್ ಅವರು ಬ್ಯಾಟಿಂಗ್ ಕೋಚ್ ಆಗಿ ಭಾರತ ತಂಡಕ್ಕೆ ಸೇರ್ಪಡೆಯಾಗಲಿದ್ದಾರೆ. ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ಬಳಿಕ ಭಾರತ ತಂಡ, ಇಂಗ್ಲೆಂಡ್ ತಂಡಕ್ಕೆ 5 ಪಂದ್ಯಗಳ ಟಿ20ಐ ಸರಣಿ ಮತ್ತು 3 ಪಂದ್ಯಗಳ ಏಕದಿನ ಸರಣಿಗೆ ಆತಿಥ್ಯ ವಹಿಸುತ್ತಿದೆ.
"ಇಂಗ್ಲೆಂಡ್ ವಿರುದ್ದದ ಟಿ20ಐ ಸರಣಿಯಿಂದ ಬ್ಯಾಟಿಂಗ್ ಕೋಚ್ ಆಗಿ ಭಾರತ ತಂಡಕ್ಕೆ ಸೇರ್ಪಡೆಯಾಗುವಂತೆ ಸಿತಾಂಶು ಕೊಟಕ್‌ಗೆ ಹೇಳಲಾಗಿದೆ," ಎಂದು ಬಿಸಿಸಿಐ ಮೂಲಗಳು ತಿಳಿಸಿರುವುದನ್ನು ಇಂಡಿಯಾ ಟುಡೇ ವರದಿ ಮಾಡಿದೆ. ಪ್ರಸ್ತುತ ಭಾರತ ಕ್ರಿಕೆಟ್ ತಂಡಕ್ಕೆ ಹೆಡ್ ಕೋಚ್ ಆಗಿ ಗೌತಮ್ ಗಂಭೀರ್ ಇದ್ದಾರೆ. ಇವರಿಗೆ ಸಹಾಯಕ ಕೋಚ್‌ಗಳಾಗಿ ಅಭಿಷೇಕ್ ನಾಯರ್ ಮತ್ತು ರಿಯಾನ್ ಟೆನ್ ಡಿಶೆಟ್ ಕಾರ್ಯನಿರ್ವಹಿಸುತ್ತಿದ್ದಾರೆ. ಇನ್ನು ಬೌಲಿಂಗ್ ಕೋಚ್ ಆಗಿ ಮಾರ್ನೆ ಮಾರ್ಕೆಲ್ ಇದ್ದರೆ, ಫೀಲ್ಡಿಂಗ್ ಕೋಚ್ ಆಗಿ ಟಿ ದಿಲಿಪ್ ಕಾರ್ಯನಿರ್ವಹಿಸುತ್ತಿದ್ದಾರೆ.
'ಹೇರ್ ಸ್ಟೈಲ್ ಕಡೆಗೆ ಗಮನ ಹರಿಸದೆ ಬ್ಯಾಟಿಂಗ್‌ಗೆ ಒತ್ತು ಕೊಡಿ': ಶುಭಮನ್ ಗಿಲ್‌ಗೆ ಗಿಲ್‌ಕ್ರಿಸ್ಟ್ ಪಾಠ!
ಸೌರಾಷ್ಟ್ರದ ಮಾಜಿ ಬ್ಯಾಟ್ಸ್‌ಮನ್ ಸಿತಾಂಶು ಕೊಟಕ್ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ದೀರ್ಘಾವಧಿಯಿಂದ ಬ್ಯಾಟಿಂಗ್ ಕೋಚ್ ಆಗಿ ಕಾರ್ಯನಿರ್ವಹಿಸಿದ್ದರು. ಅವರು ಹಿರಿಯರ ಮತ್ತು ಎ ತಂಡಗಳೊಂದಿಗೆ ವಿದೇಶಿ ಪ್ರವಾಸಗಳಲ್ಲಿ ಭಾಗವಹಿಸಿದ ಅನುಭವವನ್ನು ಹೊಂದಿದ್ದಾರೆ. ಸಿತಾಂಶು ಕೊಟಕ್ ಅವರ ಆಗಮನದಿಂದ ಸಹಾಯಕ ಕೋಚ್‌ಗಳಾದ ಅಭಿಷೇಕ್ ನಾಯರ್ ಅವರ ಮೇಲೆ ಒತ್ತಡ ಹೆಚ್ಚಾಗಿದೆ. ಏಕೆಂದರೆ ಇವರ ಸಹಾಯಕ ಕೋಚ್ ಅವಧಿಯಲ್ಲಿ ಭಾರತ ತಂಡ ಅತ್ಯಂತ ನೀರಸ ಪ್ರದರ್ಶನವನ್ನು ತೋರಿದೆ.
ಆಸ್ಟ್ರೇಲಿಯಾದಲ್ಲಿ ಭಾರತೀಯ ಬ್ಯಾಟ್ಸ್‌ಮನ್‌ಗಳ ತಾಂತ್ರಿಕ ನ್ಯೂನತೆಗಳು ಬಹಿರಂಗಗೊಂಡುದ್ದವು ಮತ್ತು ವಿರಾಟ್ ಕೊಹ್ಲಿ ಆಫ್ ಸ್ಟಂಪ್‌ನ ಹೊರಗೆ ಹೋಗುವ ಎಸೆತಗಳಲ್ಲಿಯೇ ಸತತವಾಗಿ ವಿಕೆಟ್ ಒಪ್ಪಿಸಿದ್ದಾರೆ. ಇದರ ಪರಿಣಾಮವಾಗಿ ಅಭಿಷೇಕ್ ನಾಯರ್ ಅವರ ಕಾರ್ಯವೈಖರಿ ಮೇಲೆ ಬಿಸಿಸಿಐಗೆ ಅತೃಪ್ತಿ ಉಂಟಾಗಿರಬಹುದು. ಅಂದ ಹಾಗೆ ನೂತನ ಬ್ಯಾಟಿಂಗ್ ಕೋಚ್ ಆಗಿರುವ ಸಿತಾಂಶು ಕೊಟಕ್ ಅವರು ದೇಶಿ ಕ್ರಿಕೆಟ್‌ನಲ್ಲಿ 15 ಶತಕಗಳು ಸೇರಿದಂತೆ 8000ಕ್ಕೂ ಅಧಿಕ ರನ್‌ಗಳನ್ನು ಗಳಿಸಿದ್ದಾರೆ. ಭಾರತ ತಂಡ ಜನವರಿ 22 ರಿಂದ ಇಂಗ್ಲೆಂಡ್ ವಿರುದ್ಧ ಐದು ಪಂದ್ಯಗಳ ಟಿ20ಐ ಸರಣಿ ಮತ್ತು ಮೂರು ಪಂದ್ಯಗಳ ಏಕದಿನ ಸರಣಿಯನ್ನು ಆಡಲಿದೆ.
ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ರಣಜಿ ಟ್ರೋಫಿ ಆಡಬೇಕೆಂದ ಯುವರಾಜ್ ಸಿಂಗ್!
ಭಾರತ ತಂಡವನ್ನು ಟೀಕಿಸಿದ್ದ ದಿಗ್ಗಜರು
ಆಸ್ಟ್ರೇಲಿಯಾ ಪ್ರವಾಸದ ವೇಳೆ ವಿರಾಟ್ ಕೊಹ್ಲಿಯಂತಹ ಆಟಗಾರರು ಆಗಾಗ್ಗೆ ತಾಂತ್ರಿಕ ಸಮಸ್ಯೆಗಳಿಗೆ ಒಳಗಾಗುತ್ತಿದ್ದರು. ಆದರೂ ಇದನ್ನು ಸರಿಪಡಿಸುವಲ್ಲಿ ಭಾರತ ತಂಡದ ಸಹಾಯಕ ಸಿಬ್ಬಂದಿ ವಿಫಲರಾಗಿದ್ದರು. ಇದನ್ನು ಬ್ಯಾಟಿಂಗ್ ದಿಗ್ಗಜ ಸುನೀಲ್ ಗವಾಸ್ಕರ್ ಸೇರಿದಂತೆ ಮಾಜಿ ಕ್ರಿಕೆಟಿಗರು ಪ್ರಶ್ನಿಸಿದ್ದರು.
ಸಿತಾಂಶು ಕೊಟಕ್ ಯಾರು?
ಸೌರಾಷ್ಟ್ರ ತಂಡದ ಮಾಜಿ ನಾಯಕ ಸಿತಾಂಶು ಕೊಟಕ್ ಅವರು ಕಳೆದ ನವೆಂಬರ್ ತಿಂಗಳಲ್ಲಿ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದ್ದ ಭಾರತ ʻಎʼ ತಂಡಕ್ಕೆ ಹೆಡ್ ಕೋಚ್ ಆಗಿದ್ದರು. ಇನ್ನು 2023ರಲ್ಲಿ ಐರ್ಲೆಂಡ್ ಪ್ರವಾಸದ ಟಿ20ಐ ಸರಣಿಯಲ್ಲಿಯೂ ಕೋಚ್ ಆಗಿ ಕಾರ್ಯನಿರ್ವಹಿಸಿದ್ದರು.
ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಸಿತಾಂಶು ಅವರು 130 ಪಂದ್ಯಗಳಿಂದ 41.76ರ ಸರಾಸರಿಯಲ್ಲಿ 8061 ರನ್‌ಗಳನ್ನು ಕಲೆ ಹಾಕಿದ್ದರು. ಇದರಲ್ಲಿ ಅವರು 15 ಶತಕಗಳು ಹಾಗೂ 55 ಅರ್ಧಶತಕಗಳನ್ನು ಸಿಡಿಸಿದ್ದಾರೆ.