'ಹೇರ್ ಸ್ಟೈಲ್ ಕಡೆಗೆ ಗಮನ ಹರಿಸದೆ ಬ್ಯಾಟಿಂಗ್‌ಗೆ ಒತ್ತು ಕೊಡಿ': ಶುಭಮನ್ ಗಿಲ್‌ಗೆ ಗಿಲ್‌ಕ್ರಿಸ್ಟ್ ಪಾಠ!
ಆಸ್ಟ್ರೇಲಿಯಾ ವಿರುದ್ಧದ ಐದು ಪಂದ್ಯಗಳ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ ಸತತ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದ ಭಾರತದ ಯುವ ಬ್ಯಾಟ್ಸ್‌ಮನ್ ಶುಭಮನ್ ಗಿಲ್ ಅವರನ್ನು ಆಸೀಸ್ ಮಾಜಿ ವಿಕೆಟ್ ಕೀಪರ್ ಆಡಮ್ ಗಿಲ್‌ಕ್ರಿಸ್ಟ್ ಟೀಕಿಸಿದ್ದಾರೆ. ಬಲಗೈ ಬ್ಯಾಟ್ಸ್‌ಮನ್ ಹೇರ್‌ಸ್ಟೈಲ್ ಕಡೆಗೆ ಗಮನ ಕೊಡುವುದನ್ನು ಬಿಟ್ಟು ಬ್ಯಾಟಿಂಗ್ ಕಡೆಗೆ ಗಮನ ನೀಡಬೇಕೆಂದು ಆಗ್ರಹಿಸಿದ್ದಾರೆ.
ನವದೆಹಲಿ: ಇತ್ತೀಚೆಗೆ ಮುಕ್ತಾಯಗೊಂಡಿದ್ದ ಬಾರ್ಡರ್ -ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದ ಶುಭಮನ್ ಗಿಲ್ (Subhman Gill) ಅವರನ್ನು ಆಸ್ಟ್ರೇಲಿಯಾದ ಮಾಜಿ ವಿಕೆಟ್ ಕೀಪರ್ ಆಡಂ ಗಿಲ್‌ಕ್ರಿಸ್ಟ್ (Adam Gilchrist) ಕಟುವಾಗಿ ಟೀಕಿಸಿದ್ದಾರೆ. ಗಿಲ್ ತಮ್ಮ ಕೂದಲಿನ ಬಗ್ಗೆ ಹೆಚ್ಚಿನ ಹಾರೈಕೆ ಮಾಡುವ ಬದಲಿಗೆ ಬ್ಯಾಟಿಂಗ್ ಮೇಲೆ ಹೆಚ್ಚಿನ ಗಮನ ಹರಿಸಬೇಕೆಂದು ಸಲಹೆ ನೀಡಿದ್ದಾರೆ. ಬಾರ್ಡರ್ -ಗವಾಸ್ಕರ್ ಟೆಸ್ಟ್ ಸರಣಿಯ ಐದು ಇನಿಂಗ್ಸ್‌ಗಳಲ್ಲಿ ಬ್ಯಾಟ್ ಮಾಡಿದ್ದ ಶುಭಮನ್ ಗಿಲ್ 18.60ರ ಸರಾಸರಿಯಲ್ಲಿ ಕೇವಲ 93 ರನ್ ಬಾರಿಸಿದ್ದರು.
"ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ ಶುಭಮನ್ ಗಿಲ್ ತಮ್ಮ ಪ್ರದರ್ಶನಕ್ಕೆ 3 ಅಂಕ ಪಡೆಯಲು ಮಾತ್ರ ಅರ್ಹರಾಗಿದ್ದಾರೆ. ಆದರೆ ನಾನು ಅವರಿಗೆ 10ಕ್ಕೆ 4 ಅಂಕ ನೀಡುತ್ತೇನೆ. ಯಾವ ಕ್ರಿಕೆಟಿಗರು ಕೂಡ ಹೆಲ್ಮೆಟ್ ತೆಗೆದ ನಂತರ ತಮ್ಮ ಕೂದಲಿನಿಂದ ಸುಂದರವಾಗಿ ಕಾಣುವುದಿಲ್ಲ," ಎಂದು ಆಸ್ಟ್ರೇಲಿಯಾದ ಮಾಜಿ ನಾಯಕ ಹೇಳಿದ್ದಾರೆ.
ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ರಣಜಿ ಟ್ರೋಫಿ ಆಡಬೇಕೆಂದ ಯುವರಾಜ್ ಸಿಂಗ್!
ಗಿಲ್ ಬ್ಯಾಟಿಂಗ್ ಕಡೆಗೆ ಗಮನಹರಿಸಬೇಕು
ಇಂಗ್ಲೆಂಡ್ ತಂಡದ ಮಾಜಿ ನಾಯಕ ಮೈಕಲ್ ವಾನ್ ಕೂಡ ಶುಭಮನ್ ಗಿಲ್ ಅವರ ಕಳಪೆ ಬ್ಯಾಟಿಂಗ್ ಪ್ರದರ್ಶನದಿಂದ ಅಸಮಾಧಾನಗೊಂಡಿದ್ದಾರೆ. ಅಲ್ಲದೆ ಯುವ ಆಟಗಾರ ತನ್ನಲ್ಲಿರುವ ಕೌಶಲವನ್ನು ಬಳಸಿಕೊಂಡು ಹೆಚ್ಚಿನ ರನ್ ಗಳಿಸಬೇಕು ಎಂದು ಸಲಹೆ ನೀಡಿದ್ದಾರೆ.
"ನಾನು ಕೂಡ ಶುಭಮನ್ ಗಿಲ್‌ಗೆ 4 ಅಂಕ ನೀಡಲು ಬಯಸುತ್ತೇನೆ. ಅವರು (ಶುಭಮನ್ ಗಿಲ್) ನನಗೆ ಸ್ವಲ್ಪಮಟ್ಟಿಗೆ ನೋವು ತಂದಿದ್ದಾರೆ. ಅವರು ದೊಡ್ಡ ಮೊತ್ತ ಗಳಿಸಬೇಕು. ಅವರು ನಿಜಕ್ಕೂ ಅದ್ಭುತ ಆಟಗಾರನಾಗಿದ್ದಾರೆ,"ಎಂದು ಮೈಕಲ್ ವಾನ್ ತಿಳಿಸಿದ್ದಾರೆ. 2022ರಲ್ಲಿ ಬಾಂಗ್ಲಾದೇಶ ವಿರುದ್ಧ ಶತಕದ (110 ರನ್) ನಂತರ ವಿದೇಶಿ ಸರಣಿಗಳಲ್ಲಿ ಕಳೆದ 16 ಇನಿಂಗ್ಸ್‌ಗಳಲ್ಲಿ ಅರ್ಧಶತಕ ಸಿಡಿಸುವಲ್ಲೂ ಅವರು ವಿಫಲರಾಗಿದ್ದಾರೆ.
IND vs AUS: ʻಸ್ಕಾಟ್ ಬೋಲೆಂಡ್ ಆಡಿಲ್ಲವಾಗಿದ್ರೆ ಭಾರತ ಟೆಸ್ಟ್ ಸರಣಿ ಗೆಲ್ಲುತ್ತಿತ್ತುʼ-ಅಶ್ವಿನ್!
ರವೀಂದ್ರ ಜಡೇಜಾಗೆ ದಿಗ್ಗಜರ ಶ್ಲಾಘನೆ
ಭಾರತ ತಂಡದ ಸ್ಟಾರ್ ಆಲ್‌ರೌಂಡರ್ ರವೀಂದ್ರ ಜಡೇಜಾ ಬಾರ್ಡರ್ ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ ತೋರಿದ ಪ್ರದರ್ಶನವನ್ನು ದಿಗ್ಗಜರಾದ ಆಡಂ ಗಿಲ್ ಕ್ರಿಸ್ಟ್ ಹಾಗೂ ಮೈಕಲ್ ವಾನ್ ಶ್ಲಾಘಿಸಿದ್ದಾರೆ. "ರವೀಂದ್ರ ಜಡೇಜಾ ಧೈರ್ಯ ಹಾಗೂ ಉತ್ತಮ ಇನಿಂಗ್ಸ್ ಆಡಿದ್ದು ಅವರಿನಿಗೆ 7.5 ಅಥವಾ 10ಕ್ಕೆ8 ಅಂಕ ನೀಡುತ್ತೇನೆ, ಅವರು ಸದಾ ಉತ್ತಮ ಪ್ರದರ್ಶನ ನೀಡುತ್ತಾರೆ," ಎಂದು ಮೈಕಲ್ ವಾನ್ ಶ್ಲಾಘಿಸಿದ್ದಾರೆ.
ಆಸ್ಟ್ರೇಲಿಯಾ ಎದುರಿನ ಟೆಸ್ಟ್ ಸರಣಿಯಲ್ಲಿ ರವೀಂದ್ರ ಜಡೇಜಾ 5 ಇನಿಂಗ್ಸ್‌ಗಳಿಂದ 27ರ ಸರಾಸರಿಯಲ್ಲಿ 135 ರನ್ ಗಳಿಸಿದ್ದಾರೆ. ಅಲ್ಲದೆ ಬ್ರಿಸ್ಬೇನ್ ಟೆಸ್ಟ್ ಪಂದ್ಯದಲ್ಲಿ 77 ರನ್ ಸಿಡಿಸಿ ತಂಡವನ್ನು ಫಾಲೋ ಆನ್ ಭೀತಿಯಿಂದ ಪಾರು ಮಾಡಿದ್ದರು. 4 ಟೆಸ್ಟ್ ಪಂದ್ಯಗಳಿಂದ ತಲಾ 4 ವಿಕೆಟ್‌ಗಳನ್ನು ಅವರು ಕಬಳಿಸಿದ್ದಾರೆ.