Champions Trophy: ರೋಹಿತ್ ಜತೆಗೆ ಮತ್ತೊರ್ವ ಓಪನರ್ ಆರಿಸಿದ ಸೆಹ್ವಾಗ್!
2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಭಾರತ ತಂಡದಲ್ಲಿ ಯಶಸ್ವಿ ಜೈಸ್ವಾಲ್ ಇನಿಂಗ್ಸ್ ಆರಂಭಿಸಬೇಕೆಂದು ಮಾಜಿ ಆರಂಭಿಕ ಬ್ಯಾಟ್ಸ್‌ಮನ್ ವೀರೇಂದ್ರ ಸೆಹ್ವಾಗ್ ಆಗ್ರಹಿಸಿದ್ದಾರೆ. ಆದರೆ, ಜೈಸ್ವಾಲ್ ಇನ್ನೂ 50 ಓವರ್‌ಗಳ ಸ್ವರೂಪಕ್ಕೆ ಪದಾರ್ಪಣೆ ಮಾಡಿಲ್ಲ.
ನವದೆಹಲಿ: ಮುಂಬರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಭಾರತ ತಂಡದ ಪರ ನಾಯಕ ರೋಹಿತ್ ಶರ್ಮಾ ಜತೆಗೆ ಇನ್ನೂ ಅಂತಾರಾಷ್ಟ್ರೀಯ ಒಡಿಐಗೆ ಪದಾರ್ಪಣೆ ಮಾಡದೇ ಇರುವ ಯಶಸ್ವಿ ಜೈಸ್ವಾಲ್ ಇನಿಂಗ್ಸ್ ಆರಂಭಿಸಬೇಕೆಂದು ಮಾಜಿ ಆರಂಭಿಕ ಬ್ಯಾಟ್ಸ್‌ಮನ್ ವೀರೇಂದ್ರ ಸೆಹ್ವಾಗ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಫೆಬ್ರವರಿ 19 ರಂದು ಪಾಕಿಸ್ತಾನದ ಆತಿಥ್ಯದಲ್ಲಿ 2025ರ ಚಾಂಪಿಯನ್ಸ್ ಟ್ರೋಫಿ ಆರಂಭವಾಗಲಿದೆ. ಫೆ 20 ರಂದು ಬಾಂಗ್ಲಾದೇಶ ವಿರುದ್ದ ಟೀಮ್ ಇಂಡಿಯಾ ತನ್ನ ಮೊದಲನೇ ಪಂದ್ಯವನ್ನು ಆಡಲಿದೆ. ಈ ಮಹತ್ವದ ಟೂರ್ನಿಗೆ ಇನ್ನೂ ಭಾರತ ತಂಡವನ್ನು ಬಿಸಿಸಿಐ ಪ್ರಕಟಿಸಿಲ್ಲ. ಬಹುಶಃ ಜನವರಿ 18 ಅಥವಾ 19 ರಂದು ಅಜಿತ್ ಅಗರ್ಕರ್ ಸಾರಥ್ಯದ ಬಿಸಿಸಿಐ ಆಯ್ಕೆ ಸಮಿತಿಯು ಭಾರತ ತಂಡವನ್ನು ಆಯ್ಕೆ ಮಾಡುವ ನಿರೀಕ್ಷೆ ಇದೆ.
ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅವರು ಈ ಟೂರ್ನಿಯಲ್ಲಿ ಇನಿಂಗ್ಸ್ ಆರಂಭಿಸುವುದು ಬಹುತೇಕ ಖಚಿತ. ಇವರ ಜೊತೆಗೆ ಮತ್ತೊಂದು ಆರಂಭಿಕ ಸ್ಥಾನದಲ್ಲಿ ಶುಭಮನ್ ಗಿಲ್ ಆಡಬಹುದು. ಆದರೆ, ಭಾರತದ ಮಾಜಿ ಆರಂಭಿಕ ಬ್ಯಾಟ್ಸ್‌ಮನ್ ವೀರೇಂದ್ರ ಸೆಹ್ವಾಗ್, ಗಿಲ್ ಅವರನ್ನು ಕಡೆಗಣಿಸಿ ಯಶಸ್ವಿ ಜೈಸ್ವಾಲ್ ಅವರನ್ನು ಆಯ್ಕೆ ಮಾಡಿದ್ದಾರೆ.
ಭಾರತದ ಆಟಗಾರರಿಗೆ 10 ಅಂಶಗಳ ಶಿಸ್ತಿನ ಮಾರ್ಗಸೂಚಿಗಳನ್ನು ಹೊರಡಿಸಿದ ಬಿಸಿಸಿಐ!
ಯಶಸ್ವಿ ಜೈಸ್ವಾಲ್‌ಗೆ ಅವಕಾಶ ನೀಡಿ
ಸ್ವಿಚ್ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ ವೀರೇಂದ್ರ ಸೆಹ್ವಾಗ್ ಅವರು, 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಯಶಸ್ವಿ ಜೈಸ್ವಾಲ್ ಅವರೇ ಇನಿಂಗ್ಸ್ ಆರಂಭಿಸಬೇಕೆಂದು ಸಲಹೆ ನೀಡಿದ್ದಾರೆ. ಟೆಸ್ಟ್ ಹಾಗೂ ಟಿ20ಐ ಕ್ರಿಕೆಟ್‌ಗೆ ಈಗಾಗಲೇ ಪದಾರ್ಪಣೆ ಮಾಡಿದ್ದಾರೆ. ಆದರೆ, ಅವರು ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡುವುದು ಇನ್ನೂ ಬಾಕಿ ಇದೆ.
"ಯಶಸ್ವಿ ಜೈಸ್ವಾಲ್‌ಗೆ 50 ಓವರ್‌ಗಳಲ್ಲಿ ಇನಿಂಗ್ಸ್ ಆರಂಭಿಸಲು ಅವಕಾಶ ನೀಡಬೇಕೆಂದು ಸೆಲೆಕ್ಟರ್‌ಗಳಿಗೆ ನಾನು ಸಲಹೆ ನೀಡುತ್ತೇನೆ. ಟೆಸ್ಟ್ ಹಾಗೂ ಟಿ20ಐ ಸ್ವರೂಪದಲ್ಲಿ ಅವರು ಆಟವನ್ನು ನೋಡಿದರೆ, ಅವರ ಆಟ ಏಕದಿನ ಕ್ರಿಕೆಟ್‌ಗೂ ಸೂಕ್ತವಾಗಲಿದೆ. ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಭಾರತ ತಂಡದಲ್ಲಿ ಖಚಿತವಾಗಿಯೂ ಯಶಸ್ವಿ ಜೈಸ್ವಾಲ್ ಇರಬೇಕು," ಎಂದು ವೀರೇಂದ್ರ ಸೆಹ್ವಾಗ್ ಸಲಹೆ ನೀಡಿದ್ದಾರೆ.
IND vs ENG: ಟಿ20ಐ ಸರಣಿಗೂ ಮುನ್ನ ಭಾರತ ತಂಡಕ್ಕೆ 3 ದಿನಗಳ ಕ್ಯಾಂಪ್!
ಟಿ20ಐ ಸರಣಿಯಲ್ಲಿ ಜೈಸ್ವಾಲ್ ಇಲ್ಲ
ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯ ಭಾರತ ತಂಡದಲ್ಲಿ ಯಶಸ್ವಿ ಜೈಸ್ವಾಲ್‌ಗೆ ಅವಕಾಶ ನೀಡಲಾಗಿಲ್ಲ. ಟಿ20ಐ ತಂಡದಲ್ಲಿ ಇನ್‌ಫಾರ್ಮ್ ಸಂಜು ಸ್ಯಾಮ್ಸನ್ ಮತ್ತು ಅಭಿಷೇಕ್ ಶರ್ಮಾ ಆರಂಭಿಕ ಬ್ಯಾಟ್ಸ್‌ಮನ್‌ಗಳಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಜೈಸ್ವಾಲ್‌ಗೆ ಅವಕಾಶವಿಲ್ಲ. ಅಂದ ಹಾಗೆ ಇಂಗ್ಲೆಂಡ್ ಎದುರಿನ ಏಕದಿನ ಸರಣಿಯ ಭಾರತ ತಂಡದಲ್ಲಿ ಯಶಸ್ವಿ ಜೈಸ್ವಾಲ್‌ಗೆ ಚೊಚ್ಚಲ ಅವಕಾಶ ನೀಡುವ ಸಾಧ್ಯತೆ ಇದೆ. ಇಲ್ಲಿ ಅವರು ಉತ್ತಮ ಪ್ರದರ್ಶನ ತೋರಿದರೆ, ಐಸಿಸಿ ಚಾಂಪಿಯನ್ಸ್ ಟ್ರೋಫಿಗೂ ಅವರನ್ನು ಪರಿಗಣಿಸಬಹುದು.