ಭಾರತದ ಆಟಗಾರರಿಗೆ 10 ಅಂಶಗಳ ಶಿಸ್ತಿನ ಮಾರ್ಗಸೂಚಿಗಳನ್ನು ಹೊರಡಿಸಿದ ಬಿಸಿಸಿಐ!
ಭಾರತ ಕ್ರಿಕೆಟ್ ತಂಡದ ಆಟಗಾರರಿಗಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು (ಬಿಸಿಸಿಐ) ಶಿಸ್ತಿಗೆ ಸಂಬಂಧಿಸಿದಂತೆ 10 ಅಂಶಗಳ ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ಇದು ಆಟಗಾರರಲ್ಲಿನ ಶಿಸ್ತು ಹಾಗೂ ಏಕತೆಗೆ ಸಂಬಂಧಿಸಿದೆ.
ನವದೆಹಲಿ: ನ್ಯೂಜಿಲೆಂಡ್ ಹಾಗೂ ಆಸ್ಟ್ರೇಲಿಯಾ ಎದುರು ಟೆಸ್ಟ್ ಸರಣಿಗಳನ್ನು ಹೀನಾಯವಾಗಿ ಸೋತಿರುವ ಭಾರತ ತಂಡ ಮೂರನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಪೈನಲ್‌ಗೆ ಅರ್ಹತೆ ಪಡೆಯುವಲ್ಲಿ ವಿಫಲವಾಗಿದೆ. ಈ ಹಿನ್ನೆಲೆಯಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ತನ್ನ ನಿಯಮಗಳಲ್ಲಿ ದೊಡ್ಡ ಬದಲಾವಣೆಯನ್ನು ಮಾಡಕೊಂಡಿದೆ.
ಭಾರತ ತಂಡದಲ್ಲಿ ಶಿಸ್ತು ಮತ್ತು ಏಕತೆಯನ್ನು ಉತ್ತೇಜಿಸುವ ಸಲುವಾಗಿ ಬಿಸಿಸಿಐ, 10 ಅಂಶಗಳ ಶಿಸ್ತಿನ ಮಾರ್ಗಸೂಚಿಗಳನ್ನು ಹೊರಡಿಸಿದೆ. ಆಟಗಾರರ ಕುಟುಂಬ, ಪ್ರಯಾಣ, ಫೋಟೋಗ್ರಫಿ, ದೇಶಿ ಕ್ರಿಕೆಟ್ ಆಡುವುದು ಸೇರಿದಂತ ಪ್ರಮುಖ ಸಂಗತಿಗಳ ಬಗ್ಗೆ ಬಿಸಿಸಿಐ ನಿಯಮಗಳನ್ನು ರೂಪಿಸಿದೆ. ಈ ನೀತಿ ನಿಯಮಗಳನ್ನು ಆಟಗಾರರು ಕಡ್ಡಾಯವಾಗಿ ಪಾಲಿಸಬೇಕು. ಇಲ್ಲವಾದಲ್ಲಿ ಅಂಥಾ ಆಟಗಾರರಿಗೆ ದಂಡವನ್ನು ವಿಧಿಸಲಾಗುತ್ತದೆ.
ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ರಣಜಿ ಟ್ರೋಫಿ ಆಡಬೇಕೆಂದ ಯುವರಾಜ್ ಸಿಂಗ್!
ಭಾರತ ತಂಡದ ಆಟಗಾರರಿಗೆ ಬಿಸಿಸಿಐ ರೂಪಿಸಿದ 10 ಅಂಶಗಳ ಶಿಸ್ತಿನ ಮಾರ್ಗಸೂಚಿಗಳು
1.ದೇಶಿ ಪಂದ್ಯಗಳನ್ನು ಆಡಬೇಕು
ಬಿಸಿಸಿಐ ನೀತಿ ನಿಯಮಗಳ ಪ್ರಕಾರ ರಾಷ್ಟ್ರೀಯ ತಂಡಕ್ಕೆ ಆಯ್ಕೆಗೆ ಹಾಗೂ ಕೇಂದ್ರ ಗುತ್ತಿಗೆಯನ್ನು ಪಡೆಯಬೇಕಾದರೆ ಪ್ರತಿಯೊಬ್ಬ ಆಟಗಾರನೂ ದೇಶಿ ಪಂದ್ಯಗಳನ್ನು ಕಡ್ಡಾಯವಾಗಿ ಆಡಬೇಕು. ಈ ನೀತಿಯು ಆಟಗಾರರು ದೇಶಿ ಕ್ರಿಕೆಟ್ ಪರಿಸರ ವ್ಯವಸ್ಥೆಯೊಂದಿಗೆ ಸಂಪರ್ಕದಲ್ಲಿರುವುದನ್ನು ಖಾತ್ರಿಪಡಿಸುತ್ತದೆ, ಪ್ರತಿಭೆ ಅಭಿವೃದ್ಧಿಯನ್ನು ಉತ್ತೇಜಿಸುತ್ತದೆ, ಪಂದ್ಯದ ಫಿಟ್‌ನೆಸ್ ಅನ್ನು ಕಾಪಾಡಿಕೊಳ್ಳುತ್ತದೆ ಮತ್ತು ಒಟ್ಟಾರೆ ದೇಶಿ ಕ್ರಿ ರಚನೆಯನ್ನು ಬಲಪಡಿಸುತ್ತದೆ.
2.ಕುಟುಂಬದ ಜತೆ ಪ್ರತೇಕ ಪ್ರಯಾಣ
ಎಲ್ಲಾ ಆಟಗಾರರು ಕೂಡ ಪಂದ್ಯಗಳು ಹಾಗೂ ತರಬೇತಿಗಾಗಿ ತಂಡದ ಜತೆ ಮಾತ್ರ ಪ್ರಯಾಣ ಬೆಳೆಸಬೇಕಾಗುತ್ತದೆ ಹಾಗೂ ಕುಟುಂಬದ ಸದಸ್ಯರೊಂದಿಗೆ ಪ್ರಯಾಣಿಸುವುದನ್ನು ರದ್ದುಗೊಳಿಸಲಾಗಿದೆ. ಒಂದು ವೇಳೆ ಕುಟುಂಬದ ಜತೆ ಪ್ರಯಾಣ ಬೆಳೆಸಬೇಕೆಂದರೆ ಮೊದಲೇ ಹೆಡ್ ಕೋಚ್ ಹಾಗೂ ಬಿಸಿಸಿಐ ಆಯ್ಕೆ ಸಮಿತಿಯ ಮುಖ್ಯಸ್ಥರಿಂದ ಅನುಮತಿ ಪಡೆಯಬೇಕಾಗುತ್ತದೆ.
3.ಲಗೇಜ್ ತೂಕದಲ್ಲಿ ಮಿತಿ
ಈ ನಿಯಮದ ಪ್ರಕಾರ ಭಾರತ ತಂಡದ ಆಟಗಾರ ಹಾಗೂ ಸಹಾಯಕ ಸಿಬ್ಬಂದಿಯ ಲಗೇಜ್‌ನ ತೂಕವನ್ನು ಸೀಮಿತಗೊಳಿಸಲಾಗಿದೆ. 30 ದಿನಗಳಿಗೂ ಹೆಚ್ಚಿನ ಪ್ರವಾಸವಾಗಿದ್ದರೆ ಆಟಗಾರರು ಗರಿಷ್ಠ 150 ಕೆ.ಜಿ ವರೆಗೂ ಲಗೇಜ್ (3 ಸೂಟ್‌ಕೇಸ್+ 2 ಕಿಟ್ ಬ್ಯಾಗ್) ಅನ್ನು ತೆಗೆದುಕೊಂಡು ಹೋಗಬಹುದು. ಇನ್ನು ಸಹಾಯಕ ಸಿಬ್ಬಂದಿಯು ಗರಿಷ್ಠ 80 ಕೆ.ಜಿವರೆಗೆ ಲಗೇಜ್ ಅನ್ನು ಹೊಂದಬಹುದು. 30ಕ್ಕೂ ಕಡಿಮೆ ದಿನಗಳ ಪ್ರವಾಸವಾಗಿದ್ದರೆ ಹಾಗೂ ತವರು ಸರಣಿಗಳ ವೇಳೆ ಆಟಗಾರರು ಗರಿಷ್ಠ 120 ಕೆಜಿ ಲಗೇಜ್ ಮತ್ತು ಸಹಾಯಕ ಸಿಬ್ಬಂದಿ ಗರಿಷ್ಠ 60 ಕೆ.ಜಿ ತೂಕದ ಲಗೇಜ್ ಅನ್ನು ಹೊಂದಬಹುದು.
4.ವೈಯಕ್ತಿಕ ಸಿಬ್ಬಂದಿ ಮೇಲೆ ನಿಯಂತ್ರಣ
ಬಿಸಿಸಿಐನ ಅನುಮತಿ ಇಲ್ಲದ ಹೊರತು ವೈಯಕ್ತಿಕ ಸಿಬ್ಬಂದಿಯನ್ನು (ವೈಯಕ್ತಿಕ ವ್ಯವಸ್ಥಾಪಕರು, ಬಾಣಸಿಗರು, ಸಹಾಯಕರು ಮತ್ತು ಭದ್ರತಾ ಸಿಬ್ಬಂದಿ) ಪ್ರವಾಸಗಳು ಅಥವಾ ಸರಣಿಗಳ ವೇಳೆ ನಿರ್ಬಂಧಿಸಲಾಗಿದೆ.
5.ಸೆಂಟರ್ ಆಫ್ ಎಕ್ಸಲೆನ್ಸ್‌ಗೆ ಬ್ಯಾಗ್ ರವಾನೆ
ತಮ್ಮ ಉಪಕರಣಗಳು ಮತ್ತು ವೈಯಕ್ತಿಕ ವಸ್ತುಗಳನ್ನು ಬೆಂಗಳೂರಿನಲ್ಲಿರುವ ಸೆಂಟರ್ ಆಫ್ ಎಕ್ಸಲೆನ್ಸ್‌ಗೆ ರವಾನಿಸುವ ಬಗ್ಗೆ ಆಟಗಾರರು ಟೀಮ್ ಮ್ಯಾನೇಜ್‌ಮೆಂಟ್ ಜತೆ ಸಮನ್ವಯ ಸಾಧಿಸಬೇಕು. ಪ್ರತ್ಯೇಕ ವ್ಯವಸ್ಥೆಗಳಿಂದ ಉಂಟಾಗುವ ಯಾವುದೇ ಹೆಚ್ಚುವರಿ ವೆಚ್ಚಗಳಿಗೆ ಆಟಗಾರರೇ ಜವಾಬ್ದಾರಿರಾಗುತ್ತಾರೆ.
yo-yo fitness Test: ಮತ್ತೆ ಯೋ-ಯೋ ಟೆಸ್ಟ್ ಜಾರಿಗೆ ಮುಂದಾದ ಬಿಸಿಸಿಐ!
6.ಅಭ್ಯಾಸ ಸೆಷನ್‌ಗಳಿಗೆ ಹಾಜರಾತಿ
ಎಲ್ಲಾ ಆಟಗಾರರು ಅಭ್ಯಾಸದ ಸೆಷನ್‌ಗಳಿಗೆ ಕಡ್ಡಾಯವಾಗಿ ಹಾಜರಾಗಬೇಕು ಮತ್ತು ತಂಡದ ಜತೆಯೇ ಪ್ರಯಾಣಿಸಬೇಕು. ಈ ನಿಯಮದ ಮೂಲಕ ತಂಡದ ವ್ಯಾಪ್ತಿಯಲ್ಲಿ ಆಟಗಾರರ ನಡುವೆ ಬಲವಾದ ಕೆಲಸದ ನೀತಿ ರೂಪಗೊಳ್ಳುತ್ತದೆ.
7.ವೈಯಕ್ತಿಕ ಫೋಟೋಗ್ರಫಿಗೆ ಅವಕಾಶ ಇಲ್ಲ
ತಂಡದ ಪ್ರತಿಯೊಬ್ಬ ಆಟಗಾರ ಸರಣಿ ಹಾಗೂ ಪ್ರವಾಸದಲ್ಲಿ ಯಾವುದೇ ವೈಯಕ್ತಿಕ ಶೂಟ್ಸ್ ಅಥವಾ ಅನುಮೋದನೆಗಳಲ್ಲಿ ಭಾಗವಹಿಸುವಂತಿಲ್ಲ. ಆ ಮೂಲಕ ಕ್ರಿಕೆಟ್ ಹಾಗೂ ತಂಡದ ಜವಾಬ್ದಾರಿಗಳ ಹೆಚ್ಚಿನ ಗಮನ ಹರಿಸಬೇಕಾಗುತ್ತದೆ.
8. ಕುಟುಂಬ ಪ್ರಯಾಣದ ನಿಯಮ
ಕುಟುಂಬ ಪ್ರಯಾಣ ನಿಯಮವು ಆಟಗಾರರ ವೈಯಕ್ತಿಕ ಹಾಗೂ ತಂಡದ ಜವಾಬ್ದಾರಿಗಳಿಗೆ ಪೂರಕವಾಗಿದೆ. 45 ದಿನಗಳಿಗೂ ಹೆಚ್ಚಿನ ಕಾಲ ವಿದೇಶಿ ಪ್ರವಾಸದ ವೇಳೆ ಆಟಗಾರರ ಕುಟುಂಬದ ಸದಸ್ಯರು ಹಾಗೂ ಮಕ್ಕಳು (18 ವರ್ಷ ಮೇಲ್ಪಟ್ಟು) ಒಮ್ಮೆ ಪ್ರಯಾಣ ಬೆಳೆಸಿ ಆರಂಭಿಕ ಎರಡು ವಾರಗಳ ಕಾಲ ಜೊತೆಯಲ್ಲಿ ಇರಬಹುದು. ಆಟಗಾರರ ಕುಟುಂಬದ ಸದಸ್ಯರು ಉಳಿದುಕೊಳ್ಳಲು ಅರ್ಧ ಹಣವನ್ನು ಬಿಸಿಸಿಐ ಭರಿಸುತ್ತದೆ. ಆದರೆ, ಇನ್ನುಳಿದ ಖರ್ಚು ವೆಚ್ಚಗಳನ್ನು ಅವರೇ ನೋಡಿಕೊಳ್ಳಬೇಕಾಗುತ್ತದೆ. ಆದರೆ, ಇದಕ್ಕೂ ಮುನ್ನ ಆಟಗಾರರು ಹೆಡ್ ಕೋಚ್, ನಾಯಕ ಹಾಗೂ ಜನರಲ್ ಮ್ಯಾನೇಜರ್ ಬಳಿ ಅನುಮತಿ ಪಡೆಯಬೇಕಾಗುತ್ತದೆ.
9. ಬಿಸಿಸಿಐ ಅನುಮೋದನೆಗಳಲ್ಲಿ ಭಾಗವಹಿಸುವಿಕೆ
ಭಾರತ ತಂಡದ ಎಲ್ಲಾ ಆಟಗಾರರು ಬಿಸಿಸಿಐನ ಅಧಿಕೃತ ಫೋಟೋ ಶೂಟ್ಸ್ ಹಾಗೂ ಅನುಮೋದನೆ ಪ್ರಕ್ರಿಯೆಗಳು ಮತ್ತು ಕಾರ್ಯಕ್ರಮಗಳಲ್ಲಿ ಕಡ್ಡಾಯವಾಗಿ ಭಾಗವಹಿಸಬೇಕಾಗಿದೆ.
10 ಪ್ರವಾಸಗಳನ್ನು ಪೂರ್ಣಗೊಳಿಸುವುದು
ಪ್ರತಿಯೊಬ್ಬ ಆಟಗಾರನೂ ಸರಣಿ ಅಥವಾ ಪ್ರವಾಸದ ಕೊನೆಯ ದಿನಾಂಕದವರೆಗೂ ತಂಡದ ಜತೆಯಲ್ಲಿಯೇ ಇರಬೇಕು. ನಿಗದಿತ ಅವಧಿಗೂ ಮುನ್ನ ಸರಣಿ ಅಥವಾ ಪ್ರವಾಸ ಬೇಗ ಮುಗಿದರೂ ಕೂಡ ಆಟಗಾರರು ಕಡ್ಡಾಯವಾಗಿ ಜೊತೆಯಲ್ಲಿ ಇರಬೇಕಾಗುತ್ತದೆ.