Viral News: ಅಬ್ಬಬ್ಬಾ ಲಾಟ್ರಿ! ರೈತನ ಅಕೌಂಟಿಗೆ ಬಿತ್ತು 16 ಲಕ್ಷ ರೂಪಾಯಿ: ಬ್ಯಾಂಕ್ ಸಿಬ್ಬಂದಿಯ ಎಡವಟ್ಟಿನಿಂದ ಬಂಪರ್ ಚಾನ್ಸ್!
Viral News: ನಿಮ್ಮ ಬ್ಯಾಂಕ್ ಅಕೌಂಟಿಗೆ ಇದ್ದಕ್ಕಿದ್ದಂತೆ ಲಕ್ಷಾಂತರ ರೂಪಾಯಿ ಕ್ರೆಡಿಟ್ ಆದ್ರೆ ನಿಮ್ಗೆ ಹೇಗಾಗ್ಬಹುದು? ಅಂತದ್ದೇ ಒಂದು ಪ್ರಕರಣ ರಾಜಸ್ಥಾನದಲ್ಲಿ ನಡೆದಿದೆ. ರೈತನೊಬ್ಬನ ಅಕೌಂಟ್‌ಗೆ 16 ಲಕ್ಷ ರೂ. ಕ್ರೆಡಿಟ್ ಆಗಿದೆ. ಬಳಿಕ ಆಗಿದ್ದೇನು? ಇಲ್ಲಿದೆ ಕುತೂಹಲಕಾರಿ ಘಟನೆಯ ವಿವರ.
ಜೈಪುರ, ಜ. 16, 2025: ಒಂದು ಅಚಾತುರ್ಯದ ಅಮೌಂಟ್ ಟ್ರಾನ್ಸಫರ್ ಪ್ರಕರಣದಲ್ಲಿ ರಾಜಸ್ಥಾನದ (Rajasthan) ಅಜ್ಮೇರ್‌ನ (Ajmer) ರೈತರೊಬ್ಬರ ಅಕೌಂಟಿಗೆ 16 ಲಕ್ಷ ರೂಪಾಯಿ ಕ್ರೆಡಿಟ್ ಆಗಿರುವ ಸುದ್ದಿಯೊಂದು ಇದೀಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ (Viral News). ಇದಕ್ಕೂ ಗಮ್ಮತ್ತಿನ ವಿಷಯ ಏನಪ್ಪಾ ಅಂದ್ರೆ, ಈ ರೀತಿಯಾಗಿ ತಪ್ಪಿ ಕ್ರೆಡಿಟ್ ಆದ ಲಕ್ಷಾಂತರ ರೂಪಾಯಿ ಹಣವನ್ನು ಆ ರೈತ ವಾಪಾಸು ನೀಡಲು ನಿರಾಕರಿಸಿದ ಕಾರಣ ಈ ಬ್ಯಾಂಕಿನವರು ಪೊಲೀಸರ ಮೊರೆ ಹೋಗಬೇಕಾದ ಪ್ರಸಂಗವೂ ನಡೆದಿದೆ. ಆಮೇಲೇನಾಯ್ತು ಅಂತ ನಾವು ಹೇಳ್ತೀವಿ ಕೇಳಿ!
ಈ ಘಟನೆ ಅಜ್ಮೇರ್‌ನ ಕಿಶನ್ ಘರ್‌ನ (Kishangarh) ಅರ್ಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಇಲ್ಲಿನ ಛೋಟಾ ಲಾಂಬಾ ಗ್ರಾಮದ ಕಾನಾರಾಮ್ ಜಾಟ್ ಎಂಬ ರೈತನಿಗೆ ಈ ರೀತಿಯಾಗಿ ಜಾಕ್ ಪಾಟ್ ಹೊಡೆದಿರುವುದು. ಈತನ ಬ್ಯಾಂಕ್ ಆಫ್ ಬರೋಡಾ (Bank of Baroda) ಅಕೌಂಟಿಗೆ 16 ಲಕ್ಷ ರೂ. ಮೊತ್ತ ತಪ್ಪಿ ಕ್ರೆಡಿಟ್ ಆಗಿದೆ. ಇಷ್ಟು ದೊಡ್ಡ ಮೊತ್ತ ತನ್ನ ಅಕೌಂಟಿಗೆ ಕ್ರೆಡಿಟ್ ಆಗಿದ್ದರಿಂದ ಖುಷಿಗೊಂಡ ಜಾಟ್ ಅದರಲ್ಲಿ 15 ಲಕ್ಷ ರೂ.ಗಳನ್ನು ತನ್ನ ಪರ್ಸನಲ್ ಲೋನ್ ಒಂದನ್ನು ಕ್ಲಿಯರ್ ಮಾಡಲು ಬಳಸಿಕೊಂಡಿದ್ದಾನೆ.
ಇದು ನಿಜವಾಗಿಯೂ ನ್ಯೂ ಇಂಡಿಯನ್ ಇನ್ಶೂರೆನ್ಸ್ ಕಂಪನಿಗೆ (New India Insurance Company) ಬ್ಯಾಂಕ್ ಮೂಲಕ ಪಾವತಿಸಬೇಕಿದ್ದ ಬೆಳೆ ವಿಮೆ ಕಂತಿನ ಹಣವಾಗಿತ್ತು. ಈ ಮಿಸ್ಟೇಕ್ ಬ್ಯಾಂಕಿನವರ ಗಮನಕ್ಕೆ ಡಿ. 31ರಂದು ಬಂದಿದೆ.
ಬ್ಯಾಂಕ್ ಆಪ್ ಬರೋಡಾದ ಮ್ಯಾನೇಜರ್ ಜಿತೇಂದ್ರ ಥಾಕೂರ್ ಆರ್ಣಿ ಪೊಲೀಸ್ ಠಾಣೆಯಲ್ಲಿ ನೀಡಿರುವ ದೂರಿನಲ್ಲಿ ಹೀಗೆಂದು ಉಲ್ಲೇಖಿಸಲಾಗಿದೆ. ‘ಡಿ. 31ರಂದು ನಡೆದಿರುವ ಒಂದು ಬ್ಯಾಂಕ್ ವ್ಯವಹಾರದಲ್ಲಿ 16 ಲಕ್ಷ ರೂಪಾಯಿಗಳು ತಪ್ಪಿ ಕಾನಾರಾಮ್ ಜಾಟ್ ಎಂಬ ರೈತನ ಅಕೌಂಟಿಗೆ ಕ್ರೆಡಿಟ್ ಆಗಿದೆ. ನಿಜವಾಗಿಯೂ ಅದು ನ್ಯೂ ಇಂಡಿಯಾ ಇನ್ಶೂರೆನ್ಸ್ ಕಂಪನಿಯ ಅಕೌಂಟಿಗೆ ಜಮೆ ಆಗಬೇಕಿತ್ತು. ಈ ಮೊತ್ತ ಬೆಳೆ ವಿಮೆಯ ಕಂತಿನ ಹಣವಾಗಿದೆ’ ಎಂದು ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ.
‘ಮೊದಲಿಗೆ ನಮ್ಮ ಬ್ಯಾಂಕ್ ಸಿಬ್ಬಂದಿಗೆ ಈ ತಪ್ಪು ಗಮನಕ್ಕೆ ಬಂದಿರಲಿಲ್ಲ. ಈ ತಪ್ಪು ಗಮನಕ್ಕೆ ಬಂದ ಮೇಲೆ ಇದೀಗ ಗೊಂದಲ ಉಂಟಾಗಿದೆ’ ಎಂದು ಠಾಕೂರ್ ತನ್ನ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
‘ರೈತ ಜಾಟ್ ತನ್ನ ಅಕೌಂಟಿನಿಂದ ತಲಾ 5 ಲಕ್ಷ ರೂಪಾಯಿಗಳ ವ್ಯವಹಾರವನ್ನು ಕ್ರಮವಾಗಿ ಜ. 2 ಮತ್ತು ಜ. ಮಾಡಿದ್ದಾನೆ. ಒಟ್ಟಾರೆಯಾಗಿ 15 ಲಕ್ಷ ರೂಪಾಯಿಗಳನ್ನು ತನ್ನ ವೈಯಕ್ತಿಕ ಬಳಕೆಗೆ ತೆಗೆದಿದ್ದಾನೆ. ಇದೆಲ್ಲ ಜ. 10ರಂದು ಬ್ಯಾಂಕಿನವರ ಗಮನಕ್ಕೆ ಬಂದಿದೆ. ಬಳಿಕ ನಾವು ಆ ರೈತನನ್ನು ಭೇಟಿಯಾಗಿ ಆ ಮೊತ್ತವನ್ನು ಬ್ಯಾಂಕಿಗೆ ಹಿಂತಿರುಗಿಸುವಂತೆ ಕೇಳಿಕೊಂಡಿದ್ದೇವೆ. ಆದರೆ ರೈತ ನಮ್ಮ ಮನವಿಯನ್ನು ತಿರಸ್ಕರಿಸಿದ್ದಾನೆ’ ಎಂದು ಠಾಕೂರ್ ತನ್ನ ವಿವರವಾದ ದೂರಿನಲ್ಲಿ ತಿಳಿಸಿದ್ದಾರೆ.
ಇನ್ನು ಈ ಮೊತ್ತವನ್ನು ತಾನು ಸಾಲ ಮರುಪಾವತಿಗಾಗಿ ಬಳಸಿಕೊಂಡಿದ್ದೆನೆಂದು ರೈತ ಜಾಟ್ ತಿಳಿಸಿದ್ದಾನೆ.
ಇದನ್ನೂ ಓದಿ: Viral Video: ಚಲಿಸುತ್ತಿದ್ದ ರೈಲಿನಿಂದ ಜಾರಿ ಬಿದ್ದ ವೃದ್ಧೆ; ಮುಂದೇನಾಯ್ತು? ವಿಡಿಯೊ ನೋಡಿ
ಇದೀಗ ಬ್ಯಾಂಕ್ ಅಧಿಕಾರಿಗಳು ಈ ಮೊತ್ತವನ್ನು ಮರಳಿ ಪಡೆಯಲು ಕಾನೂನಿನ ಮೊರೆ ಹೋಗಿದ್ದಾರೆ. ‘ಕಾನಾರಾಮ್‌ನ ಕಿಸಾನ್ ಕ್ರೆಡಿಟ್ ಕಾರ್ಡ್ ಮತ್ತು 16 ಬಿಘಾ ಜಾಗದ ದಾಖಲೆ ನಮ್ಮ ಬ್ಯಾಂಕಿನಲ್ಲಿದ್ದು, ಒಂದು ವೇಳೆ ಆತ ಈ ಹಣವನ್ನು ಬ್ಯಾಂಕಿಗೆ ಮರಳಿಸದಿದ್ದರೆ, ಆ ಜಾಗದ ದಾಖಲೆ ಮೇಲೆ ನಾವು 16 ಲಕ್ಷ ರೂ. ವಸೂಲು ಮಾಡಿಕೊಳ್ಳುವುದು ಅನಿವಾರ್ಯವಾಗಲಿದೆ’ ಎಂದು ಠಾಕೂರ್ ಹೇಳಿದ್ದಾರೆ.
ಇನ್ನು ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ರೈತನ ಬ್ಯಾಂಕ್ ವ್ಯವಹಾರಗಳ ಮಾಹಿತಿಯನ್ನು ಪಡೆದು ಮುಂದಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.