Viral News: ಮಗುವಿನ ಅನಾರೋಗ್ಯದ ನೆಪದಲ್ಲಿ ಲಕ್ಷಾಂತರ ರೂ. ದೇಣಿಗೆ ಪಡೆದ ಖತರ್ನಾಕ್ ಮಹಿಳೆ!
Viral News: ಈ ಲೋಕದಲ್ಲಿ ಯಾವ್ಯಾವುದೋ ರೀತಿಯಲ್ಲಿ ದುಡ್ಡು ಮಾಡುವವರು ಇದ್ದಾರೆ. ಕೆಲವರು ಶ್ರಮಪಟ್ಟು ಸಂಪಾದನೆ ಮಾಡಿದರೆ ಇನ್ನು ಕೆಲವರು ಮೋಸದ ದಾರಿಯಲ್ಲಿ ದುಡ್ಡು ಮಾಡುತ್ತಾರೆ. ಇಲ್ಲೊಬ್ಬಾಕೆ ತನ್ನ ಮಗುವಿನ ಅನಾರೋಗ್ಯದ ಸುಳ್ಳು ನೆಪದಲ್ಲಿ ಲಕ್ಷಾಂತರ ರೂ. ಸಂಗ್ರಹಿಸಿದ್ದಾಳೆ. ಸದ್ಯ ಈ ಪ್ರಕರಣ ವೈರಲ್ ಆಗಿದ್ದು, ಈ ಕುರಿತಾದ ವಿವರ ಇಲ್ಲಿದೆ.
ಸಿಡ್ನಿ, ಜ. 15, 2025: ತೀರಾ ಬಡವರಾಗಿದ್ದು, ಅವರ ವೈದ್ಯಕೀಯ ವೆಚ್ಚದ ಸಹಾಯಕ್ಕಾಗಿ ಹಲವರು ಸೋಶಿಯಲ್ ಮೀಡಿಯಾ (Social Media) ಪ್ಲ್ಯಾಟ್‌ಫಾರಂಗಳ ಮೂಲಕ ದಾನಿಗಳಿಂದ ನೆರವು ಸಂಗ್ರಹಿಸುವ ವಿಧಾನಗಳು ನಿಮಗೆಲ್ಲ ಗೊತ್ತೇ ಇದೆ. ಆದರೆ ಇಲ್ಲೊಬ್ಬಾಕೆ ಇಂತಹ ಪ್ಲ್ಯಾಟ್ ಫಾರಂನ್ನು ದುರುಪಯೋಗಪಡಿಸಿಕೊಂಡಿದ್ದು, ತನ್ನ ಮಗುವಿಗೆ ತಾನೇ ವಿಷ ಉಣಿಸಿ ಮಗುವಿನ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ಅಲವತ್ತುಕೊಂಡು ಹಣ ಸಂಗ್ರಹಿಸಿದ ಘಟನೆಯ ಸುದ್ದಿಯೊಂದು ಇದೀಗ ಸಿಕ್ಕಾಪಟ್ಟೆ ವೈರಲ್ (Viral News) ಆಗಿದೆ. ಹಾಗಾದ್ರೆ ಏನೀ ಸುದ್ದಿ, ನೋಡ್ಕೊಂಡು ಬರೋಣ.
ಆಸ್ಟ್ರೇಲಿಯಾದಲ್ಲಿ (Australia) ಮಹಿಳೆಯೊಬ್ಬಳು ತನ್ನ ಒಂದು ವರ್ಷದ ಮಗುವಿಗೆ ವಿಷ ಉಣಿಸಿ, ಅಸ್ವಸ್ಥ ಮಗುವಿನ ವಿಡಿಯೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ ಡೊನೇಶನ್ ಪಡೆದುಕೊಂಡಿರುವ ಆರೋಪ ಕೇಳಿಬಂದಿದೆ.
ಸಿಎನ್.ಎನ್. (CNN) ವರದಿಗಳ ಪ್ರಕಾರ ಕ್ವೀನ್ಸ್‌ಲ್ಯಾಂಡ್‌ನ (Queensland) ಸನ್‌ಶೈನ್ ಕೋಸ್ಟ್ (Sunshine Coast) ಭಾಗದಲ್ಲಿ ವಾಸವಾಗಿರುವ 34 ವರ್ಷದ ಮಹಿಳೆಯೊಬ್ಬಳು ಹಲವು ಅನಧಿಕೃತ ಪ್ರಿಸ್ಕ್ರಿಪ್ಷನ್ ಮತ್ತು ಫಾರ್ಮಸಿ ಮೆಡಿಸಿನ್‌ಗಳನ್ನು ಯಾವುದೇ ವೈದ್ಯರ ಒಪ್ಪಿಗೆಯಿಲ್ಲದೇ ಹೆಣ್ಣು ಮಗುವೊಬ್ಬಳಿಗೆ ಕಳೆದ ಅಕ್ಟೋಬರ್ ತಿಂಗಳಿಂದ ನೀಡುತ್ತಿದ್ದಾಳೆ ಎಂಬ ವಿಚಾರ ತನಿಖೆ ವೇಳೆ ಬಹಿರಂಗಗೊಂಡಿದೆ.
ಇಲ್ಲಿನ ಸ್ಥಳೀಯ ಮಾಧ್ಯಮಗಳಲ್ಲಿ ವರದಿಯಾಗಿರುವಂತೆ ಈ ಮಹಿಳೆಯೇ ಆ ಸಂತ್ರಸ್ತ ಮಗುವಿನ ತಾಯಿ. ಆದರೆ ಸ್ಥಳೀಯ ಪೊಲೀಸರು ಈ ವಿಚಾರವನ್ನು ಇನ್ನೂ ಖಚಿತಪಡಿಸಿಲ್ಲ. ಈ ಮಗುವಿನ ಅನಾರೋಗ್ಯ ಪರಿಸ್ಥಿತಿಯನ್ನು ಪ್ರಚಾರ ಮಾಡಿ ಅದನ್ನೇ ಬಂಡವಾಳವಾಗಿಸಿಕೊಂಡು ಈ ಮಹಿಳೆ ‘ಗೋ ಫಂಡ್ ಮಿ’ (GoFundMe) ಎಂಬ ಪ್ಲ್ಯಾಟ್ ಫಾರಂ ಮೂಲಕ ಸುಮಾರು 37 ಸಾವಿರ ಡಾಲರ್ ಗಳಷ್ಟು (ಅಂದಾಜು 32 ಲಕ್ಷ ರುಪಾಯಿ) ಹಣವನ್ನು ಸಂಗ್ರಹಿಸಿದ್ದಾಳೆ ಎಂಬ ಮಾಹಿತಿಯೂ ಇದೀಗ ಲಭ್ಯವಾಗಿದೆ.
ಇದೀಗ ಈ ಮಹಿಳೆಯ ಗೋಲ್ ಮಾಲ್ ಪ್ರಕರಣ ಹೊರಬೀಳುತ್ತಿದ್ದಂತೆ ಆ ಆನ್‌ಲೈನ್ ಫಂಡ್ ಸಂಗ್ರಹ ಪ್ಲ್ಯಾಟ್ ಫಾರಂ ದಾನಿಗಳಿಗೆ ಹಣವನ್ನು ಹಿಂತಿರುಗಿಸುವ ಪ್ರಕ್ರಿಯೆಯನ್ನು ನಡೆಸುತ್ತಿದೆ ಎಂದೂ ತಿಳಿದುಬಂದಿದೆ.
ಇದನ್ನೂ ಓದಿ: Viral Video: 'ಹೆಂಡತಿಯನ್ನು ಎಷ್ಟು ಹೊತ್ತು ನೋಡುತ್ತೀರಿ' ಎಂದ L&T ಅಧ್ಯಕ್ಷರ ಹೇಳಿಕೆಯ ರೀಲ್ ವೈರಲ್
‘ಆಸ್ಟ್ರೇಲಿಯಾ ಜನರ ಉದಾರ ಗುಣವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಹಣವನ್ನು ಹಿಂತಿರುಗಿಸುವ ಸಕ್ರಿಯ ಪ್ರಕ್ರಿಯೆ ಚಾಲನೆಯಲ್ಲಿದೆ’ ಎಂದು ಗೋಂ ಫಂಡ್ ಮಿ ವಕ್ತಾರರು ಎಬಿಸಿ ನ್ಯೂಸ್‌ಗೆ ಮಾಹಿತಿ ನೀಡಿದ್ದಾರೆ.
ಕ್ವೀನ್ಸ್ ಲ್ಯಾಂಡ್ ಪೊಲೀಸರು ಹೇಳುವಂತೆ, ಮಗುವಿನ ಆರೋಗ್ಯ ಸ್ಥಿತಿಯ ಬಗ್ಗೆ ಆರೋಪಿ ಮಹಿಳೆ ಯಾವುದೇ ಮಾಹಿತಿ ನೀಡುತ್ತಿಲ್ಲ. ಆದರೆ ಮಗುವನ್ನು ಇದೀಗ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ. ಈ ಮಗುವಿನಗೆ ಅನಧಿಕೃತ ಔಷಧಿಗಳನ್ನು ನಿಡುವ ವಿಚಾರದಲ್ಲಿ ಈ ಮಹಿಳೆ ಹದ್ದು ಮೀರಿ ವರ್ತಿಸಿರುವ ಕಾರಣ ಆ ಮಗುವಿನ ಸ್ಥಿತಿ ಚಿಂತಾಜನಕವಾಗಿದೆಯಂತೆ.
ಮಗುವಿಗೆ ಚಿಕಿತ್ಸೆ ನೀಡಲಾಗುತ್ತಿದ್ದ ಬ್ರಿಸ್ಬೇನ್ ಆಸ್ಪತ್ರೆಯ ಸಿಬ್ಬಂದಿಗೆ ಈ ಮಹಿಳೆಯ ಮೇಲೆ ಸಂಶಯ ಬಂದು ಅವರಿ ಪೊಲೀಸರಿಗೆ ಮಾಹಿತಿ ನೀಡಿದ ಬಳಿಕ ಈ ಗೋಲ್ ಮಾಲ್ ಬೆಳಕಿಗೆ ಬಂದಿದೆ.