Viral Post: ದೇವ್ರಿಗೇ ಶಾಕ್ ಆಗುವಂತಹ ಕೋರಿಕೆ – ‘ನನ್ನ ಅತ್ತೆ ಬೇಗ ಸಾಯುವಂತೆ ಮಾಡು..!’; ಹರಕೆ ಹೊತ್ತ ಸೊಸೆ
Viral Post: ತಾಯಿ ನಮ್ಮ ಅತ್ತೆ ಬೇಗ ಸಾಯಬೇಕು ಅಂತಾ ನೋಟ್ ಮೇಲೆ ಬರೆದು ಹುಂಡಿಗೆ ಕಾಣಿಕೆ ಹಾಕಿರುವ ಘಟನೆ ಕಲಬುರಗಿ ಜಿಲ್ಲೆಯಲ್ಲಿ ನಡೆದಿದೆ. ಕಲಬುರಗಿ ಜಿಲ್ಲೆಯ ಅಫಜಲಪುರದ ಸುಕ್ಷೇತ್ರ ಘತ್ತರ್ಗಿ ಭಾಗ್ಯವಂತಿ ದೇವಸ್ಥಾನದ ಹುಂಡಿಯಲ್ಲಿ ಈ ನೋಟ್ ಪತ್ತೆಯಾಗಿದೆ.
ಭಕ್ತರು ಇತ್ತೀಚಿಗೆ ದೇವರ ಕಾಣಿಕೆ ಹುಂಡಿಗಳಲ್ಲಿ (Temple Hundi) ಚಿತ್ರ ವಿಚಿತ್ರವಾದ ಬೇಡಿಕೆಗಳನ್ನು ಹೊತ್ತ ಕಾಗದದ ಪತ್ರಗಳನ್ನು ಹಾಕಿ ಮನವಿ ಮಾಡಿಕೊಳ್ಳುವುದು ಸಾಮಾನ್ಯವಾಗಿದೆ. ಈ ನಡುವೆ ಚಾಮರಾಜನಗರ( Chamarajanagar) ಜಿಲ್ಲೆಯಲ್ಲಿ ಭಕ್ತರೊಬ್ಬರು ಕಾಣಿಕೆ ಹುಂಡಿಯಲ್ಲಿ ಹಾಕಿರುವ ಬೇಡಿಕೆ ಪತ್ರ ಎಲ್ಲರ ಹುಬ್ಬೇರಿಸುವಂತೆ ಮಾಡಿತ್ತು.
ದೇವರೆ ನನಗೆ ಹೆಣ್ಣನ್ನು ಕರುಣಿಸು ಎಂದು ಬರೆದಿದ್ದ ಪತ್ರ ಮೊನ್ನೆ ಚಾಮರಾಜನಗರದ ಚಾಮರಾಜೇಶ್ವರನ ಹುಂಡಿಯಲ್ಲಿ ಸಿಕ್ಕಿತ್ತು. ಇದೀಗ ದೇವರೇ ನನ್ನ ಮೂರ್ತಿ ಬಿಟ್ಟು ನನ್ನ ಕುತ್ತಿಗೆಗೆ ಬೇರೆ ಯಾರೂ ತಾಳಿ ಕಟ್ಟಬಾರಾದು ಎಂದು ಪ್ರೇಮಿಯೊಬ್ಬಳು ದೇವರಿಕೆ ಹರಕೆ ಕಟ್ಟಿಕೊಂಡು ಹುಂಡಿಗೆ ಚೀಟಿಯನ್ನು ಹಾಕಿರುವುದು ಬೆಳಕಿಗೆ ಬಂದಿತ್ತು.
ಆದರೀಗ ಸೊಸೆಯೊಬ್ಬಳು ‘ನಮ್ಮ ಅತ್ತೆಗೆ ಸಾವು ಕೊಡು’ ಎಂದು ಮನವಿ ಮಾಡಿ 20 ರೂಪಾಯಿಯನ್ನು ಹುಂಡಿಗೆ ಹಾಕಿದ್ದಾಳೆ. ಇಲ್ಲಿಯವರೆಗೆ ತಮ್ಮ ಅಭಿವೃದ್ಧಿಗೆ, ಪ್ರೇಮ ಸಮಸ್ಯೆ ನಿವಾರಣೆಗೆ ಸಂಬಂಧಿಸಿದ್ದ ಅನೇಕ ಪತ್ರಗಳು ದೇವರ ಹುಂಡಿಯಲ್ಲಿ ಸಿಕ್ಕಿವೆ. ಆದರೆ, ಇಲ್ಲಿ ಒಬ್ಬಾಕೆ ಸೊಸೆ ತನ್ನ ಅತ್ತೆ ಬೇಗ ಸಾಯಲಿ ಎಂಬ ವಿಚಿತ್ರ, ಆಘಾತಕಾರಿ ಬೇಡಿಕೆಯನ್ನು ದೇವರಿಗೆ ಸಲ್ಲಿಸಿದ್ದಾಳೆ.
ಕಲಬುರಗಿ ಜಿಲ್ಲೆಯ ಅಫಜಲಪುರದ ಸುಕ್ಷೇತ್ರ ಘತ್ತರ್ಗಿ ಭಾಗ್ಯವಂತಿ ದೇವಸ್ಥಾನದ ಹುಂಡಿಯಲ್ಲಿ ಈ ನೋಟ್ (currency) ಪತ್ತೆಯಾಗಿದ್ದು, ಕಳೆದ ಕೆಲ ತಿಂಗಳ ಹಿಂದೆ ದೇವಸ್ಥಾನಕ್ಕೆ ಭೇಟಿ ಕೊಟ್ಟ ಮಹಿಳೆ 20 ರೂ. ನೋಟ್ ಮೇಲೆ ಅತ್ತೆ ಸಾಯಲೆಂದು ಬರಹ ಬರೆದು ಭಾಗ್ಯವಂತಿ ದೇವಿಯ ಹುಂಡಿಗೆ ಹರಕೆ ಮಾಡಿದ್ದಾರೆ.
ಕಲಬುರಗಿ ಭಕ್ತಳ ಬೇಡಿಕೆ ಓದಿದ ಹುಂಡಿ ಎಣಿಕೆ ಸಿಬ್ಬಂದಿ ಒಂದು ಕ್ಷಣ ದಂಗಾಗಿ ಹೋಗಿದ್ದಾರೆ. ಈ ರೀತಿ ಎಲ್ಲಾ ಬೇಡಿಕೆ ಇರುತ್ತವೆಯೇ..? ಸಾವನ್ನು ಬಯಸುವ ಮಟ್ಟಿಗೆ ಆತ ನೊಂದಿರುವವನೇ..? ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ಭಾಗ್ಯವಂತಿ ದೇವಿಯ ಹುಂಡಿ ಎಣಿಕೆ ಮಾಡುವ ವೇಳೆ ಅತ್ತೆ ಸಾಯಲೆಂದು ಹರಕೆ ಹೊತ್ತು ಕಾಣಿಕೆ ಅರ್ಪಿಸಿರುವ ನೋಟ್ ಪತ್ತೆಯಾಗಿದೆ. ಸದ್ಯ ಈ ಲೆಟರ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪತ್ರ ಬರೆದ ಸೊಸೆ ಯಾರು ಅಂತಾ ಜನಸಾಮಾನ್ಯರು ಮಾತನಾಡುತ್ತಿದ್ದಾರೆ. ಅಲ್ಲದೇ ಹುಂಡಿಗಳಿಗೆ ತಮ್ಮ ಅಭಿವೃದ್ಧಿಗಾಗಿ, ಒಳ್ಳೆಯ ಉದ್ಯೋಗ ಪ್ರಾಪ್ತಿಗಾಗಿ, ಇತ್ಯಾದಿ ಸತ್ಕಾರ್ಯಗಳ ಈಡೇರಿಕೆಗಾಗಿ ಹಣವನ್ನು ಹಾಕುವುದು ನಮ್ಮ ಪೂರ್ವಜರ ಕಾಲದಿಂದಲೂ ನಡೆದುಕೊಂಡು ಬರುತ್ತಿದೆ. ಈಗಲೂ ಎಲ್ಲ ದೇವಾಲಯಗಳಲ್ಲಿ ಭಕ್ತರು ತಮಗಿಷ್ಟು ಅನಿಸಿದಷ್ಟು ಹಣ ಹಾಕುತ್ತಾರೆ. ಆದರೆ ಇತ್ತೀಚೆಗೆ ಹುಂಡಿಗಳಿಗೆ ಕೆಟ್ಟ ಮನಸ್ಥಿತಿಯಿಂದ ಹಣ ಹಾಕುತ್ತಿರುವುದು ಗಮನಿಸಿದರೆ ಕಾಲ ಯಾವ ಕಡೆ ಓಡುತ್ತಿದೆ ಎಂದು ಗೊತ್ತಾಗುತ್ತಿಲ್ಲ. ದೇವರ ಬಳಿ ಒಳ್ಳೆ ವಿಷ್ಯಕ್ಕೆ ಹೋಗಿ, ಅಲ್ಲಿ ಇಂತಹವರಿಗೆ ಸಾವು ಕೊಡು ಎಂದು ಕೇಳುವುದು ಸರಿನಾ? ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.
ಇನ್ನು ಭಾಗ್ಯವಂತಿ ದೇವಿ ದೇವಸ್ಥಾನದಲ್ಲಿ ಪ್ರತಿ ವರ್ಷ ಹುಂಡಿ ಎಣಿಕೆ ನಡೆಯುತ್ತದೆ. ಈ ವರ್ಷ ಹುಂಡಿಯಿಂದ ಸುಮಾರು ರೂ. 60 ಲಕ್ಷ ನಗದು ಹಾಗೂ 1 ಕೆಜಿ ಬೆಳ್ಳಿ ವಸ್ತುಗಳನ್ನು ಸಂಗ್ರಹಿಸಲಾಗಿದೆ ಎಂದು ದೇವಸ್ಥಾನದ ಅಧಿಕಾರಿಗಳು ತಿಳಿಸಿದ್ದಾರೆ. ದೇಗುಲಕ್ಕೆ ಬರುವ ಕೆಲ ಭಕ್ತರು ತಮ್ಮ ಕೋರಿಕೆಗಳನ್ನು ಬರೆದು ಅದನ್ನು ಹುಂಡಿಗೆ ಹಾಕುತ್ತಾರೆ. ಇದೇ ರೀತಿ ಸೊಸೆಯೊಬ್ಬರು ತಮ್ಮ ಅತ್ತೆ ಸಾವಿನ ಕೋರಿಕೆ ಕೋರಿ ಹುಂಡಿಗೆ ಹಣ ಹಾಕಿದ್ದಾರೆ.