Viral Video: ಕಾರಿನ ಡೋರ್ ಓಪನ್ ಸ್ಥಿತಿಯಲ್ಲಿ ‘Hit & Run’ ಪ್ರಕರಣದಲ್ಲಿ ಓರ್ವ ಸಾವು; ಅಪಘಾತದ ವಿಡಿಯೊ ವೈರಲ್
Viral Video: ಉತ್ತರಪ್ರದೇಶದಲ್ಲಿ ಭೀಕರ ಅಪಘಾತವೊಂದರ ವಿಡಿಯೊ ವೈರಲ್ ಆಗುತ್ತಿದೆ. ಕಾರು ಡ್ರೈವರ್‌ನ ನಿರ್ಲಕ್ಷ್ಯದ ಚಾಲನೆಗೆ ಓರ್ವ ಮೃತಪಟ್ಟಿದ್ದಾನೆ. ವಿಡಿಯೊ ನೋಡಿದವರೆಲ್ಲ ಚಾಲಕನ ಕೃತ್ಯದ ವಿರುದ್ದ ಆಕ್ರೋಶ ವ್ಯಕ್ತಪಡಿಸಿಸುತ್ತಿದ್ದಾರೆ. ಆತನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸುತ್ತಿದ್ದಾರೆ.
Source : https://www.freepressjournal.in/
ಲಖನೌ, ಜ. 17, 2025: ಇತ್ತೀಚಿನ ದಿನಗಳಲ್ಲಿ ನಿರ್ಲಕ್ಷ್ಯದ ಚಾಲನೆಯಿಂದುಂಟಾಗುವ ಅಪಘಾತ (Accident) ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಕುಡಿತ ಮತ್ತು ಮಾದಕ ದ್ರವ್ಯದ ಅಮಲಿನಲ್ಲಿ, ನಿರ್ಲಕ್ಷ್ಯದಿಂದ ರಸ್ತೆಗಳಲ್ಲಿ ವಾಹನ ಚಲಾಯಿಸುತ್ತಾ ಹಲವರ ಜೀವಕ್ಕೆ ಕುತ್ತು ತರುವಂತಹ ಪ್ರಕರಣಗಳನ್ನು ನಾವು ದಿನನಿತ್ಯವೆಂಬಂತೆ ಓದುತ್ತಲೇ ಇರುತ್ತೇವೆ. ಇದಕ್ಕೊಂದು ತಾಜಾ ಉದಾಹರಣೆಯೆಂಬಂತೆ ಉತ್ತರ ಪ್ರದೇಶದ (Uttar Pradesh) ರಾಯ್ ಬರೇಲಿಯಲ್ಲೊಂದು (Raebareli) ಆಘಾತಕಾರಿ ಅಪಘಾತ ನಡೆದಿದ್ದು, ಸದ್ಯಕ್ಕೆ ಇದರ ವಿಡಿಯೊ ವೈರಲ್ (Viral Video) ಆಗುತ್ತಿದೆ.
ಈ ವಿಡಿಯೋವನ್ನು ನೋಡುವಾಗ ಮನುಷ್ಯನೊಬ್ಬ ಇಷ್ಟೊಂದು ಕ್ರೂರಿಯಾಗಿರಲು ಹೇಗೆ ಸಾಧ್ಯ ಎಂಬ ಯೋಚನೆ ಒಮ್ಮೆ ನಿಮ್ಮ ಮನಸ್ಸಿನಲ್ಲಿ ಮೂಡಿ ಮರೆಯಾಗದಿರದು.
ರಾಯ್ ಬರೇಲಿ – ಪ್ರಯಾಗ್ ರಾಜ್ ಹೆದ್ದಾರಿಯಲ್ಲಿ ಈ ಭೀಕರ ಹಿಟ್ ಆ್ಯಂಡ್ ರನ್ (Hit & Run) ಪ್ರಕರಣ ನಡೆದಿದ್ದು, ವೇಗವಾಗಿ ಬಂದ ಕಾರೊಂದು, ಬೈಕ್‌ನಲ್ಲಿದ್ದ ಇಬ್ಬರಿಗೆ ಮತ್ತು ಇಬ್ಬರು ಪಾದಚಾರಿಗಳಿಗೆ ನಿರ್ಲಕ್ಷ್ಯತನದಿಂದ ಡಿಕ್ಕಿ ಹೊಡೆದಿದೆ. ಮಾತ್ರವಲ್ಲದೇ ಈ ಸಂದರ್ಭದಲ್ಲಿ ಕಾರಿನ ಒಂದು ಬಾಗಿಲು ತೆರೆದ ಸ್ಥಿತಿಯಲ್ಲಿರುವುದು ಈ ವೈರಲ್ ವಿಡಿಯೊದಲ್ಲಿ ದಾಖಲಾಗಿದೆ.
ಇಷ್ಟೂ ಸಾಲದೆಂಬಂತೆ, ನಾಲ್ಕು ಜನರಿಗೆ ಡಿಕ್ಕಿ ಹೊಡೆದ ಬಳಿಕ ಕಾರನ್ನು ನಿಲ್ಲಿಸಿದ ಅದರ ಚಾಲಕ ಮತ್ತೆ ವೇಗವಾಗಿ, ನಿರ್ಲಕ್ಷ್ಯತನದಿಂದ ಕಾರನ್ನು ಚಲಾಯಿಸುತ್ತಾ ಅಲ್ಲಿ ಬೊಬ್ಬೆ ಹೊಡೆಯುತ್ತಿದ್ದವರ ಮೇಲೆ ನೀರನ್ನೂ ಸಹ ಎರಚುತ್ತಿರುವ ದೃಶ್ಯವೂ ಕಂಡು ಬಂದಿದೆ. ಇದೆಲ್ಲ ಈ 8 ಸೆಕೆಂಡ್‌ನ ವಿಡಿಯೊದಲ್ಲಿ ದಾಖಲಾಗಿದೆ. ಈ ಭಯಾನಕ ವಿಡಿಯೊವನ್ನು ನೀವೂ ಒಮ್ಮೆ ನೋಡಿಬಿಡಿ.
यूपी : जिला रायबरेली में हिट एंड रन !!
— Sachin Gupta (@SachinGuptaUP) January 16, 2025
बेकाबू कार ने कई लोगों को टक्कर मारी। कॉलेज के नाजिर मौलाना की मौत हुई, करीब 3 लोग घायल हैं। कार वाला गेट खोलकर सड़क पर तांडव मचाता रहा। pic.twitter.com/SHuvua7P7T
ಈ ವಿಡಿಯೊದಲ್ಲಿರುವಂತೆ ಆರೋಪಿ ಚಲಾಯಿಸುತ್ತಿದ್ದ ಕಾರು ಡಿಕ್ಕಿಯಾದ ಕಾರಣದಿಂದ ಇಬ್ಬರು ಬೈಕ್ ಸವಾರರು ರಸ್ತೆ ಬದಿಯಲ್ಲಿ ಗಾಯಗೊಂಡು ಬಿದ್ದಿದ್ದಾರೆ. ಇದೇ ಸಂದರ್ಭದಲ್ಲಿ ಅಲ್ಲಿದ್ದವರು ಗಾಯಗೊಂಡು ಬಿದ್ದಿದ್ದವರಿಗೆ ಸಹಾಯ ಮಾಡಲು ಪ್ರಯತ್ನಿಸುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಯೂ-ಟರ್ನ್ ತೆಗೆದುಕೊಂಡು ಬಂದ ಅಪಘಾತವೆಸಗಿದ ಅದೇ ಕಾರು ಅಲ್ಲಿ ನಿಲ್ಲಿಸದೇ ವೇಗವಾಗಿ ಸಾಗಿದೆ. ಗಾಯಗೊಂಡು ಬಿದ್ದಿದ್ದವರ ಮೇಲೆ ಯಾವುದೇ ಕಾಳಜಿ-ಕರುಣೆ ತೋರಿಸದೇ ಆ ಆರೋಪಿ ಕಾರು ಚಾಲಕ ವೇಗವಾಗಿ ಅಲ್ಲಿಂದ ಹೋಗುತ್ತಿರುವುದು ಈ ವಿಡಿಯೊದಲ್ಲಿ ದಾಖಲಾಗಿದೆ.
ಇದನ್ನೂ ಓದಿ: Sunita Williams : 8 ನೇ ಬಾಹ್ಯಾಕಾಶ ನಡಿಗೆಯನ್ನು ಪೂರ್ಣಗೊಳಿಸಿದ ಸುನಿತಾ ವಿಲಿಯಮ್ಸ್
ಕಾರು ಜೋರಾಗಿ ಶಬ್ದ ಮಾಡುತ್ತಾ, ಮುಂಭಾಗದ ಎಡಬದಿಯ ಬಾಗಿಲು ತೆರೆದಿರುವಂತೆ ನಿರ್ಲಕ್ಷ್ಯತನದಿಂದ ಸಾಗಿದೆ. ಅಲ್ಲಿದ್ದ ಕೆಲವರು ಆ ಕಾರನ್ನು ನಿಲ್ಲಿಸುವ ಪ್ರಯತ್ನ ಮಾಡಿದರೂ, ಕಾರಿನ ಒಳಗಿನಿಂದ ನೀರನ್ನು ಅವರ ಮೇಲೆ ಎರಚುತ್ತಿರುವುದೂ ಸಹ ಈ ವಿಡಿಯೊದಲ್ಲಿ ರೆಕಾರ್ಡ್ ಆಗಿದೆ.
ಈ ಹಿಟ್ ಆ್ಯಂಡ್ ರನ್ ಅಪಘಾತ ಪ್ರಕರಣದಲ್ಲಿ ಗಾಯಗೊಂಡಿದ್ದವರ ಪೈಕಿ 67 ವರ್ಷ ಪ್ರಾಯದ ವ್ಯಕ್ತಿ ಮೃತಪಟ್ಟಿರುವುದಾಗಿ ಮಾಹಿತಿ ಲಭ್ಯವಾಗಿದೆ. ಮೃತ ವ್ಯಕ್ತಿಯನ್ನು ನಝಿರ್ ಮೌಲಾನ ಎಂದು ಗುರುತಿಸಲಾಗಿದೆ. ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಅಭಿಜಿತ್ ಮಿಶ್ರಾ ಮತ್ತು ಅವರ ಜತೆಗಿದ್ದ ಭಾನು ತಿವಾರಿ ಗಾಯಗೊಂಡಿದ್ದಾರೆ.
ಪ್ರಗತಿಪುರಂ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಇಲ್ಲಿನ ಲೋಕಲ್ ಮಿಲ್ ಪ್ರದೇಶದ ಪೊಲೀಸರು ಘಟನೆಯ ಮಾಹಿತಿಯನ್ನು ಪಡೆದುಕೊಂಡಿದ್ದಾರೆ. ಅಪಘಾತವೆಸಗಿದ ಕಾರು ಹಾಗೂ ಆರೋಪಿ ಚಾಲಕ ಇನ್ನಷ್ಟೇ ಪತ್ತೆಯಾಗಬೇಕಿದೆ.