Hyderabad University Land Row: ನಾಶವಾಗಿರುವ ಅರಣ್ಯವನ್ನು ಮತ್ತೆ ಸ್ಥಾಪಿಸಿ, ಇಲ್ಲವಾದರೆ ಜೈಲಿಗೆ ಹೋಗಲು ಸಿದ್ದರಾಗಿ: ತೆಲಂಗಾಣ ಸರ್ಕಾರಕ್ಕೆ ಸುಪ್ರೀಂ ಎಚ್ಚರಿಕೆ
ಹೈದರಾಬಾದ್ ಕೇಂದ್ರ ವಿಶ್ವವಿದ್ಯಾಲಯದ ಪಕ್ಕದಲ್ಲಿರುವ ಸುಮಾರು 400 ಎಕರೆಗಳನ್ನು ಪುನರಾಭಿವೃದ್ಧಿ ಮಾಡುವ ಕಾಂಗ್ರೆಸ್‌ನ ಯೋಜನೆಗಳ ಸುತ್ತ ಇದೀಗ ವಿವಾದ ಸುತ್ತಿಕೊಂಡಿದೆ. ಅಧಿಕಾರಿಗಳ ಅನುಮತಿಯಿಲ್ಲದೆ ಆತುರಾತುರವಾಗಿ ಅರಣ್ಯ ನಾಶ ಮಾಡಿರುವುದರ ಬಗ್ಗೆ ಬುಧವಾರ ಸುಪ್ರೀಂ ಕೋರ್ಟ್ ತೆಲಂಗಾಣ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.


ಹೈದರಾಬಾದ್: ಹೈದರಾಬಾದ್ ಕೇಂದ್ರ ವಿಶ್ವವಿದ್ಯಾಲಯದ (Hyderabad Central University) ಪಕ್ಕದಲ್ಲಿರುವ ಕಂಚ ಗಚ್ಚಿಬೌಲಿಯ ಸುಮಾರು 400 ಎಕರೆಗಳನ್ನು ಪುನರಾಭಿವೃದ್ಧಿ ಮಾಡುವ ಕಾಂಗ್ರೆಸ್‌ನ (Congress) ಯೋಜನೆಗಳ ಸುತ್ತ ಇದೀಗ ವಿವಾದ ಸುತ್ತಿಕೊಂಡಿದೆ. ಅಧಿಕಾರಿಗಳ ಅನುಮತಿಯಿಲ್ಲದೆ ಆತುರಾತುರವಾಗಿ ಅರಣ್ಯ ನಾಶ ಮಾಡಿರುವುದರ ಬಗ್ಗೆ ಬುಧವಾರ ಸುಪ್ರೀಂ ಕೋರ್ಟ್ (Supreme Court) ತೆಲಂಗಾಣ ಸರ್ಕಾರವನ್ನು (Telangana government) ತರಾಟೆಗೆ ತೆಗೆದುಕೊಂಡಿದೆ. ಈ ಕುರಿತು ನ್ಯಾಯಮೂರ್ತಿ ಬಿ.ಆರ್. ಗವಾಯಿ ಮತ್ತು ನ್ಯಾಯಮೂರ್ತಿ ಎ.ಜಿ. ಮಸಿಹ್ ಅವರ ಪೀಠವು ಅಸಮಾಧಾನ ವ್ಯಕ್ತಪಡಿಸಿದೆ.
ಹೈದರಾಬಾದ್‌ನ ಕಂಚ ಗಚ್ಚಿಬೌಲಿಯ ಪ್ರದೇಶದಲ್ಲಿ ಕೇಂದ್ರೀಯ ವಿಶ್ವವಿದ್ಯಾಲಯದ ಆವರಣದ ಪಕ್ಕದಲ್ಲಿರುವ ಸುಮಾರು 100 ಎಕರೆ ಅರಣ್ಯವನ್ನು ಅಧಿಕಾರಿಗಳ ಅನುಮತಿಯಿಲ್ಲದೆ ನಾಶ ಮಾಡಲಾಗುತ್ತಿದೆ. ಇಲ್ಲಿ ಏನಾದರೂ ನಿರ್ಮಾಣ ಕಾರ್ಯ ನಡೆಸಬೇಕಿದ್ದರೆ ಮೊದಲು ಅನುಮತಿಯನ್ನು ಪಡೆಯಬೇಕಿತ್ತು ಎಂದು ಪೀಠವು ಹೇಳಿದೆ.
ಈ ಅರಣ್ಯದೊಳಗೆ ಇದ್ದ ಪ್ರಾಣಿಗಳು ಆಶ್ರಯಕ್ಕಾಗಿ ಓಡಾಡುತ್ತಿವೆ. ಬೀದಿ ನಾಯಿಗಳಿಂದ ಕಚ್ಚಲ್ಪಡುತ್ತಿವೆ ಎಂದು ನ್ಯಾಯಾಧೀಶರು ವಿಡಿಯೊ ಸಹಿತ ಪ್ರಸ್ತುತಪಡಿಸಿ, ತೊಂದರೆಗೊಳಗಾದ ಪ್ರಾಣಿಗಳ ಪರವಾಗಿ ವಾದ ಮಂಡಿಸಿದರು.
ರಾಜ್ಯದ ವನ್ಯಜೀವಿ ವಿಭಾಗಗಳಿಗೆ ಪ್ರಾಣಿಗಳನ್ನು ರಕ್ಷಿಸುವಂತೆ ಆದೇಶಿಸಿದ ನ್ಯಾಯಾಲಯ ಈ ನಿಟ್ಟಿನಲ್ಲಿ ತಕ್ಷಣ ಕ್ರಮಕೈಗೊಳ್ಳುವಂತೆ ಸೂಚಿಸಿತು.
ನಾಶವಾದ ಅರಣ್ಯ ಪ್ರದೇಶದಲ್ಲಿ ಸ್ಥಾಪನೆಯಾಗುವ ಕಟ್ಟಡ ಯೋಜನೆಯನ್ನು ಶೀಘ್ರದಲ್ಲಿ ಮಂಡಿಸದೇ ಇದ್ದರೆ ಮುಖ್ಯ ಕಾರ್ಯದರ್ಶಿಯಿಂದ ಹಿಡಿದು ಕೆಳಗಿನ ಹಂತದ ಹಿರಿಯ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಸುಪ್ರೀಂ ಕೋರ್ಟ್ ಈ ಸಂದರ್ಭದಲ್ಲಿ ಎಚ್ಚರಿಕೆಯನ್ನು ನೀಡಿದೆ. ಈ ಪ್ರಕರಣದ ಮುಂದಿನ ವಿಚಾರಣೆ ಮೇ 15ರಂದು ನಡೆಯಲಿದೆ ಎಂದು ನ್ಯಾಯಾಧೀಶರು ಈ ಸಂದರ್ಭದಲ್ಲಿ ತಿಳಿಸಿದರು.
ನ್ಯಾಯಮೂರ್ತಿ ಹೇಳಿದ್ದೇನು?
ಮುಖ್ಯ ಕಾರ್ಯದರ್ಶಿಯನ್ನು ಉಳಿಸಲು ಬಯಸಿದರೆ ಆ 100 ಎಕರೆಗಳನ್ನು ಹೇಗೆ ಪುನಃ ಸ್ಥಾಪಿಸುತ್ತೀರಿ ಎಂದು ತಿಳಿಸಿ. ಒಂದು ಯೋಜನೆಯನ್ನು ರೂಪಿಸಿ. ಇಲ್ಲದಿದ್ದರೆ ಎಷ್ಟು ಅಧಿಕಾರಿಗಳು ತಾತ್ಕಾಲಿಕವಾಗಿ ಜೈಲಿಗೆ ಹೋಗುತ್ತಾರೆಂದು ನಮಗೆ ತಿಳಿದಿಲ್ಲ. ಮೂರು ದಿನಗಳ ರಜಾ ಸಂದರ್ಭದಲ್ಲಿ ಇದನ್ನು ಮಾಡುವ ತುರ್ತು ಪರಿಸ್ಥಿತಿ ಏನಿತ್ತು ಎಂದು ನ್ಯಾಯಮೂರ್ತಿ ಗವಾಯಿ ಪ್ರಶ್ನಿಸಿದ್ದಾರೆ.
ಏಪ್ರಿಲ್ 3ರಂದು 100 ಎಕರೆಗಳಲ್ಲಿನ ಎಲ್ಲ ಚಟುವಟಿಕೆಗಳನ್ನು ನಿಲ್ಲಿಸಲು ನ್ಯಾಯಾಲಯ ಆದೇಶಿಸಿತ್ತು. ಅದನ್ನು ಮತ್ತೆ ಪುನರುಚ್ಚರಿಸಿದ ನ್ಯಾಯಾಧೀಶರು, ದೊಡ್ಡ ಪ್ರಮಾಣದಲ್ಲಿ ಮರ ಕಡಿಯುತ್ತಿರುವುದರ ಬಗ್ಗೆ ಆತಂಕ ವ್ಯಕ್ತಪಡಿಸಿದರು.
1996ರ ಆದೇಶವನ್ನು ತೆಲಂಗಾಣ ಸರ್ಕಾರ ಹೇಗೆ ನಿರ್ಲಕ್ಷಿಸಿತು ಎಂದು ಪ್ರಶ್ನಿಸಿರುವ ನ್ಯಾಯಾಲಯ ಇದರಲ್ಲಿ ಹೈದರಾಬಾದ್ ಕೇಂದ್ರ ವಿಶ್ವವಿದ್ಯಾಲಯದ ಪಕ್ಕದಲ್ಲಿರುವ ಈ ಪ್ರದೇಶದಲ್ಲಿ ವನ್ಯಜೀವಿಗಳು, ಪರಿಸರದ ರಕ್ಷಣೆ ಮತ್ತು ಪ್ರದೇಶದ ಸಮತೋಲನವನ್ನು ಕಾಪಾಡಿಕೊಳ್ಳುವುದು ಸೇರಿದಂತೆ ಕಾಡುಗಳಲ್ಲಿನ ಮರಗಳನ್ನು ಕಡಿಯಲು ಮಾರ್ಗಸೂಚಿಗಳನ್ನು ರಚಿಸಲು ರಾಜ್ಯ ಸರ್ಕಾರಕ್ಕೆ ಆದೇಶಿಸಲಾಗಿತ್ತು ಎಂದು ಹೇಳಿದೆ.
ತೆಲಂಗಾಣ ಸರ್ಕಾರದ ಪರವಾಗಿ ನ್ಯಾಯಾಲಯಕ್ಕೆ ಹಾಜರಾದ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ, ಕೆಲವು ತಪ್ಪುಗಳಾಗಿರುವುದನ್ನು ಒಪ್ಪಿಕೊಂಡರು. ಇದಕ್ಕೆ ಪ್ರತಿಯಾಗಿ ನ್ಯಾಯಾಲಯವು, ನಾವು ಸರ್ಕಾರದ ಯೋಜನೆ ಬಗ್ಗೆ ಕಾಳಜಿ ತೋರುವುದಿಲ್ಲ. ಪರಿಸರದ ರಕ್ಷಣೆಯ ಬಗ್ಗೆ ಮಾತ್ರ ಕಾಳಜಿ ವಹಿಸುತ್ತೇವೆ. ಸ್ಥಳಾಂತರಗೊಂಡ ಪ್ರಾಣಿಗಳು ಸುರಕ್ಷಿತವಾಗಿವೆ ಎಂದು ಖಚಿತಪಡಿಸಿ. 100 ಎಕರೆ ಅರಣ್ಯ ಭೂಮಿಯನ್ನು ಹೇಗೆ ಪುನಃಸ್ಥಾಪಿಸಲಾಗುತ್ತದೆ ಎಂಬುದನ್ನು ನ್ಯಾಯಾಲಯಕ್ಕೆ ತಿಳಿಸಿ ಎಂದು ಸೂಚಿಸಿತು.
ಇದನ್ನೂ ಓದಿ: Viral Video: ಸಿಗರೇಟ್ ನೀಡಲು ನಿರಾಕರಿಸಿದ ವ್ಯಕ್ತಿಗೆ ಭಿಕ್ಷುಕಿ ಮಾಡಿದ್ದೇನು? ಬೆಚ್ಚಿ ಬೀಳಿಸುವ ವಿಡಿಯೊ ವೈರಲ್
ಭೂ ವಿವಾದ ಹುಟ್ಟಿಕೊಂಡಿದ್ದು ಹೇಗೆ?
ವಿಶ್ವವಿದ್ಯಾಲಯದ ಪಕ್ಕದಲ್ಲಿರುವ 400 ಎಕರೆಗಳ ಸುತ್ತಲೂ ಪುನರಾಭಿವೃದ್ಧಿ ಮಾಡುವ ಕಾಂಗ್ರೆಸ್ ಯೋಜನೆಗೆ ವಿದ್ಯಾರ್ಥಿಗಳು ಸೇರಿದಂತೆ ಹಲವರು ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ್ದರು. ಇಲ್ಲಿ ಬುಲ್ಡೋಜರ್‌ಗಳ ಬಳಕೆಯು ಸುಪ್ರೀಂ ಕೋರ್ಟ್ ಆದೇಶಗಳನ್ನು ಉಲ್ಲಂಘಿಸುತ್ತದೆ ಮತ್ತು ಈ ಪ್ರದೇಶದಲ್ಲಿನ ವನ್ಯಜೀವಿಗಳಿಗೆ ಅಪಾಯ ಉಂಟು ಮಾಡುತ್ತದೆ ಎಂದು ಆರೋಪಿಸಿ ಅವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.
ಈ ಪ್ರದೇಶದಲ್ಲಿ ಅನೇಕ ಜಾತಿಯ ಪ್ರಾಣಿ, ಪಕ್ಷಿಗಳಿವೆ. ಅದರ ಪ್ರಕಾರ ಇದನ್ನು ವನ್ಯಜೀವಿ ರಕ್ಷಣೆ ಕಾಯ್ದೆಯಡಿಯಲ್ಲಿ 'ರಾಷ್ಟ್ರೀಯ ಉದ್ಯಾನವನ' ಎಂದು ಘೋಷಿಸಬೇಕೆಂದು ಸರ್ಕಾರೇತರ ಸಂಸ್ಥೆ ವಾಟಾ ಫೌಂಡೇಶನ್ ಆಗ್ರಹಿಸಿದೆ. ತೆಲಂಗಾಣ ಸರ್ಕಾರವು ಇದು ವಿಶ್ವವಿದ್ಯಾನಿಲಯಕ್ಕೆ ಸೇರಿದ ಭೂಮಿಯಲ್ಲ. ರಾಜಕೀಯ ಲಾಭಕ್ಕಾಗಿ ಈ ಬಗ್ಗೆ ಸುಳ್ಳು ಮಾಹಿತಿ ಹರಡಲಾಗುತ್ತಿದೆ ಎಂದು ವಿರೋಧ ಪಕ್ಷಗಳನ್ನು ಟೀಕಿಸಿದೆ.