ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಪಹಲ್ಗಾಮ್‌ ದಾಳಿಯ ಭೀಕರ ದೃಶ್ಯ ಪ್ರವಾಸಿಯ ಕ್ಯಾಮೆರಾದಲ್ಲಿ ಸೆರೆ

Pahalgam Attack: ಏ. 22ರಂದು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರರು ಪ್ರವಾಸಿಗರ ಮೇಲೆ ನಡೆಸಿದ ಗುಂಡಿನ ದಾಳಿಯ ಮತ್ತೊಂದು ಭೀಕರ ದೃಶ್ಯ ಲಭ್ಯವಾಗಿದೆ. ಝಿಪ್‌ಲೈನ್‌ನಲ್ಲಿ ಸಾಗುತ್ತಿದ್ದ ಪ್ರವಾಸಿಗರೊಬ್ಬರು ಮಾಡಿದ ಸೆಲ್ಫಿ ವಿಡಿಯೊದಲ್ಲಿ ದಾಳಿಯ ದೃಶ್ಯ ಸೆರೆಯಾಗಿದ್ದು, ಸದ್ಯ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಪಹಲ್ಗಾಮ್‌ ದಾಳಿಯ ಮತ್ತೊಂದು ಭೀಕರ ದೃಶ್ಯ  ವೈರಲ್‌

ಸಾಂದರ್ಭಿಕ ಚಿತ್ರ.

Profile Ramesh B Apr 28, 2025 11:10 PM

ಶ್ರೀನಗರ: ಏ. 22ರಂದು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರರು ಪ್ರವಾಸಿಗರ ಮೇಲೆ ನಡೆಸಿದ ಗುಂಡಿನ ದಾಳಿಯ ಮತ್ತೊಂದು ಭೀಕರ ದೃಶ್ಯ ಲಭ್ಯವಾಗಿದೆ (Pahalgam Attack). ಝಿಪ್‌ಲೈನ್‌ನಲ್ಲಿ ಸಾಗುತ್ತಿದ್ದ ಪ್ರವಾಸಿಗರೊಬ್ಬರು ಮಾಡಿದ ಸೆಲ್ಫಿ ವಿಡಿಯೊದಲ್ಲಿ ದಾಳಿಯ ದೃಶ್ಯ ಸೆರೆಯಾಗಿದ್ದು, ಸದ್ಯ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ (Viral Video). ಪೆಹಲ್ಗಾಮ್‌ಗೆ ಆಗಮಿಸಿದ್ದ ಪ್ರವಾಸಿ ರೋಪ್ ಕ್ರಾಸಿಂಗ್ ಮಾಡುವ ವೇಳೆ ಸೆಲ್ಫಿ ವಿಡಿಯೊ ಮಾಡಿದ್ದರು. ಇದರಲ್ಲಿ ಅವರಿಗೆ ಅರಿವಿಲ್ಲದಂತೆ ಉಗ್ರರ ಪೈಶಾಚಿಕ ಕೃತ್ಯ ಸೆರೆಯಾಗಿದೆ.

ವೈರಲ್ ಆಗಿರುವ 53 ಸೆಕೆಂಡುಗಳ ವಿಡಿಯೊದಲ್ಲಿ ನೀಲಿ ಚೆಕ್ ಶರ್ಟ್, ಹೆಲ್ಮೆಟ್‌ ಧರಿಸಿದ ಪ್ರವಾಸಿಯೊಬ್ಬರು ಸೆಲ್ಫಿ ಸ್ಟಿಕ್ ಬಳಸಿ ಝಿಪ್‌ಲೈನ್‌ನಲ್ಲಿ ತೆರಳುತ್ತಿರುವುದು ಕಂಡು ಬಂದಿದೆ. ಹಿನ್ನೆಲೆಯಲ್ಲಿ ಗುಂಡಿನ ಸದನ್ನೂ ಕೇಳಬಹುದು.

ಭಯೋತ್ಪಾದಕ ದಾಳಿಯ ಬಗ್ಗೆ ತಿಳಿಯದ ಅವರು ನಗುತ್ತ ತಮ್ಮ ಸವಾರಿಯನ್ನು ಆನಂದಿಸುತ್ತಿರುವುದು ವಿಡಿಯೊದಲ್ಲಿ ಸೆರೆಯಾಗಿದೆ. ನೆಲದ ಮೇಲೆ ಪ್ರವಾಸಿಗರು ಓಡಾಡುತ್ತಿರುವುದು ಕೂಡ ಕಂಡುಬಂದಿದೆ. ಅವರ ಸವಾರಿ ಮುಗಿದು ನೆಲಕ್ಕೆ ಹತ್ತಿರವಾಗುತ್ತಿದ್ದಂತೆ, ಇನ್ನೊಬ್ಬ ಪ್ರವಾಸಿ ಕೆಳಗೆ ಬೀಳುವುದನ್ನು ಕಾಣಬಹುದು. ಸದ್ಯ ಈ ವಿಡಿಯೊ ಸೋಶಿಯಲ್‌ ಮಿಡಿಯಾದಲ್ಲಿ ವ್ಯಾಪಕವಾಗಿ ಶೇರ್‌ ಆಗುತ್ತಿದೆ.

ವೈರಲ್‌ ವಿಡಿಯೊ ಇಲ್ಲಿದೆ:



ಈ ಸುದ್ದಿಯನ್ನೂ ಓದಿ: Asaduddin Owaisi: ನೀವು ಐಸಿಸ್‌ನ ಉತ್ತರಾಧಿಕಾರಿಗಳು; ಭಯೋತ್ಪಾದಕ ದಾಳಿಯ ಕುರಿತು ಪಾಕ್‌ ಮೇಲೆ ಹರಿಹಾಯ್ದ ಅಸಾದುದ್ದೀನ್ ಓವೈಸಿ

ಕಿರಿ ಕಾರಿದ ನೆಟ್ಟಿಗರು

ಈ ಭಯೋತ್ಪಾದಕ ದಾಳಿಯ ಹಿಂದೆ ಸ್ಥಳೀಯರ ಕೈವಾಡವಿದೆ ಎನ್ನುವ ಶಂಕೆ ಈ ಹಿಂದಿನಿಂದಲೂ ವ್ಯಕ್ತವಾಗಿತ್ತು. ಸದ್ಯ ವೈರಲ್‌ ಆಗಿರುವ ವಿಡಿಯೊ ಈ ಸಂಶಯಕ್ಕೆ ಇನ್ನಷ್ಟು ಪುಷ್ಟಿ ನೀಡುವಂತಿದೆ. ʼʼಸ್ಥಳೀಯರಿಗೆ ಉಗ್ರರ ದಾಳಿ ಬಗ್ಗೆ ಸೂಚನೆಯೇ ಇರಲಿಲ್ಲ ಎಂದು ಹಲವರು ಹೇಳುತ್ತಿದ್ದಾರೆ. ಅಂತಹವರು ಈ ವಿಡಿಯೊ ನೋಡಿ. ಈ ಪ್ರವಾಸಿಯನ್ನು ಝಿಪ್‌ಲೈನ್‌ನಲ್ಲಿ ಬಿಡುವ ಮುನ್ನ ಸ್ಥಳೀಯ ಆಪರೇಟರ್‌ ಗುಂಡಿನ ಮೊರೆತ ಕೇಳಿದ್ದಾನೆ. ಈ ವೇಳೆ ಆತ ʼಅಲ್ಲಾ ಹು ಅಕ್ಬರ್‌ʼ ಎಂದು 3 ಬಾರಿ ಹೇಳಿದ್ದಾನೆ. ಗುಂಡಿನ ಸದ್ದು ಕೇಳಿಯೂ ಪ್ರವಾಸಿಗನ್ನು ಝಿಪ್‌ ಲೈನ್‌ನಲ್ಲಿ ಹೋಗಲು ಬಿಟ್ಟಿದ್ದಾನೆ. ಆ ಮೂಲಕ ಪ್ರವಾಸಿಗನನ್ನು ಸಾವಿನ ದವಡೆಗೆ ದವಡೆಗೆ ದೂಡಿದ್ದಾನೆʼʼ ಎಂದು ಒಬ್ಬರು ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

ಇನ್ನೊಬ್ಬರು ಈ ವಿಡಿಯೊವನ್ನು ಶೇರ್‌ ಮಾಡಿ, ʼʼಝಿಪ್‌ಲೈನ್‌ ಆಪರೇಟರ್‌ ಗುಂಡಿನ ಶಬ್ದ ಕೇಳಿಸಿಕೊಂಡಿದ್ದಾನೆ. ಸಂಶಯಗೊಂಡು ಅತ್ತ ಇತ್ತ ನೋಡಿದ್ದಾನೆ. ಆದರೆ ಪ್ರವಾಸಿಗನನ್ನು ತಡೆಯಲಿಲ್ಲ. ಪ್ರವಾಸಿ ಇದ್ಯಾವುದರ ಪರಿವೇ ಇಲ್ಲದೆ ಉಗ್ರರಿದ್ದ ಕಡೆಗೆ ತೆರೆಳಿದ್ದಾರೆʼʼ ಎಂದು ಕಿಡಿಕಾರಿದ್ದಾರೆ.

ಸಂಶಯಾಸ್ಪದ ಸದ್ದು ಕೇಳಿಯೂ ಪ್ರವಾಸಿಗನ್ನು ತಡೆಯದ ಝಿಪ್‌ಲೈನ್‌ ಆಪರೇಟರ್‌ ವರ್ತನೆ ಅನುಮಾನ ಮೂಡಿಸಿದೆ ಎಂದು ಹಲವರು ತಿಳಿಸಿದ್ದಾರೆ. ಆತನನ್ನು ತನಿಖೆಗೆ ಒಳಪಡಿಸಬೇಕೆಂದೂ ಕೆಲವರು ಆಗ್ರೆಹಿಸಿದ್ದಾರೆ. ಈತನೂ ಈ ಉಗ್ರ ಚಟುವಟಿಕೆಯ ಭಾಗವಾಗಿರುವ ಸಾಧ್ಯತೆ ಇದೆ ಎನ್ನುವ ಮಾತೂ ಕೇಳಿ ಬಂದಿದೆ. ಒಟ್ಟಿನಲ್ಲಿ ಇದೀಗ ಈ ವಿಡಿಯೊ ವ್ಯಾಪಕ ಚರ್ಚೆ ಹುಟ್ಟುಹಾಕಿದೆ. ಉಗ್ರ ಜಾಡು ಕಂಡುಹಿಡಿಯಲು ಈ ವಿಡಿಯೊ ನೆರವಾಗುತ್ತ ಎನ್ನುವುದನ್ನು ಕಾಡು ನೋಡಬೇಕಿದೆ.