RR vs GT: ಸೂರ್ಯವಂಶಿ ಶತಕ ವೈಭವ; ರಾಜಸ್ಥಾನ್‌ಗೆ ಗೆಲುವಿನ ಹರ್ಷ
ಅಫ್ಘಾನಿಸ್ತಾನದ 26 ವರ್ಷದ ಕರೀಮ್ ಜನ್ನತ್ ಗುಜರಾತ್ ಪರ ಕಣಕ್ಕಿಳಿಯುವ ಮೂಲಕ ಐಪಿಎಲ್‌ಗೆ ಪದಾರ್ಪಣೆ ಮಾಡಿದರು. ಈ ಮೂಲಕ ಐಪಿಎಲ್‌ನಲ್ಲಿ ಆಡಿದ ಅಫ್ಘಾನಿಸ್ತಾನದ 10 ನೇ ಕ್ರಿಕೆಟಿಗ ಎನಿಸಿಕೊಂಡರು. ಆದರೆ ತಾವೆಸೆದ ಒಂದೇ ಓವರ್‌ನಲ್ಲಿ ಬರೋಬ್ಬರಿ 30 ರನ್ ಹೊಡೆಸಿಕೊಂಡು ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಳ್ಳುವಲ್ಲಿ ವಿಫಲರಾದರು.


ಜೈಪುರ: 14 ವರ್ಷದ ವೈಭವ್ ಸೂರ್ಯವಂಶಿ(101) ಬಾರಿಸಿದ ಸ್ಫೋಟಕ ಶತಕದ ನೆರವಿನಿಂದ ರಾಜಸ್ಥಾನ್ ರಾಯಲ್ಸ್ ತಂಡ ಗುಜರಾತ್ ಟೈಟಾನ್ಸ್ ವಿರುದ್ಧ 8 ವಿಕೆಟ್ ಗಳ ಅಮೋಘ ಜಯ ಸಾಧಿಸಿ ಪ್ಲೇ-ಆಫ್ ಆಸೆ ಜೀವಂತವಾಗಿರಿಸಿದೆ. ಇದು ರಾಜಸ್ಥಾನ್‌ಗೆ 10ನೇ ಪಂದ್ಯದಲ್ಲಿ ಒಲಿದ ಮೂರನೇ ಗೆಲುವಾಗಿದೆ. ಸೋಲಿನೊಂದಿಗೆ ಗುಜರಾತ್ ತಂಡದ ಅಗ್ರಸ್ಥಾನಕ್ಕೇರುವ ಪಯತ್ನ ವಿಫಲವಾಯಿತು.
ಇಲ್ಲಿನ ಸವಾಯಿ ಮಾನ್ಸಿಂಗ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಗುಜರಾತ್ 4 ವಿಕೆಟ್ ನಷ್ಟಕ್ಕೆ 209 ರನ್ ಕಲೆ ಹಾಕಿತು. ಗುರಿ ಬೆನ್ನಟ್ಟಿದ ರಾಜಸ್ಥಾನ್ 15.5 ಓವರ್‌ಗಳಲ್ಲಿ ಕೇವಲ 2 ವಿಕೆಟ್‌ಗೆ 212 ರನ್ ಬಾರಿಸಿ ಅಧಿಕಾರಯುತ ಗೆಲುವು ದಾಖಲಿಸಿತು. ಗುಜರಾತ್ ಬೌಲಿಂಗ್ ವಿಚಾರದಲ್ಲಿ ಹಿಂದುಳಿದ ಕಾರಣ ರಾಜಸ್ಥಾನದ ಪಾಲಿಗೆ ಈ ಮೊತ್ತ ಅಷ್ಟು ದೊಡ್ಡ ಸವಾಲು ಆಗಿ ಪರಿಣಮಿಸಲಿಲ್ಲ.
ಸೂರ್ಯವಂಶಿ ಚೊಚ್ಚಲ ಶತಕ
ಚೇಸಿಂಗ್ ವೇಳೆ ಜಿದ್ದಿಗೆ ಬಿದ್ದವರಂತೆ ಬ್ಯಾಟ್ ಬೀಸಿದ ಎಡಗೈ ಬ್ಯಾಟರ್‌ಗಳಾದ 14 ವರ್ಷದ ವೈಭವ್ ಸೂರ್ಯವಂಶಿ ಮತ್ತು ಯಶಸ್ವಿ ಜೈಸ್ವಾಲ್ ಗುಜರಾತ್ ಬೌಲರ್‌ಗಳಿಗೆ ಸತತ ಸಿಕ್ಸರ್ ಮತ್ತು ಬೌಂಡರಿಗಳ ರುಚಿ ತೋರಿಸಿದರು. ಇಶಾಂತ್ ಶರ್ಮ ಓವರ್‌ನಲ್ಲಿ ಮೂರು ಸೊಗಸಾದ ಸಿಕ್ಸರ್ ಮತ್ತು ಎರಡು ಬೌಂಡರಿ ಸಿಡಿಸಿ 26 ರನ್ ದೋಚಿದ ಸೂರ್ಯವಂಶಿ, ಕೇವಲ 17 ಎಸೆತಗಳಲ್ಲಿ ಅರ್ಧಶತಕ ಪೂರೈಸಿ ಹಾಲಿ ಆವೃತ್ತಿಯಲ್ಲಿ ಅತಿ ವೇಗದ ಅರ್ಧಶತಕ ಬಾರಿಸಿದ ಆಟಗಾರ ಎಂಬ ದಾಖಲೆ ನಿರ್ಮಿಸಿದ ಕೆಲವೇ ಹೊತ್ತಿನಲ್ಲಿ 35 ಎಸೆತಗಳಲ್ಲಿ ಶತಕ ಪೂರ್ತಿಗೊಳಿಸಿದರು. ಈ ಮೂಲಕ ಕ್ರಿಸ್ ಗೇಲ್(30 ಎಸೆತ) ಬಳಿಕ ಐಪಿಎಲ್‌ನಲ್ಲಿ ಅತಿ ಕಡಿಮೆ ಎಸೆತಗಳಲ್ಲಿ ಶತಕ ಬಾರಿಸಿದ ಎರಡನೇ ಆಟಗಾರ ಎಂಬ ದಾಖಲೆ ಬರೆದರು.
ಜೈಸ್ವಾಲ್ ಮತ್ತು ಸೂರ್ಯವಂಶಿಯ ಆಕ್ರಮಣಕಾರಿ ಬ್ಯಾಟಿಂಗ್‌ನಿಂದ 6 ಓವರ್‌ಗಳ ಪವರ್ ಪ್ಲೇಯಲ್ಲಿ ರಾಜಸ್ಥಾನ್‌ಗೆ ಬರೋಬ್ಬರಿ 87 ಹರಿದು ಬಂತು. ಪವರ್ ಪ್ಲೇ ಮುಕ್ತಾಯಗೊಂಡರೂ ಈ ಜೋಡಿಯ ಬ್ಯಾಟಿಂಗ್ ಅಬ್ಬರ ಮಾತ್ರ ಕಡಿಮೆಯಾಗಲಿಲ್ಲ. ಸಿಕ್ಸರ್ ಮತ್ತು ಬೌಂಡರಿಗಳ ಮಳೆ ಸುರಿಸಿ ಮೊದಲ ವಿಕೆಟ್‌ಗೆ 166 ರನ್ ಒಟ್ಟುಗೂಡಿಸಿದರು. ಅಂತಿಮವಾಗಿ 101 ರನ್ ಬಾರಿಸಿದ ಸೂರ್ಯವಂಶಿ ಪ್ರಸಿದ್ಧ್ ಕೃಷ್ಣಗೆ ವಿಕೆಟ್ ಒಪ್ಪಿಸಿದರು. ಸೂರ್ಯವಂಶಿ ಶತಕ ಕಂಡ ಕೋಚ್ ರಾಹುಲ್ ದ್ರಾವಿಡ್ ಕಾಲು ನೋವನ್ನು ಮರೆತು ವೀಲ್ ಚೇರ್‌ನಿಂದ ಎದ್ದು ನಿಂತು ಚಪ್ಪಾಳೆ ತಟ್ಟಿ ಗೌರವಿಸಿದರು.
Youngest to score a T20 1⃣0⃣0⃣ ✅
— IndianPremierLeague (@IPL) April 28, 2025
Fastest TATA IPL hundred by an Indian ✅
Second-fastest hundred in TATA IPL ✅
Vaibhav Suryavanshi, TAKE. A. BOW 🙇 ✨
Updates ▶ https://t.co/HvqSuGgTlN#TATAIPL | #RRvGT | @rajasthanroyals pic.twitter.com/sn4HjurqR6
2 ರನ್ ಗಳಿಸಿದ್ದ ವೇಳೆ ಜಾಸ್ ಬಟ್ಲರ್ ಅವರಿಂದ ಕ್ಯಾಚ್ ಕೈಚೆಲ್ಲಿ ಜೀವದಾನ ಪಡೆದ ಯಶಸ್ವಿ ಜೈಸ್ವಾಲ್ ಈ ಅವಕಾಶವನ್ನು ಎರಡೂ ಕೈಗಳಿಂದ ಬಾಚಿ ಅಮೋಘ ಅಜೇಯ ಅರ್ಧಶತಕ ಬಾರಿಸಿದರು. 40 ಎಸೆತ ಎದುರಿಸಿದ ಜೈಸ್ವಾಲ್ 70* ರನ್ ಗಳಿಸಿದರು. ಹಂಗಾಮಿ ನಾಯಕ ರಿಯಾನ್ ಪರಾಗ್ ಕೂಡ ಬಿರುಸಿನ ಬ್ಯಾಟಿಂಗ್ ಮೂಲಕ 32 ರನ್ ಬಾರಿಸಿ ಅಜೇಯರಾಗಿ ಉಳಿದರು.
ಗಿಲ್-ಬಟ್ಲರ್ ಬ್ಯಾಟಿಂಗ್ ಜೋಶ್
ಇದಕ್ಕೂ ಮುನ್ನ ಬ್ಯಾಟಿಂಗ್ ನಡೆಸಿದ ಗುಜರಾತ್ ಪರ ನಾಯಕ ಶುಭಮನ್ ಗಿಲ್ ಮತ್ತು ಜಾಸ್ ಬ್ಲಟರ್ ಅರ್ಧಶತಕ ಬಾರಿಸಿ ಮಿಂಚಿದರು. ಆರಂಭಿಕನಾಗಿ ಕಣಕ್ಕಿಳಿದ ಶುಭಮನ್ ಗಿಲ್ ಅವರು ಸಾಯಿ ಸುದರ್ಶನ್ ಜತೆಗೂಡಿ ಮೊದಲ ವಿಕೆಟ್‌ಗೆ 93 ರನ್ ಜತೆಯಾಟ ನಡೆಸಿದರು. ಆ ಬಳಿಕ ದ್ವಿತೀಯ ವಿಕೆಟ್‌ಗೆ ಬಟ್ಲರ್ ಜತೆ 74 ರನ್‌ಗಳ ಜತೆಯಾಟದಲ್ಲಿ ಭಾಗಿಯಾದರು.
ಸಾಯಿ ಸುದರ್ಶನ್ 39 ರನ್ ಬಾರಿಸುವ ಮೂಲಕ ವಿರಾಟ್ ಕೊಹ್ಲಿ(443) ಯನ್ನು ಹಿಂದಿಕ್ಕಿ ಮತ್ತೆ ಆರೆಂಜ್ ಕ್ಯಾಪ್ ತಮ್ಮದಾಗಿಸಿಕೊಂಡರು. ಬಿರುಸಿನ ಬ್ಯಾಟಿಂಗ್ ನಡೆಸಿದ ಶುಭಮನ್ ಗಿಲ್ 50 ಎಸೆತಗಳಿಂದ 5 ಬೌಂಡರಿ ಮತ್ತು 4 ಸಿಕ್ಸರ್ ನೆರವಿನಿಂದ 84 ರನ್ ಬಾರಿಸಿ ತೀಕ್ಷಣ ಅವರಿಗೆ ವಿಕೆಟ್ ಒಪ್ಪಿಸಿದರು. ಮಾಜಿ ತಂಡದ ವಿರುದ್ಧ ಜೋಶ್‌ನಿಂದಲೇ ಬ್ಯಾಟ್ ಬೀಸಿದ ಜಾಸ್ ಬಟ್ಲರ್ 26 ಎಸೆತಗಳಿಂದ ಅಜೇಯ 50 ರನ್ ಬಾರಿಸಿದರು. ಇದು ಹಾಲಿ ಆವೃತ್ತಿಯಲ್ಲಿ ಬಟ್ಲರ್ ಬಾರಿಸಿದ ನಾಲ್ಕನೇ ಅರ್ಧಶತಕ. ಬಟ್ಲರ್ ಬ್ಯಾಟಿಂಗ್ ಇನಿಂಗ್ಸ್‌ನಲ್ಲಿ 4 ಸಿಕ್ಸರ್ ಮತ್ತು 3 ಬೌಂಡರಿ ಸಿಡಿಯಿತು. ಪಂದ್ಯ ಸೋತ ಕಾರಣ ಗಿಲ್-ಬಟ್ಲರ್ ಬ್ಯಾಟಿಂಗ್ ಹೋರಾಟ ವ್ಯರ್ಥ್ಯವಾಯಿತು.
ರಾಜಸ್ಥಾನ್ ಪರ ಲಂಕಾದ ಸ್ಪಿನ್ನರ್ ಮಹೀಶ್ ತೀಕ್ಷಣ 2 ವಿಕೆಟ್ ಕಿತ್ತರೆ, ಜೋಫ್ರಾ ಆರ್ಚರ್ ಮತ್ತು ಸಂದೀಪ್ ಶರ್ಮ ತಲಾ ಒಂದು ವಿಕೆಟ್ ಪಡೆದರು. ಅಫ್ಘಾನಿಸ್ತಾನದ 26 ವರ್ಷದ ಕರೀಮ್ ಜನ್ನತ್ ಗುಜರಾತ್ ಪರ ಕಣಕ್ಕಿಳಿಯುವ ಮೂಲಕ ಐಪಿಎಲ್‌ಗೆ ಪದಾರ್ಪಣೆ ಮಾಡಿದರು. ಈ ಮೂಲಕ ಐಪಿಎಲ್‌ನಲ್ಲಿ ಆಡಿದ ಅಫ್ಘಾನಿಸ್ತಾನದ 10 ನೇ ಕ್ರಿಕೆಟಿಗ ಎನಿಸಿಕೊಂಡರು. ಆದರೆ ತಾವೆಸೆದ ಒಂದೇ ಓವರ್‌ನಲ್ಲಿ ಬರೋಬ್ಬರಿ 30 ರನ್ ಹೊಡೆಸಿಕೊಂಡು ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಳ್ಳುವಲ್ಲಿ ವಿಫಲರಾದರು.